ಕುಂದಾಪುರ ಕನ್ನಡದಲ್ಲಿ ಬರುತ್ತಿದೆ ‘ಗುಂಮ್ಟಿ’ ಸಿನಿಮಾ; ಬಿಡುಗಡೆ ಆಯ್ತು ಟ್ರೇಲರ್​

|

Updated on: Nov 12, 2024 | 9:45 PM

ಜಾನಪದ ಆಚರಣೆ ಬಗ್ಗೆ ‘ಗುಂಮ್ಟಿ’ ಸಿನಿಮಾ ಮಾಡಲಾಗಿದೆ. ಈ ಚಿತ್ರಕ್ಕೆ ಸೆನ್ಸಾರ್​ ಪ್ರಮಾಣ ಪತ್ರ ಸಿಗುವುದು ಬಾಕಿ ಇದೆ. ಉಡುಪಿ, ಕುಂದಾಪುರ, ಕಾರವಾರ, ಶಿರಸಿ ಮುಂತಾದ ಕಡೆಗಳಲ್ಲಿ ಈ ಸಿನಿಮಾಗೆ ಚಿತ್ರೀಕರಣ ಮಾಡಲಾಗಿದೆ. ಇತ್ತೀಚೆಗೆ ಟ್ರೇಲರ್ ಬಿಡುಗಡೆ ಮಾಡಲಾಗಿದ್ದು, ಸಿನಿಮಾದ ಟೈಟಲ್​ ಮತ್ತು ಕಥಾವಸ್ತು ಬಗ್ಗೆ ಚಿತ್ರತಂಡದವರು ಮಾಹಿತಿ ನೀಡಿದ್ದಾರೆ.

ಕುಂದಾಪುರ ಕನ್ನಡದಲ್ಲಿ ಬರುತ್ತಿದೆ ‘ಗುಂಮ್ಟಿ’ ಸಿನಿಮಾ; ಬಿಡುಗಡೆ ಆಯ್ತು ಟ್ರೇಲರ್​
‘ಗುಂಮ್ಟಿ’ ಚಿತ್ರತಂಡ
Follow us on

ಕರಾವಳಿ ಭಾಗದ ಕಥೆಯನ್ನು ಇಟ್ಟುಕೊಂಡು ‘ಗುಂಮ್ಟಿ’ ಸಿನಿಮಾ ಸಿದ್ಧವಾಗಿದೆ. ಈ ಸಿನಿಮಾದಲ್ಲಿ ಕುಂದಾಪುರ ಕನ್ನಡ ಬಳಕೆ ಆಗಿದೆ ಎಂಬುದು ವಿಶೇಷ. ಸಿನಿಮಾದ ಬಗ್ಗೆ ಝಲಕ್ ತೋರಿಸಲು ಟ್ರೇಲರ್​ ಬಿಡುಗಡೆ ಮಾಡಲಾಗಿದೆ. ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಮುಕ್ತಾಯ ಆಗಿವೆ. ಟ್ರೇಲರ್​ ರಿಲೀಸ್ ಮೂಲಕ ಪ್ರಚಾರ ಕಾರ್ಯವನ್ನು ಚುರುಕುಗೊಳಿಸಲಾಗಿದೆ. ವಿಕಾಸ್ ಎಸ್. ಶೆಟ್ಟಿ ಅವರು ‘ಗುಂಮ್ಟಿ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಸಂದೇಶ ಶೆಟ್ಟಿ ಆಜ್ರಿ ಅವರ ನಿರ್ದೇಶನ ಈ ಚಿತ್ರಕ್ಕಿದೆ. ಸಂದೇಶ ಅವರೇ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಅವರ ಜೊತೆ ವೈಷ್ಣವಿ ನಾಡಿಗ್ ನಾಯಕಿಯಾಗಿ ನಟಿಸಿದ್ದಾರೆ.

