ಬಣ್ಣದ ಲೋಕದಲ್ಲಿ ನಟಿ ಹರ್ಷಿಕಾ ಪೂಣಚ್ಚ (Harshika Poonacha) ಅವರು ವಿಷೇಶವಾಗಿ ಗುರುತಿಸಿಕೊಂಡಿದ್ದಾರೆ. ಅನೇಕ ಬಗೆಯ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಈ ಪ್ರತಿಭಾವಂತ ನಟಿಗೆ ಇಂದು (ಮೇ1) ಹುಟ್ಟುಹಬ್ಬದ ಸಂಭ್ರಮ. ಅವರ ಬರ್ತ್ಡೇ (Harshika Poonacha Birthday) ಸಲುವಾಗಿ ಎಲ್ಲರೂ ವಿಶ್ ಮಾಡುತ್ತಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಮಲಯಾಳಂ, ಕೊಡವ, ಕೊಂಕಣಿ, ಭೋಜ್ಪುರಿ ಸೇರಿದಂತೆ 7 ಭಾಷೆಯ ಸಿನಿಮಾಗಳಲ್ಲಿ (Harshika Poonacha Movies) ನಟಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಅನೇಕ ಹೆಸರಾಂತ ನಿರ್ದೇಶಕರ ಜೊತೆ ಅವರು ಕೆಲಸ ಮಾಡಿದ್ದಾರೆ. ಖ್ಯಾತ ನಟರಿಗೆ ಜೋಡಿಯಾಗಿ ಅವರು ಬಣ್ಣ ಹಚ್ಚಿದ್ದಾರೆ. ಅನೇಕ ವರ್ಷಗಳಿಂದ ಅಭಿಮಾನಿಗಳನ್ನು ರಂಜಿಸುತ್ತ ಬಂದಿರುವ ಹರ್ಷಿಕಾ ಪೂಣಚ್ಚ ಅವರು ಕೇವಲ ನಟನೆಗೆ ಮಾತ್ರ ಸೀಮಿತ ಆದವರಲ್ಲ. ಸಮಾಜಮುಖಿ ಕಾರ್ಯಗಳಲ್ಲೂ ಅವರು ತೊಡಗಿಕೊಂಡಿದ್ದಾರೆ. ಕೊವಿಡ್ ಸಂದರ್ಭದಲ್ಲಿ ಅನೇಕರಿಗೆ ಅವರು ಸಹಾಯ ಮಾಡಿದ್ದರು. ತಮ್ಮ ವ್ಯಕ್ತಿತ್ವದ ಕಾರಣದಿಂದಲೂ ಜನಮನ ಗೆದ್ದಿರುವ ಈ ಸುಂದರಿಗೆ ಇಂದು ಜನ್ಮದಿನದ ಪ್ರಯುಕ್ತ ಅಭಿಮಾನಿಗಳು, ಸೆಲೆಬ್ರಿಟಿಗಳು, ಸ್ನೇಹಿತರು ಶುಭಾಶಯ ಕೋರುತ್ತಿದ್ದಾರೆ. ಹರ್ಷಿಕಾ ಪೂಣಚ್ಚ ಅವರ ಮುಂದಿನ ಸಿನಿಮಾ ಪಯಣ ಇನ್ನಷ್ಟು ಯಶಸ್ವಿ ಆಗಿರಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.
ಹರ್ಷಿಕಾ ಪೂಣಚ್ಚ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು ‘ಪಿಯುಸಿ’ ಸಿನಿಮಾ ಮೂಲಕ. ಆ ಚಿತ್ರ 2008ರಲ್ಲಿ ತೆರೆಕಂಡಿತು. ಅಲ್ಲಿಂದ ಇಲ್ಲಿಯವರೆಗೆ 30ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಲಾವಿದರಿಗೆ ಭಾಷೆಯ ಗಡಿ ಇಲ್ಲ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಹರ್ಷಿಕಾ ಪೂಣಚ್ಚ ಅವರ ವಿಚಾರದಲ್ಲಿ ಅದು ಅಕ್ಷರಶಃ ನಿಜವಾಗಿದೆ. ಇಷ್ಟು ವರ್ಷಗಳ ವೃತ್ತಿಜೀವನದಲ್ಲಿ ಅವರು ಬರೋಬ್ಬರಿ 7 ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಬಗ್ಗೆ ಅವರಿಗೆ ಹೆಮ್ಮೆ ಇದೆ.
