Sati Sulochana: ಕನ್ನಡ ಚಿತ್ರರಂಗ ಉದಯವಾಗಿ 90 ವರ್ಷ: ಮೊದಲ ಸಿನಿಮಾ ನಿರ್ಮಾಣದ ಹಿಂದಿದೆ ರೋಚಕ ಕತೆ

|

Updated on: Mar 03, 2023 | 3:36 PM

ಕನ್ನಡ ಚಿತ್ರರಂಗ ಉದಯವಾಗಲು ಕಾರಣವಾದ ಕನ್ನಡದ ಮೊದಲ ಸಿನಿಮಾ ಸತಿ ಸುಲೋಚನಾ ಬಿಡುಗಡೆಯಾಗಿ ಇಂದಿಗೆ 90 ವರ್ಷ. ಆ ಸಿನಿಮಾ ನಿರ್ಮಾಣದ ಹಿಂದಿನ ಸಾಹಸಭರಿತ ಕತೆ ಇಲ್ಲಿದೆ.

Sati Sulochana: ಕನ್ನಡ ಚಿತ್ರರಂಗ ಉದಯವಾಗಿ 90 ವರ್ಷ: ಮೊದಲ ಸಿನಿಮಾ ನಿರ್ಮಾಣದ ಹಿಂದಿದೆ ರೋಚಕ ಕತೆ
ಸತಿ ಸುಲೋಚನ
Follow us on

ಕನ್ನಡ ಚಿತ್ರರಂಗ (Sandalwood) ಇಂದು ವಿಶ್ವಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ವರ್ಷವೊಂದಕ್ಕೆ ನೂರಾರು ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ನಿರ್ಮಾಣಗೊಳ್ಳುತ್ತಿವೆ. ಸಾವಿರಾರು ಕೋಟಿ ಮಾರುಕಟ್ಟೆ ಮೌಲ್ಯವುಳ್ಳ ಚಿತ್ರರಂಗವಾಗಿ ಸ್ಯಾಂಡಲ್​ವುಡ್ ಇಂದು ಬೆಳೆದು ನಿಂತಿದೆ. ಆದರೆ ಇದಕ್ಕೆಲ್ಲ ಶ್ರೀಕಾರ ಹಾಕಿದ್ದು ಕನ್ನಡದ ಮೊದಲ ಸಿನಿಮಾ ಸತಿ ಸುಲೋಚನ (Sati Sulochana). ಈ ಸಿನಿಮಾದ ಬಿಡುಗಡೆಯ ಜೊತೆಗೆ ಕನ್ನಡ ಚಿತ್ರರಂಗ ಆರಂಭವಾಯ್ತು. ಕನ್ನಡ ಚಿತ್ರರಂಗದ ಬೇರಾಗಿರುವ ಈ ಸಿನಿಮಾ ಬಿಡುಗಡೆ ಆಗಿ ಇಂದಿಗೆ (ಮಾರ್ಚ್ 03) ಬರೋಬ್ಬರಿ 90 ವರ್ಷಗಳಾಗಿವೆ. ಈ ಸಿನಿಮಾ ನಿರ್ಮಾಣದ ಹಿಂದಿನ ಕತೆ ಬಲು ರೋಚಕ.

