ಹೇಗಿರಲಿದೆ ಮಲೆನಾಡಿನ ‘ಕೆರೆಬೇಟೆ’? ಮೋಷನ್​ ಪೋಸ್ಟರ್​ ಮೂಲಕ ಸುಳಿವು ನೀಡಿದ ಚಿತ್ರತಂಡ

ನಿರ್ದೇಶಕ ರಾಜ್‌ಗುರು, ನಟ-ನಿರ್ಮಾಪಕ ಗೌರಿ ಶಂಕರ್​ ಮೂಲತಃ ಮಲೆನಾಡಿನವರು. ಬಾಲ್ಯದಿಂದಲೂ ಅವರು ಕೆರೆಬೇಟೆ ನೋಡುತ್ತಾ ಬೆಳೆದಿದ್ದಾರೆ. ಅದನ್ನೇ ಕೇಂದ್ರವಾಗಿ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ಮೋಷನ್​ ಪೋಸ್ಟರ್​ನಲ್ಲಿ ಸಾಕಷ್ಟು ಅಂಶಗಳನ್ನು ತೋರಿಸಲಾಗಿದೆ. ಈ ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸ ನಡೆಯುತ್ತಿದೆ.

ಹೇಗಿರಲಿದೆ ಮಲೆನಾಡಿನ ‘ಕೆರೆಬೇಟೆ’? ಮೋಷನ್​ ಪೋಸ್ಟರ್​ ಮೂಲಕ ಸುಳಿವು ನೀಡಿದ ಚಿತ್ರತಂಡ
ಗೌರಿ ಶಂಕರ್​

Updated on: Oct 27, 2023 | 4:22 PM

ಶೀರ್ಷಿಕೆ ಭಿನ್ನವಾಗಿದ್ದರೆ ಸುಲಭವಾಗಿ ಪ್ರೇಕ್ಷಕರ ಗಮನ ಸೆಳೆಯಬಹುದು. ‘ಕೆರೆಬೇಟೆ’ ಸಿನಿಮಾ (Kerebete Cinema) ಆ ಕೆಲಸ ಮಾಡುತ್ತಿದೆ. ಟೈಟಲ್​ನಿಂದ ಈ ಸಿನಿಮಾ ಕುತೂಹಲ ಮೂಡಿಸಿದೆ. ಕೆಲವೇ ದಿನಗಳ ಹಿಂದೆ ಈ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಈಗ ಮೋಷನ್ ಪೋಸ್ಟರ್ (Kerebete Motion Poster) ರಿಲೀಸ್​ ಮಾಡುವ ಮೂಲಕ ಪ್ರೇಕ್ಷಕರ ಕೌತುಕವನ್ನು ಹೆಚ್ಚಿಸಲಾಗಿದೆ. ಇದು ಮಲೆನಾಡು ಭಾಗದ ಮೀನು ಬೇಟೆ ಪದ್ಧತಿಯ ಕುರಿತು ನಿರ್ಮಾಣ ಆಗಿರುವ ಸಿನಿಮಾ. ನಿರ್ದೇಶಕ ರಾಜ್​ ಗುರು ಅವರು ಇದೇ ಮೊದಲ ಬಾರಿಗೆ ಮೀನು ಬೇಟೆಯ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಗೌರಿಶಂಕರ್ ಎಸ್‌ಆರ್‌ಜಿ (Gowri Shankar) ಅವರು ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಗ್ರಾಮೀಣ ಸೊಗಡಿನ ಕಥೆ ಇರುವ ಚಿತ್ರಕ್ಕೆ ಪ್ರೇಕ್ಷಕರು ಮನ ಸೋಲುತ್ತಾರೆ. ‘ಕೆರೆಬೇಟೆ’ ಚಿತ್ರದಲ್ಲೂ ಅಂಥ ಕಹಾನಿ ಇರಲಿದೆ.

ಹೇಗಿದೆ ಕೆರೆಬೇಟೆ ಮೋಷನ್​ ಪೋಸ್ಟರ್​?

ಅಕ್ಟೋಬರ್​ 27ರಂದು ಬಿಡುಗಡೆಯಾಗಿರುವ ‘ಕೆರೆಬೇಟೆ’ ಮೋಷನ್ ಪೋಸ್ಟರ್‌ನಲ್ಲಿ ಹೀರೋ ಗೌರಿಶಂಕರ್ ಕೂಣಿ ಹಿಡಿದು ಕೆರೆಯಲ್ಲಿ ಮೀನು ಬೇಟೆ ಆಡುತ್ತಿರುವ ದೃಶ್ಯ ಇದೆ. ಉದ್ದ ಕೂದಲು ಮತ್ತು ಗಡ್ಡ ಬಿಟ್ಟುಕೊಂಡು ಅವರು ರಾ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಗೌರಿ ಶಂಕರ್​ ಅವರ ಹಿಂದೆ ಜನರ ದೊಡ್ಡ ಗುಂಪು ಇದೆ. ಮೀನು ಬೇಟೆಯ ಕಥೆ ಯಾವ ರೀತಿ ಇರಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿಸುವ ರೀತಿಯಲ್ಲಿ ಈ ಪೋಸ್ಟರ್​ ಮೂಡಿಬಂದಿದೆ.

