AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಾತಿ ಮುತ್ತಿನ ಮಳೆ ಹನಿಯೇ ಬಿಡುಗಡೆ ತಡವೇಕೆ? ಟೋಬಿ ಮೊದಲೇಕೆ?

Raj B Shetty: ರಾಜ್ ಬಿ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾಕ್ಕೂ ಮುಂಚೆಯೇ ಟೋಬಿ ಸಿನಿಮಾ ಏಕೆ ಬಿಡುಗಡೆ ಆಗುತ್ತಿದೆ? ವಿವರಿಸಿದ ರಾಜ್ ಬಿ ಶೆಟ್ಟಿ.

ಸ್ವಾತಿ ಮುತ್ತಿನ ಮಳೆ ಹನಿಯೇ ಬಿಡುಗಡೆ ತಡವೇಕೆ? ಟೋಬಿ ಮೊದಲೇಕೆ?
ಸ್ವಾತಿ ಮುತ್ತಿನ ಮಳೆ ಹನಿಯೇ
ಮಂಜುನಾಥ ಸಿ.
|

Updated on: Jun 30, 2023 | 8:06 AM

Share

ರಾಜ್ ಬಿ ಶೆಟ್ಟಿ (Raj B Shetty) ನಟನೆಯ ಟೋಬಿ (Toby) ಸಿನಿಮಾ ಇನ್ನೆರಡು ತಿಂಗಳೊಳಗೆ ಬಿಡುಗಡೆ ಆಗಲಿದೆ. ನಿನ್ನೆ (ಜೂನ್ 29) ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಆಗಿದೆ. ಆದರೆ ಟೋಬಿಗಿಂತಲೂ ಮೊದಲು ರಾಜ್ ಬಿ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ ಸ್ವಾತಿ ಮುತ್ತಿನ ಮಳೆ ಹನಿಯೇ (Swathi Muthina male haniye) ಸಿನಿಮಾ ಬಿಡುಗಡೆ ಆಗಬೇಕಿತ್ತು. ಏಕೆಂದರೆ ಟೋಬಿಗೂ ಮೊದಲು ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಶುರುವಾಗಿ, ಮುಗಿದಿತ್ತು ಸಹ ಹಾಗಿದ್ದರೂ ಟೋಬಿ ಸಿನಿಮಾ ಮೊದಲು ಬಿಡುಗಡೆ ಆಗುತ್ತಿರುವುದು ಏಕೆ? ರಾಜ್ ಬಿ ಶೆಟ್ಟಿಯೇ ನೀಡಿದ್ದಾರೆ ಕಾರಣ.

”ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಮಾಡಬೇಕಾದರೇನೆ ಒಂದು ಖಾಸಗಿ ಅನುಭವ ನೀಡುವ ಆಪ್ತವಾದ ಫೀಲ್ ನೀಡುವ ಸಿನಿಮಾ ಮಾಡಬೇಕೆಂಬ ಉದ್ದೇಶದಿಂದಲೇ ಆ ಸಿನಿಮಾ ಶುರು ಮಾಡಿದೆವು. ಆ ಸಿನಿಮಾ ಮಾಡುವಾಗ ಇದು ಒಳ್ಳೆಯ ಸಿನಿಮಾ ಆಗಿರಬೇಕು, ಒಟಿಟಿಯಲ್ಲಿ ನೋಡುವಂಥಹಾ ಒಂದು ಪರ್ಸನಲ್ ಆದ ಸಿನಿಮಾ ಮಾದರಿಯಲ್ಲಿರಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಸದ್ಯಕ್ಕೆ ಸಿನಿಮಾ ಪೂರ್ಣ ಮುಗಿದು ಅದರ ಮಿಕ್ಸಿಂಗ್​ನ ಸಣ್ಣ-ಪುಟ್ಟ ಕೆಲಸಗಳು ಮಾತ್ರ ಬಾಕಿ ಇವೆ. ಅದೂ ಸಹ ಒಂದು ವಾರ ಅಥವಾ ಹತ್ತು ದಿನದಲ್ಲಿ ಮುಗಿಯಬಹುದು” ಎಂದಿದ್ದಾರೆ ರಾಜ್​ ಬಿ ಶೆಟ್ಟಿ.

