ಕಣದಲ್ಲಿದ್ದ ಸಿನಿಮಾ ಮಂದಿಯ ಫಲಿತಾಂಶ ಏನಾಯ್ತು: ಗೆದ್ದವರ್ಯಾರು? ಸೋತವರ್ಯಾರು?

|

Updated on: May 13, 2023 | 4:25 PM

Karnataka Assembly Elections 2023: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕೆಲವು ಚಿತ್ರಗತ್ತಿನ ಮಂದಿ ಕಣಕ್ಕೆ ಇಳಿದಿದ್ದರು. ಯಾರ ಫಲಿತಾಂಶ ಏನಾಯ್ತು? ಇಲ್ಲಿದೆ ಮಾಹಿತಿ.

ಕಣದಲ್ಲಿದ್ದ ಸಿನಿಮಾ ಮಂದಿಯ ಫಲಿತಾಂಶ ಏನಾಯ್ತು: ಗೆದ್ದವರ್ಯಾರು? ಸೋತವರ್ಯಾರು?
ಚುನಾವಣೆ
Follow us on

ಕರ್ನಾಟಕ ವಿಧಾನಸಭೆ ಚುನಾವಣೆ 2023ರ (Karnataka Assembly Election 2023) ಫಲಿತಾಂಶ ಬಹುತೇಕ ಹೊರಬಿದ್ದಿದೆ. ಕಾಂಗ್ರೆಸ್​ಗೆ (Congress) ನಿಚ್ಚಳ ಬಹುಮತ ದೊರೆತಿದೆ. ಬಿಜೆಪಿಯನ್ನು (BJP) ಜನ ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಈ ಬಾರಿ ಸಿನಿಮಾ ಮಂದಿ ತುಸು ಸಕ್ರಿಯವಾಗಿ ಚುನಾವಣೆಯಲ್ಲಿ ಭಾಗವಹಿಸಿದ್ದರು. ಅದರಲ್ಲಿಯೂ ಹಲವು ಸಿನಿಮಾ ತಾರೆಯರು ವಿವಿಧ ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದರು. ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದ ಕೆಲವರು ಚುನಾವಣಾ ಕಣಕ್ಕೂ ಇಳಿದಿದ್ದರು. ಅಂಥಹವರಲ್ಲಿ ಗೆದ್ದವರ್ಯಾರು? ಸೋತವರ್ಯಾರು? ಇಲ್ಲಿದೆ ಪಟ್ಟಿ.

ನಿಖಿಲ್ ಕುಮಾರಸ್ವಾಮಿ
ನಟರಾಗಿ ಜನಪ್ರಿಯತೆ ಗಳಿಸಿ ಬಳಿಕ ಚುನಾವಣಾ ಕಣಕ್ಕೆ ಧುಮುಕಿದ್ದ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ರಾಮನಗರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಆದರೆ ಅವರು ಕಾಂಗ್ರೆಸ್​ನ ಇಕ್ಬಾಲ್ ಹುಸೇನ್​ ಎದುರು ಸುಮಾರು 10 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರಿಗೆ ಇದು ಎರಡನೇ ನಿರಾಸೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಸುಮಲತಾ ಅಂಬರೀಶ್ ಎದುರು ಸೋಲನುಭವಿಸಿದ್ದರು ನಿಖಿಲ್.

ಬಿಸಿ ಪಾಟೀಲ್
ನಟರಾಗಿದ್ದ ಬಿ.ಸಿ.ಪಾಟೀಲ್ ಫುಲ್​ಟೈಮ್ ರಾಜಕಾರಣಿಯಾಗಿರುವವರು. ಬೊಮ್ಮಾಯಿ ಸರ್ಕಾರದಲ್ಲಿ ಸಚಿವರಾಗಿದ್ದ ಬಿ.ಸಿ.ಪಾಟೀಲ್ ಈ ಬಾರಿ ಹಿರೇಕೆರೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೋಲನುಭವಿಸಿದ್ದಾರೆ.

ಮಧು ಬಂಗಾರಪ್ಪ
ನಟ, ನಿರ್ಮಾಪಕರಾಗಿ ಚಿತ್ರರಂಗ ಪ್ರವೇಶಿಸಿ 2016 ರ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದ ಮಧು ಬಂಗಾರಪ್ಪ ಅವರು ಈ ಬಾರಿ ಸೊರಬ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಅವರಿಗೆ ಜಯ ಒಲಿದಿದೆ. ತಮ್ಮ ಸಹೋದರನ ವಿರುದ್ಧವೇ ದೊಡ್ಡ ಅಂತರದಲ್ಲಿ ಮಧು ಗೆಲುವು ಸಾಧಿಸಿದ್ದಾರೆ. ಇವರ ಪರವಾಗಿ ಶಿವರಾಜ್ ಕುಮಾರ್ ಪ್ರಚಾರ ನಡೆಸಿದ್ದರು. ಇವರು, ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರ ಸಹೋದರ ಸಹ.

ಕುಮಾರ ಬಂಗಾರಪ್ಪ
ಶರವೇಗದ ಸರದಾರ, ಅಶ್ವಮೇಧ, ಬೆಳ್ಳಿಯಪ್ಪ-ಬಂಗಾರಪ್ಪ, ರಕ್ತಕಣ್ಣೀರು ಸೇರಿದಂತೆ ಇನ್ನೂ ಹಲವು ಕನ್ನಡ ಸಿನಮಾಗಳಲ್ಲಿ ನಾಯಕ ನಟನಾಗಿ, ಪೋಷಕ ನಟನಾಗಿ ನಟಿಸಿರುವ ಕುಮಾರ ಬಂಗಾರಪ್ಪ ಬಿಜೆಪಿ ಅಭ್ಯರ್ಥಿಯಾಗಿ ಸೊರಬ ಕ್ಷೇತ್ರದಿಂದ ಸ್ಪರ್ಧಿಸಿ ತಮ್ಮ ಸಹೋದರ ಮಧು ಬಂಗಾರಪ್ಪ ವಿರುದ್ಧ ಸೋಲುಂಡಿದ್ದಾರೆ. ಕಳೆದ ಬಾರಿ ಇದೇ ಕ್ಷೇತ್ರದಿಂದ ಗೆದ್ದಿದ್ದರು ಕುಮಾರ್ ಬಂಗಾರಪ್ಪ.

ಮುನಿರತ್ನ
ನಿರ್ಮಾಪಕ ಮುನಿರತ್ನ ರಾಜರಾಜೇಶ್ವರಿ ನಗರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಎದುರಾಳಿ ಕುಸುಮಾ ರವಿ ವಿರುದ್ಧ ಪ್ರಯಾಸದ ಗೆಲುವು ಸಾಧಿಸಿದ್ದಾರೆ. ಈ ಹಿಂದೆ ಕಾಂಗ್ರೆಸ್​ನಲ್ಲಿದ್ದ ಮುನಿರತ್ನ ಬಿಜೆಪಿ ಸೇರ್ಪಡೆಗೊಂಡಿದ್ದರು.

ಉಮಾಪತಿ ಶ್ರೀನಿವಾಸ್ ಗೌಡ
ಕನ್ನಡದಲ್ಲಿ ಕೆಲವಾರು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಈಗಲೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಅವರು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಎದುರಾಳಿ ಬಿಜೆಪಿಯ ಸತೀಶ್ ರೆಡ್ಡಿಗೆ ಕಠಿಣ ಸ್ಪರ್ಧೆಯೊಡ್ಡೆ ಸೋತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