‘ಕಾಂತಾರ: ಚಾಪ್ಟರ್ 1’ ರಾಜ್ಯವಾರು ಗಳಿಕೆ: ಎಲ್ಲಿ ಹೆಚ್ಚು-ಎಲ್ಲಿ ಕಡಿಮೆ?
Kantara Chapter 1: ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆಗಿ ತಿಂಗಳ ಮೇಲಾಗಿದ್ದು ಸಿನಿಮಾ ದಾಖಲೆ ಮೊತ್ತದ ಗಳಿಕೆಯನ್ನು ಬಾಕ್ಸ್ ಆಫೀಸ್ನಲ್ಲಿ ಮಾಡಿದೆ. ಅಂದಹಾಗೆ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ರಾಜ್ಯವಾರು ಕಲೆಕ್ಷನ್ ಎಷ್ಟಾಗಿದೆ? ಯಾವ ರಾಜ್ಯದಲ್ಲಿ ಈ ಸಿನಿಮಾ ಹೆಚ್ಚು ಗಳಿಕೆ ಮಾಡಿದೆ ಮತ್ತು ಯಾವ ರಾಜ್ಯದಲ್ಲಿ ಗಳಿಕೆ ಕಡಿಮೆಯಾಗಿದೆ? ಇಲ್ಲಿದೆ ಮಾಹಿತಿ...

‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾ ಬಿಡುಗಡೆ ಆಗಿ 33 ದಿನಗಳಾಗಿವೆ. ಅಕ್ಟೋಬರ್ 02 ರಂದು ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿ ಒಂದು ವಾರ ಆಗುತ್ತಾ ಬಂದಿದೆ. ಒಟಿಟಿಯಲ್ಲಿ ಬಿಡುಗಡೆ ಆದ ಬಳಿಕವೂ ಸಹ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಈಗಾಗಲೇ ವಿಶ್ವ ಬಾಕ್ಸ್ ಆಫೀಸ್ನಲ್ಲಿ 1000 ಕೋಟಿ ಗಳಿಕೆಯ ಅಂಚಿಗೆ ಬಂದಿದೆ. ಭಾರತದಲ್ಲಿಯೂ ಸಹ ಸಿನಿಮಾದ ಕಲೆಕ್ಷನ್ ದೊಡ್ಡ ಮಟ್ಟದಲ್ಲಿಯೇ ಆಗಿದೆ. ಅಂದಹಾಗೆ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಭಾರತದ ಯಾವ ರಾಜ್ಯದಲ್ಲಿ ಎಷ್ಟು ಗಳಿಕೆ ಮಾಡಿದೆ? ಯಾವ ರಾಜ್ಯದಲ್ಲಿ ಹೆಚ್ಚು ಗಳಿಕೆ ಆಗಿದೆ? ಯಾವ ರಾಜ್ಯದಲ್ಲಿ ಕಡಿಮೆ? ಇಲ್ಲಿದೆ ಮಾಹಿತಿ…
‘ಕಾಂತಾರ: ಚಾಪ್ಟರ್ 1’ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಬಿಡುಗಡೆ ಆಗಿತ್ತು. ಮೊದಲು ಬಿಡುಗಡೆ ಆದಾಗ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಮಾತ್ರವೇ ಬಿಡುಗಡೆ ಆಗಿತ್ತು. ಕನ್ನಡದ ಸಿನಿಮಾ ಇದಾಗಿರುವ ಕಾರಣದಿಂದಾಗಿ ಸಹಜವಾಗಿಯೇ ಕರ್ನಾಟಕದಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಕರ್ನಾಟಕದಲ್ಲಿ ಈ ಸಿನಿಮಾ ಈ ವರೆಗೆ 244.50 ಕೋಟಿ ರೂಪಾಯಿ ಹಣ ಗಳಿಕೆ ಮಾಡಿದೆ. ಇದು ಸಾಮಾನ್ಯ ಮೊತ್ತವಲ್ಲ. ಕರ್ನಾಟಕದ ಮಾರುಕಟ್ಟೆ ಚಿಕ್ಕದು ಎನ್ನುತ್ತಿದ್ದವರು ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುವಂಥಹಾ ಗಳಿಕೆ ಇದು.
