Sathyajith Obituary: ಬಸ್​ ಡ್ರೈವರ್​ ಆಗಿದ್ದ ಸತ್ಯಜಿತ್​ ನೇರ ಬಾಲಿವುಡ್​ಗೆ ಕಾಲಿಟ್ಟಿದ್ದೇ ಅಚ್ಚರಿ; ಹಿರಿಯ ನಟ ಸಾಗಿ ಬಂದ ಹಾದಿ ಇಲ್ಲಿದೆ

ಸ್ಯಾಂಡಲ್​ವುಡ್​ನ ಹಿರಿಯ ನಟ ಸತ್ಯಜಿತ್​ ಅವರು ತೀವ್ರ ಅನಾರೋಗ್ಯದಿಂದ ಭಾನುವಾರ (ಅ.9) ನಿಧನರಾದರು. ಬೌರಿಂಗ್​ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿ ಆಗದೇ ಕೊನೆಯುಸಿರು ಎಳೆದಿದ್ದಾರೆ.

Sathyajith Obituary: ಬಸ್​ ಡ್ರೈವರ್​ ಆಗಿದ್ದ ಸತ್ಯಜಿತ್​ ನೇರ ಬಾಲಿವುಡ್​ಗೆ ಕಾಲಿಟ್ಟಿದ್ದೇ ಅಚ್ಚರಿ; ಹಿರಿಯ ನಟ ಸಾಗಿ ಬಂದ ಹಾದಿ ಇಲ್ಲಿದೆ
ಸತ್ಯಜಿತ್​
Follow us
ಮದನ್​ ಕುಮಾರ್​
|

Updated on: Oct 10, 2021 | 7:38 AM

ಕನ್ನಡ ಚಿತ್ರರಂಗದ ಬಹುಬೇಡಿಕೆಯ ಪೋಷಕ ನಟನಾಗಿದ್ದ ಸತ್ಯಜಿತ್​ ಅವರು ಭಾನುವಾರ (ಅ.10) ಕೊನೆಯುಸಿರೆಳೆದರು. 650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಆ ಮೂಲಕ ಚಿತ್ರರಂಗದಲ್ಲಿ ಅಪಾರ ಅನುಭವ ಪಡೆದುಕೊಂಡಿದ್ದರು. ಚಂದನವನದ ಹಲವಾರು ಸ್ಟಾರ್​ ಕಲಾವಿದರ ಸಿನಿಮಾಗಳಲ್ಲಿ ನಟಿಸುವ ಅವಕಾಶ ಅವರಿಗೆ ಸಿಕ್ಕಿತ್ತು. ಇತ್ತೀಚಿನ ವರ್ಷಗಳಲ್ಲಿ ಆರೋಗ್ಯ ಕೈಕೊಟ್ಟಿದ್ದರಿಂದ ಅವರು ನಟನೆಯಿಂದ ದೂರ ಉಳಿಯಬೇಕಾಯಿತು. ಇಹಲೋಕ ತ್ಯಜಿಸಿರುವ ಹಿರಿಯ ನಟನಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ಕೆಎಸ್​ಆರ್​ಟಿಸಿ ಚಾಲಕನಿಗೆ ಬಾಲಿವುಡ್ ಅವಕಾಶ

ಸತ್ಯಜಿತ್​ ಯಾವುದೇ ಫಿಲ್ಮೀ ಕುಟುಂಬದ ಹಿನ್ನೆಲೆಯಿಂದ ಬಂದವರಲ್ಲ. ಮೂರೂವರೆ ದಶಕಗಳ ಹಿಂದೆ ಅವರು ಹುಬ್ಬಳ್ಳಿಯಲ್ಲಿ ಬಸ್​ ಡ್ರೈವರ್​ ಆಗಿದ್ದರು. ಕೆಎಸ್​ಆರ್​ಟಿಸಿ ಬಸ್​ ಚಾಲಕನಾಗಿ ಕೆಲಸ ಮಾಡುತ್ತಿದ್ದಾಗಲೇ ಅವರಿಗೆ ನಟನೆ ಬಗ್ಗೆ ಅಪಾರ ಪ್ರೀತಿ ಇತ್ತು. ಹಾಗಾಗಿ ಹವ್ಯಾಸಿ ನಾಟಕ ತಂಡಗಳ ಜೊತೆ ಗುರುತಿಸಿಕೊಂಡಿದ್ದರು. ಅನೇಕ ಊರುಗಳಿಗೆ ತೆರಳಿ ಹಲವು ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಆ ಮೂಲಕ ಅವರಿಗೆ ಬಣ್ಣದ ಸಹವಾಸ ಅಂಟಿಕೊಂಡಿತು. ಅದು ಅವರನ್ನು ಬಾಲಿವುಡ್​ವರೆಗೆ ಕರೆದುಕೊಂಡು ಹೋಯಿತು ಎಂಬುದೇ ಅಚ್ಚರಿ.

