ನಟ ದರ್ಶನ್ (Darshan) ಅರೆಸ್ಟ್ ಆದ ಬಳಿಕ ಚಿತ್ರರಂಗದಲ್ಲಿ ಕೆಲವು ಬದಲಾವಣೆಗಳು ಆಗುತ್ತಿವೆ. ಇಂಥ ಪ್ರಕರಣಗಳು ನಡೆದಾಗ ಚಿತ್ರರಂಗದ ಮೇಲೆ ಕಪ್ಪು ಚುಕ್ಕಿ ಆಗುತ್ತದೆ. ರೇಣುಕಾ ಸ್ವಾಮಿ (Renuka Swamy) ಎಂಬ ವ್ಯಕ್ತಿಯು ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ ಎಂಬ ಕಾರಣಕ್ಕೆ ಆತನನ್ನು ಹತ್ಯೆ ಮಾಡಿದ ಆರೋಪ ದರ್ಶನ್ ಮೇಲಿದೆ. ನ್ಯಾಯಾಂಗ ಬಂಧನದಲ್ಲಿ ಇರುವ ದರ್ಶನ್ ಈಗ ಪರಪ್ಪನ ಅಗ್ರಹಾರದಲ್ಲಿ ದಿನ ಕಳೆಯುತ್ತಿದ್ದಾರೆ. ಈ ಘಟನೆ ಕುರಿತಂತೆ ಚಿತ್ರರಂಗದ ಹಲವರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ದರ್ಶನ್ ಜೊತೆ ‘ಕಾಟೇರ’ ಸಿನಿಮಾದಲ್ಲಿ ನಟಿಸಿದ ಹಿರಿಯ ನಟಿ ಶ್ರುತಿ (Shruthi) ಕೂಡ ಈ ಬಗ್ಗೆ ಮಾತನಾಡಿದ್ದಾರೆ.
‘ಚಿತ್ರರಂಗ ಎಂದರೆ ಒಂದು ಕುಟುಂಬ ಇದ್ದಂತೆ. ಯಾವ ಕಲಾವಿದರನ್ನೂ ನಾವು ಪ್ರತ್ಯೇಕವಾಗಿ ನೋಡಿಲ್ಲ. ನಮ್ಮ ಕುಟುಂಬದಲ್ಲಿ ಯಾರಾದರೂ ಒಬ್ಬರಿಗೆ ತೊಂದರೆ ಆದರೆ ಆ ಛಾಯೆ ನಮ್ಮ ಚಿತ್ರರಂಗದ ಮೇಲೆ ಇದ್ದೇ ಇರುತ್ತದೆ. ಎಲ್ಲರೂ ಇದೇ ಮಾತಾಡುತ್ತಿದ್ದಾರೆ. ಎಲ್ಲ ನಿರ್ಮಾಪಕರು ಮಂಕಾಗಿದ್ದಾರೆ. ಮಾನಸಿಕವಾಗಿ ಎಲ್ಲರಿಗೂ ಪರಿಣಾಮ ಬೀರಿದೆ’ ಎಂದು ಶ್ರುತಿ ಹೇಳಿದ್ದಾರೆ.
ರೇಣುಕಾ ಸ್ವಾಮಿಯ ಕೊಲೆ ನಡೆಯಲು ಮುಖ್ಯ ಕಾರಣ ಆಗಿದ್ದೇ ಒಂದು ಅಶ್ಲೀಲ ಸಂದೇಶ. ಸೋಶಿಯಲ್ ಮೀಡಿಯಾದಲ್ಲಿ ಫೇಕ್ ಖಾತೆಗಳ ಮೂಲಕ ಕೆಟ್ಟ ಕಮೆಂಟ್ ಮಾಡುವ ವ್ಯಕ್ತಿಗಳ ಬಗ್ಗೆ ಶ್ರುತಿ ಮಾತನಾಡಿದ್ದಾರೆ. ‘ತಿಳಿದವರು ಕಮೆಂಟ್ ಮಾಡಿದರೆ ಅದನ್ನು ನಾವು ತಿದ್ದಿಕೊಂಡು ಮುಂದಕ್ಕೆ ಹೋಗಬಹುದು. ಆದರೆ ಫೇಕ್ ಅಕೌಂಟ್ಗಳಿಂದ ಹೆಣ್ಣು ಮಕ್ಕಳ ಬಗ್ಗೆ ಅಶ್ಲೀಲವಾದ ಕಮೆಂಟ್ಗಳು ಬರುತ್ತಿವೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಅದನ್ನು ಸಹಿಸಿಕೊಂಡು ಯಾವ ಹೆಣ್ಣು ಮಗಳೂ ಇರಲ್ಲ’ ಎಂದಿದ್ದಾರೆ ಶ್ರುತಿ.
ಇದನ್ನೂ ಓದಿ: ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ವಿಕಿಪೀಡಿಯಾ ಪೇಜ್; ದರ್ಶನ್ ಬಗ್ಗೆಯೂ ಮಾಹಿತಿ
‘ಈ ಬಗ್ಗೆ ನಾನು ಎಲ್ಲರ ಜೊತೆ ಸಹಜವಾಗಿ ಮಾತನಾಡುವಾಗ ಒಂದು ವಿಷಯ ಕೇಳುತ್ತೇನೆ. ಪ್ರತಿಯೊಂದು ಇನ್ಸ್ಟಾಗ್ರಾಮ್ ಅಥವಾ ಫೇಸ್ಬುಕ್ ಖಾತೆಗಳನ್ನು ಕ್ರಿಯೇಟ್ ಮಾಡುವಾಗ ಯಾಕೆ ಕೆವೈಸಿ ಮಾಡಬಾರದು? ಅಕೌಂಟ್ ಹೋಲ್ಡರ್ಗಳಿಗೆ ವಾಕ್ ಸ್ವಾತಂತ್ರ್ಯ ಇರುತ್ತದೆ. ಅದು ಅವರ ಹಕ್ಕು. ಅದನ್ನು ನಾವು ಕಿತ್ತುಕೊಳ್ಳೋಕೆ ಆಗಲ್ಲ. ಆದರೆ ಒಬ್ಬರ ಜೀವ ಹೋಗುವಷ್ಟರಮಟ್ಟಿಗೆ ಕೆಟ್ಟ ಕಮೆಂಟ್ಗಳನ್ನು ಮಾಡಿದರೆ ಅದರ ಹಿಂದೆ ಯಾರು ಇದ್ದಾರೆ ಎಂಬುದನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ’ ಎಂದು ಶ್ರುತಿ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.