‘ಸಪ್ತ ಸಾಗರ ದಾಟಿ’ ದೊಡ್ಮನೆ ತಲುಪಿದ ಹೇಮಂತ್ ರಾವ್: ಶಿವಣ್ಣನೊಟ್ಟಿಗೆ ಸಿನಿಮಾ
Shiva Rajkumar: ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಮೂಲಕ ಹೊಸ ಅಲೆ ಎಬ್ಬಿಸಿರುವ ನಿರ್ದೇಶಕ ಹೇಮಂತ್ ರಾವ್, ಶಿವರಾಜ್ ಕುಮಾರ್ ಅವರಿಗಾಗಿ ಸಿನಿಮಾ ಮಾಡಲಿದ್ದಾರೆ.
‘ಸಪ್ತ ಸಾಗರದಾಚೆ ಎಲ್ಲೋ’ (Sapta Sagaradache Ello) ಸಿನಿಮಾ ಮೂಲಕ ರಾಷ್ಟ್ರಮಟ್ಟದಲ್ಲಿ ಹವಾ ಎಬ್ಬಿಸಿರುವ ನಿರ್ದೇಶಕ ಹೇಮಂತ್ ರಾವ್ಗೆ ಈಗ ಅವರದ್ದೇ ಆದ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಸಿನಿ ಪ್ರೇಮಿಗಳು ಫಿದಾ ಆಗುವ ರೀತಿ ಮನು-ಪ್ರಿಯಾ-ಸುರಭಿಯ ಪ್ರೇಮಕತೆಯನ್ನು ಹೇಮಂತ್ ರಾವ್ ಕಟ್ಟಿಕೊಟ್ಟಿದ್ದಾರೆ. ಹೇಮಂತ್ ರಾವ್ರ ಮುಂದಿನ ಸಿನಿಮಾ ಯಾವುದಾಗಿರಬಹುದು ಎಂಬ ಕುತೂಹಲ ಸಿನಿಮಾ ಪ್ರೇಮಿಗಳಲ್ಲಿ ಮೂಡಿದೆ. ಅದಕ್ಕೆ ಉತ್ತರವೂ ಇದೀಗ ದೊರೆತಿದೆ.
ಕೆಲ ದಿನಗಳ ಹಿಂದಷ್ಟೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಹೇಮಂತ್ ರಾವ್, ‘ರೊಮ್ಯಾಂಟಿಕ್ ಅಥವಾ ಲವ್ ಸ್ಟೋರಿ ಸಿನಿಮಾಗಳಿಂದ ತುಸು ದೂರ ಹೋಗಲಿದ್ದೇನೆ’ ಎಂಬರ್ಥದ ಮಾತುಗಳನ್ನಾಡಿದ್ದರು. ಅದರ ಬೆನ್ನಲ್ಲೆ ಈಗ ಹೇಮಂತ್ ರಾವ್, ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ಅವರೊಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ: ‘ಸಪ್ತ ಸಾಗರದಾಚೆ ಎಲ್ಲೋ’ ನಿರ್ದೇಶಕ ಹೇಮಂತ್ ರಾವ್ ಅವರಲ್ಲಿ ರಕ್ಷಿತ್ಗೆ ಇಷ್ಟವಾಗಿದ್ದೇನು?
ಹೇಮಂತ್ ರಾವ್, ಶಿವಣ್ಣನಿಗೆ ಈಗಾಗಲೇ ಕತೆ ಹೇಳಿದ್ದು, ಸಿನಿಮಾ ಮಾಡಲು ಒಪ್ಪಿಗೆ ಸಹ ಸೂಚಿಸಲಾಗಿದೆ. ಆದಷ್ಟು ಶೀಘ್ರವೇ ಹೇಮಂತ್ ರಾವ್ ಹಾಗೂ ಶಿವರಾಜ್ ಕುಮಾರ್ ಸಿನಿಮಾ ಸೆಟ್ಟೇರಲಿದೆ. 2023ರ ಅಂತ್ಯದಲ್ಲಿ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಹೇಮಂತ್ ರಾವ್, ತಮಗೆ ಆಕ್ಷನ್ ಸಿನಿಮಾಗಳು ಇಷ್ಟವೆಂದು, ಶಿವಣ್ಣ ತಮ್ಮ ನೆಚ್ಚಿನ ಹೀರೋ ಎಂದು. ಇತ್ತೀಚೆಗೆ ತಾವು ನೋಡಿದ ಸಿನಿಮಾಗಳಲ್ಲಿ ‘ಜೈಲರ್’ನಲ್ಲಿ ಶಿವಣ್ಣ ನಡೆದುಕೊಂಡ ಬಂದ ರೀತಿ ಸಖತ್ ಇಷ್ಟವಾಯ್ತೆಂದು ಹೇಳಿಕೊಂಡಿದ್ದರು. ಅದಾದ ಕೆಲವೇ ದಿನಗಳಲ್ಲಿ ಇದೀಗ ಶಿವಣ್ಣನೊಟ್ಟಿಗೆ ಹೇಮಂತ್ ಸಿನಿಮಾ ಮಾಡುತ್ತಿದ್ದಾರೆ.
ಶಿವರಾಜ್ ಕುಮಾರ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಒಟ್ಟೊಟ್ಟಿಗೆ ನಟಿಸುತ್ತಿದ್ದಾರೆ. ‘ಭೈರತಿ ರಣಗಲ್’ ಬಿಡುಗಡೆಗೆ ರೆಡಿಯಾಗುತ್ತಿದೆ. ‘ಕರಟಕ-ಧಮನಕ’ ಬಿಡುಗಡೆ ದಿನಾಂಕ ಘೋಷಣೆ ಆಗಲಿದೆ. ದಿನಕರ್ ತೂಗುದೀಪ ಜೊತೆಗೆ ಸಿನಿಮಾ ಘೋಷಣೆ ಆಗಿದೆ. ‘ಘೋಸ್ಟ್ 2’ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಒಂದು ತೆಲುಗು ಹಾಗೂ ಒಂದು ತಮಿಳು ಸಿನಿಮಾಗಳಲ್ಲಿ ನಟಿಸಲಿದ್ದಾರೆ. ರಾಮ್ ಚರಣ್ ಜೊತೆಗೆ ಒಂದು ಸಿನಿಮಾದಲ್ಲಿ ನಟಿಸಲಿದ್ದಾರೆ. ಇದೆಲ್ಲದರ ನಡುವೆ ಹೇಮಂತ್ ರಾವ್ ಜೊತೆ ಸಿನಿಮಾ ಮಾಡಲಿದ್ದಾರೆ ಶಿವರಾಜ್ ಕುಮಾರ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