ಬೊಮ್ಮಾಯಿ ದುರಹಂಕಾರ ತೋರಿದ್ದರು ಎಂದ ಪವನ್ ಒಡೆಯರ್, ಸಿದ್ದರಾಮಯ್ಯ ಬಗ್ಗೆ ಪ್ರಶಂಸೆ

Pavan Wadeyar: ಅಂದು ಬಸವರಾಜ ಬೊಮ್ಮಾಯಿ ತೋರಿಸಿದ್ದ ದುರಹಂಕಾರ ಕಣ್ಣಿನಲ್ಲಿ ಕಟ್ಟಿದೆ ಎಂದಿರುವ ನಿರ್ದೇಶಕ ಪವನ್ ಒಡೆಯರ್, ಸಿದ್ದರಾಮಯ್ಯ ಅವರನ್ನು ಪ್ರಶಂಸಿದ್ದಾರೆ.

ಬೊಮ್ಮಾಯಿ ದುರಹಂಕಾರ ತೋರಿದ್ದರು ಎಂದ ಪವನ್ ಒಡೆಯರ್, ಸಿದ್ದರಾಮಯ್ಯ ಬಗ್ಗೆ ಪ್ರಶಂಸೆ
ಪವನ್ ಒಡೆಯರ್
Follow us
ಮಂಜುನಾಥ ಸಿ.
|

Updated on: May 13, 2023 | 8:05 PM

ಕರ್ನಾಟಕ ವಿಧಾನಸಭೆ ಚುನಾವಣೆ 2023ರ (Karnataka Assembly Election 2023) ಫಲಿತಾಂಶ ಹೊರಬಿದ್ದಿದೆ. ರಾಜ್ಯದ ಜನತೆ ಸ್ಪಷ್ಟ ತೀರ್ಪನ್ನು ನೀಡಿದ್ದು ಬಿಜೆಪಿಯನ್ನು ಪಕ್ಕಕ್ಕೆ ಸರಿಸಿ ಕಾಂಗ್ರೆಸ್​ಗೆ ಅಧಿಕಾರ ಪ್ರಧಾನ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ನಿಚ್ಚಳ ಬಹುಮತ ಪ್ರಾಪ್ತವಾಗಿದ್ದರೆ ಬಿಜೆಪಿಗೆ ಹೀನಾಯ ಸೋಲು ಎದುರಾಗಿದೆ. ಈ ತೀರ್ಪಿನ ಮೂಲಕ ಬಸವರಾಜ ಬೊಮ್ಮಾಯಿ ಸರ್ಕಾರ ಅಂತ್ಯವಾಗಿದೆ. ಮುಂದೆ ಕಾಂಗ್ರೆಸ್ ಮೂಲಕ ಸಿದ್ದರಾಮಯ್ಯ (Siddaramaiah) ಅಥವಾ ಡಿಕೆ ಶಿವಕುಮಾರ್ (DK Shivakumar) ಸಿಎಂ ಆಗುವ ಸಾಧ್ಯತೆ ಇದೆ.

ಜನರು ಇಂದು ನೀಡಿರುವ ತೀರ್ಪನ್ನು ಸಾಮಾಜಿಕ ಜಾಲತಾಣದಲ್ಲಿ ಹಲವರು ಹಲವು ವಿಧವಾಗಿ ವಿಶ್ಲೇಷಿಸುತ್ತಿದ್ದಾರೆ. ಬಹುಮತ ಪಡೆದ ಕಾಂಗ್ರೆಸ್​ಗೆ ಶುಭಾಷಯಗಳನ್ನು ಕೆಲವರು ತಿಳಿಸಿದ್ದರೆ, ಬಿಜೆಪಿ ಮಾಡಿದ ತಪ್ಪುಗಳನ್ನು ಇನ್ನು ಕೆಲವರು ಪಟ್ಟಿ ಮಾಡುತ್ತಿದ್ದಾರೆ. ಈ ನಡುವೆ ಸಿನಿಮಾ ನಿರ್ದೇಶಕ ಪವನ್ ಒಡೆಯರ್ ಮಾಡಿರುವ ಟ್ವೀಟ್ ಗಮನ ಸೆಳೆಯುತ್ತಿದೆ. ಹಳೆಯ ಘಟನೆಯೊಂದನ್ನು ಉಲ್ಲೇಖಿಸಿ ಸಿಎಂ ಬಸವರಾಜ ಬೊಮ್ಮಾಯಿ ಅವರದ್ದು ದುರಹಂಕಾರದ ವ್ಯಕ್ತಿತ್ವ ಎಂದಿದ್ದಾರೆ.

”ಕರ್ನಾಟಕದ ಪ್ರಾಚೀನ ಜಾನಪದ ಕಲೆ ಡೊಳ್ಳುಕುಣಿತದ ಕುರಿತು ನಿರ್ಮಿಸಿದ್ದ “ಡೊಳ್ಳು”ಚಿತ್ರಕ್ಕೆ ರಾಷ್ಟೀಯ ಪ್ರಶಸ್ತಿ ಬಂದಾಗ,ಬೊಮ್ಮಾಯಿ ಮಾಮಗೆ ಚಿತ್ರ ವೀಕ್ಷಿಸಲು ಕೊರಿದ್ದೆವು.ಮಾಮ ತೋರಿದ ದುರಹಂಕಾರ ನನ್ನ ಕಣ್ಣಿನಲ್ಲಿ ಇನ್ನೂ ಹಾಗೆ ಇದೆ.ತೆಲುಗು ಚಿತ್ರದ ಕಾರ್ಯಕ್ರಮಕ್ಕೆ ಮಾಮ 3 ತಾಸು ಕುಳಿತು ಕೊಳ್ಳುವಷ್ಟು ಸಮಯ ಇದೆ. ಕನ್ನಡಿಗರು ಮುಟ್ಟಾಳರಲ್ಲ” ಎಂದು ಟ್ವೀಟ್ ಮಾಡಿದ್ದಾರೆ ಪವನ್ ಒಡೆಯರ್.

