
ಚಿತ್ರರಂಗಕ್ಕೆ ಹೊಸಬರ ಆಗಮನ ಆಗುತ್ತಲೇ ಇರುತ್ತದೆ. ಈಗ ಹೊಸಬರೇ ಸೇರಿಕೊಂಡು ‘ಪ್ರೇಮಂ ಮಧುರಂ’ (Premam Madhuram) ಸಿನಿಮಾವನ್ನು ಸಿದ್ಧಪಡಿಸಿದ್ದಾರೆ. ಇತ್ತೀಚೆಗೆ ಸಿನಿಮಾದ ಟ್ರೇಲರ್ (Trailer) ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ನಡೆಯಿತು. ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಮಾಡಲಾಯಿತು. ‘ರೂಬಿ ಕ್ರಿಯೇಶನ್ಸ್’ ಬ್ಯಾನರ್ ಮೂಲಕ ಅರಗೊಂಡ ಶೇಖರ್ ರೆಡ್ಡಿ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಗಾಂಧಿ ಎ.ಬಿ. (Gandhi A B) ಅವರು ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜೊತೆಗೆ ಹೀರೋ ಆಗಿಯೂ ನಟಿಸಿದ್ದಾರೆ.
ಈ ಸಿನಿಮಾಗೆ ಐಶ್ವರ್ಯಾ ದಿನೇಶ್ ಮತ್ತು ಅನುಷಾ ಜೈನ್ ಅವರು ನಾಯಕಿಯರಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಚಿತ್ರೀಕರಣದ ಅನುಭವ ಹಂಚಿಕೊಂಡರು. ಸಿಹಿಕಹಿ ಚಂದ್ರು, ಲಪಂಗ ರಾಜ, ರಾಜೇಶ್ವರಿ, ಅನೂಪ್ ಅಗಸ್ತ್ಯ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. 3 ಹಾಡುಗಳಿಗೆ ವಿಶಾಲ್ ಆಲಾಪ ಅವರು ಸಂಗೀತ ನೀಡಿದಾರೆ. ಮಂಜುನಾಥ ಹೆಗಡೆ ಅವರು ಛಾಯಾಗ್ರಹಣ ಮಾಡಿದ್ದಾರೆ. ಸಂಜೀವ್ ಜಾಗಿರ್‌ದಾರ್ ಅವರ ಸಂಕಲನ ಈ ಚಿತ್ರಕ್ಕಿದೆ.
ನಿರ್ದೇಶಕ, ನಟ ಗಾಂಧಿ ಎ.ಬಿ. ಅವರು ಸುದ್ದಿಗೋಷ್ಠಿಯಲ್ಲಿ ಮಾತಾಡಿದರು. ‘ಅನೇಕ ನಿರ್ದೇಶಕರ ಬಳಿ ಕೆಲಸ ಕಲಿತು, ಪೂನ ಫಿಲ್ಮ್ ಇನ್ಸಿಟ್ಯೂಟ್‌ನಲ್ಲಿ ತರಭೇತಿ ಪಡೆದಿದ್ದೇನೆ. ಯುವಜನತೆಗೆ ಈ ಸಿನಿಮಾ ಕನೆಕ್ಟ್ ಆಗುತ್ತದೆ. ಪ್ರತಿಯೊಬ್ಬರ ಬದುಕಲ್ಲಿ ಪ್ರೀತಿ ಯಶಸ್ಸು ಕಂಡಿರುತ್ತದೆ ಅಥವಾ ಸೋತಿರುತ್ತದೆ. ಅವರೆಲ್ಲರಿಗೂ ಇದು ಅನ್ವಯವಾಗುತ್ತದೆ. ಸ್ಕೂಲ್, ಕಾಲೇಜ್‌ನಲ್ಲಿ ನಾನು ಅನುಭವಿಸಿದ, ನೋಡಿದ ಒಂದಷ್ಟು ಅಂಶಗಳನ್ನು ಸಿನಿಮಾ ರೂಪಕ್ಕೆ ತರಲಾಗಿದೆ’ ಎಂದು ಅವರು ಹೇಳಿದರು.
‘3 ಹಂತಗಳಲ್ಲಿ ಪ್ರೀತಿ ಹೇಗಿರುತ್ತೆ ಎಂಬುದನ್ನು ತೋರಿಸಲಾಗಿದೆ. ಬೆಂಗಳೂರು, ಬೈಂದೂರು, ಮಂಗಳೂರು, ಉಡುಪಿ ಕಾಲ್ತೋಡು, ಮಲ್ಪೆ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ದುಡ್ಡು ಕೊಟ್ಟು ಬರುವ ಪ್ರೇಕ್ಷಕನಿಗೆ ಸಂಪೂರ್ಣ ಮನರಂಜನೆ ಸಿಗಲಿದೆ’ ಗಾಂಧಿ ಎ.ಬಿ. ಅವರು ಹೇಳಿದರು. ‘ಬಾಗೂರು ಟಾಕೀಸ್’ ಸಂಸ್ಥೆಯು ಶೀಘ್ರದಲ್ಲೇ ಈ ಸಿನಿಮಾವನ್ನು ಬಿಡುಗಡೆ ಮಾಡಲಿದೆ.
ಇದನ್ನೂ ಓದಿ: ‘ರುಕ್ಮಿಣಿ ರಾಧಾಕೃಷ್ಣ’ ಸಿನಿಮಾದಲ್ಲಿ ಬಿಗ್ ಬಾಸ್ ಮೋಕ್ಷಿತಾ, ಭರತ್ ಕುಮಾರ್, ರಿಯಾ
ನಿರ್ಮಾಪಕ ಅರಗೊಂಡ ಶೇಖೆರ್ ರೆಡ್ಡಿ ಮಾತನಾಡಿ, ‘ಹುಟ್ಟೂರು ತಿರುಪತಿ, ಬದುಕು ಕಂಡಿದ್ದು ಬೆಂಗಳೂರಿನಲ್ಲಿ. ಇಲ್ಲಿನ ಋಣ ತೀರಿಸಬೇಕು. ಕನಿಷ್ಠ 10 ಹುಡುಗರಿಗೆ ಬದುಕು ಕೊಡುವ ಸಲುವಾಗಿ ಸಿನಿಮಾ ಮಾಡಿದ್ದೇನೆ. ಚಿರಂಜೀವಿ ಅಪ್ಪಟ ಅಭಿಮಾನಿಯಾಗಿ ಅವರ ಮಾತಿನಂತೆ ನಡೆದುಕೊಂಡಿದ್ದೇನೆ. ಮಾತು ಕೊಡುವ ಮುಂಚೆ ನೀನು ಯಜಮಾನ. ಕೊಟ್ಟ ಮೇಲೆ ಗುಲಾಮ. ಅದರಂತೆ ನಡೆದುಕೊಳ್ಳುವುದು ಸೂಕ್ತ ಅಂತ ಮೆಗಾ ಸ್ಟಾರ್ ಮಾತನ್ನು ಪಾಲಿಸಿದ್ದೇನೆ’ ಎಂದು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.