ಮೈಸೂರಿನಲ್ಲಿ ಚಿತ್ರನಗರಿ ಫೈನಲ್? ಸಿಎಂ ಅನುಮೋದನೆಯಷ್ಟೇ ಬಾಕಿ

| Updated By: ಮದನ್​ ಕುಮಾರ್​

Updated on: Mar 17, 2021 | 7:16 PM

ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪಿಸಲಾಗುವುದೆಂದು ಇಂದು ವಿಧಾನ ಪರಿಷತ್​​ನಲ್ಲಿ ವಾರ್ತಾಸಚಿವ ಸಿಸಿ ಪಾಟೀಲ್​ ತಿಳಿಸಿದ್ದಾರೆ. ಈಗಾಗಲೇ ಇದಕ್ಕೆ ಸಂಬಂಧಿಸಿದ ಕಡತ ಸಿದ್ಧಪಡಿಸಲಾಗಿದ್ದು, ಯಡಿಯೂರಪ್ಪ ಅವರ ಅನುಮೋದನೆಗಾಗಿ ಕಳುಹಿಸಿಕೊಡಲಾಗುತ್ತಿದೆ.

ಮೈಸೂರಿನಲ್ಲಿ ಚಿತ್ರನಗರಿ ಫೈನಲ್? ಸಿಎಂ ಅನುಮೋದನೆಯಷ್ಟೇ ಬಾಕಿ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
Follow us on

ಬೆಂಗಳೂರು: ರಾಜ್ಯಕ್ಕೆ ಚಿತ್ರನಗರಿ (ಫಿಲ್ಮ್​ ಸಿಟಿ) ಬೇಕು ಎನ್ನುವ ಬೇಡಿಕೆ ಬಹುಕಾಲದಿಂದಲೂ ಇದೆ. ಈ ಬೇಡಿಕೆ ಈಡೇರುವ ಎಲ್ಲಾ ಲಕ್ಷಣ ಗೋಚರವಾಗುತ್ತಿದೆ. ಈಗಾಗಲೇ ಹೀಗೊಂದು ಮನವಿಯನ್ನು ಸರ್ಕಾರದ ಮುಂದೆ ಇಡಲಾಗಿದ್ದು, ಇದಕ್ಕೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅನುಮತಿ ನೀಡುವುದಷ್ಟೇ ಬಾಕಿ ಉಳಿದಿದೆ.

ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪಿಸಲಾಗುವುದೆಂದು ಇಂದು ವಿಧಾನ ಪರಿಷತ್​​ನಲ್ಲಿ ವಾರ್ತಾಸಚಿವ ಸಿಸಿ ಪಾಟೀಲ್​ ತಿಳಿಸಿದ್ದರು. ಈಗಾಗಲೇ ಇದಕ್ಕೆ ಸಂಬಂಧಿಸಿ ಕಡತ ಸಿದ್ಧಪಡಿಸಲಾಗಿದ್ದು, ಯಡಿಯೂರಪ್ಪ ಅವರ ಅನುಮೋದನೆಗಾಗಿ ಕಳುಹಿಸಿಕೊಡಲಾಗುತ್ತಿದೆ.

ಇದಕ್ಕೆ ಮೈಸೂರು ಜಿಲ್ಲೆ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಸಂತಸ ವ್ಯಕ್ತಪಡಿಸಿದ್ದು, ಮೈಸೂರಿನಲ್ಲೇ ಚಿತ್ರನಗರಿ ಸ್ಥಾಪನೆ ಮಾಡುವ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಯಡಿಯೂರಪ್ಪ ಹಾಗೂ ಸಿಸಿ ಪಾಟೀಲ್​ ಅವರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.

ಕರ್ನಾಟಕದಲ್ಲಿ ಸಿನಿಮಾ ಉದ್ಯಮ ವ್ಯಾಪಕವಾಗಿ ಬೆಳೆದಿದ್ದರೂ ಸಹ ರಾಜ್ಯದಲ್ಲಿ ಈವರೆಗೆ ಯಾವುದೇ ಫಿಲ್ಮ್​​ಸಿಟಿ ನಿರ್ಮಾಣವಾಗಿಲ್ಲ. ಈ ಕೊರತೆಯನ್ನು ಮನಗಂಡು ಮೈಸೂರಿನಿಂದ ಸುಮಾರು 20 ಕಿ.ಮೀ. ದೂರದ ಹಿಮ್ಮಾವು ಸಮೀಪ 110 ಎಕರೆ ಜಾಗದಲ್ಲಿ ಚಿತ್ರನಗರಿ ನಿರ್ಮಾಣ ಮಾಡುವ ಯೋಜನೆಯನ್ನು ಕಾರ್ಯಗತಗೊಳಿಸಲು ಕೆ.ಐ.ಎ.ಡಿ.ಬಿ. ವತಿಯಿಂದ ಜಮೀನುಗಳನ್ನು ಸಹ ಗುರುತಿಸಲಾಗಿದೆ. ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣ ಮಾಡುವುದರಿಂದ ಸಿನಿಮಾ ರಂಗಕ್ಕೆ ಹಾಗೂ ಸ್ಥಳೀಯವಾಗಿ ಹಲವಾರು ಅನುಕೂಲಗಳಿವೆ. ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯಲು, ಕನ್ನಡ ಚಿತ್ರೋದ್ಯಮ ಅಭಿವೃದ್ಧಿಗೆ ಹಾಗೂ ಉದ್ಯೋಗ ಸೃಷ್ಟಿಸಲು ಚಿತ್ರನಗರಿ ನೆರವಾಗಲಿದೆ ಎಂದು ಎಸ್. ಟಿ. ಸೋಮಶೇಖರ್ ಹೇಳಿದ್ದಾರೆ.