”ಸಿದ್ದರಾಮಯ್ಯ ಸರ್ ಗೆ ಒಂದೇಒಂದು ಬಾರಿ ಕರೆ ಮಾಡಿದ್ದೆವು. “ಹೌದಾ, ಡೊಳ್ಳು ಕುಣಿತ ನಂಗೆ ಭಾರಿ ಇಷ್ಟ ರೀ” ಎಂದು ಕರೆಕೊಟ್ಟ ಸಂಜೆಯೇ ಬಂದು ಚಿತ್ರ ವೀಕ್ಷಿಸಿ, ಹಾರೈಸಿ, ಹಲವಾರುಕಡೆ ಹೆಮ್ಮೆ ಇಂದ ಮಾತನಾಡಿದ್ದರು. ಕನ್ನಡ ಭಾಷೆ, ಕರ್ನಾಟಕ ಸಂಸ್ಕೃತಿ, ಜಾನಪದ ಕಲೆ. ಇವೆಲ್ಲವನ್ನೂ ಜನ ಮಾರಿಕೊಳ್ಳಲ್ಲ” ಎಂದಿದ್ದಾರೆ ಪವನ್ ಒಡೆಯರ್.

ಬೊಮ್ಮಾಯಿ ಸಿಎಂ ಆಗಿದ್ದಾಗ ಹಲವು ಸಿನಿಮಾ ಕಾರ್ಯಗಳಲ್ಲಿ ಭಾಗವಹಿಸಿದ್ದರು. ಈ ಕಾರಣಕ್ಕೆ ವಿಪಕ್ಷದಿಂದ ಟೀಕೆಗಳನ್ನು ಸಹ ಎದುರಿಸಿದ್ದರು. ಕನ್ನಡ ಮಾತ್ರವಲ್ಲದೆ ತೆಲುಗಿನ ಆರ್​ಆರ್​ಆರ್ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿಯೂ ಬೊಮ್ಮಾಯಿ ಭಾಗವಹಿಸಿದ್ದರು. ಆಗಂತೂ ತುಸು ಹೆಚ್ಚಿನ ಟೀಕೆ ವ್ಯಕ್ತವಾಗಿತ್ತು. ಈಗ ಅದೇ ವಿಷಯವನ್ನು ನೆನಪಿಸಿಕೊಂಡು ಪವನ್ ಒಡೆಯರ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ಸುದೀಪ್ ಪ್ರಚಾರ ಮಾಡಿದ ಬಿಜೆಪಿ ಅಭ್ಯರ್ಥಿಗಳಲ್ಲಿ ಗೆದ್ದವರೆಷ್ಟು? ಸೋತವರೆಷ್ಟು? ಇಲ್ಲಿದೆ ಪಟ್ಟಿ

ಸಿಎಂ ಬೊಮ್ಮಾಯಿ ಅವರು ಸಿನಿಮಾ ರಂಗದೊಟ್ಟಿಗೆ ಆತ್ಮೀಯ ಬಂಧವನ್ನೇ ಹೊಂದಿದ್ದರು. ಪುನೀತ್ ಅಗಲಿದಾಗ ಅವರು ನಡೆದುಕೊಂಡ ರೀತಿ, ನೀಡಿದ ಆದ್ಯತೆಯನ್ನು ದೊಡ್ಮನೆ ಸೇರಿದಂತೆ ಇಡೀ ಚಿತ್ರರಂಗ ಶ್ಲಾಘಿಸಿತ್ತು. ಆದರೆ ಪವನ್ ಒಡೆಯರ್ ಅವರು ತಮ್ಮ ಸಿನಿಮಾಕ್ಕೆ ಬೊಮ್ಮಾಯಿ ಅವರು ಬರಲಿಲ್ಲವೆಂಬ ಕಾರಣಕ್ಕೆ ತುಸು ಸಿಟ್ಟಿನಿಂದಲೇ ಟ್ವೀಟ್ ಮಾಡಿದ್ದಾರೆ.

ಡೊಳ್ಳು ಸಿನಿಮಾವನ್ನು ಪವನ್ ಒಡೆಯರ್ ನಿರ್ಮಾಣ ಮಾಡಿದ್ದರು. ಸಿನಿಮಾವನ್ನು ಸುನಿಲ್ ಪುರಾಣಿಕ್ ಪುತ್ರ ನಿರ್ದೇಶನ ಮಾಡಿದ್ದರು. ಸಿನಿಮಾವು ರಾಷ್ಟ್ರಪ್ರಶಸ್ತಿ ಸೇರಿದಂತೆ ಕೆಲವು ಸಿನಿಮೋತ್ಸವಗಳಲ್ಲಿಯೂ ಭಾಗವಹಿಸಿತ್ತು. ಕೆಲವು ವಿದೇಶಿ ಬಹುಮಾನಗಳನ್ನು ಸಹ ಗೆದ್ದುಕೊಂಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