ರಾಜ್ ಪುಣ್ಯಸ್ಮರಣೆ: ರಾಜ್ಕುಮಾರ್ ಕೊಟ್ಟ ಆದರ್ಶಗಳನ್ನು ಚಾಚೂತಪ್ಪದೆ ಪಾಲಿಸುತ್ತಿದ್ದಾರೆ ಮಕ್ಕಳು; ವಿಶೇಷ ಮಾಹಿತಿ ಬಿಚ್ಚಿಟ್ಟ ಪ್ರಥಮ್
ರಾಘವೇಂದ್ರ ರಾಜ್ಕುಮಾರ್ ಅವರನ್ನು ಹತ್ತಿರದಿಂದ ಕಂಡ ‘ಬಿಗ್ ಬಾಸ್’ ವಿನ್ನರ್, ನಟ, ನಿರ್ದೇಶಕ ಪ್ರಥಮ್ ಅವರು ಟಿವಿ9 ಕನ್ನಡ ಡಿಜಿಟಲ್ ಜತೆ ಮಾತನಾಡಿದ್ದಾರೆ. ರಾಜ್ಕುಮಾರ್ ಆದರ್ಶಗಳ ಬಗ್ಗೆ ರಾಜ್ ಫ್ಯಾಮಿಲಿ ಮಾತನಾಡಿದ್ದನ್ನು ಅವರು ವಿವರಿಸಿದ್ದಾರೆ.
ರಾಜ್ಕುಮಾರ್ (Rajkumar) ಅವರು 2006ರ ಏಪ್ರಿಲ್ 12ರಂದು ನಿಧನ ಹೊಂದಿದರು. ಇಂದು ಅವರ 16ನೇ ಪುಣ್ಯತಿಥಿ (Rajkumar Death Anniversary). ರಾಜ್ಕುಮಾರ್ ಭೌತಿಕವಾಗಿ ನಮ್ಮ ಜತೆ ಇಲ್ಲದಿದ್ದರೂ ಅವರು ಹಾಕಿಕೊಟ್ಟ ಆದರ್ಶಗಳು ಇಂದಿಗೂ ಜೀವಂತ. ಅವರ ಚಿತ್ರಗಳಲ್ಲಿರುವ ಆದರ್ಶಗಳನ್ನು ಅಳವಡಿಸಿಕೊಂಡರೆ ಸಾಕು, ನಮ್ಮ ಜೀವನದ ದಿಕ್ಕು ಬದಲಾಗುತ್ತದೆ. ತೆರೆಮೇಲೆ ಮಾತ್ರವಲ್ಲ, ತೆರೆ ಹಿಂದೆಯೂ ಆದರ್ಶಯುತ ವ್ಯಕ್ತಿಯಾಗಿ ಬದುಕಿದ್ದರು ರಾಜ್ಕುಮಾರ್. ಅವರ ಇಡೀ ಕುಟುಂಬ ಇಂದಿಗೂ ಈ ಆದರ್ಶಗಳನ್ನು ಪಾಲಿಸಿಕೊಂಡು ಹೋಗುತ್ತಿದ್ದಾರೆ. ರಾಜ್ಕುಮಾರ್ ಮಗ ರಾಘವೇಂದ್ರ ರಾಜ್ಕುಮಾರ್ ಅವರನ್ನು ಹತ್ತಿರದಿಂದ ಕಂಡ ‘ಬಿಗ್ ಬಾಸ್’ ವಿನ್ನರ್, ನಟ, ನಿರ್ದೇಶಕ ಪ್ರಥಮ್ (Pratham) ಅವರು ಟಿವಿ9 ಕನ್ನಡ ಡಿಜಿಟಲ್ ಜತೆ ಮಾತನಾಡಿದ್ದಾರೆ. ರಾಜ್ಕುಮಾರ್ ಆದರ್ಶಗಳ ಬಗ್ಗೆ ರಾಜ್ ಫ್ಯಾಮಿಲಿ ಮಾತನಾಡಿದ್ದನ್ನು ಅವರು ವಿವರಿಸಿದ್ದಾರೆ.