1913ರಲ್ಲಿಯೇ ಭಾರತದಲ್ಲಿ ಮೊದಲ ಸಿನಿಮಾ ನಿರ್ಮಾಣವಾಗಿತ್ತು. ಆ ನಂತರ ತೆಲುಗು, ಮಲಯಾಳಂ, ತಮಿಳು ಭಾಷೆಗಳಲ್ಲಿ ಸಿನಿಮಾಗಳು ಬಂದಿದ್ದವು, ಅಸ್ಸಾಮಿ ಭಾಷೆಯಲ್ಲಿಯೂ ಸಿನಿಮಾ ಬಂದುಬಿಟ್ಟಿತ್ತು. ಆದರೆ ಕನ್ನಡದಲ್ಲಿ ಮೊದಲ ಸಿನಿಮಾ ನಿರ್ಮಾಣವಾಗಲು ತುಸು ಹೆಚ್ಚೇ ಸಮಯ ಹಿಡಿಯಿತು. ಹಿಂದಿಯ ಮೊದಲ ವಾಕ್ ಚಿತ್ರ ಆಲಂ ಆರ (1931) ಬಿಡುಗಡೆ ಬಳಿಕ ಭಾರತದಲ್ಲಿ ಸಿನಿಮಾ ನಿರ್ಮಾಣ ತೀವ್ರತೆ ಪಡೆದುಕೊಂಡಿತು. ಆಗಲೇ ಕನ್ನಡದಲ್ಲಿಯೂ ಸಿನಿಮಾ ನಿರ್ಮಿಸುವ ಆಲೋಚನೆ ಆರಂಭವಾಗಿ ಅದರ ಫಲವಾಗಿ ಕನ್ನಡದ ಮೊತ್ತ ಮೊದಲ ಸಿನಿಮಾ ‘ಸತಿ ಸುಲೋಚನ’ 1934, ಮಾರ್ಚ್ 3 ರಂದು ಬಿಡುಗಡೆ ಆಯ್ತು. ಆದರೆ ಈ ಸಿನಿಮಾದ ನಿರ್ಮಾಣ ಅಷ್ಟು ಸುಲಭವಾಗಿರಲಿಲ್ಲ. ಸಾರಿಗೆ ವ್ಯವಸ್ಥೆ, ಸಂಪರ್ಕ ವ್ಯವಸ್ಥೆ, ತಂತ್ರಜ್ಞಾನ ಯಾವುದೂ ಸಮರ್ಪಕವಾಗಿ ಇಲ್ಲದ ಕಾಲದಲ್ಲಿ ಸಿನಿಮಾ ನಿರ್ಮಾಣದ ಕನಸು ಕಂಡು ಅದನ್ನು ಸಾಕಾರಗೊಳಿಸಿದ್ದು ಯಾವ ಮಹತ್ ಸಾಹಸಕ್ಕೂ ಕಡಿಮೆಯಲ್ಲ.

ರಾಜಸ್ಥಾನದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದ ಉದ್ಯಮಿ ಚಮನ್​ ಲಾಲ್ ಡೊಂಗೋಜಿ ಎಂಬುವರು 1932ರಲ್ಲಿ ಸಿನಿಮಾ ನಿರ್ಮಾಣ ಸಂಸ್ಥೆಯೊಂದನ್ನು ಕಟ್ಟಿ ಕನ್ನಡದಲ್ಲಿ ಸಿನಿಮಾ ನಿರ್ಮಿಸಲು ಮುಂದಾದರು. ರಾಮಾಯಣದ ಕತೆಯನ್ನು ಸಿನಿಮಾ ಮಾಡುವುದು ಅವರ ಇಚ್ಛೆಯಾಗಿತ್ತು. ತೆಲುಗಿನ ಯರ್ರಗುಡಿಪಾಟಿ ವರದ ರಾವ್ ಅವರಿಗೆ ಕನ್ನಡದ ಮೊದಲ ಸಿನಿಮಾ ನಿರ್ದೇಶಿಸುವ ಜವಾಬ್ದಾರಿ ವಹಿಸಲಾಯಿತು. ತೆಲುಗಿನಲ್ಲಿ ಅದಾಗಲೇ ಮೂಕಿ ಸಿನಿಮಾ ಒಂದನ್ನು ಅವರು ನಿರ್ದೇಶಿಸಿದ್ದರು. ಆಗಿನ ಕಾಲಕ್ಕೆ ರಂಗಭೂಮಿಯಲ್ಲಿ ದೊಡ್ಡ ಹೆಸರು ಮಾಡಿದ್ದ ಎಂವಿ ಸುಬ್ಬಯ್ಯ ನಾಯ್ಡು (ದಿವಂಗತ ನಟ ಲೋಕೇಶ್ ಅವರ ತಂದೆ, ಸೃಜನ್ ಲೋಕೇಶ್ ಅವರ ತಾತ) ಅವರನ್ನು ಸಿನಿಮಾದಲ್ಲಿ ನಟಿಸುವಂತೆ ಮನವಿ ಮಾಡಲಾಯ್ತು. ಸಿನಿಮಾದಲ್ಲಿ ನಟಿಸಲು ಸುಬ್ಬಯ್ಯ ನಾಯ್ಡು ಒಪ್ಪಿದರಾದರೂ ಷರತ್ತೊಂದನ್ನು ಹಾಕಿದರು. ತಮ್ಮ ಜೊತೆ ನಟಿಸುತ್ತಿದ್ದ ನಾಗೇಂದ್ರ ರಾವ್‌ ಅವರಿಗೆ ಪಾತ್ರ ನೀಡುವುದಾದರೆ ಮಾತ್ರವೇ ಸಿನಿಮಾದಲ್ಲಿ ನಟಿಸುವುದಾಗಿ ಹೇಳಿದರು. ಷರತ್ತಿಗೆ ನಿರ್ದೆಶಕ, ನಿರ್ಮಾಪಕರು ಒಪ್ಪಿಕೊಂಡರು.

