CCL 2023: ಕರ್ನಾಟಕ vs ತಮಿಳುನಾಡು ಪಂದ್ಯಕ್ಕೆ ತಯಾರಿ ಹೇಗಿದೆ? ವಿವರ ನೀಡಿದ ಸುದೀಪ್
CCL 2023: ಕರ್ನಾಟಕ ಹಾಗೂ ತಮಿಳುನಾಡು ನಡುವೆ ಸಿಸಿಎಲ್ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿದ್ದು, ಪಂದ್ಯಕ್ಕೆ ತಂಡ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ನಟ ಸುದೀಪ್ ಮಾತನಾಡಿದ್ದಾರೆ.
ಬೇರೆ ಬೇರೆ ಭಾಷೆಯ ಚಿತ್ರರಂಗದವರು ಪರಸ್ಪರರ ವಿರುದ್ಧ ಕ್ರಿಕೆಟ್ ಆಡುವ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) (CCL 2023) ಚಾಲ್ತಿಯಲ್ಲಿದ್ದು ಸ್ಯಾಂಡಲ್ವುಡ್ನ ಸೆಲೆಬ್ರಿಟಿಗಳ ಕರ್ನಾಟಕ ತಂಡ ಈಗಾಗೇ ಎರಡು ಪಂದ್ಯ ಗೆದ್ದಿದೆ. ಮುಂದಿನ ಪಂದ್ಯ ತಮಿಳುನಾಡು ತಂಡದ ವಿರುದ್ಧ ಇದ್ದು, ಪಂದ್ಯವು ಬೆಂಗಳೂರಿನಲ್ಲಿ ನಾಳೆ (ಮಾರ್ಚ್ 4) ರಂದು ನಡೆಯಲಿದೆ. ಪಂದ್ಯಕ್ಕೆ ಕರ್ನಾಟಕ ತಂಡ ಹೇಗೆ ರೆಡಿಯಾಗಿದೆ ಎಂಬ ಮಾಹಿತಿಯನ್ನು ನಟ ಸುದೀಪ್ (Sudeep) ಟಿವಿ9 ಜೊತೆ ಹಂಚಿಕೊಂಡಿದ್ದಾರೆ.
ಸಿಸಿಎಲ್, ಕೆಸಿಸಿ ಪ್ರಾರಂಭವಾಗುದಕ್ಕಿಂತ ಎರಡು ತಿಂಗಳು ಮುಂಚೆಯಿಂದಲೂ ನಾವು ಅಭ್ಯಾಸ ಮಾಡುತ್ತಲೇ ಇದ್ದೆವು. ಸಿನಿಮಾ ಶೂಟಿಂಗ್ಗಳನ್ನು ಸಹ ಬಿಟ್ಟು ಇದರಲ್ಲಿ ತೊಡಗಿಕೊಂಡಿದ್ದೀವಿ. ಸತತವಾಗಿ ಅಭ್ಯಾಸ ಮಾಡಿರುವುದು ನಮಗೆ ಧನಾತ್ಮಕ ಅಂಶವಾಗಿ ಬದಲಾಗಲಿದೆ. ಎಲ್ಲ ಆಟಗಾರರು ಪಾಸಿಟಿವ್ ಆಗಿದ್ದಾರೆ. ಮೊದಲ ಪಂದ್ಯ ಆಡಿದ್ದಕ್ಕೂ ಎರಡನೇ ಪಂದ್ಯ ಆಡಿದ್ದಕ್ಕೂ ಸಾಕಷ್ಟು ಅಂತರ ಇತ್ತು. ಕೆಸಿಸಿ ಪಂದ್ಯಗಳನ್ನು ರಾತ್ರಿ ಹನ್ನೊಂದು ಗಂಟೆ ವೇಳೆಗೆ ಮುಗಿಸಿ, ಬೆಳಿಗಿನ ಜಾವ ಫ್ಲೈಟ್ ಹತ್ತಿ ಹೋಗಿ ಆಟ ಆಡಿ ಗೆದ್ದೆವು. ಅಷ್ಟು ಶ್ರಮದ ನಡುವೆ ಆಡಿ ಗೆದ್ದವರು ನಾವು, ಈಗ ಒಂದು ವಾರ ರೆಸ್ಟ್ ಸಿಕ್ಕಿದೆ. ಎಲ್ಲರೂ ಗೆಲುವಾಗಿದ್ದಾರೆ. ನಾಳೆ ಅದ್ಭುತ ಪ್ರದರ್ಶನ ನಮ್ಮಿಂದ ಬರಲಿದೆ ಎಂದರು ಸುದೀಪ್.