ಇತ್ತೀಚಿನ ವರ್ಷಗಳಲ್ಲಿ ಹರ್ಷಿಕಾ ಪೂಣಚ್ಚ ಅವರು ಕನ್ನಡದ ಜೊತೆಜೊತೆಗೆ ಭೋಜ್ಪುರಿ ಚಿತ್ರರಂಗದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಅಲ್ಲಿನ ಸ್ಟಾರ್ ನಟರ ಸಿನಿಮಾಗಳಿಗೆ ಅವರು ನಾಯಕಿ ಆಗುತ್ತಿದ್ದಾರೆ. ಹೊಸ ಬಗೆಯ ಪಾತ್ರಗಳನ್ನು ಒಪ್ಪಿಕೊಳ್ಳುತ್ತ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಹರ್ಷಿಕಾ ಅವರನ್ನು ಭೋಜ್ಪುರಿ ಪ್ರೇಕ್ಷಕರು ಮನಸಾರೆ ಸ್ವಾಗತಿಸಿದ್ದಾರೆ. ಇದು ಅವರ ಖುಷಿಗೆ ಕಾರಣ ಆಗಿದೆ.
ಕನ್ನಡದಲ್ಲಿ ಹರ್ಷಿಕಾ ಪೂಣಚ್ಚ ಅವರು ಅನೇಕ ಪ್ರತಿಭಾವಂತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ. ‘ತಮಸ್ಸು’ ಚಿತ್ರದಲ್ಲಿ ಅಗ್ನಿ ಶ್ರೀಧರ್, ‘ರೇ’, ‘ಉದ್ಘರ್ಷ’ ಸಿನಿಮಾದಲ್ಲಿ ಸುನಿಲ್ ಕುಮಾರ್ ದೇಸಾಯಿ, ‘ಜಾಕಿ’ ಸಿನಿಮಾದಲ್ಲಿ ದುನಿಯಾ ಸೂರಿ ಜೊತೆ ಕೆಲಸ ಮಾಡುವ ಅವಕಾಶವನ್ನು ಹರ್ಷಿಕಾ ಪಡೆದುಕೊಂಡರು. ‘ತಮಸ್ಸು’ ಸಿನಿಮಾದಲ್ಲಿನ ನಟನೆಗೆ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದು ಅವರ ಹೆಚ್ಚುಗಾರಿಕೆ. 2010ರಲ್ಲಿ ತೆರೆಕಂಡ ಆ ಸಿನಿಮಾದಲ್ಲಿ ಶಿವರಾಜ್ಕುಮಾರ್ ಮುಖ್ಯಪಾತ್ರ ಮಾಡಿದ್ದರು. ಯಶ್ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ‘ಜಾಕಿ’ ಚಿತ್ರದಲ್ಲಿನ ಪೋಷಕ ಪಾತ್ರಕ್ಕಾಗಿ ಹರ್ಷಿಕಾ ಪೂಣಚ್ಚ ಅವರು ಫಿಲ್ಮ್ಫೇರ್ ಪ್ರಶಸ್ತಿಗೆ ನಾಮಿನೇಟ್ ಆಗಿದ್ದರು.
ಮಲಯಾಳಂನ ‘ಚಾರ್ಮಿನಾರ್’, ತಮಿಳಿನ ‘ಉನ್ ಕಾದಲ್ ಇರುಂದಾಲ್’ ಸಿನಿಮಾದಲ್ಲಿ ಹರ್ಷಿಕಾ ಪೂಣಚ್ಚ ನಟಿಸಿದ್ದಾರೆ. ಎಲ್ಲ ಭಾಷೆಯಲ್ಲೂ ಅಭಿಮಾನಿಗಳನ್ನು ಹೊಂದಿರುವ ಅವರು ಸೋಶಿಯಲ್ ಮಿಡಿಯಾದಲ್ಲೂ ಆ್ಯಕ್ಟೀವ್ ಆಗಿದ್ದಾರೆ. ಆ ಮೂಲಕ ಅಭಿಮಾನಿಗಳ ಜೊತೆ ಅವರು ಸಂಪರ್ಕದಲ್ಲಿ ಇರುತ್ತಾರೆ. ಪ್ರವಾಸದ ಬಗ್ಗೆ ಹರ್ಷಿಕಾ ಅವರಿಗೆ ಹೆಚ್ಚು ಆಸಕ್ತಿ ಇದೆ. ಸಿನಿಮಾ ಕೆಲಸಗಳ ಬಿಡುವಿನಲ್ಲಿ ಅವರು ವಿದೇಶ ಪ್ರವಾಸಕ್ಕೆ ತೆರಳುತ್ತಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ:
ತಂದೆ-ಮಗಳ ಪಾತ್ರದಲ್ಲಿ ರಾಘಣ್ಣ-ಹರ್ಷಿಕಾ ಪೂಣಚ್ಚ; ಇಲ್ಲಿದೆ ‘ಸ್ತಬ್ಧ’ ಫೋಟೋ ಗ್ಯಾಲರಿ
ಕೊರೊನಾ ಹೊಸ ರೂಪಾಂತರ: ಲಂಡನ್ನಲ್ಲಿ ಶೂಟಿಂಗ್ ಮುಗಿಸಿ ಬಂದಿರೋ ನಟಿ ಹರ್ಷಿಕಾ ಪೂಣಚ್ಚ ಹೇಳಿದ್ದೇನು?
Published On - 9:24 am, Sun, 1 May 22