ಸ್ಯಾಂಡಲ್ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ 2019ರಲ್ಲಿ ತೆರೆಕಂಡ ‘ಗೀತಾ’ ಚಿತ್ರದ ನಂತರ ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಈ ಅವಧಿಯಲ್ಲಿ ಅವರು ‘ಸಖತ್’, ‘ಗಾಳಿಪಟ 2’ ಸೇರಿದಂತೆ ಹಲವು ಚಿತ್ರಗಳ ಕೆಲಸಗಳಲ್ಲಿ ಸಕ್ರಿಯರಾಗಿ ತೊಡಗಿಕೊಂಡಿದ್ದಾರೆ. ಆ ಚಿತ್ರಗಳ ಅಪ್ಡೇಟ್ ಕುರಿತು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇದೀಗ ಗಣೇಶ್ ‘ಸಖತ್’ನ ಮಾಧುರ್ಯಭರಿತವಾದ ಹಾಡಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಕಮ್ಬ್ಯಾಕ್ ಮಾಡಿದ್ದು, ತಮ್ಮ ನೂತನ ಚಿತ್ರದ ಕುರಿತು ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ. ಕನ್ನಡದ ಹಿಟ್ ನಿರ್ದೇಶಕರಲ್ಲಿ ಒಬ್ಬರಾದ ಸಿಂಪಲ್ ಸುನಿ ಆಕ್ಷನ್ ಕಟ್ ಹೇಳಿರುವ ‘ಸಖತ್’ ಚಿತ್ರದ ‘ಪ್ರೇಮಕೆ ಕಣ್ಣಿಲ್ಲ’ ಹಾಡು ಬಿಡುಗಡೆಯಾಗಿದ್ದು, ತನ್ನ ಮೆಲೋಡಿಯಿಂದ ವಿಂಟೇಜ್ ಗಣೇಶ್ ಅವರನ್ನು ಅಭಿಮಾನಿಗಳಿಗೆ ನೆನಪಿಸಿದೆ.
‘ಮುಂಗಾರು ಮಳೆ’, ‘ಗಾಳಿಪಟ’ ಚಿತ್ರಗಳಲ್ಲಿ ಖ್ಯಾತ ಗೀತ ರಚನೆಕಾರ ಜಯಂತ್ ಕಾಯ್ಕಿಣಿ ಹಲವು ಹಾಡುಗಳಿಗೆ ಸಾಹಿತ್ಯ ರಚಿಸಿದ್ದರು. ಅವುಗಳಿಗೆ ತೆರೆಯ ಮೇಲೆ ಗಣೇಶ್ ಜೀವ ತುಂಬಿದ್ದರು. ನಂತರ ಹಲವು ಚಿತ್ರಗಳಲ್ಲಿ ಈ ಕಾಂಬಿನೇಷನ್ ಮೋಡಿ ಮಾಡಿತ್ತು. ಇದೀಗ ‘ಸಖತ್’ ಚಿತ್ರದ ‘ಪ್ರೇಮಕೆ ಕಣ್ಣಿಲ್ಲ’ ಹಾಡಿನ ಮೂಲಕ ಮತ್ತೊಂದು ಭರ್ಜರಿ ಹಿಟ್ನ ಸೂಚನೆಯನ್ನು ಈ ಜೋಡಿ ನೀಡಿದೆ. ಈ ಹಾಡಿಗೆ ಸಂಗೀತ ನೀಡಿರುವವರು ಜ್ಯೂಡಾ ಸ್ಯಾಂಡಿ. ಪಂಚಮ್ ಜೀವಾ ಹಾಗೂ ಶ್ರೇಯಾ ಅಯ್ಯರ್ ಹಾಡಿಗೆ ದನಿಯಾಗಿದ್ದಾರೆ. ಹಾಡಿನಲ್ಲಿ ಗಣೇಶ್ ಅವರೊಂದಿಗೆ ನಟಿ ನಿಶ್ವಿಕಾ ನಾಯ್ಡು ತೆರೆಹಂಚಿಕೊಂಡಿದ್ದಾರೆ.