ಕಥೆ ಗಟ್ಟಿ ಇದ್ದರೆ ಸಿನಿಮಾ
ಪ್ರಥಮ್ ಅವರು ‘ಕರ್ನಾಟಕದ ಅಳಿಯ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ರಾಘವೇಂದ್ರ ರಾಜ್ಕುಮಾರ್ ನಟಿಸುತ್ತಿದ್ದಾರೆ. ರಾಘವೇಂದ್ರ ರಾಜ್ಕುಮಾರ್ ಈ ಚಿತ್ರ ಒಪ್ಪಿಕೊಳ್ಳೋಕೆ ಕಾರಣ ಸಿನಿಮಾದ ಕಥೆ. ಸಿನಿಮಾದ ಸ್ಟೋರಿ ಚೆನ್ನಾಗಿದ್ದರೆ ಅವರು ಸಿನಿಮಾ ಒಪ್ಪಿಕೊಳ್ಳುತ್ತಾರೆ. ರಾಘವೇಂದ್ರ ರಾಜ್ಕುಮಾರ್ ಈ ವಿಚಾರವನ್ನು ಕಲಿತಿದ್ದು ರಾಜ್ಕುಮಾರ್ ಅವರಿಂದ. ‘ಸಿನಿಮಾದವರಿಗಾಗಿ ಬಾಗಿಲು ಯವಾಗಲೂ ತೆಗೆದಿರುತ್ತದೆ. ಕಥೆ ಗಟ್ಟಿ ಇದ್ದರೆ ನಾನು ಖಂಡಿತವಾಗಿಯೂ ಸಿನಿಮಾ ಮಾಡುತ್ತೇನೆ. ನಮ್ಮ ಅಪ್ಪಾಜಿ ಹಾಕಿಕೊಂಡ ಪ್ರಿನ್ಸಿಪಲ್ ಇದು. ನಮ್ಮ ತಂದೆ ಕೂಡ ಇದನ್ನೇ ಫಾಲೋ ಮಾಡ್ತಿದ್ರು’ ಎಂದು ರಾಘವೇಂದ್ರ ರಾಜ್ಕುಮಾರ್ ಹೇಳಿದ್ದರು ಎಂದು ಪ್ರಥಮ್ ಮಾಹಿತಿ ಹಂಚಿಕೊಂಡಿದ್ದಾರೆ.
ಸಾಂಗ್ ಹಾಡೋಕೆ ಇದೆ ಕಾರಣ
ಪುನೀತ್ ರಾಜ್ಕುಮಾರ್ ಅವರು ಹಲವು ಹಾಡುಗಳನ್ನು ಹಾಡಿದ್ದಾರೆ. ಅವರು ಸಿನಿಮಾದ ಹಾಡುಗಳನ್ನು ಹಾಡೋಕೆ ಕಾರಣ ರಾಜ್ಕುಮಾರ್. ಈ ವಿಚಾರವನ್ನು ಪುನೀತ್ ಅವರು ಪ್ರಥಮ್ ಬಳಿ ಹೇಳಿಕೊಂಡಿದ್ದರು. ‘ನನ್ನ ಜತೆ ಕೆಲಸ ಮಾಡಬೇಕು ಎಂದು ಅನೇಕರಿಗೆ ಆಸೆ ಇರುತ್ತದೆ. ಆದರೆ, ಅದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಹೀಗಾಗಿ, ಯಾರಾದರೂ ಸಾಂಗ್ ಹಾಡ್ತೀರಾ ಎಂದು ಕೇಳಿದಾಗ ಟ್ಯೂನ್ ಸ್ವಲ್ಪ ಇಷ್ಟ ಆದರೆ ಸಾಕು ಹಾಡಿ ಕೊಡ್ತೀನಿ. ಹೊಸಬರ ಜತೆ ಕೆಲಸ ಮಾಡಿದ ಖುಷಿ ಸಿಗುತ್ತದೆ. ಅವರಿಗೆ ನಮ್ಮ ಜತೆ ಕೆಲಸ ಮಾಡಿದ ಸಂತಸ ಸಿಗುತ್ತದೆ. ಇದು ನಮ್ಮ ತಂದೆ ಹೇಳಿಕೊಟ್ಟಿದ್ದು’ ಎಂದು ಪುನೀತ್ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ ಪ್ರಥಮ್.