ಗೆಲ್ಲುವ ಹಠ ಎಲ್ಲರಲ್ಲೂ ಇದೆ. ನಮ್ಮ ತಂಡದ ನಾಯಕ ಪ್ರದೀಪ್ ಗಾಯದಿಂದ ಸಮಸ್ಯೆಗೆ ಒಳಗಾಗಿದ್ದಾರೆ. ಆದರೂ ಮೆಡಿಸಿನ್ಗಳನ್ನು ತೆಗೆದುಕೊಂಡು ಆಡುವ ಪ್ರಯತ್ನ ಮಾಡುತ್ತಿದ್ದಾರೆ. ನಾನು ಈ ತಂಡದ ಹಿರಿಯ ಆಟಗಾರನಾಗಿ ತಂಡಕ್ಕೆ ಹುರುಪು ತುಂಬುವ ಕಾರ್ಯ, ಹಠದಿಂದ ಗೆಲ್ಲುವ ಛಲ ತುಂಬುವ ಕಾರ್ಯ ಮಾಡುತ್ತಿದ್ದೇನೆ. ನಮ್ಮ ತಂಡದ ನಾಯಕ ಪ್ರದೀಪ್, ಬಹಳ ಒಳ್ಳೆಯ ನಾಯಕ ಗುಣ ಹೊಂದಿರುವವನು. ಅವನ ಅಡಿಯಲ್ಲಿ ಆಡುವುದು ನನಗೆ ಬಹಳ ಖುಷಿಯ ವಿಚಾರ. ಎಲ್ಲರೂ ಗೆಲುವಿನ ಹಸಿವಿನಲ್ಲಿದ್ದಾರೆ. ನಾಳೆ ಒಳ್ಳೆಯದೇ ನಡೆಯಲಿದೆ ಎಂಬ ನಿರೀಕ್ಷೆ ಇದೆ ಎಂದಿದ್ದಾರೆ ಸುದೀಪ್.
ಯಾವ ತಂಡವನ್ನು ಸಹ ಲಘುವಾಗಿ ಪರಿಗಣಿಸುವಂತಿಲ್ಲ. ತಮಿಳುನಾಡು ತಂಡ ಒಳ್ಳೆಯ ತಂಡವೇ. ಮೊದಲ ಪಂದ್ಯವನ್ನು ಅವರು ಬಹಳ ಚೆನ್ನಾಗಿ ಆಡಿದ್ದಾರೆ. ಅವರ ವೀಕ್ ಪಾಯಿಂಟ್ಗಳನ್ನು ಗುರುತಿಸಿ ಅದಕ್ಕೆ ತಕ್ಕಂತೆ ಆಡುವ ಯತ್ನ ಇರುತ್ತೆದೆ ಆದರೆ ಆ ತಂಡವನ್ನು ವೀಕ್ ಎಂದು ನಾವು ಪರಿಗಣಿಸುವುದಿಲ್ಲ. ನಾಳಿನ ಪಂದ್ಯದಲ್ಲಿ ನಾವು ನಮ್ಮ ಸಂಪೂರ್ಣ ಶಕ್ತಿವಹಿಸಿ ಆಡಲಿದ್ದೇವೆ ಎಂದು ಭರವಸೆ ನೀಡಿದರು ಸುದೀಪ್.
ಕೆಸಿಸಿ ಪಂದ್ಯಾವಳಿಯನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದ ಹೇಳಿದ ಸುದೀಪ್, ಕಳೆದ ಬಾರಿ ಇಲ್ಲಿ ತಮಿಳುನಾಡು-ಕರ್ನಾಟಕ ತಂಡಗಳ ನಡುವೆ ಕ್ರಿಕೆಟ್ ಪಂದ್ಯ ನಡೆದಾಗ ಇಡೀ ಸ್ಟೇಡಿಯಂ ತುಂಬಿತ್ತು. ಅಂತೆಯೇ ನಾಳೆಯೂ ಸಹ ಇಡೀ ಸ್ಟೇಡಿಯಂ ತುಂಬಲಿ, ಅವರಿಗೆ ಭರಪೂರ ಮನರಂಜನೆಯನ್ನು ನಾವು ಒದಗಿಸುವಂತಾಗಲಿ ಎಂದು ಸುದೀಪ್ ಆಶಿಸಿದರು.
ನಾಳೆ (ಮಾರ್ಚ್ 4) ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ ಹಾಗೂ ತಮಿಳುನಾಡು ತಂಡಗಳ ವಿರುದ್ಧ ಪಂದ್ಯ ನಡೆಯಲಿದೆ. ಕರ್ನಾಟಕ ಈ ವರೆಗೆ ಆಡಿರುವ ಎರಡು ಪಂದ್ಯಗಳಲ್ಲಿ ಗೆದ್ದಿದ್ದು, ಬಲಶಾಲಿ ತಂಡವಾಗಿ ಟೂರ್ನಿಯಲ್ಲಿ ಮುಂದೆ ಸಾಗುತ್ತಿದೆ.