ಸತ್ಯಜಿತ್​ ಮೊದಲ ಚಿತ್ರವೇ ಬಾಲಿವುಡ್​ನಲ್ಲಿ

ಬೇರೆ ಬೇರೆ ಊರುಗಳಲ್ಲಿ ನಡೆಯುತ್ತಿದ್ದ ನಾಟಕ ಸ್ಪರ್ಧೆಗಳಲ್ಲಿ ಸತ್ಯಜಿತ್​ ಅವರ ತಂಡ ಕೂಡ ಭಾಗವಹಿಸುತ್ತಿತ್ತು. ಒಮ್ಮೆ ಅವರು ಮುಂಬೈನಲ್ಲಿ ನಾಟಕ ಪ್ರದರ್ಶನ ನೀಡಿದರು. ಆಗ ಅವರಿಗೆ ಬಾಲಿವುಡ್​ ನಟ ನಾನಾ ಪಾಟೇಕರ್​ ಪರಿಚಯ ಆಯಿತು. ಆ ಪರಿಚಯದಿಂದಾಗಿ ಹಿಂದಿಯ ‘ಅಂಕುಶ್​’ ಸಿನಿಮಾದಲ್ಲಿ ನಟಿಸಲು ಸತ್ಯಜಿತ್​ ಅವರಿಗೆ ಅವಕಾಶ ಸಿಕ್ಕಿತು. ಆ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಹಿಟ್​ ಕೂಡ ಆಯಿತು. ಅದರಲ್ಲಿ ಸಣ್ಣದೊಂದು ಪಾತ್ರ ಮಾಡಿದ್ದ ಸತ್ಯಜಿತ್​ಗೆ ಜೀವನದಲ್ಲಿ ಹೊಸ ದಾರಿ ಕಾಣುವಂತಾಯಿತು.

ಬಹುಬೇಡಿಕೆಯ ಪೋಷಕ ನಟನಾಗಿದ್ದ ಸತ್ಯಜಿತ್​:

ಮೊದಲ ಸಿನಿಮಾ ‘ಅಂಕುಶ್​’ ತೆರೆಕಂಡ ಬಳಿಕ ಸತ್ಯಜಿತ್​ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಅವಕಾಶ ಸಿಗಲು ಪ್ರಾರಂಭ ಆಯಿತು. 1986ರಲ್ಲಿ ತೆರೆಕಂಡ ಅನಂತ್​ ನಾಗ್​ ಅಭಿನಯದ ‘ಅರುಣರಾಗ’ ಚಿತ್ರದಲ್ಲಿ ಸತ್ಯಜಿತ್​ ನಟಿಸಿದರು. ಬಳಿಕ ಸಾಲು ಸಾಲು ಆಫರ್​ಗಳು ಅವರಿಗೆ ಸಿಕ್ಕವು. ವಿಲನ್ ಆಗಿ, ಪೊಲೀಸ್​ ಆಗಿ, ತಂದೆಯಾಗಿ ಎಲ್ಲ ಪಾತ್ರಗಳಿಗೆ ಜೀವ ತುಂಬುವ ಮೂಲಕ ಅವರು ಬಹುಬೇಡಿಕೆಯ ಪೋಷಕ ನಟನಾಗಿ ಗುರುತಿಸಿಕೊಂಡರು. ಕಾಮಿಡಿ ಪಾತ್ರಗಳು ಕೂಡ ಅವರ ಕೈ ಹಿಡಿದವು.