‘ಗುಂಮ್ಟಿ’ ಸಿನಿಮಾದಲ್ಲಿ ಕರಾವಳಿ ಭಾಗದ ಜಾನಪದ ಕಲೆಯ ಬಗ್ಗೆ ತೋರಿಸಲಾಗುತ್ತಿದೆ. ಆ ಬಗ್ಗೆ ನಿರ್ಮಾಪಕರು ಮಾಹಿತಿ ನೀಡಿದ್ದಾರೆ. ‘ಬಾಲ್ಯದಿಂದಲೂ ನಮ್ಮ ಸುತ್ತಮುತ್ತ ಕಂಡ ಜಾನಪದ ಕಲೆಯೊಂದನ್ನು ಈ ಚಿತ್ರದ ಮೂಲಕ ತೆರೆಗೆ ತರುವ ಪ್ರಯತ್ನ ಮಾಡಿದ್ದೇವೆ. ನೈಜತೆಯಿಂದ ಸಿನಿಮಾ ಮೂಡಿಬಂದಿದೆ. ಎಲ್ಲರಿಗೂ ಈ ಚಿತ್ರದ ಕಥೆ ಇಷ್ಟ ಆಗಲಿದೆ ಎಂಬ ನಂಬಿಕೆ ಇದೆ’ ಎಂದು ನಿರ್ಮಾಪಕ ವಿಕಾಸ್ ಎಸ್. ಶೆಟ್ಟಿ ಹೇಳಿದ್ದಾರೆ.

‘ಕತ್ತಲೆ ಕೋಣೆ’, ‘ಇನಾಮ್ದಾರ್’ ಸಿನಿಮಾಗಳ ಬಳಿಕ ನಿರ್ದೇಶಕ ಸಂದೇಶ ಶೆಟ್ಟಿ ಆಜ್ರಿ ಅವರು ‘ಗುಂಮ್ಟಿ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದೊಂದು ಕಲಾತ್ಮಕ ಸಿನಿಮಾ ಎಂದು ಅವರು ಹೇಳಿದ್ದಾರೆ. ‘ಕರ್ನಾಟಕದ ಕರಾವಳಿ ತೀರದ ಕುಡುಬಿ ಜನಾಂಗದ ಕಥೆಯನ್ನು ಈ ಸಿನಿಮಾ ಮೂಲಕ ತೆರೆಗೆ ತರುತ್ತಿದ್ದೇವೆ. ಗುಂಮ್ಟಿ ಎಂಬುದು ಕುಡುಬಿ ಸಮುದಾಯಕ ಕಲಾಪ್ರಕಾರದ ಸಾಂಪ್ರದಾಯಿಕ ವಾದ್ಯ. ಅದನ್ನೇ ಟೈಟಲ್ ಆಗಿ ಬಳಸಿಕೊಂಡಿದ್ದೇವೆ’ ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ಕರಾವಳಿ ಭಾಗದಲ್ಲಿ ಬಿಡುಗಡೆಗೂ ಮುನ್ನವೇ ‘ಗುಂಮ್ಟಿ’ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಚಿತ್ರತಂಡ ಹೇಳಿದೆ. 24ಕ್ಕೂ ಅಧಿಕ ಶೋಗಳು ಮುಂಗಡ ಬುಕ್ ಆಗಿವೆ ಎಂಬುದು ಚಿತ್ರತಂಡದ ಖುಷಿಗೆ ಕಾರಣ ಆಗಿದೆ. ರಂಜನ್ ಛತ್ರಪತಿ, ಯಶ್ ಆಚಾರ್ಯ, ಕರಣ್ ಕುಂದರ್, ಪ್ರಭಾಕರ ಕುಂದರ್, ಚೇತನ ನೈಲಾಡಿ, ರಘು ಪಾಂಡೇಶ್ವರ, ಚಿತ್ರಕಲಾ, ಸ್ವರಾಜ್ ಲಕ್ಷ್ಮಿ, ನೂರ್ ಅಹ್ಮದ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಕುಂದಾಪ್ರ ಕನ್ನಡ ನಿಘಂಟು: ಕುಂದಾಪುರ ಕನ್ನಡದ ಭಾಷಿ ಅಳಿಯದೆ ಉಳಿಯಲು ಒಂದು ಹೊಸ ಪ್ರಯತ್ನ

‘ತಸ್ಮೈ ಪ್ರೊಡಕ್ಷನ್ಸ್’ ಮತ್ತು ‘ಜ್ಯೋತಿ ಪ್ರೊಡಕ್ಷನ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಅನೀಶ್ ಡಿಸೋಜಾ ಛಾಯಾಗ್ರಹಣ ಮಾಡಿದ್ದಾರೆ. ಶಿವರಾಜ ಮೇಹು ಅವರ ಸಂಕಲನ ಈ ಚಿತ್ರಕ್ಕಿದೆ. ಡೊಂಡಿ ಮೋಹನ್ ಸಾಹಿತ್ಯ ರಚಿಸಿ, ಸಂಗೀತ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.