ರಾಮಾಯಣದ ಕತೆಯ ಭಾಗವಾದ ‘ಇಂದ್ರಜಿತ ವಧೆ’ ಹೆಸರಿನ ನಾಟಕವನ್ನು ಸಿನಿಮಾ ಮಾಡಲು ನಿಶ್ಚಯಿಸಲಾಯಿತು. ಗುಬ್ಬಿ ವೀರಣ್ಣನವರ ಕಂಪೆನಿಗೆ ನಾಟಕಗಳನ್ನು ಬರೆದಿದ್ದ ಬೆಳ್ಳಾವೆ ನರಹರಿ ಶಾಸ್ತ್ರಿಗಳು ಚಿತ್ರಕತೆ ಬರೆಯಲು ನೇಮಕಗೊಂಡರು. ನರಹರಿ ಶಾಸ್ತ್ರಿಗಳು ನಾಟಕವನ್ನು ಸಿನಿಮಾ ಭಾಷೆಗೆ ಒಗ್ಗುವಂತೆ ಚಿತ್ರಕತೆ ಬರೆದಿದ್ದಲ್ಲದೆ ಸಿನಿಮಾಕ್ಕಾಗಿ ಬರೋಬ್ಬರಿ 16 ಹಾಡುಗಳನ್ನು ಬರೆದುಕೊಟ್ಟರು. ನಂತರ ಸಿನಿಮಾದ ಪ್ರಮುಖ ಪಾತ್ರವಾದ ಇಂದ್ರಜಿತನ ಪಾತ್ರಕ್ಕೆ ಸುಬ್ಬಯ್ಯ ನಾಯ್ಡು, ಸುಲೋಚನಾ ಪಾತ್ರಕ್ಕೆ ತ್ರಿಪುರಾಂಭ, ರಾವಣನ ಪಾತ್ರಕ್ಕೆ ನಾಗೇಂದ್ರ ರಾವ್, ಮಂಡೋದರಿ ಪಾತ್ರಕ್ಕೆ ಲಕ್ಷ್ಮಿ, ಲಕ್ಷ್ಮಣನ ಪಾತ್ರಕ್ಕೆ ನಿರ್ದೇಶಕರೂ ಆಗಿದ್ದ ವೈ.ವಿ.ರಾವ್ ಹೀಗೆ ಪಾತ್ರಗಳ ಆಯ್ಕೆಯಾಗಿ ಸಿನಿಮಾ ಚಿತ್ರೀಕರಣಕ್ಕೆ ಮುನ್ನ ತಾಲೀಮು ಸಹ ನಡೆಯಿತು.

