ಹಂಸಲೇಖಗೆ ಸದ್ಯ ಒಂದು ಕೇಸ್​ನಲ್ಲಿ ರಿಲೀಫ್; ಮತ್ತೊಂದು ಪ್ರಕರಣದ ತನಿಖೆ ಮುಂದುವರಿಯಲಿದೆ

ಮೊದಲನೇ FIR ಕ್ರೈಂ ನಂ. 200/2021ಗೆ ಕೋರ್ಟ್ ತಡೆ ನೀಡಿಲ್ಲ. ಹೀಗಾಗಿ ಹಂಸಲೇಖರಿಗೆ ಸದ್ಯ 1 ಕೇಸ್​ನಲ್ಲಿ ಮಾತ್ರ ರಿಲೀಫ್ ಸಿಗಲಿದೆ. ಮತ್ತೊಂದು ಪ್ರಕರಣದ​ ತನಿಖೆಯನ್ನು ಪೊಲೀಸರು ಮುಂದುವರಿಸಲಿದ್ದಾರೆ.

ಹಂಸಲೇಖಗೆ ಸದ್ಯ ಒಂದು ಕೇಸ್​ನಲ್ಲಿ ರಿಲೀಫ್; ಮತ್ತೊಂದು ಪ್ರಕರಣದ ತನಿಖೆ ಮುಂದುವರಿಯಲಿದೆ
ಹಂಸಲೇಖ
Edited By:

Updated on: Nov 30, 2021 | 11:22 PM

ಬೆಂಗಳೂರು: ಖ್ಯಾತ ಸಂಗೀತ ನಿರ್ದೇಶಕ, ಚಿತ್ರ ಸಾಹಿತಿ ಹಂಸಲೇಖ ವಿರುದ್ಧ ಒಂದು ಪ್ರಕರಣಕ್ಕೆ ಮಾತ್ರ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. 2ನೇ ದೂರು ಕ್ರೈಂ ನಂ.201/2021ರ ತನಿಖೆಗೆ ಮಾತ್ರ ತಡೆ ನೀಡಲಾಗಿದೆ. ಮೊದಲನೇ FIR ಕ್ರೈಂ ನಂ. 200/2021ಗೆ ಕೋರ್ಟ್ ತಡೆ ನೀಡಿಲ್ಲ. ಹೀಗಾಗಿ ಹಂಸಲೇಖರಿಗೆ ಸದ್ಯ 1 ಕೇಸ್​ನಲ್ಲಿ ಮಾತ್ರ ರಿಲೀಫ್ ಸಿಗಲಿದೆ. ಮತ್ತೊಂದು ಪ್ರಕರಣದ​ ತನಿಖೆಯನ್ನು ಪೊಲೀಸರು ಮುಂದುವರಿಸಲಿದ್ದಾರೆ. ಬೆಂಗಳೂರಿನ ಬಸವನಗುಡಿ ಠಾಣೆಯ ಪೊಲೀಸರಿಂದ ತನಿಖೆ ನಡೆಯಲಿದೆ.

ಪೇಜಾವರ ಮಠದ ದಿವಂಗತ ಸ್ವಾಮೀಜಿ ವಿಶ್ವೇಶ ತೀರ್ಥರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು ಬಸವನಗುಡಿ ಠಾಣೆ ಪೊಲೀಸರು ಗುರುವಾರ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ತಾವು ನೀಡಿದ ಹೇಳಿಕೆಯ ಬಗ್ಗೆ ಹಂಸಲೇಖ ಬೇಸರ ವ್ಯಕ್ತಪಡಿಸಿದ್ದರು. ಮಾತ್ರವಲ್ಲದೇ, ತನಿಖಾಧಿಕಾರಿ ಮುಂದೆ ಕಣ್ಣೀರು ಹಾಕಿದರು ಎಂದು ಮೂಲಗಳು ಹೇಳಿವೆ. ನಾನು ಏಕೆ ಹಾಗೆ ಹೇಳಿದೆನೋ ಗೊತ್ತಿಲ್ಲ. ನನಗೆ ಅಂಥ ಯಾವ ಉದ್ದೇಶವೂ ಇರಲಿಲ್ಲ. ಮಾತಿನ ಭರದಲ್ಲಿ ಹೇಳಿದೆ. ನನ್ನ ಹೇಳಿಕೆಗೆ ನನ್ನ ಹೆಂಡತಿಯೇ ಬೇಸರ ವ್ಯಕ್ತಪಡಿಸಿದರು. ನನ್ನ ಜೀವನದಲ್ಲಿ ಎಂದೂ ಹೀಗೆ ಮಾಡಿಕೊಂಡಿರಲಿಲ್ಲ. ನಾನು ಅಂಥ ಹೇಳಿಕೆ ನೀಡಿದ್ದರಿಂದ ತಪ್ಪಾಗಿದೆ ಎಂದು ಹಂಸಲೇಖ ಹೇಳಿದ್ದರು.