ಇದನ್ನೂ ಓದಿ: Tagaru Palya Review: ‘ಟಗರು ಪಲ್ಯ’ದಲ್ಲಿದೆ ನಗು-ಅಳು ತುಂಬಿದ ಮನರಂಜನೆಯ ಫ್ಯಾಮಿಲಿ ಪ್ಯಾಕೇಜ್​

ನಿರ್ದೇಶಕರ ಬಗ್ಗೆ:

‘ಕೆರೆಬೇಟೆ’ ಚಿತ್ರ ನಿರ್ದೇಶಕ ರಾಜ್‌ಗುರು ಅವರು ಈ ಹಿಂದೆ ಪವನ್ ಒಡೆಯರ್ ಜತೆ ‘ಗೂಗ್ಲಿ’, ‘ರಣವಿಕ್ರಮ’, ‘ನಟಸಾರ್ವಭೌಮ’, ‘ಜೆಸ್ಸಿ’, ‘ರೆಮೋ’ ಸಿನಿಮಾಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಆ ಅನುಭವದ ಆಧಾರದಲ್ಲಿ ಅವರೀಗ ಸ್ವತಂತ್ರ್ಯ ನಿರ್ದೇಶಕರಾಗಿದ್ದಾರೆ. ಅವರ ಮೊದಲ ನಿರ್ದೇಶನದ ಸಿನಿಮಾ ‘ಕೆರೆಬೇಟೆ’. ರಾಜ್‌ಗುರು ಕೂಡ ಮಲೆನಾಡಿನವರು. ಬಾಲ್ಯದಿಂದಲೂ ಅವರು ಕೆರೆಬೇಟೆ ನೋಡುತ್ತಾ ಬೆಳೆದಿದ್ದಾರೆ. ಹಾಗಾಗಿ ಅದರ ಬಗ್ಗೆ ಅವರಿಗೆ ಹೆಚ್ಚು ಜ್ಞಾನ ಇದೆ. ಅದನ್ನೇ ಇಟ್ಟುಕೊಂಡು ಅವರೀಗ ಸಿನಿಮಾ ಮಾಡಿದ್ದಾರೆ. ಸದ್ಯಕ್ಕೆ 70ರಷ್ಟು ಶೂಟಿಂಗ್​ ಮುಗಿದಿದೆ. 2024ರ ಆರಂಭದಲ್ಲಿ ಸಿನಿಮಾ ರಿಲೀಸ್​ ಮಾಡಲು ಚಿತ್ರತಂಡ ಪ್ಲ್ಯಾನ್​ ಮಾಡಿಕೊಂಡಿದೆ.

KEREBETE - First Look Motion Poster - JANAMANACINEMAS | GOWRISHANKAR SRG | RAJGURU B| GAGAN BADERIYA

ಮಲೆನಾಡಿನ ಜೀವನ ಶೈಲಿ:

ಈ ಸಿನಿಮಾ ಮೂಲಕ ಮಲೆನಾಡಿನ ಜೀವನ ಶೈಲಿಯನ್ನು ತೆರೆ ಮೇಲೆ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಅದೇ ಕಾರಣಕ್ಕಾಗಿ ಶಿವಮೊಗ್ಗ ಜಿಲ್ಲೆಯ ಸಿಗಂದೂರು ಮತ್ತು ಸೊರಬ ಸುತ್ತ-ಮುತ್ತಲಿನ ಲೊಕೇಷನ್​ಗಳಲ್ಲಿ ಶೂಟಿಂಗ್​ ಮಾಡಲಾಗಿದೆ. ಗೌರಿಶಂಕರ್ ಮತ್ತು ಬಿಂದೂ ಶಿವರಾಜ್ ಅವರು ಜೋಡಿಯಾಗಿ ಅಭಿನಯಿಸಿದ್ದಾರೆ. ಬಿಂದು ನಟಿಸಿರುವ ಚೊಚ್ಚಲ ಸಿನಿಮಾ ಇದು. ಗೋಪಾಲ್ ದೇಶಪಾಂಡೆ, ಸಂಪತ್ ಕುಮಾರ್ ಅವರಂತಹ ಪ್ರತಿಭಾವಂತ ಕಲಾವಿದರು ಈ ಸಿನಿಮಾದಲ್ಲಿ ಇದ್ದಾರೆ. ಗಗನ್ ಬದೇರಿಯಾ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ‘ಜನಮನ ಸಿನಿಮಾಸ್’ ಮೂಲಕ ಗೌರಿಶಕಂಕರ್ ಮತ್ತು ಜೈಶಂಕರ್ ಪಟೇಲ್ ಅವರು ನಿರ್ಮಾಣ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:15 pm, Fri, 27 October 23

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us