ರಚಿತಾ ರಾಮ್ ಮತ್ತು ಅಜಯ್ ರಾವ್ (Ajay Rao) ಮುಖ್ಯಭೂಮಿಕೆ ನಿಭಾಯಿಸುತ್ತಿರುವ ‘ಲವ್ ಯೂ ರಚ್ಚು’ (Love You Racchu) ಸಿನಿಮಾ ಚಿತ್ರೀಕರಣದ ವೇಳೆ ಫೈಟರ್ ವಿವೇಕ್ ((Fighter Vivek)) ನಿಧನರಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಮುಂದುವರಿದಿದೆ. ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ನಟ ಅಜಯ್ ರಾವ್ ಅವರು ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಇಂದು (ಆ.26) ರಾಮನಗರದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು (Anticipatory Bail) ಅರ್ಜಿ ವಿಚಾರಣೆ ನಡೆಯಲಿದೆ.
ದುರ್ಘಟನೆ ನಡೆದ ಬಳಿಕ ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ ಯಾರ ಕಣ್ಣಿಗೂ ಕಾಣಿಸಿಕೊಂಡಿಲ್ಲ. ಪ್ರಕರಣದಲ್ಲಿ ಅವರು ಕೂಡ ಪ್ರಮುಖ ಆರೋಪಿ ಆಗಿದ್ದಾರೆ. ಹಾಗಾಗಿ ಯಾವ ಸಮಯದಲ್ಲಿ ಬೇಕಿದ್ದರೂ ಅವರ ಬಂಧನ ಆಗಬಹುದು. ಅವರು ಕೂಡ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಸಹ ಇಂದು ಆಗಲಿದೆ. ನ್ಯಾಯಾಲಯದ ಆದೇಶಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರನ್ನು ಬಂಧಿಸಲಾಗಿದೆ. ‘ಲವ್ ಯೂ ರಚ್ಚು’ ಚಿತ್ರದ ನಿರ್ದೇಶಕ ಶಂಕರಯ್ಯ, ಕ್ರೇನ್ ಆಪರೇಟರ್ ಮಹದೇವ್, ಸಾಹಸ ನಿರ್ದೇಶಕ ವಿನೋದ್ ಕುಮಾರ್ ಅವರು ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಜಾಮೀನಿಗಾಗಿ ಅವರು ಕೂಡ ಅರ್ಜಿ ಸಲ್ಲಿಸಿದ್ದಾರೆ. ಈ ಮೂವರ ಜಾಮೀನು ಅರ್ಜಿ ವಿಚಾರಣೆಯೂ ಇಂದು ನಡೆಯಲಿದೆ. ಅವರು ಜೈಲಿನಿಂದ ಹೊರಬರುತ್ತಾರಾ ಅಥವಾ ಜೈಲು ವಾಸ ಮುಂದುವರೆಯುತ್ತಾ ಎಂಬುದು ಇಂದು ತೀರ್ಮಾನ ಆಗಲಿದೆ.
ಘಟನೆಗೆ ಸಂಬಂಧಿಸಿದಂತೆ ಚಿತ್ರದ ನಾಯಕಿ ರಚಿತಾ ರಾಮ್ ಅವರು ಪೊಲೀಸರಿಂದ ವಿಚಾರಣೆ ಎದುರಿಸಿದ್ದಾರೆ. ಮಂಗಳವಾರ (ಆ.24) ಬಿಡದಿ ಪೊಲೀಸ್ ಠಾಣೆಗೆ ರಚಿತಾ ರಾಮ್ ಹಾಜರಾದರು. ಡಿವೈಎಸ್ಪಿ ಮೋಹನ್ ಕುಮಾರ್ ಅವರು ರಚಿತಾ ಅವರನ್ನು 45 ನಿಮಿಷಗಳ ಕಾಲ ವಿಚಾರಣೆ ನಡೆಸಿದರು. ಪೊಲೀಸರು ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ಪೊಲೀಸರ ವಿಚಾರಣೆ ಬಳಿಕ ಮಾತನಾಡಿದ ರಚಿತಾ, ‘ನನಗೆ ವಿಷಯ ಗೊತ್ತಾಗಿರಲಿಲ್ಲ. ಮಾಧ್ಯಮಗಳಿಂದ ಈ ವಿಚಾರ ಗೊತ್ತಾಯ್ತು. ಫೈಟರ್ ಮೃತಪಟ್ಟಿರುವುದು ಅಷ್ಟೇ ನನಗೆ ಗೊತ್ತು. ಘಟನೆ ನಡೆದಾಗ ನಾನು ಅಲ್ಲಿ ಇರಲಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ. ಏನಾಗುತ್ತದೆ ನೋಡೋಣ. ಇದು ಉದ್ದೇಶಪೂರ್ವಕವಾಗಿ ನಡೆದ ಘಟನೆ ಅಲ್ಲ. ಇಂತಹ ದುರಂತ ನಡೆದಿರುವುದಕ್ಕೆ ನನಗೂ ನೋವು ಇದೆ’ ಎಂದಿದ್ದರು.
ಇದನ್ನೂ ಓದಿ:
ರಚಿತಾ ರಾಮ್ ಬಗ್ಗೆ ಕೆಟ್ಟ ಕಮೆಂಟ್: ಫೈಟರ್ ವಿವೇಕ್ ಸಾವಿನ ಕುರಿತು ಮೌನ ಮುರಿದ ‘ಡಿಂಪಲ್ ಕ್ವೀನ್’
‘ಅಜಯ್ ರಾವ್ ಅಲ್ಲೇ ಇದ್ರೂ ಸಹಾಯಕ್ಕೆ ಬರಲಿಲ್ಲ’: ಗಾಯಾಳು ರಂಜಿತ್ ಆರೋಪ; ಅಜಯ್ ಪ್ರತಿಕ್ರಿಯೆ ಏನು?