AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೋಬಿಗಾಗಿ ಮೂಗು ಚುಚ್ಚಿಸಿಕೊಂಡ ರಾಜ್ ಬಿ ಶೆಟ್ಟಿ: ಮೂಗುತಿ ಧರಿಸಿದ್ದೇಕೆ?

Toby: ರಾಜ್ ಬಿ ಶೆಟ್ಟಿಯ ಹೊಸ ಸಿನಿಮಾ ಟೋಬಿಯ ಫಸ್ಟ್ ಲುಕ್ ಬಿಡುಗಡೆ ಆಗಿದೆ. ರಾಜ್ ಬಿ ಶೆಟ್ಟಿ ಧರಿಸಿರುವ ಮೂಗುತಿ ಗಮನ ಸೆಳೆಯುತ್ತಿದೆ. ಮೂಗುತಿ ಧರಿಸಿರುವುದು ಏಕೆಂದು ಶೆಟ್ಟರು ವಿವರಿಸಿದ್ದಾರೆ.

ಟೋಬಿಗಾಗಿ ಮೂಗು ಚುಚ್ಚಿಸಿಕೊಂಡ ರಾಜ್ ಬಿ ಶೆಟ್ಟಿ: ಮೂಗುತಿ ಧರಿಸಿದ್ದೇಕೆ?
ಟೋಬಿ
Follow us
ಮಂಜುನಾಥ ಸಿ.
|

Updated on: Jul 01, 2023 | 10:43 PM

ಗರುಡ ಗಮನ ವೃಷಭ ವಾಹನ (Garuda Gamana Vrishaba Vahana) ಸಿನಿಮಾದಲ್ಲಿ ಶಿವನಾಗಿ ಅಬ್ಬರಿಸಿದ್ದ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ (Raj B Shetty) ಈಗ ಟೋಬಿಯಾಗಿ (Toby) ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಟೋಬಿ ಸಿನಿಮಾದ ಫಸ್ಟ್ ಲುಕ್ ಟೀಸರ್ ಇತ್ತೀಚೆಗಷ್ಟೆ ಬಿಡುಗಡೆ ಆಯ್ತು. ಪೋಸ್ಟರ್​ನಲ್ಲಿ ಮೂಗುತಿ ತೊಟ್ಟಿರುವ ಕುರಿಯ ಜೊತೆಗೆ ಮೂಗುತಿ ತೊಟ್ಟು ರಕ್ತ ಸಿಕ್ತವಾದ ರಾಜ್ ಬಿ ಶೆಟ್ಟಿಯ ಚಿತ್ರವಿದೆ. ಫಸ್ಟ್ ಲುಕ್​ನಲ್ಲಿ ಬಳಸಿರುವ ಹಿನ್ನೆಲೆ ಸಂಗೀತ ಅದ್ಭುತ ಎಂಬ ಪ್ರಶಂಸೆ ಈಗಾಗಲೇ ವ್ಯಕ್ತವಾಗಿದ್ದು, ಜೊತೆಗೆ ರಾಜ್ ಬಿ ಶೆಟ್ಟಿಯ ಮೂಗುತಿ ಬಗ್ಗೆ ಹಲವರು ಕುತೂಹಲ ವ್ಯಕ್ತಪಡಿಸಿದ್ದಾರೆ.

ಟಿವಿ9 ಗೆ ನೀಡಿರುವ ಸಂದರ್ಶನದಲ್ಲಿ ಮೂಗುತಿ ಬಗ್ಗೆ ಮಾತನಾಡಿರುವ ರಾಜ್ ಬಿ ಶೆಟ್ಟಿ, ”ಒಂದೊಂದು ಸಿನಿಮಾದ ಪಾತ್ರಕ್ಕೂ ಒಂದು ವಿಶೇಷಣ ನನಗೆ ಬರೆಯುವಾಗ ಹೊಳೆಯುತ್ತದೆ. ಒಂದು ಮೊಟ್ಟೆಯ ಕತೆಯಲ್ಲಿ ಅಣ್ಣಾವ್ರ ಅಭಿಮಾನಿ ಆಗಿರುವುದು, ಗರುಡ ಗಮನದಲ್ಲಿ ಶಿವ ಚಪ್ಪಲಿ ಧರಿಸುವುದು ಹಾಗೆಯೇ ಈ ಸಿನಿಮಾದಲ್ಲಿ ಮೂಗುತಿ ಧರಿಸುವುದು ಅದರ ವಿಶೇಷಣ ಅನಿಸಿತು. ಹಾಗೆಂದು ಇಡೀ ಸಿನಿಮಾದಲ್ಲಿ ಅವನು ಮೂಗುತಿ ಧರಿಸಿರುವುದಿಲ್ಲ” ಎಂದಿದ್ದಾರೆ.

ಇದನ್ನೂ ಓದಿ:ಗರುಡ ಗಮನಕ್ಕೂ ಟೋಬಿಗೂ ಇರುವ ವ್ಯತ್ಯಾಸವೇನು? ಹುಲಿ ವೇಷ ಇರುತ್ತಾ?