ಇದನ್ನೂ ಓದಿ:ಟೋಬಿ ಪ್ಯಾನ್ ಇಂಡಿಯಾ ಸಿನಿಮಾನಾ? ಏನಂದರು ರಾಜ್ ಬಿ ಶೆಟ್ಟಿ?

”ಈ ನಡುವೆ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದ ನಿರ್ಮಾಣ ಸಂಸ್ಥೆಯವರೇನಾದರೂ ಯಾವುದಾದರೂ ಒಟಿಟಿಯಲ್ಲಿ ಒಳ್ಳೆಯ ಡೀಲ್ ಮಾಡಿಕೊಂಡರೆ ನಮ್ಮ ಟೋಬಿ ಸಿನಿಮಾಕ್ಕಿಂತಲೂ ಮೊದಲೇ ಆ ಸಿನಿಮಾ ಬಿಡುಗಡೆ ಆಗಬಹುದು. ಆದರೆ ಆ ವಿಷಯ ನನಗೆ ಗೊತ್ತಿಲ್ಲ. ಇನ್ನು ಟೋಬಿ ಸಿನಿಮಾದ ಎಲ್ಲ ಕೆಲಸ ಮುಗಿದಿದ್ದು ಕೊನೆಯ ಹಂತದ ಕೆಲಸ ಚಾಲ್ತಿಯಲ್ಲಿದೆ” ಎಂದಿದ್ದಾರೆ.

ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾವನ್ನು ರಾಜ್ ಬಿ ಶೆಟ್ಟಿಯವರೇ ನಿರ್ದೇಶನ ಮಾಡಿ ನಟಿಸಿದ್ದಾರೆ ಸಹ. ಈ ಸಿನಿಮಾವನ್ನು ನಟಿ ರಮ್ಯಾ ನಿರ್ಮಾಣ ಮಾಡಿದ್ದಾರೆ. ಮೊದಲಿಗೆ ರಮ್ಯಾರೆ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಆ ನಂತರ ಅದು ಬದಾಯಿತು. ಇನ್ನು ಸಿನಿಮಾದ ಹೆಸರಿನ ಕುರಿತಂತೆ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ತಕರಾರು ಎತ್ತಿದ್ದರು, ಆದರೆ ಆ ಪ್ರಕರಣದಲ್ಲಿ ಗೆಲುವು ಚಿತ್ರತಂಡದ್ದಾಗಿ, ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಟೈಟಲ್ ಅನ್ನು ಬಳಸಬಹುದು ಎಂದಾಯಿತು.

ರಾಜ್ ಬಿ ಶೆಟ್ಟಿಯ ಟೋಬಿ ಸಿನಿಮಾ ಆಗಸ್ಟ್ 25ರಂದು ಬಿಡುಗಡೆ ಆಗಲಿದೆ. ಇದರ ಜೊತೆಗೆ ಮಲಯಾಳಂ ಸಿನಿಮಾ ಒಂದರಲ್ಲಿ ಸಹ ರಾಜ್ ಬಿ ಶೆಟ್ಟಿ ನಟಿಸುತ್ತಿದ್ದಾರೆ. ಆ ಸಿನಿಮಾದಲ್ಲಿ ಅಪರ್ಣಾ ಬಾಲಮುರಳಿ ನಾಯಕಿ. ಶಿವರಾಜ್ ಕುಮಾರ್, ಉಪೇಂದ್ರ ನಟನೆಯ ಸಿನಿಮಾದಲ್ಲಿಯೂ ರಾಜ್ ಬಿ ಶೆಟ್ಟಿ ನಟಿಸುತ್ತಿದ್ದಾರೆ. ಅದರ ಬಳಿಕ ಕಾಂತಾರ 2 ಸಿನಿಮಾ ತಂಡದ ಜೊತೆಗೆ ರಾಜ್ ಬಿ ಶೆಟ್ಟಿ ಕೆಲಸ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