ನಿರ್ಮಾಪಕರಿಗೆ ಆಗಲ್ಲ ಭಾರ
ಕೆಲ ಹೀರೋ/ಹೀರೋಯಿನ್ಗಳು ಸೆಟ್ಗೆ ಬರುತ್ತಾರೆ ಎಂದರೆ ಅವರ ಜತೆಗೆ ಒಂದಷ್ಟು ಮಂದಿ ಸಹಾಯಕರು ಬರುತ್ತಾರೆ. ಆದರೆ, ರಾಜ್ಕುಮಾರ್ ಕುಟುಂಬದಲ್ಲಿ ಆ ರೀತಿ ಇಲ್ಲ ಅನ್ನುತ್ತಾರೆ ಪ್ರಥಮ್. ‘ಕರ್ನಾಟಕದ ಅಳಿಯ’ ಸಿನಿಮಾ ಶೂಟಿಂಗ್ ವೇಳೆ ಈ ವಿಚಾರ ಅವರಿಗೆ ಮನವರಿಕೆ ಆಗಿದೆ. ‘ರಾಘಣ್ಣ ಅವರು ಸೆಟ್ಗೆ ಬಂದಿದ್ದರು. ಈ ವೇಳೆ ಅವರು ಕಾರು ಚಾಲಕ ಮಾತ್ರ ಇದ್ದರು. ನಾನು ಅಚ್ಚರಿಪಟ್ಟೆ’ ಎಂದಿದ್ದಾರೆ ಪ್ರಥಮ್. ‘ನಾನು ಶೂಟಿಂಗ್ಗೆ ಬರುವಾಗ ಕಾರು ಚಾಲಕನ ಜತೆ ಮಾತ್ರ ಬರುತ್ತೇನೆ. ಅವರನ್ನು ನಾನು ಮನೆಯ ಸದಸ್ಯರಂತೆ ನೋಡುತ್ತೇನೆ. ನಿರ್ಮಾಪಕರಿಗೆ ಹೊರೆ ಆಗೋಕೆ ನಮಗೆ ಇಷ್ಟ ಇಲ್ಲ. ಇದು ನಾನು ತಂದೆಯಿಂದ ಕಲಿತ ವಿಚಾರ’ ಎಂದು ರಾಘವೇಂದ್ರ ರಾಜ್ಕುಮಾರ್ ಹಂಚಿಕೊಂಡ ಮಾಹಿತಿಯನ್ನು ನಮ್ಮ ಮುಂದಿಟ್ಟರು ಪ್ರಥಮ್.
ಸಮಯ ಪಾಲನೆ
ರಾಜ್ಕುಮಾರ್ ಅವರು ಸಮಯ ಪಾಲನೆಗೆ ಹೆಚ್ಚು ಮಹತ್ವ ನೀಡುತ್ತಿದ್ದರು. ರಾಜ್ ಕುಟುಂಬ ಕೂಡ ಇದನ್ನು ಅಳವಡಿಸಿಕೊಂಡಿದೆ. ‘ಶೂಟ್ ಟೈಮಿಂಗ್ ಹೇಳಿದರೆ ಸಾಕು. ಹೇಳಿದ ಸಮಯಕ್ಕೂ 10 ನಿಮಿಷ ಮೊದಲು ರಾಘವೇಂದ್ರ ರಾಜ್ಕುಮಾರ್ ಅವರು ಮೇಕಪ್ ಹಾಕಿ ಸೆಟ್ನಲ್ಲಿ ಬಂದು ನಿಲ್ಲುತ್ತಿದ್ದರು. ಈ ವಿಚಾರವನ್ನು ರಾಘಣ್ಣ ಅವರು ತಂದೆಯಿಂದ ಕಲಿತಿದ್ದಾರೆ’ ಎನ್ನುತ್ತಾರೆ ಪ್ರಥಮ್.
ಇದನ್ನೂ ಓದಿ: ಪುನೀತ್, ಡಾ. ರಾಜ್ ಬಗ್ಗೆ ಶ್ರುತಿಗೆ ಇದ್ದ 2 ಆಸೆ ಈಡೇರಲೇ ಇಲ್ಲ; ‘ದ್ವಿತ್ವ’ ಬಗ್ಗೆ ಮಾತಾಡಿದ ನಟಿ
ಪುನೀತ್ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ ಟಾಲಿವುಡ್ ಹಾಸ್ಯ ನಟ ಬ್ರಹ್ಮಾನಂದಂ, ಅಲಿ