ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagadish) ಪುತ್ರ ಸ್ನೇಹಿತ್ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಆದರೆ, ಅದು ಒಳ್ಳೆಯ ಕಾರಣಕ್ಕೆ ಅಲ್ಲ. ಈಸ್ಟ್ ವೆಸ್ಟ್ ಗ್ರೂಪ್ ಮಾಲೀಕ ರಜತ್ (Rajat) ಅವರ ಮನೆಗೆ ನುಗ್ಗಿ ಹಲ್ಲೆ ಮಾಡಿದ ಆರೋಪ ಇವರ ವಿರುದ್ಧ ಕೇಳಿ ಬಂದಿತ್ತು. ಈ ಪ್ರಕರಣ ತಣ್ಣಗಾಯಿತು ಎನ್ನುವಾಗಲೇ ಮತ್ತೊಂದು ಕಿರಿಕ್ ನಡೆದಿದೆ. ಸ್ನೇಹಿತ್ (Snehit) ಕಾರು ಚಾಲಕ ರಕ್ಷಿತ್ ಅವರು ರಜತ್ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಈ ಪ್ರಕರಣ ನಡೆದ ಬೆನ್ನಲ್ಲೇ ರಜತ್ ಪತ್ನಿ, ಸ್ನೇಹಿತ್ ವಿರುದ್ಧ ದೂರು ದಾಖಲು ಮಾಡಿದ್ದಾರೆ.
ಜಗದೀಶ್ ಮನೆ ಕಾರು ಚಾಲಕ ರಕ್ಷಿತ್ಗೆ ರಜತ್ ಅವರು ಜಾತಿ ನಿಂದನೆ ಮಾಡಿರುವ ಆರೋಪ ಇದೆ. ಈ ಸಂಬಂಧ ಕಾರು ಚಾಲಕ ರಕ್ಷಿತ್ ಅವರು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಕೊಲೆ ಬೆದರಿಕೆ ಇರುವ ಬಗ್ಗೆ ಜಗದೀಶ್ ಮನೆ ಕಾರು ಚಾಲಕ ದೂರು ದಾಖಲು ಮಾಡಿದ ಕೆಲವೇ ದಿನಗಳಲ್ಲಿ ರಜತ್ ಕುಟುಂಬದವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ! ಸ್ನೇಹಿತ್ ಅವರು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲು ಮಾಡಿದ್ದಾರೆ.
ಜಾಗ್ವಾರ್ ಕಾರಿನಲ್ಲಿ ಬಂದ ಸ್ನೇಹಿತ್ ಅವರು ರಜತ್ ಹಾಗೂ ಅವರ ಪತ್ನಿ ಜತೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬುದು ದೂರಿನಲ್ಲಿದೆ. ‘ಜಾಸ್ತಿ ಮಾತಾಡಿದರೆ ಸೀರಿ ಬಿಚ್ಚಿ ಹೊಡಿತೀನಿ. ಇನ್ನೂ ಜಾಸ್ತಿ ಮಾತನಾಡಿದರೆ ಮುಗಿಸಿ ಬಿಡ್ತೀನಿ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ’ ಎಂಬುದಾಗಿ ರಜತ್ ಗೌಡ ಪತ್ನಿ ಅನ್ನಪೂರ್ಣ ಅವರು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಸದ್ಯ ಇಬ್ಬರ ದೂರುಗಳ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿರುವ ಮಹಾಲಕ್ಷ್ಮಿ ಲೇಔಟ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ಪುಂಡಾಟ ಕೇಸ್ನಲ್ಲಿ ರಾಜಿಗೆ ಪ್ರಯತ್ನಿಸಿದ ಸ್ಟಾರ್ ನಟ?
ಈ ಮೊದಲೂ ಆಗಿತ್ತು ಕಿರಿಕ್
ಸ್ನೇಹಿತ್ ವಿರುದ್ಧ ಈ ಮೊದಲೂ ಕೇಸ್ ದಾಖಲಾಗಿತ್ತು. ‘ರಜತ್ ಮನೆಗೆ ನುಗ್ಗಿ ಸ್ನೇಹಿತ್ ಇಬ್ಬರು ಮಹಿಳಾ ಕೆಲಸದವರ ಮೇಲೆ ಹಲ್ಲೆ ಮಾಡಿದ್ದಾರೆ. ಸ್ನೇಹಿತ್ ಹತ್ತು ಜನ ಬೌನ್ಸರ್ಗಳನ್ನು ಕರೆದುಕೊಂಡು ಬಂದು ಗಲಾಟೆ ಮಾಡಿದ್ದಾರೆ. ಮಹಿಳೆಯರಿಗೆ ಬಟ್ಟೆ ಹರಿದು ಹೋಗುವಂತೆ ಹಾಗೂ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾರೆ’ ಎಂದು ಈ ಮೊದಲು ರಜತ್ ದೂರು ದಾಖಲು ಮಾಡಿದ್ದರು.