”ಸಾಮಾನ್ಯನಾಗಿದ್ದ ಒಬ್ಬ ವ್ಯಕ್ತಿ ಸಿಡಿದೆದ್ದು ನಿಂತಾಗ ತನಗಾದ ಅನ್ಯಾಯಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಎದ್ದಾಗ ಅನ್ಯಾಯದ ಕುರುಹಾಗಿ ಆ ಮೂಗತಿ ಧರಿಸುತ್ತಾನೆ. ಆ ಮೂಗುತಿಗೆ ಸಿನಿಮಾದಲ್ಲಿ ಒಂದು ಕತೆ ಇದೆ. ಒಂದು ಭಾವುಕ ಹಿನ್ನೆಲೆ ಇದೆ. ಅದು ಇಬ್ಬರು ನಾಯಕಿಯರಲ್ಲಿ ಒಬ್ಬರದ್ದಾ ಅಥವಾ ಬೇರೆ ಯಾರದ್ದೋನಾ ಏಕೆಂದರೆ ಕುರಿಗೂ ಮೂಗುತಿ ಇದೆ ಪೋಸ್ಟರ್​ನಲ್ಲಿ. ಆ ವಿಷಯಗಳನ್ನು ಸಿನಿಮಾಕ್ಕೆ ಬಂದ ಮೇಲೆಯೇ ಖಾತ್ರಿ ಮಾಡಿಕೊಳ್ಳಬೇಕು” ಎಂದಿದ್ದಾರೆ ರಾಜ್ ಬಿ ಶೆಟ್ಟಿ.

”ಮೂಗುತಿ ದೃಶ್ಯಕ್ಕಾಗಿ ನಾನು ಮೂಗು ಚುಚ್ಚಿಸಿಕೊಂಡೆ. ಟೋಬಿ ಪಾತ್ರ ಅನುಭವಿಸುವ ನೋವಿನ ಅನುಭವ ನನಗೂ ಸ್ವಲ್ಪ ಆಗಲಿ ಎಂಬ ಕಾರಣಕ್ಕೆ ನಾನು ಮೂಗು ಚುಚ್ಚಿಸಿಕೊಂಡೆ. ಹುಚ್ಚು ಎನಿಸಬಹುದು, ಆದರೆ ಸಿನಿಮಾಗಳಿಗೆ ಒಂದು ಹುಚ್ಚು ಸ್ವಲ್ಪ ಹಠ ಇದ್ದರೆ ಒಳ್ಳೆಯದು ಎಂಬುದು ನನ್ನ ಅಭಿಪ್ರಾಯ. ಮೂಗುತಿ ಒಂದು ಸ್ಟೈಲ್ ಎಲಿಮೆಂಟ್ ಅಲ್ಲ, ಆ ಮೂಗುತಿ ಹಿಂದೆ ಒಂದು ಕತೆ ಇದೆ. ಒಂದು ನೋವಿನ ಕತೆ ಇದೆ. ಒಬ್ಬ ಸಾಮಾನ್ಯ ಎಲ್ಲವನ್ನೂ ಕಳೆದುಕೊಂಡವನು, ಇಲ್ಲ ನಾನು ಬಿಡಲ್ಲ ಎಂದು ನಿರ್ಧರಿಸಿ ಬರುತ್ತಾನೆ ಆ ಹಂತದಲ್ಲಿ ಅವನು ಮಾರಿ ಆಗ್ತಾನೆ ಆದಾಗ ಆ ಮೂಗುತಿ ಏಕೆ ಧರಿಸುತ್ತಾನೆ ಎಂಬುದು ಕತೆಯ ಪ್ರಮುಖ ಅಂಶಗಳಲ್ಲಿ ಒಂದು” ಎಂದಿದ್ದಾರೆ ಶೆಟ್ಟರು.

”ಈ ಪೋಸ್ಟರ್ ಅನ್ನು ಮಂಗಳೂರಿನ ಕೈಕುಲ್ಲಸ್ ಸ್ಟುಡಿಯೋಸ್ ತಯಾರು ಮಾಡಿಕೊಟ್ಟಿದ್ದಾರೆ. ಅವರು ಯಾವುದೇ ಸಿನಿಮಾಕ್ಕಾಗಿ ಕೆಲಸ ಮಾಡುವುದಿಲ್ಲ. ಅವರು ಕಲಾವಿದರು. ನನಗೆ ವೃತ್ತಿಪರರಿಗಿಂತಲೂ ಕಲಾವಿದರು ಹೆಚ್ಚು ಇಷ್ಟ ಹಾಗಾಗಿ ಅವರಿಗೆ ಪೋಸ್ಟರ್ ಮಾಡಿಕೊಡುವ ಜವಾಬ್ದಾರಿ ನೀಡಿದ್ದೆ. ಸಿನಿಮಾದ ಶೂಟಿಂಗ್ ಶುರು ಆಗುವ ಮುಂಚೆಯೇ ಕುರಿಯ ಪೋಸ್ಟರ್ ರೆಡಿ ಆಗಿತ್ತು. ಆ ಬಳಿಕ ನನ್ನ ಫೋಟೊ ಶೂಟ್ ಮಾಡಿಸಿ ಅವರಿಗೆ ಕೊಟ್ಟೆ ಅವರು ಡಿಜಿಟಲ್ ವರ್ಕ್ ಮಾಡಿ ಈಗಿರುವ ಪೋಸ್ಟರ್ ರೆಡಿ ಮಾಡಿ ಕೊಟ್ಟರು. ಚಿತ್ರೀಕರಣಕ್ಕೆ ಮುಂಚೆಯೇ ನಮ್ಮ ಪೋಸ್ಟರ್ ರೆಡಿ ಆಗಿತ್ತು. ಚಿತ್ರೀಕರಣ ಮುಗಿದ ಮೇಲೆ ಅದನ್ನು ಬಿಡುಗಡೆ ಮಾಡಿದೆವು” ಎಂದಿದ್ದಾರೆ ರಾಜ್ ಬಿ ಶೆಟ್ಟಿ. ಟೋಬಿ ಸಿನಿಮಾ ಆಗಸ್ಟ್ 25ಕ್ಕೆ ತೆರೆಗೆ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