AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಈ ಪಟ್ಟಣಕ್ಕೆ ಏನಾಗಿದೆ’: ಐದು ಗ್ಯಾರೆಂಟಿಗಳ ಮೂಲಕ ಪ್ರಚಾರ ಮಾಡುತ್ತಿರುವ ಚಿತ್ರತಂಡ

'ಈ ಪಟ್ಟಣಕ್ಕೆ ಏನಾಗಿದೆ' ಸಿನಿಮಾ ತಂಡ ಗ್ಯಾರೆಂಟಿಗಳ ಮೂಲಕ ತಮ್ಮ ಸಿನಿಮಾ ಪ್ರಚಾರಕ್ಕಿಳಿದಿದೆ.

'ಈ ಪಟ್ಟಣಕ್ಕೆ ಏನಾಗಿದೆ': ಐದು ಗ್ಯಾರೆಂಟಿಗಳ ಮೂಲಕ ಪ್ರಚಾರ ಮಾಡುತ್ತಿರುವ ಚಿತ್ರತಂಡ
ಪಟ್ಟಣಕ್ಕೆ ಏನಾಗಿದೆ
ಮಂಜುನಾಥ ಸಿ.
|

Updated on: Jul 23, 2023 | 11:00 PM

Share

ಗ್ಯಾರೆಂಟಿ ಆಧಾರದಲ್ಲಿ ಚುನಾವಣೆ ಎದುರಿಸಿದ ಕರ್ನಾಟಕ ಕಾಂಗ್ರೆಸ್ ಪಕ್ಷ (Congrsess Party) ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದೆ. ಮಾತ್ರವಲ್ಲದೆ ಅಧಿಕಾರಕ್ಕೆ ಬಂದ ಕೂಡಲೇ ನೀಡಿದ್ದ ಗ್ಯಾರೆಂಟಿಗಳನ್ನು ಪೂರೈಸಿದೆ. ಗ್ಯಾರೆಂಟಿಗಳು ಕರ್ನಾಟಕದಲ್ಲಿ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿವೆ. ಗ್ಯಾರೆಂಟಿಗಳ ಬಗ್ಗೆ ಪರ-ವಿರೋಧ ಚರ್ಚೆಗಳು ಜಾರಿಯಲ್ಲಿವೆ. ಈ ನಡುವೆ ಸಿನಿಮಾ ಒಂದು ತಮ್ಮ ಸಿನಿಮಾವನ್ನು (Cinema) ಇದೇ ಗ್ಯಾರೆಂಟಿ ಕಾರ್ಡ್ ಹಿಡಿದುಕೊಂಡು ಪ್ರಚಾರ ಮಾಡುತ್ತಿದೆ. “ಈ ಪಟ್ಟಣಕ್ಕೆ ಏನಾಗಿದೆ” ಹೆಸರಿನ ಸಿನಿಮಾ ಮಾಡಿರುವ ತಂಡವೊಂದು ಗ್ಯಾರೆಂಟಿ ಕಾರ್ಡ್ ಇಟ್ಟುಕೊಂಡು ಸಿನಿಮಾದ ಪ್ರಚಾರ ಆರಂಭಿಸಿದೆ.

ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರಸಾರ ಆಗುವ ಮುನ್ನ ಬರುವ ಜಾಹೀರಾತಿನ ಕ್ಯಾಚಿ ಲೈನ್ ಆಗಿರುವ ‘ಈ ಪಟ್ಟಣಕ್ಕೆ ಏನಾಗಿದೆ’ ವಾಕ್ಯವನ್ನೇ ಇಟ್ಟುಕೊಂಡು ಅದನ್ನೇ ಸಿನಿಮಾದ ಶೀರ್ಷಿಕೆಯನ್ನಾಗಿ ಬಳಸಿ ಚಿತ್ರತಂಡವೊಂದು ಸಿನಿಮಾ ಮಾಡಿದೆ. ಬೆಟ್ಟಿಂಗ್ ಮಾಫಿಯಾ ಬಗೆಗಿನ ಕತೆಯನ್ನು ಈ ಸಿನಿಮಾ ಒಳಗೊಂಡಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಈ ಸಿನಿಮಾವನ್ನು ರವಿತೇಜೊ ಸ್ಟುಡಿಯೋಸ್ ನಿರ್ಮಾಣ ಮಾಡಿದೆ. ಸಿನಿಮಾ ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಮುಗಿಸಿಕೊಂಡು ರಿಲೀಸ್​ಗೆ ಸಿದ್ದವಾಗಿದೆ. ಕೆಲವೇ ದಿನಗಳಲ್ಲಿ ಸಿನಿಮಾದ ಟೀಸರ್ ಬಿಡುಗಡೆಯಾಗಲಿದ್ದು, ಟೀಸರ್ ಮೂಲಕ ಸಿನಿಮಾದ ಕುರಿತು ಐದು ಗ್ಯಾರೆಂಟಿಗಳನ್ನು ಪ್ರೇಕ್ಷಕರಿಗೆ ನೀಡುವುದಾಗಿ ‘ಈ ಪಟ್ಟಣಕ್ಕೆ ಏನಾಗಿದೆ’ ಸಿನಿಮಾ ನಿರ್ದೇಶನ ಮಾಡಿರುವ ರವಿ ಸುಬ್ಬರಾವ್ ಹೇಳಿದ್ದಾರೆ.