ನಿರ್ದೇಶ ಸಿಂಪಲ್ ಸುನಿ 2019ರಲ್ಲಿ ತೆರೆಕಂಡ ‘ಬಜಾರ್’ ಚಿತ್ರದ ನಂತರ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಅವರ ನಿರ್ದೇಶನದಲ್ಲಿ ಹಲವು ಚಿತ್ರಗಳು ಅನೌನ್ಸ್ ಆಗಿದ್ದು, ಚಿತ್ರೀಕರಣ ನಡೆಯುತ್ತಿದೆ. ‘ಸಖತ್’ ಚಿತ್ರದ ಹಾಡಿನ ಮೂಲಕ ಅವರೂ ಮರಳಿದ್ದು, ಅಭಿಮಾನಿಗಳು ಸಂತಸಗೊಂಡಿದ್ದಾರೆ. ಪ್ರಸ್ತುತ ಬಿಡುಗಡೆಯಾಗಿರುವ ಹಾಡಿನಲ್ಲಿ ಗಣೇಶ್ ಹಾಗೂ ನಿಶ್ವಿಕಾ ನಾಯ್ಡು ನಟಿಸಿದ್ದು, ಇದಕ್ಕೆ ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣ ಸಖತ್ ಸಾಥ್ ನೀಡಿದೆ. ‘ಒಂಚೂರು ಸ್ಪರ್ಶ, ಒಂಚೂರು ಊಹೆ, ಒಂಚೂರು ಗಂಧ, ಒಂಚೂರು ಮಾಯೆ…’ ಈ ಸಾಲುಗಳಿರುವ ಈ ಹಾಡು ಗುನುಗಿಕೊಳ್ಳುವಂತಿದೆ.
‘ಪ್ರೇಮಕೆ ಕಣ್ಣಿಲ್ಲ’ ಹಾಡು ಇಲ್ಲಿದೆ:
‘ಸಖತ್’ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ನಿಶಾ ವೆಂಕಟ್ ಕೋಣಂಕಿ ಮತ್ತು ಸುಪ್ರಿತ್ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಈ ಹಾಡಿನ ಮೂಲಕ ಚಿತ್ರದ ಕುರಿತಾದ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದ್ದು, ಚಿತ್ರದ ಕುರಿತ ಮತ್ತಷ್ಟು ಅಪ್ಡೇಟ್ಗಳಿಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಗಣೇಶ್ ಹಾಗೂ ಸಿಂಪಲ್ ಸುನಿ ಕಾಂಬಿನೇಷನ್ನಲ್ಲಿ ಈಗಾಗಲೇ ‘ಸ್ಟೋರಿ ಆಫ್ ರಾಯಗಡ’ ಚಿತ್ರ ಅನೌನ್ಸ್ ಆಗಿದ್ದು, ಚಿತ್ರದ ಪೋಸ್ಟರ್ಗಳು ಸಾಕಷ್ಟು ಕುತೂಹಲ ಹುಟ್ಟುಹಾಕಿತ್ತು.
ಗಣೇಶ್ ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರಕ್ಕೂ ಅಭಿಮಾನಿಗಳು ದೀರ್ಘಕಾಲದಿಂದ ಕಾದು ಕುಳಿತಿದ್ದಾರೆ. ಇದಲ್ಲದೇ ಅವರ ಬತ್ತಳಿಕೆಯಲ್ಲಿ ‘ತ್ರಿಬಲ್ ರೈಡಿಂಗ್’ ಚಿತ್ರವಿದೆ. ಇತ್ತ ಸುನಿ, ‘ಅವತಾರ ಪುರುಷ’ ಚಿತ್ರದ ಕೆಲಸಗಳಲ್ಲಿ ಬ್ಯುಸಿಯಿದ್ದಾರೆ. ಇದರೊಂದಿಗೆ ‘ರಾಬಿನ್ಹುಡ್’ ಚಿತ್ರವೂ ಅವರ ಬತ್ತಳಿಕೆಯಲ್ಲಿದೆ.
ಇದನ್ನೂ ಓದಿ:
‘ಇಬ್ಬರು ಹೆಂಡತಿಯರು ನನ್ನ ಪಾಲಿನ ಶಕ್ತಿ’; ಸಂಸಾರದ ಬಗ್ಗೆ ರಾಜು ತಾಳಿಕೋಟೆ ಮುಕ್ತ ಮಾತು
Published On - 3:58 pm, Sat, 9 October 21