ಮೂಲ ಹೆಸರು ಸಯ್ಯದ್​ ನಿಜಾಮುದ್ದೀನ್​:

ಸತ್ಯಜಿತ್​ ಅವರ ಮೂಲ ಹೆಸರು ಸಯ್ಯದ್​ ನಿಜಾಮುದ್ದೀನ್​. ಆದರೆ ಚಿತ್ರರಂಗಕ್ಕೆ ಕಾಲಿಟ್ಟಾಗ ಅವರು ಹೆಸರು ಬದಲಾಯಿಸಿಕೊಂಡರು. ಸತ್ಯಜಿತ್​ ಎಂಬ ಹೆಸರಿನಿಂದಲೇ ಅವರು ಫೇಮಸ್​ ಆದರು. ಗಡಿಬಿಡಿ ಗಂಡ, ಮನೆ ದೇವ್ರು, ಶಿವಮೆಚ್ಚಿದ ಕಣ್ಣಪ್ಪ, ಮಂಡ್ಯದ ಗಂಡು, ಪೊಲೀಸ್​ ಸ್ಟೋರಿ, ಅಪ್ಪು, ಅಭಿ, ಆಪ್ತಮಿತ್ರ ಮುಂತಾದ ಸಿನಿಮಾಗಳಲ್ಲಿ ನಟಿಸಿ ಅವರು ಕನ್ನಡ ಸಿನಿಪ್ರಿಯರನ್ನು ರಂಜಿಸಿದ್ದರು.

ಅನಾರೋಗ್ಯದ ಬಳಿಕ ಹಳಿ ತಪ್ಪಿದ ಬದುಕು

ಸತ್ಯಜಿತ್​ ಕಾಲಿಗೆ ಗ್ಯಾಂಗ್ರಿನ್​ ಆದ ಬಳಿಕ ಅವರ ಜೀವನ ಕಷ್ಟದ ಹಾದಿ ಹಿಡಿಯಿತು. ಒಂದು ಕಾಲನ್ನು ಕತ್ತರಿಸಲಾಯಿತು. ಒಬ್ಬ ನಟನಿಗೆ ಇದಕ್ಕಿಂತ ದೊಡ್ಡ ನಷ್ಟ ಬೇರೇನು ಇರಲು ಸಾಧ್ಯ? ಆ ನಂತರ ಅವರಿಗೆ ಅವಕಾಶ ಇಲ್ಲದಾದವು. ಚಿಕಿತ್ಸೆಗೆ ಹಣದ ಕೂರತೆ ಕೂಡ ಉಂಟಾಯಿತು. ಕುಟುಂಬದವರ ಜೊತೆಗೆ ಸತ್ಯಜಿತ್​ ಜಗಳ ಮಾಡಿಕೊಂಡು ಸುದ್ದಿಯಾದರು. ದಿನದಿಂದ ದಿನಕ್ಕೆ ಅವರ ಪರಿಸ್ಥಿತಿ ಹದಗೆಡುತ್ತಲೇ ಹೋಯಿತು.

ಕೊನೇ ಸಿನಿಮಾ ‘ಸೆಕೆಂಡ್​ ಹಾಫ್​’:

ಸತ್ಯಜಿತ್​ ಅವರು ಕೊನೆಯದಾಗಿ ನಟಿಸಿದ್ದು ‘ಸೆಕೆಂಡ್​ ಹಾಫ್​’ ಚಿತ್ರದಲ್ಲಿ. ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆ ನಿಭಾಯಿಸಿದ್ದ ಆ ಸಿನಿಮಾ 2018ರಲ್ಲಿ ತೆರೆ ಕಂಡಿತು. ಒಂದು ಕಾಲು ಕಳೆದುಕೊಂಡಿದ್ದ ಅವರು ವ್ಹೀಲ್​ ಚೇರ್​ ಮೇಲೆ ಕುಳಿತುಕೊಂಡೇ ನಟಿಸಿದ್ದರು.

ಇದನ್ನೂ ಓದಿ:

ನಟನಾಗಿರುವುದಕ್ಕೆ ತಂದೆ ಉತ್ತಮವಾಗಿ ಅಳುತ್ತಿದ್ದಾರೆ: ಸತ್ಯಜಿತ್ ಕಣ್ಣೀರನ್ನು ಟೀಕಿಸಿದ ಮಗಳು ಸ್ವಲೇಹಾ

ಮಗಳಿಗಾಗಿ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ; ಮಾಧ್ಯಮದ ಮುಂದೆ ಕಣ್ಣೀರಿಟ್ಟ ನಟ ಸತ್ಯಜಿತ್