ಬಿಡುಗಡೆಗೂ ಮುನ್ನ ನ್ಯೂಯಾರ್ಕ್ನಲ್ಲಿ ಪ್ರದರ್ಶನ ಆಗಲಿದೆ ಕನ್ನಡದ ‘ಕೆಂಡ’ ಸಿನಿಮಾ
ಕನ್ನಡದ ‘ಕೆಂಡ’ ಸಿನಿಮಾಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರೆಯುತ್ತಿದೆ. ರೂಪಾ ರಾವ್ ನಿರ್ಮಾಣದ, ಸಹದೇವ್ ಕೆಲವಡಿ ನಿರ್ದೇಶನದ ಈ ಸಿನಿಮಾದಲ್ಲಿ ವಿಶೇಷ ಕಥಾಹಂದರ ಇದೆ. ಜಾಗತಿಕ ಮಟ್ಟದ ಸಿನಿಮೋತ್ಸವಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿರುವುದು ವಿಶೇಷ. ಜೂ.28ರಂದು ನ್ಯೂಯಾರ್ಕ್ನಲ್ಲಿ ‘ಕೆಂಡ’ ಪ್ರದರ್ಶನ ಆಗಲಿದೆ.
ಕೇವಲ ಅದ್ದೂರಿ ಮೇಕಿಂಗ್ ಕಾರಣಕ್ಕೆ ಸದ್ದು ಮಾಡುವ ಸಿನಿಮಾಗಳು ಒಂದು ಕಡೆಯಾದರೆ, ಕಾಂಟೆಂಟ್ ಕಾರಣದಿಂದ ಸುದ್ದಿಯಾಗುವ ಸಿನಿಮಾಗಳು ಇನ್ನೊಂದು ಕಡೆ. ಕನ್ನಡದಲ್ಲಿ ಎರಡೂ ಪ್ರಕಾರದ ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಈಗ ಕನ್ನಡದ ‘ಕೆಂಡ’ ಸಿನಿಮಾ ತನ್ನ ಕಥಾವಸ್ತು ಕಾರಣದಿಂದ ಕೌತುಕ ಮೂಡಿಸುತ್ತಿದೆ. ಸಹದೇವ್ ಕೆಲವಡಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಬಿಡುಗಡೆಗೂ ಮೊದಲು ಅನೇಕ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಾಣುವ ಮೂಲಕ ಈ ಸಿನಿಮಾ ಒಂದಷ್ಟು ಪ್ರಶಸ್ತಿಗಳನ್ನು ತನ್ನದಾಗಿಸಿಕೊಳ್ಳುತ್ತಿದೆ. ವಿನೋದ್ ಸುಶೀಲ, ಬಿ.ವಿ. ಭರತ್, ಪ್ರಣವ್ ಶ್ರೀಧರ್, ಗೋಪಾಲಕೃಷ್ಣ ದೇಶಪಾಂಡೆ, ಬಿಂದೂ ರಕ್ಷಿದಿ, ಸಚಿನ್ ಶ್ರೀನಾಥ್, ಶರತ್ ಗೌಡ, ಸತೀಶ್ ಕುಮಾರ್, ಪೃಥ್ವಿ ಬನವಾಸಿ, ಅರ್ಚನಾ ಶ್ಯಾಮ್, ದೀಪ್ತಿ ನಾಗೇಂದ್ರ ಮುಂತಾದವರ ‘ಕೆಂಡ’ ಸಿನಿಮಾದಲ್ಲಿ ನಟಿಸಿದ್ದಾರೆ.