1933 ರಲ್ಲಿ ರೈಲಿನಲ್ಲಿ ಕೊಲ್ಹಾಪುರಕ್ಕೆ ತೆರಳಿದ ಚಿತ್ರತಂಡ ಅಲ್ಲಿನ ‘ಛತ್ರಪತಿ ಸಿನಿಟೋನ್’ ಹೆಸರಿನ ಸ್ಟುಡಿಯೋದಲ್ಲಿ ಚಿತ್ರೀಕರಣ ಆರಂಭಿಸಿತು. ಕೃತಕ ಲೈಟುಗಳಿಲ್ಲದೆ ಸಿನಿಮಾದ ಬಹುತೇಕ ಚಿತ್ರೀಕರಣ ನೈಸರ್ಗಿಕ ಲೈಟ್‌ನಲ್ಲಿಯೇ ಮಾಡಲಾಯಿತು. ಕನ್ನಡಿಗಳನ್ನು ಬಳಸಿ ಕೆಲವು ಟ್ರಿಕ್ ಶಾಟ್‌ಗಳನ್ನು ಸಹ ಚಿತ್ರೀಕರಿಸಿದ್ದು ವಿಶೇಷ. ಯುದ್ಧದ ದೃಶ್ಯಗಳಿಗಾಗಿ ನೂರಾರು ಜನರನ್ನು ಸೇರಿಸಲಾಗಿತ್ತು. ಯುದ್ಧದ ದೃಶ್ಯಗಳನ್ನು ಚಿತ್ರೀಕರಿಸಲು ಆಗಲೇ ಎರಡು ಕ್ಯಾಮೆರಾಗಳನ್ನು ಚಿತ್ರತಂಡ ಬಳಸಿತ್ತು. ಈ ನಡುವೆ ಸಿನಿಮಾದ ನಿರ್ಮಾಪಕರು ಕಲಾವಿದರಿಗೆ ಸಂಭಾವನೆ ಕೊಟ್ಟಿಲ್ಲವೆಂದು ಸುಬ್ಬಯ್ಯ ನಾಯ್ಡು ಸೇರಿದಂತೆ ಇತರೆ ಕಲಾವಿದರು ಪ್ರತಿಭಟನೆ ಸಹ ಮಾಡಿದ್ದರು. ಹೇಗೊ ಎಲ್ಲ ಅಡೆ-ತಡೆಗಳನ್ನು ಮೀರಿ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿತು. ಹಲವು ಅಡೆ-ತಡೆಗಳ ನಿರ್ಮಾಣಗೊಂಡ ಮೊದಲ ಸಿನಿಮಾದ ಒಟ್ಟು ಬಜೆಟ್ ಆಗಿನ ಕಾಲಕ್ಕೆ 40000.

