Rajkumar Birthday: ಕೇವಲ ಮೂರನೇ ಕ್ಲಾಸ್ ಓದಿದ್ದ ರಾಜ್​ಕುಮಾರ್ ಇಂಗ್ಲಿಷ್ ಕಲಿತಿದ್ದು ಹೇಗೆ? ಇಲ್ಲಿದೆ ಅಚ್ಚರಿಯ ವಿಚಾರ

| Updated By: ರಾಜೇಶ್ ದುಗ್ಗುಮನೆ

Updated on: Apr 24, 2022 | 6:00 AM

ರಾಜ್​ಕುಮಾರ್ ಅವರು ಹಠವಾದಿ. ಯಾವುದಾದರೂ ವಿಚಾರವನ್ನು ಕಲಿಯಬೇಕು ಅಥವಾ ಮಾಡಬೇಕು ಎಂದರೆ ಅದನ್ನು ಮಾಡಿಯೇ ಮಾಡುತ್ತಿದ್ದರು. ಹೊಸ ವಿಚಾರ ಕಲಿಯಬೇಕು ಎಂದರೆ ಅವರು ಎಂದಿಗೂ ಹಿಂದೇಟು ಹಾಕಿದವರಲ್ಲ.

Rajkumar Birthday: ಕೇವಲ ಮೂರನೇ ಕ್ಲಾಸ್ ಓದಿದ್ದ ರಾಜ್​ಕುಮಾರ್ ಇಂಗ್ಲಿಷ್ ಕಲಿತಿದ್ದು ಹೇಗೆ? ಇಲ್ಲಿದೆ ಅಚ್ಚರಿಯ ವಿಚಾರ
ರಾಜ್​ಕುಮಾರ್
Follow us on

ರಾಜ್​ಕುಮಾರ್ ಅವರು (Rajkumar) ಭಾರತ ಚಿತ್ರರಂಗ ಕಂಡ ಶ್ರೇಷ್ಠ ನಟ. ಇಂದು (ಏಪ್ರಿಲ್ 24) ಅವರ ಜನ್ಮದಿನ (Rajkumar Birthday). ಅವರಿಲ್ಲದೆ 16 ವರ್ಷಗಳು ಕಳೆದು ಹೋಗಿವೆ. ರಾಜ್​ಕುಮಾರ್ ಜನ್ಮದಿನವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಮಾಡುವ ಮೂಲಕ ಅಣ್ಣಾವ್ರ ಹುಟ್ಟು ಹಬ್ಬಕ್ಕೆ ಒಂದು ಅರ್ಥ ನೀಡಿದ್ದಾರೆ. ರಾಜ್​ಕುಮಾರ್ ಅವರ ಜೀವನ ಒಂದು ಅಚ್ಚರಿಗಳ ಗೂಡು. ಅವರು ಮಾಡಿದ ಸಾಧನೆ ಅಂತಿಂಥದ್ದಲ್ಲ. ದೊಡ್ಡ ಸ್ಟಾರ್​ಗಿರಿ ಇದ್ದರೂ ಅವರು ಸಾಮಾನ್ಯರಂತೆ ಬದುಕಿ ತೋರಿಸಿದ್ದಾರೆ. ಅವರು ಇಂಗ್ಲಿಷ್ (English) ಕಲಿತಿದ್ದು ಕೂಡ ಒಂದು ಅಚ್ಚರಿಯ ವಿಚಾರವೇ.

ರಾಜ್​ಕುಮಾರ್ ಅವರು ಹಠವಾದಿ. ಯಾವುದಾದರೂ ವಿಚಾರವನ್ನು ಕಲಿಯಬೇಕು ಅಥವಾ ಮಾಡಬೇಕು ಎಂದರೆ ಅದನ್ನು ಮಾಡಿಯೇ ಮಾಡುತ್ತಿದ್ದರು. ಹೊಸ ವಿಚಾರ ಕಲಿಯಬೇಕು ಎಂದರೆ ಅವರು ಎಂದಿಗೂ ಹಿಂದೇಟು ಹಾಕಿದವರಲ್ಲ. ಅವರು ಇಂಗ್ಲಿಷ್ ಕಲಿತಿದ್ದು ಒಂದು ಅಚ್ಚರಿಯ ಘಟನೆ. ರಾಜ್​ಕುಮಾರ್ ಓದಿದ್ದು 3ನೇ ತರಗತಿ. ಆ ಬಳಿಕ ಶಿಕ್ಷಣ ಪಡೆಯಲಿಲ್ಲ. ಆದರೆ, ಸಿನಿಮಾದಲ್ಲಿ ಬರುವ ಇಂಗ್ಲಿಷ್ ಡೈಲಾಗ್​ಗಳನ್ನು ನಿರರ್ಗಳವಾಗಿ ಹೇಳುತ್ತಿದ್ದರು. ಇದು ಹೇಗೆ ಎನ್ನುವ ವಿಚಾರವನ್ನು ಹಿರಿಯ ನಟ ಬೆಂಗಳೂರು ನಾಗೇಶ್​ ಅವರು ವಿವರಿಸಿದ್ದಾರೆ.

