‘ಗುಳ್ಟು’ ಹೀರೋ-ನಿರ್ದೇಶಕರ ಕಾಂಬಿನೇಷನ್​ನಲ್ಲಿ ಬರಲಿದೆ ಮತ್ತೊಂದು ಸಿನಿಮಾ; ಹೆಚ್ಚಿದೆ ನಿರೀಕ್ಷೆ

|

Updated on: May 13, 2023 | 4:50 PM

ಕನ್ನಡ ಚಿತ್ರರಂಗದಲ್ಲಿ ನವೀನ್​ ಶಂಕರ್​ ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ. ಎಲ್ಲ ರೀತಿಯ ಪಾತ್ರಗಳನ್ನೂ ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ.

‘ಗುಳ್ಟು’ ಹೀರೋ-ನಿರ್ದೇಶಕರ ಕಾಂಬಿನೇಷನ್​ನಲ್ಲಿ ಬರಲಿದೆ ಮತ್ತೊಂದು ಸಿನಿಮಾ; ಹೆಚ್ಚಿದೆ ನಿರೀಕ್ಷೆ
ನವೀನ್ ಶಂಕರ್, ಜನಾರ್ದನ್ ಚಿಕ್ಕಣ್ಣ
Follow us on

ನಟ ನವೀನ್​ ಶಂಕರ್​ ಅಭಿನಯದ ‘ಗುಳ್ಟು’ (Gultoo Movie) ಸಿನಿಮಾದ ಬಗ್ಗೆ ಹೊಸದಾಗಿ ಹೇಳಬೇಕಾದ್ದಿಲ್ಲ. ಕನ್ನಡದ ಮಟ್ಟಿಗೆ ಹೊಸತನದ ಕಥೆಯನ್ನು ಪರಿಚಯಿಸಿದ ಸಿನಿಮಾ ಅದು. ಸೈಬರ್​ ಕ್ರೈಂ ಕುರಿತಾದ ಕಥೆಯನ್ನು ನಿರ್ದೇಶಕ ಜನಾರ್ದನ್​ ಚಿಕ್ಕಣ್ಣ (Janardhan Chikkanna) ಅವರು ಸೊಗಸಾಗಿ ವಿವರಿಸಿದ್ದರು. ಪ್ರೇಕ್ಷಕರಿಗೆ ಆ ಸಿನಿಮಾ ಇಷ್ಟವಾಗಿತ್ತು. ‘ಗುಳ್ಟು’ ಸಿನಿಮಾದಿಂದ ನವೀನ್​ ಶಂಕರ್​ ಅವರಿಗೆ ಜನಪ್ರಿಯತೆ ಸಿಕ್ಕಿತು. ಈಗ ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದರ ನಡುವೆ ಒಂದು ಎಗ್ಸೈಟಿಂಗ್​ ನ್ಯೂಸ್​ ಕೇಳಿಬಂದಿದೆ. ‘ಗುಳ್ಟು’ ನಿರ್ದೇಶಕ ಜನಾರ್ದನ್​ ಚಿಕ್ಕಣ್ಣ ಮತ್ತು ನವೀನ್​ ಶಂಕರ್​ (Naveen Shankar) ಅವರು ಜೊತೆಯಾಗಿ ಮತ್ತೊಂದು ಸಿನಿಮಾ ಮಾಡಲಿದ್ದಾರೆ. ಈ ಬಗ್ಗೆ ‘ಸಿನಿಮಾ ಎಕ್ಸ್​ಪ್ರೆಸ್​’ ವರದಿ ಮಾಡಿದೆ.