ಮೈಸೂರು ಸುತ್ತಮುತ್ತ ನೂರಕ್ಕೂ ಹೆಚ್ಚು ತಾಣಗಳಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ಹಲವು ಭಾಷೆಗಳ ನೂರಾರು ಸಿನಿಮಾಗಳ ಚಿತ್ರೀಕರಣ ಮಾಡಲಾಗಿದೆ. ಮೈಸೂರು ಅರಮನೆ, ಲಲಿತಮಹಲ್ ಹೋಟೆಲ್, ಚಾಮುಂಡಿಬೆಟ್ಟ, ನಂಜನಗೂಡು ಶ್ರೀ ನಂಜುಂಡೇಶ್ವರ ದೇವಸ್ಥಾನ, ಮೃಗಾಲಯ, ಮೈಸೂರು ವಿಶ್ವವಿದ್ಯಾಲಯ, ಬಲಮುರಿ, ಎಡಮುರಿ, ಕೆಆರ್‌ಎಸ್, ತಲಕಾಡು, ಸೋಮನಾಥಪುರ, ಶಿವನಸಮುದ್ರ, ಶ್ರೀರಂಗಪಟ್ಟಣ, ಕುಕ್ಕರಹಳ್ಳಿ ಕೆರೆಯಂಥ ಅತ್ಯುತ್ತಮ ತಾಣಗಳು ಈ ಭಾಗದಲ್ಲಿವೆ. ಚಿತ್ರನಗರಿ ನಿರ್ಮಾಣಕ್ಕೆ ಗುರುತಿಸಿರುವ ಪ್ರದೇಶ ಮೈಸೂರಿಗೆ ಹತ್ತಿರವಿದೆ. ಹೆಚ್ಚು ಚಿತ್ರೀಕರಣ ನಡೆಯುವ ಕಾರಣ ಮೈಸೂರು ಭಾಗದಲ್ಲಿ ಚಿತ್ರನಗರಿ ನಿರ್ಮಿಸಬೇಕೆಂಬುದು ಕನ್ನಡ ಸಿನಿಮಾ ನಿರ್ಮಾಪಕರ ಬಹುಕಾಲದ ಒಲವು ಹಾಗೂ ಒತ್ತಾಯ ಕೂಡ ಆಗಿತ್ತು ಎಂದು ಸೋಮಶೇಖರ್​ ಹೇಳಿದ್ದಾರೆ.

ಚಲನಚಿತ್ರ ತಯಾರಿಕೆ, ಆತಿಥ್ಯ ವಲಯ, ಚಲನಚಿತ್ರ ತರಬೇತಿ/ಅನುಭವ ವಲಯ ಮತ್ತು ಮನರಂಜನಾ ವಲಯಕ್ಕಾಗಿ ಉತ್ಪಾದನೆ ಮತ್ತು ನಂತರದ ನಿರ್ಮಾಣ ವಲಯಗಳನ್ನು ಫಿಲ್ಮ್ ಸಿಟಿ ಹೊಂದಿರಬೇಕು. ಪ್ರದೇಶದ ದೃಷ್ಟಿಯಿಂದ, ಮೈಸೂರು ಫಿಲ್ಮ್ ಸಿಟಿಯು ಲಂಡನ್​​ನ ಪೈನ್‌ವುಡ್ ಸ್ಟುಡಿಯೋಸ್ ಮತ್ತು ಸಿಂಗಾಪುರದ ಯೂನಿವರ್ಸಲ್ ಸ್ಟುಡಿಯೋವನ್ನು ಮೀರಿಸುತ್ತದೆ ಎಂದು ಚಿತ್ರ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮೈಸೂರಿನಲ್ಲೇ ಚಿತ್ರನಗರಿ ನಿರ್ಮಾಣ ಮಾಡಲು ನಿರ್ಧಾರ: ಸಚಿವ ಸಿ.ಸಿ.ಪಾಟೀಲ್

Published On - 6:41 pm, Wed, 17 March 21