ಇದನ್ನೂ ಓದಿ:‘ಕಾಂತಾರ 1’ ಬೇಗನೆ ಒಟಿಟಿಗೆ ಬರಲು ಕಾರಣವೇನು? ವಿವರಿಸಿದ ನಿರ್ಮಾಪಕ
ಇನ್ನು ನೆರೆಯ ತೆಲುಗು ರಾಜ್ಯಗಳಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ 106 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣ ಎರಡೂ ರಾಜ್ಯಗಳ ಒಟ್ಟು ಕಲೆಕ್ಷನ್ ಇದಾಗಿದೆ. ಆಂಧ್ರ ಮತ್ತು ತೆಲಂಗಾಣಗಳಿಂದ ಇನ್ನೂ ಹೆಚ್ಚಿನ ನಿರೀಕ್ಷೆ ಚಿತ್ರತಂಡಕ್ಕೆ ಇತ್ತೆನಿಸುತ್ತದೆ. 2022ರ ‘ಕಾಂತಾರ’ ಸಿನಿಮಾ ಇಲ್ಲಿ ಬ್ಲಾಕ್ ಬಸ್ಟರ್ ಆಗಿತ್ತು. ಹಾಗಾಗಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಸಹ ದೊಡ್ಡ ಹಿಟ್ ಆಗುತ್ತದೆ ಎನ್ನಲಾಗಿತ್ತು. 104 ಕೋಟಿ ಕಡಿಮೆ ಮೊತ್ತವಲ್ಲವಾದರೂ ನಿರೀಕ್ಷೆ 150 ಕೋಟಿ ಇತ್ತು.
ತಮಿಳುನಾಡಿನಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ 71 ಕೋಟಿ ರೂಪಾಯಿ ಗಳಿಕೆ ಮಾಡಿದೆ. ತಮಿಳುನಾಡಿನಲ್ಲಿ ಭಾರಿ ದೊಡ್ಡ ಮೊತ್ತದ ಕಲೆಕ್ಷನ್ ಆಗುವುದಿಲ್ಲ ಎಂಬುದು ನಿರೀಕ್ಷಿತ. ತಮಿಳುನಾಡಿನಲ್ಲಿ ಟಿಕೆಟ್ ದರಗಳು ಬಹಳ ಕಡಿಮೆ ಅದರಲ್ಲೂ ಪರಭಾಷಾ ಸಿನಿಮಾ ಟಿಕೆಟ್ ದರಗಳು ಇನ್ನೂ ಕಡಿಮೆ. ಹಾಗಾಗಿ ತಮಿಳುನಾಡಿನಲ್ಲಿ ತಮಿಳು ಸಿನಿಮಾಗಳೇ 50 ಕೋಟಿ ಗಳಿಸುವಷ್ಟರಲ್ಲಿ ಏದುಸಿರು ಬಿಡುತ್ತವೆ ಅಂಥಹದ್ದರಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ 71 ಕೋಟಿ ಗಳಿಸಿದೆ. ಇದು ಸಾಮಾನ್ಯ ಸಾಧನೆಯಲ್ಲ. ಇನ್ನು ಕೇರಳ ರಾಜ್ಯದಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ 55.70 ಕೋಟಿ ರೂಪಾಯಿ ಗಳಿಸಿದೆ. ಇದು ಸಹ ಬಹಳ ಒಳ್ಳೆಯ ಮೊತ್ತ. ಚಿತ್ರಮಂದಿರ, ವಿತರಕರ ನಡುವೆ ಸಾಕಷ್ಟು ವಿವಾದಗಳಿದ್ದರೂ ಸಿನಿಮಾ ಯಶಸ್ವಿಯಾಗಿ ಬಿಡುಗಡೆ ಆಗಿ ಕೇರಳದಂಥಹಾ ಸಣ್ಣ ಮಾರುಕಟ್ಟೆಯಲ್ಲಿ 50 ಕೋಟಿ ಗಳಿಸುವುದು ಭಾರಿ ದೊಡ್ಡ ವಿಷಯವೇ.
ಇನ್ನು ಹಿಂದಿ ಭಾಗದಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಭಾರಿ ದೊಡ್ಡ ಮೊತ್ತದ ಗಳಿಕೆ ಮಾಡಿದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಹಿಂದಿ ಭಾಗದ ಗಳಿಕೆ 250 ಕೋಟಿಗೂ ಹೆಚ್ಚಿದೆ. ಆದರೆ ಈ ಕಲೆಕ್ಷನ್ ಕೇವಲ ಮಹಾರಾಷ್ಟ್ರ ರಾಜ್ಯದ ಗಳಿಕೆ ಮೊತ್ತವಲ್ಲ. ಒಟ್ಟಾರೆ ಹಿಂದಿ ರಾಜ್ಯಗಳ ಗಳಿಕೆಯಾಗಿದೆ. ಈ ಮೊತ್ತಕ್ಕೆ ಮಹಾರಾಷ್ಟ್ರದ ಯೋಗದಾನ ಹೆಚ್ಚಿದೆ. ಆ ಬಳಿಕ ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಗುಜರಾತ್, ಪಶ್ಚಿಮ ಬಂಗಾಳ ಇನ್ನೂ ಕೆಲ ರಾಜ್ಯಗಳಲ್ಲಿ ಸಿನಿಮಾ ಹೆಚ್ಚಿನ ಮೊತ್ತ ಗಳಿಕೆ ಮಾಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




