Golden Star Ganesh: ಹುಟ್ಟುಹಬ್ಬದ ದಿನ ಹೊಸ ಗೆಟಪ್ನಲ್ಲಿ ‘ಗೋಲ್ಡನ್ ಸ್ಟಾರ್’ ಗಣೇಶ್; ಭಿನ್ನವಾಗಿದೆ ‘ಕೃಷ್ಣಂ ಪ್ರಣಯ ಸಖಿ’ ಪೋಸ್ಟರ್
Happy Birthday Golden Star Ganesh: ಗಣೇಶ್ ಅವರ ಜನ್ಮದಿನಕ್ಕೆ ಈ ಪೋಸ್ಟರ್ ಬಿಡುಗಡೆ ಆಗಿದೆ. ಇದನ್ನು ನೋಡಿದ ಎಲ್ಲರಿಗೂ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಕಥೆ ಬಗ್ಗೆ ಕೌತುಕ ಮೂಡಿದೆ.
ಕನ್ನಡದ ಖ್ಯಾತ ನಟ ಗಣೇಶ್ (Golden Star Ganesh) ಅವರಿಗೆ ಇಂದು (ಜುಲೈ 2) ಹುಟ್ಟುಹಬ್ಬದ ಸಂಭ್ರಮ. ಈ ದಿನವನ್ನು ಅವರ ಅಭಿಮಾನಿಗಳು ಖುಷಿಯಿಂದ ಸೆಲೆಬ್ರೇಟ್ ಮಾಡುತ್ತಿದ್ದಾರೆ. ‘ಗೋಲ್ಡನ್ ಸ್ಟಾರ್’ ಎಂದೇ ಖ್ಯಾತಿ ಪಡೆದಿರುವ ಗಣೇಶ್ ಅವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. 43ನೇ ವಸಂತಕ್ಕೆ ಕಾಲಿಟ್ಟಿರುವ ಅವರಿಗೆ ಎಲ್ಲ ಕಡೆಗಳಿಂದ ಜನ್ಮದಿನದ (Ganesh Birthday) ಶುಭಾಶಯ ಹರಿದುಬರುತ್ತಿದೆ. ಅಭಿಮಾನಿಗಳು, ಆಪ್ತರು, ಸೆಲೆಬ್ರಿಟಿಗಳು ವಿಶ್ ಮಾಡುತ್ತಿದ್ದಾರೆ. ಅವರು ನಟಿಸುತ್ತಿರುವ ಸಿನಿಮಾ ತಂಡಗಳಿಂದ ಹೊಸ ಪೋಸ್ಟರ್ಗಳು ಬಿಡುಗಡೆ ಆಗಿವೆ. ಆ ಪೈಕಿ ‘ಕೃಷ್ಣಂ ಪ್ರಣಯ ಸಖಿ’ (Krishnam Pranaya Sakhi) ಸಿನಿಮಾದ ಪೋಸ್ಟರ್ ಗಮನ ಸೆಳೆಯುತ್ತಿದೆ.
ಗಣೇಶ್ ಅವರು ‘ಚೆಲ್ಲಾಟ’ ಸಿನಿಮಾದಿಂದ ಈವರೆಗೆ ಹಲವಾರು ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಈಗ ಅನಾವರಣ ಆಗಿರುವ ‘ಕೃಷ್ಣಂ ಪ್ರಣಯ ಸಖಿ’ ಪೋಸ್ಟರ್ನಲ್ಲಿ ಅವರ ಗೆಟಪ್ ಸಖತ್ ಭಿನ್ನವಾಗಿದೆ. ತುಂಬ ಸ್ಟೈಲಿಶ್ ಆಗಿ ಅವರು ಡ್ರೆಸ್ ಮಾಡಿಕೊಂಡಿದ್ದಾರೆ. ಹಿಂಬದಿಯಲ್ಲಿ ಐಷಾರಾಮಿ ಕಾರು ಇದೆ. ಆದರೆ ಅಲ್ಲೊಂದು ಟ್ವಿಸ್ಟ್ ಕೂಡ ಇದೆ. ಭಾರಿ ಶ್ರೀಮಂತನಂತೆ ಕಾಣಿಸಿಕೊಂಡ ಗಣೇಶ್ ಅವರು ಕೈಯಲ್ಲಿ ಪೊರಕೆ, ನೆಲ ಒರೆಸುವ ಸ್ಟಿಕ್ ಹಾಗೂ ಬಕೆಟ್ ಹಿಡಿದುಕೊಂಡಿದ್ದಾರೆ. ಹಣೆಗೆ ಟವೆಲ್ ಕಟ್ಟಿಕೊಂಡಿದ್ದಾರೆ. ಈ ಪೋಸ್ಟರ್ ನೋಡಿದ ಎಲ್ಲರಿಗೂ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ಕಥೆ ಬಗ್ಗೆ ಕೌತುಕ ಮೂಡಿದೆ.
‘ತ್ರಿಶೂಲ್ ಎಂಟರ್ಟೇನ್ಮೆಂಟ್’ ಬ್ಯಾನರ್ ಮೂಲಕ ಪ್ರಶಾಂತ್ ಜಿ. ರುದ್ರಪ್ಪ ಅವರು ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ‘ದಂಡುಪಾಳ್ಯ’ ಖ್ಯಾತಿಯ ನಿರ್ದೇಶಕ ಶ್ರೀನಿವಾಸ್ ರಾಜು ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಗಣೇಶ್ ಅಭಿನಯದ 41ನೇ ಚಿತ್ರವಾಗಿ ‘ಕೃಷ್ಣಂ ಪ್ರಣಯ ಸಖಿ’ ಮೂಡಿಬರಲಿದೆ. ಅರ್ಜುನ್ ಜನ್ಯ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಗಣೇಶ್ ಅವರಿಗೆ ಜೋಡಿಯಾಗಿ ಮಾಳವಿಕಾ ನಾಯರ್ ಅಭಿನಯಿಸುತ್ತಿದ್ದಾರೆ. ಸಾಧುಕೋಕಿಲ, ಶಶಿಕುಮಾರ್, ರಂಗಾಯಣ ರಘು, ಸುಧಾರಾಣಿ, ಶ್ರುತಿ, ಶಿವಧ್ವಜ್ ಶೆಟ್ಟಿ, ಬೆನಕ ಗಿರಿ, ಶ್ರೀನಿವಾಸಮೂರ್ತಿ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
‘ಕೃಷ್ಣಂ ಪ್ರಣಯ ಸಖಿ’ ಸಿನಿಮಾಗೆ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಮೈಸೂರು, ರಾಜಸ್ಥಾನ ಮತ್ತು ಯುರೋಪ್ನಲ್ಲಿ ಕೂಡ ಶೂಟಿಂಗ್ ಮಾಡಲಾಗುವುದು. ಗಣೇಶ್ ಮತ್ತು ಶ್ರೀನಿವಾಸ್ ರಾಜು ಕಾಂಬಿನೇಷನ್ ಇರುವುದರಿಂದ ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಸಿನಿಮಾದ ಹೊಸ ಪೋಸ್ಟರ್ ವೈರಲ್ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:59 am, Sun, 2 July 23