ಬೆಟ್ಟಿಂಗ್ ಮಾಫಿಯಾದ ಸುತ್ತ ಹೆಣೆಯಲಾಗಿರುವ ಕತೆಯನ್ನು ‘ಈ ಪಟ್ಟಣಕ್ಕೆ ಏನಾಗಿದೆ’ ಚಿತ್ರ ಒಳಗೊಂಡಿದ್ದು ಸಿನಿಮಾದಲ್ಲಿ ನಾಯಕ ಐಶಾರಾಮಿ ಜೀವನ ನಡೆಸುವ ಆಸೆಗೆ ಹೇಗೆ ಅನೇಕರನ್ನು ತನ್ನ ಮೋಸದ ಜಾಲಕ್ಕೆ ಬೀಳಿಸಿಕೊಳ್ಳುತ್ತಾನೆ ಎಂಬುದೇ ಕತೆ. ಜೊತೆಗೆ ಕ್ರಿಕೆಟ್ ಬೆಟ್ಟಿಂಗ್ ಜಾಲ ಹೇಗಿರುತ್ತದೆ, ಅದು ಹೇಗೆ ಕೆಲಸ ಮಾಡುತ್ತದೆ ಇತ್ಯಾದಿ ವಿಷಯಗಳು ಸಹ ಸಿನಿಮಾದಲ್ಲಿ ಇರಲಿವೆಯಂತೆ.

ಈ ಸಿನಿಮಾಕ್ಕೆ ರವಿ ಸುಬ್ಬರಾವ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ಜೊತೆಗೆ ನಾಯಕನಾಗಿಯೂ ನಟಿಸಿದ್ದಾರೆ. ರಾಧಿಕಾರಾಮ್ ಈ ಸಿನಿಮಾಕ್ಕೆ ನಾಯಕಿ. ಈಗಾಗಲೇ ಬಿಡುಗಡೆ ಆಗಿರುವ ಟ್ರೈಲರ್​ನಲ್ಲಿ ಬಹು ಮಾದಕವಾಗಿ ನಾಯಕಿ ಕಾಣಿಸಿಕೊಂಡಿದ್ದಾರೆ. ರಿತೇಶ್ ಜೋಶಿ, ಶ್ರೀನಿಧಿ, ಸತೀಶ್ ಶೆಟ್ಟಿ, ಸೋನಾ , ದಿಶಾ , ಸಂಧ್ಯಾ ವೇಣು , ಶ್ರೀ ಕ್ರೇಜಿಮೈನ್ಡ್ಜ್ , ಬಲರಾಮ್ , ಸುಕನ್ಯಾ, ಗೋಪಾಲ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ

ರಿತೇಶ್ ಜೋಶಿ ಮತ್ತು ರವಿ ಸುಬ್ಬ ರಾವ್ ಸಹ ನಿರ್ಮಾಣ ಈ ಸಿನಿಮಾಕ್ಕೆ ಇದೆ. ಅನಿಲ್ ಸಿ ಜೆ ಈ ಸಿನಿಮಾದ ಮ್ಯೂಸಿಕ್ ಡೈರೆಕ್ಟರ್. ಎಡಿಟಿಂಗ್ ಅನ್ನು ನೆಲ್ಸನ್ ಮೆಂಡಿಸ್ ಮಾಡಿದ್ದಾರೆ. ಕ್ಯಾಮೆರಾಮನ್ ಕಾರ್ಯವನ್ನು ವಿನೋದ್ ಮತ್ತು ಕ್ರೇಜಿಮೈಂಡ್ಸ್ ಮಾಡಿದ್ದಾರೆ. “ಈ ಪಟ್ಟಣಕ್ಕೆ ಏನಾಗಿದೆ?” ಸಿನಿಮಾ ಎರಡು ಭಾಗಗಳಲ್ಲಿ ಬರುತ್ತದೆ ಎಂದು ನಿರ್ದೇಶಕರು ಹೇಳಿದ್ದು, ಮೊದಲನೇ ಭಾಗ ಕೆಲವು ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಎರಡನೇ ಭಾಗದ ಶೂಟಿಂಗ್ ಸದ್ಯದಲ್ಲಿಯೇ ಪ್ರಾರಂಭವಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