ನಾಗೇಶ್ ಹಾಗೂ ರಾಜ್​ಕುಮಾರ್ ಅವರ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ರಾಜ್​ಕುಮಾರ್ ಅವರನ್ನು ತುಂಬಾನೇ ಹತ್ತಿರದಿಂದ ಕಂಡವರಲ್ಲಿ ನಾಗೇಶ್ ಕೂಡ ಒಬ್ಬರು. ಅವರು ರಾಜ್​ಕುಮಾರ್​ಗೆ ಇಂಗ್ಲಿಷ್ ಕಲಿಸಿದ ಬಗ್ಗೆ ಹೇಳಿಕೊಂಡಿದ್ದಾರೆ.

‘ನಾನು ಎಜುಕೇಡೆಟ್​ ಆಗಿದ್ದರಿಂದ ಅಣ್ಣಾವ್ರಿಗೆ ನನ್ನನ್ನು ಕಂಡರೆ ಬಹಳ ಇಷ್ಟ. ಶೂಟಿಂಗ್​ ಇಲ್ಲದಿರುವ ದಿನಗಳಲ್ಲಿ ನಾನು ಅವರ ಮನೆಗೆ ತೆರಳುತ್ತಿದ್ದೆ. ಸಂಜೆ ಅವರ ಜೊತೆ ವಾಕಿಂಗ್​ ಹೋಗುತ್ತಿದ್ದೆ. ಅಣ್ಣಾ ನೀವು ಇಂಗ್ಲಿಷ್​ನಲ್ಲಿ ಮಾತನಾಡಬೇಕು ಅಂತ ಅವರಿಗೆ ಒಂದು ದಿನ ಹೇಳಿದೆ. ಮೂರನೇ ಕ್ಲಾಸ್​ ಓದಿದವನಿಗೆ ಇಂಗ್ಲಿಷ್​ ಎಲ್ಲಿ ಬರುತ್ತದೆ ಅಂತ ಅವರು ಹೇಳಿದರು. ಪ್ರತಿ ದಿನ ಎರಡೆರಡೇ ವಾಕ್ಯ ಹೇಳಿಕೊಡಲು ಶುರುಮಾಡಿದೆ. ಹೀಗೆ ಎಷ್ಟೋ ದಿನಗಳ ಕಾಲ ನಡೆಯಿತು. ಎಲ್ಲವನ್ನೂ ಪರ್ಫೆಕ್ಟ್​ ಆಗಿ ಅವರು ಕಲಿತರು. ಅವರ ಜೊತೆಗಿನ ಒಡನಾಟ ನನ್ನ ಭಾಗ್ಯ ಎಂದೇ ಹೇಳಬೇಕು’ ಎನ್ನುತ್ತಾರೆ ಬೆಂಗಳೂರು ನಾಗೇಶ್​.

ಇದನ್ನೂ ಓದಿ: Dr Rajkumar: ಡಾ. ರಾಜ್​ಕುಮಾರ್​ ಪುಣ್ಯ ಸ್ಮರಣೆ; ಅಣ್ಣಾವ್ರು ಭೌತಿಕವಾಗಿ ಇಲ್ಲದೇ ಕಳೆಯಿತು 16 ವರ್ಷಗಳು 

 ರಾಜ್​ಕುಮಾರ್ ಕೊಟ್ಟ ಆದರ್ಶಗಳನ್ನು ಚಾಚೂತಪ್ಪದೆ ಪಾಲಿಸುತ್ತಿದ್ದಾರೆ ಮಕ್ಕಳು; ವಿಶೇಷ ಮಾಹಿತಿ ಬಿಚ್ಚಿಟ್ಟ ಪ್ರಥಮ್