ಯಾವುದೇ ಧರ್ಮ ಅಥವಾ ಜಾತಿಯನ್ನು ನಿಂದಿಸುವ ಉದ್ದೇಶ ನನಗೆ ಇರಲಿಲ್ಲ. ಈ ಹೇಳಿಕೆಯಿಂದಾಗಿ ನನ್ನ ವೃತ್ತಿಯಲ್ಲಿಯೂ ಹಿನ್ನಡೆ ಉಂಟಾಗಿದೆ. ತುಂಬಾ ನೋವು ಅನುಭವಿಸಿದ್ದೇನೆ ಎಂದು ಹಂಸಲೇಖ ತನಿಖಾಧಿಕಾರಿ ಎದುರು ಕಣ್ಣೀರು ಹಾಕಿದರು. ನಂತರ ಐದು ನಿಮಿಷ ಸುಧಾರಿಸಿಕೊಂಡು ಕಣ್ಣೊರೆಸಿಕೊಂಡು ಸಮಾಧಾನ ಮಾಡಿಕೊಂಡರು ಎಂದು ಮೂಲಗಳು ಹೇಳಿತ್ತು.

ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಹಂಸಲೇಖ, ಮೇಲ್ಜಾತಿ ಹಾಗೂ ಕೀಳುಜಾತಿ, ಜಾತಿತಾರತಮ್ಯ, ಜಾತಿ ಪಿಡುಗು ವಿಚಾರವಾಗಿ ಮಾತನಾಡುತ್ತಾ ಅವಹೇಳನಕಾರಿ ವಾಕ್ಯ ಪ್ರಯೋಗಿಸಿದ್ದರು. ಬಳಿಕ ಅಂಬೇಡ್ಕರ್ ವಿಚಾರವನ್ನು ಕೂಡ ಉಲ್ಲೇಖಿಸಿದ್ದರು. ಇಲ್ಲಿ ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖ ಮಾತನಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವಿವಾದ ಹುಟ್ಟುಹಾಕಿತ್ತು. ಫೇಸ್ಬುಕ್​ನಲ್ಲಿ ಜನರು ವಿವಿಧ ರೀತಿಯ ಕಮೆಂಟ್​ಗಳನ್ನು ಮಾಡಿ ವಿಡಿಯೋ ಹಂಚಿಕೊಂಡಿದ್ದರು.

ಈ ವಿವಾದವನ್ನು ಉದ್ದೇಶಿಸಿ ಕ್ಷಮೆ ಕೇಳುವ ಮೂಲಕ ಹಂಸಲೇಖ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಗೊತ್ತಿದೆ. ಎಲ್ಲಾ ಮಾತುಗಳಿಗೂ ಅದು ವೇದಿಕೆಯಲ್ಲ, ತಪ್ಪು. ಆ ವೇದಿಕೆಯಲ್ಲಿ ನುಡಿದರೆ ಮುತ್ತಿನಹಾರದಂತಿರಬೇಕು ಎಂದು ಇರಬೇಕಿತ್ತು. ಆದರೆ, ತಪ್ಪಾಗಿದೆ. ಅಸ್ಪ್ರಶ್ಯತೆ ಎಂಬುದು ನಮ್ಮ ದೇಶಕ್ಕೆ ಅಂಟಿದ ಶಾಪ. ಈ ಅನಿಷ್ಠವನ್ನು ತೊಡೆದು ಹಾಕುವುದಕ್ಕೆ ಪೇಜಾವರರಂಥ ಗುರುಹಿರಿಯರು ಅಪಾರ ಪ್ರಯತ್ನ ನಡೆಸುತ್ತಿದ್ದಾರೆ. ಅದರ ಬಗ್ಗೆ ನನಗೆ ಆ ಬಗ್ಗೆ ಅಪಾರ ಗೌರವವಿದೆ ಎಂದು ಹೇಳಿದ್ದರು.

ನಾನು ಒಬ್ಬ ಸಂಗೀತಗಾರ. ನಮಗ್ಯಾಕೆ ಟ್ರೋಲು, ಕಂಟ್ರೋಲ್ ಆಗಿರುವುದು ನಮ್ಮ ಕೆಲಸ. ನನಗೆ ಯಾರಿಗೂ ನೋವು ಕೊಡಲು ಇಷ್ಟವಿಲ್ಲ. ನನ್ನ ಸಂಗೀತದಂತೆ ನನ್ನ ಮಾತು, ಬದುಕು ಕೂಡ ಎಲ್ಲರಿಗೂ ಸುಖ ಕೊಡಬೇಕು. ಆದರೆ, ಎಲ್ಲಾ ಅನಿಷ್ಠಗಳನ್ನು ತೊಡೆದು ಹಾಕುವ ದಿಸೆಯಲ್ಲಿ ನನ್ನ ಪಾತ್ರವೂ ಯಾವುದೇ ಮೂಲಕ ಇದ್ದರೆ ಅದನ್ನು ನಾನು ಮಾಡಿಯೇ ಮಾಡ್ತೇನೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ‘ಸರಿಗಮಪ ನನ್ನ ಪ್ರೀತಿಯ ಭೂಮಿಕೆ, ಬೇಗ ಬಂದು ಸೇರಿಕೊಳ್ಳುತ್ತೇನೆ’; ಹಂಸಲೇಖ ಪತ್ರ

ಇದನ್ನೂ ಓದಿ: ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಹಂಸಲೇಖ ವಿಚಾರಣೆ: ಹೊರಗೆ ಪರ-ವಿರೋಧ ಪ್ರತಿಭಟನೆ