ಹೊಸ ಸಿನಿಮಾ ಕುರಿತಂತೆ ನವೀನ್​ ಶಂಕರ್​ ಮತ್ತು ಜನಾರ್ದನ್​ ಚಿಕ್ಕಣ್ಣ ಅವರು ಚರ್ಚೆ ನಡೆಸುತ್ತಿದ್ದಾರೆ. ಆದರೆ ಈ ಸಿನಿಮಾ ಸೆಟ್ಟೇರಲು ಇನ್ನೂ ಸಮಯ ಹಿಡಿಯಲಿದೆ. ಸದ್ಯಕ್ಕೆ ಜನಾರ್ದನ್​ ಅವರು ‘ಅಜ್ಞಾತವಾಸಿ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅತ್ತ ನವೀನ್​ ಶಂಕರ್​ ಅವರು ‘ಕ್ಷೇತ್ರಪತಿ’ ಸಿನಿಮಾದ ಬಿಡುಗಡೆಗಾಗಿ ಕಾದಿದ್ದಾರೆ. ಆ ನಂತರವೇ ಈ ನಟ-ನಿರ್ದೇಶಕನ ಕಾಂಬಿನೇಷನ್​ನಲ್ಲಿ ಮೂಡಿಬರಲಿರುವ ಹೊಸ ಸಿನಿಮಾದ ಬಗ್ಗೆ ಮಾತುಕತೆ ಮುಂದುವರಿಯಲಿದೆ.

ಇದನ್ನೂ ಓದಿ: ‘ಕ್ಷೇತ್ರಪತಿ’ ಆದ ನವೀನ್​ ಶಂಕರ್​ಗೆ ಶುಭ ಕೋರಿದ ಡಾಲಿ ಧನಂಜಯ; ಮೋಷನ್​ ಪೋಸ್ಟರ್​ ರಿಲೀಸ್​

ಕನ್ನಡ ಚಿತ್ರರಂಗದಲ್ಲಿ ನವೀನ್​ ಶಂಕರ್​ ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ. ಎಲ್ಲ ರೀತಿಯ ಪಾತ್ರಗಳನ್ನೂ ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ಹೀರೋ ಪಾತ್ರಕ್ಕೂ ಸೈ, ವಿಲನ್​ ಆಗಲೂ ಸೈ ಎಂದು ಅವರು ಮುನ್ನುಗ್ಗುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ ‘ಹೊಯ್ಸಳ’ ಸಿನಿಮಾದಲ್ಲಿ ಅವರು ಮಾಡಿದ ವಿಲನ್​ ಪಾತ್ರ ಸಖತ್ ಗಮನ ಸೆಳೆಯಿತು. ಅವರ ಅಭಿನಯಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಯಿತು.

ಇದನ್ನೂ ಓದಿ: ಧರಣಿ ಮಂಡಲ ಮಧ್ಯದೊಳಗೆ: ನವೀನ್​ ಶಂಕರ್-ಐಶಾನಿ ಶೆಟ್ಟಿಯ ‘ಮಾತು ಮಾತಲ್ಲೇ..’ ಗೀತೆಗೆ ವಿಜಯ್​ ಪ್ರಕಾಶ್​ ಧ್ವನಿ

ಕನ್ನಡದಲ್ಲಿ ಇತ್ತೀಚೆಗೆ ಬಂದ ಸಿನಿಮಾಗಳ ಪೈಕಿ ‘ಹೊಂದಿಸಿ ಬರೆಯಿರಿ’ ಸಿನಿಮಾಗೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದರು. ಒಟಿಟಿಯಲ್ಲಿ ಈ ಚಿತ್ರ ನೋಡಿದ ಎಲ್ಲರೂ ಪಾಸಿಟಿವ್​ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಿನಿಮಾದಲ್ಲಿ ನವೀನ್​ ಶಂಕರ್​ ಅವರು ಮಾಡಿದ ಪಾತ್ರ ಹೆಚ್ಚು ಹೈಲೈಟ್​ ಆಗಿದೆ. ಈ ಗೆಲುವಿನ ಖುಷಿಯಲ್ಲಿರುವ ನವೀನ್​ ಶಂಕರ್​ ಅವರಿಗೆ ಹೊಸ ಹೊಸ ಅವಕಾಶಗಳು ಹರಿದುಬರುತ್ತಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.