ವಿಶೇಷ ಏನೆಂದರೆ, ನ್ಯೂಯಾರ್ಕ್‍ನ ‘ಟಿಶ್ ಸ್ಕೂಲ್ ಆಫ್ ಆರ್ಟ್ಸ್’ನಲ್ಲಿ ಜೂನ್ 28ರಂದು ‘ಕೆಂಡ’ ಸಿನಿಮಾ ಪ್ರದರ್ಶನ ಆಗಲಿದೆ. ಮಾರ್ಟಿನ್ ಸ್ಕಾರ್ಸೆಸೆ, ಜಿಮ್ ಜರ್ಮುಷ್, ಆಂಗ್ ಲೀ, ಸ್ಟೈಕ್ ಲೀ, ಕೋಯೆನ್ ಬ್ರದರ್ಸ್ ಅವರಂತಹ ಘಟಾನುಘಟಿ ನಿರ್ದೇಶಕರು ತರಬೇತಿ ಪಡೆದ ಈ ಜಾಗದಲ್ಲಿ ಕನ್ನಡದ ಸಿನಿಮಾ ಪ್ರದರ್ಶನ ಆಗುತ್ತಿರುವುದು ಹೆಮ್ಮೆಯ ವಿಚಾರ. ಇಲ್ಲಿ ಪ್ರದರ್ಶನವಾದ ಮೊದಲ ಕನ್ನಡ ಸಿನಿಮಾ ಎಂಬ ಖ್ಯಾತಿಯೂ ‘ಕೆಂಡ’ ಚಿತ್ರಕ್ಕೆ ಸಿಗುತ್ತಿದೆ ಎಂದು ಚಿತ್ರತಂಡ ಹೇಳಿದೆ.
ಇದನ್ನೂ ಓದಿ: ದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರಶಸ್ತಿ ಪಡೆದ ‘ಕೆಂಡ’ ನಿರ್ದೇಶಕ ಸಹದೇವ್ ಕೆಲವಡಿ
ಅಷ್ಟೇ ಅಲ್ಲದೇ, ಬೇರೆ ಬೇರೆ ಕಡೆಗಳಲ್ಲೂ ‘ಕೆಂಡ’ ಸಿನಿಮಾಗೆ ಮನ್ನಣೆ ಸಿಗುತ್ತಿದೆ. ಜೂನ್ 29ಕ್ಕೆ ಸ್ವಿಡ್ಜರ್ಲೆಂಡ್ನಲ್ಲಿ ಈ ಸಿನಿಮಾ ಪ್ರದರ್ಶನಗೊಳ್ಳಲಿದೆ. ಕಥಾವಸ್ತು ಗಮನಾರ್ಹವಾಗಿ ಇರುವ ಕಾರಣದಿಂದಲೇ ಇದೆಲ್ಲ ಸಾಧ್ಯವಾಗುತ್ತಿದೆ ಎನ್ನುತ್ತಿದ್ದಾರೆ ಚಿತ್ರತಂಡದವರು. ಈ ಮೊದಲು ದಾದಾ ಸಾಹೇಬ್ ಫಾಲ್ಕೆ ಸಿನಿಮೋತ್ಸವದಲ್ಲಿ ಪ್ರದರ್ಶನವಾಗಿ ‘ಬೆಸ್ಟ್ ಡೆಬ್ಯೂ ಡೈರೆಕ್ಟರ್ ಜ್ಯೂರಿ ಅವಾರ್ಡ್’ ಪಡೆದುಕೊಂಡಿತ್ತು ಈ ಸಿನಿಮಾ. ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
‘ಕೆಂಡ’ ಸಿನಿಮಾ ತಂಡದ ಬಗ್ಗೆ:
‘ಗಂಟುಮೂಟೆ’ ಸಿನಿಮಾಗೆ ನಿರ್ದೇಶನ ಮಾಡಿದ್ದ ರೂಪಾ ರಾವ್ ಅವರು ಈಗ ‘ಕೆಂಡ’ ಚಿತ್ರವನ್ನು ನಿರ್ಮಿಸಿದ್ದಾರೆ. ಒಂದು ಸೂಕ್ಷ್ಮ ಕಥೆಯನ್ನು ಇಟ್ಟುಕೊಂಡು ಸಹದೇವ್ ಕೆಲವಡಿ ಅವರು ನಿರ್ದೇಶನ ಮಾಡಿದ್ದಾರೆ. ‘ಅಮೇಯುಕ್ತಿ ಸ್ಟುಡಿಯೋಸ್’ ಬ್ಯಾನರ್ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಶೀಘ್ರದಲ್ಲೇ ಈ ಚಿತ್ರ ಬಿಡುಗಡೆ ಆಗಲಿದೆ. ರಿತ್ವಿಕ್ ಕಾಯ್ಕಿಣಿ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರದೀಪ್ ನಾಯಕ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಲಕ್ಷ್ಮಿಕಾಂತ್ ಜೋಶಿ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.