ಸಿನಿಮಾವು ಮಾರ್ಚ್ 03, 1934ರಂದು ಕೆ.ಆರ್.ಪೇಟೆ ಬಳಿಕ ಪ್ಯಾರಾಮೌಂಟ್ ಹಾಲ್‌ನಲ್ಲಿ ಬಿಡುಗಡೆ ಆಯಿತು. ಕುಸ್ತಿ, ನಾಟಕ ಇನ್ನಿತರೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದ ಪ್ಯಾರಾಮೌಂಟ್ ಹಾಲ್ ನಲ್ಲಿ ಪರದೆ ಹಾಕಿ, ಪ್ರೊಜೆಕ್ಟರ್ ಇಟ್ಟು ಚಿತ್ರಮಂದಿರವನ್ನಾಗಿ ಬದಲಾಯಿಸಿ ಸಿನಿಮಾ ಪ್ರದರ್ಶಿಸಲಾಗಿತ್ತು. ಆ ನಂತರ ಇದು ಶಾಶ್ವತವಾಗಿ ಚಿತ್ರಮಂದಿರವಾಗಿಯೇ ಉಳಿದು, ಕರ್ನಾಟಕದ ಮೊದಲ ಚಿತ್ರಮಂದಿರ ಎಂಬ ಖ್ಯಾತಿಗೆ ಪಾತ್ರವಾಯ್ತು. ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಆಗಿದ್ದೇ ತಡ ಜನ ಸಿನಿಮಾ ನೋಡಲು ಮುಗಿಬಿದ್ದರು, ಹಳ್ಳಿಗಳಿಂದ ಎತ್ತಿನ ಗಾಡಿಯಲ್ಲಿ ಬಂದು ಸಿನಿಮಾ ನೋಡಿ ಹೋಗುತ್ತಿದ್ದರು. ಸುಮಾರು ಎಂಟು ವಾರ ಪ್ಯಾರಾಮೌಂಟ್ ಚಿತ್ರಮಂದಿರದಲ್ಲಿ ‘ಸತಿ ಸುಲೋಚನಾ’ ಸಿನಿಮಾ ಪ್ರದರ್ಶನ ಕಂಡಿತು. ದಾನಿ ದೊಡ್ಡಣ್ಣನವರು ಕೊಟ್ಟಿದ್ದ ಜಮೀನಿನಲ್ಲಿ ಪ್ಯಾರಾಮೌಂಟ್ ಹಾಲ್ ನಿರ್ಮಾಣ ಮಾಡಿತ್ತಾದ್ದರಿಂದ ಅದನ್ನು ದೊಡ್ಡಣ್ಣ ಹಾಲ್ ಎಂದೇ ಕರೆಯುತ್ತಿದ್ದರು. ಪ್ಯಾರಾಮೌಂಟ್ ಇದ್ದ ಜಾಗದಲ್ಲಿ ನಂತರ ಪರಿಮಳ ಹಾಗೂ ಪ್ರದೀಪ್ ಎಂಬ ಎರಡು ಚಿತ್ರಮಂದಿರ ನಿರ್ಮಾಣ ಮಾಡಲಾಯಿತು.

ಇಲ್ಲಿ ಇನ್ನೊಂದು ಆಸಕ್ತಿಕರ ವಿಷಯವಿದೆ. ಸತಿ ಸುಲೋಚನಾ ಸಿನಿಮಾಕ್ಕೂ ಮುನ್ನ ಕನ್ನಡದಲ್ಲಿಯೇ ಮತ್ತೊಂದು ಸಿನಿಮಾ ನಿರ್ಮಾಣಗೊಂಡಿತ್ತು. ಅದರ ಹೆಸರು ಭಕ್ತ ಧೃವ. ಸತಿ ಸುಲೋಚನಾ ಸಿನಿಮಾಕ್ಕೆ ಮುಂಚೆಯೇ ಈ ಸಿನಿಮಾದ ಚಿತ್ರೀಕರಣ ಆರಂಭವಾಗಿತ್ತು. ಸಿನಿಮಾವನ್ನು ಮರಾಠಿಯ ಪಾರ್ಶ್ವನಾಥ ಆಲ್ಟೇಕರ್ ನಿರ್ದೇಶನ ಮಾಡಿದ್ದರು. ಜಯವಾಣೀ ಬ್ಯಾನರ್ ಅಡಿಯಲ್ಲಿ ಯುಎಲ್ ನಾರಾಯಣ ರಾವ್ ನಿರ್ಮಾಣ ಮಾಡಿದ ಈ ಸಿನಿಮಾವನ್ನು ಮುಂಬೈನ ಅಜಂತ ಸ್ಟುಡಿಯೋಸ್​ನಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಸಿನಿಮಾದಲ್ಲಿ ಹದಿನೈದು ಹಾಡುಗಳಿದ್ದವು. ಆದರೆ ಈ ಸಿನಿಮಾ ಸತಿ ಸುಲೋಚನಾ ಸಿನಿಮಾ ಬಿಡುಗಡೆ ಆದ ಒಂದು ತಿಂಗಳ ಬಳಿಕ ಅಂದರೆ ಏಪ್ರಿಲ್ 5 ರಂದು ಬಿಡುಗಡೆ ಆಗಿ ಕನ್ನಡದ ಎರಡನೇ ಸಿನಿಮಾ ಎನಿಸಿಕೊಂಡಿತು.