Dr Rajkumar: ಡಾ. ರಾಜ್ಕುಮಾರ್ ಪುಣ್ಯ ಸ್ಮರಣೆ; ಅಣ್ಣಾವ್ರು ಭೌತಿಕವಾಗಿ ಇಲ್ಲದೇ ಕಳೆಯಿತು 16 ವರ್ಷಗಳು
Dr Rajkumar Death Anniversary: ಡಾ. ರಾಜ್ಕುಮಾರ್ ಇಹಲೋಕ ತ್ಯಜಿಸಿ 16 ವರ್ಷ ಕಳೆದಿದ್ದರೂ ಕೂಡ ಅವರ ಮೇಲೆ ಜನರು ಇಟ್ಟ ಅಭಿಮಾನ ಸ್ವಲ್ಪವೂ ಮಾಸಿಲ್ಲ. ಅಭಿಮಾನಿಗಳ ಮನದಲ್ಲಿ ಅವರು ಸದಾ ಜೀವಂತ.
ಅದು 2006ರ ಏ.12, ಇಡೀ ಕರುನಾಡು ಕಣ್ಣೀರಿನಲ್ಲಿ ಮುಳುಗಿದ ದಿನ. ಕನ್ನಡ ಚಿತ್ರರಂಗದಲ್ಲಿ ಹಲವು ದಶಕಗಳ ಕಾಲ ಸೂಪರ್ ಸ್ಟಾರ್ ಆಗಿ ಮೆರೆದ ಡಾ. ರಾಜ್ಕುಮಾರ್ (Dr Rajkumar) ಅವರು ಇನ್ನಿಲ್ಲ ಎಂಬ ಸುದ್ದಿ ಕೇಳಿದಾಗ ಅಭಿಮಾನಿಗಳಿಗೆ ದಿಕ್ಕು ತೋಚದಂತಾಗಿತ್ತು. 200ಕ್ಕೂ ಅಧಿಕ ಸಿನಿಮಾಗಳಲ್ಲಿ (Dr Rajkumar Movies) ನಟಿಸಿ, ಒಂದಕ್ಕಿಂತ ಒಂದು ಅತ್ಯಮೂಲ್ಯ ಸಂದೇಶಗಳನ್ನು ಸಮಾಜಕ್ಕೆ ನೀಡಿದ ಮೇರು ನಟನನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿತ್ತು. ಅಭಿಮಾನಿಗಳು ಪ್ರೀತಿಯಿಂದ ಕರೆಯುವ ಅಣ್ಣಾವ್ರು ಇನ್ನಿಲ್ಲವಾಗಿ ಇಂದಿಗೆ 16 ವರ್ಷ ಕಳೆದಿದೆ. ಇಂದು (ಏ.12) ಡಾ. ರಾಜ್ಕುಮಾರ್ ಅವರ ಪುಣ್ಯ ಸ್ಮರಣೆ (Dr Rajkumar Death Anniversary). ಅದರ ಅಂಗವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮೇರುನಟನ ಅಭಿಮಾನಿಗಳೆಲ್ಲರೂ ಅವರನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ಡಾ. ರಾಜ್ ಕುಟುಂಬದವರು ಕಂಠೀರವ ಸ್ಟುಡಿಯೋ ಆವರಣದಲ್ಲಿ ಇರುವ ಸಮಾಧಿಗೆ ಪೂಜೆ ಮಾಡಿ, ಪುಷ್ಪ ನಮನ ಸಲ್ಲಿಸಲಿದ್ದಾರೆ. ನೂರಾರು ಅಭಿಮಾನಿಗಳು ಕೂಡ ಇಂದು ಅಣ್ಣಾವ್ರ ಸಮಾಧಿಗೆ ನಮಿಸಲಿದ್ದಾರೆ. ರಾಜ್ಯದ ನಾನಾ ಕಡೆಗಳಲ್ಲಿ ರಾಜ್ಕುಮಾರ್ ಅವರ 16ನೇ ವರ್ಷದ ಪುಣ್ಯ ಸ್ಮರಣೆಯನ್ನು ಆಚರಿಸಲಾಗುತ್ತಿದೆ. ಅನೇಕ ಬಗೆಯ ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ.
ಅಭಿಮಾನಿಗಳ ಎದೆಯಲ್ಲಿ ಸದಾ ಜೀವಂತ: ಡಾ. ರಾಜ್ಕುಮಾರ್ ಅವರು ಕೇವಲ ಭೌತಿಕವಾಗಿ ಮಾತ್ರ ನಮ್ಮೆಲ್ಲರನ್ನು ಅಗಲಿದ್ದಾರೆ. ಆದರೆ ಸಾಧನೆಗಳ ಮೂಲಕ ಅವರು ಅಭಿಮಾನಿಗಳ ಎದೆಯಲ್ಲಿ ಸದಾ ಜೀವಂತವಾಗಿ ಇರುತ್ತಾರೆ. ಅಣ್ಣಾವ್ರು ಇಲ್ಲದೇ 16 ವರ್ಷ ಕಳೆದಿದ್ದರೂ ಕೂಡ ಅವರ ಮೇಲೆ ಜನರು ಇಟ್ಟ ಅಭಿಮಾನ ಕಿಂಚಿತ್ತೂ ಕಡಿಮೆ ಆಗಿಲ್ಲ. ರಾಜ್ಕುಮಾರ್ ನಟನೆಯ ಸಿನಿಮಾಗಳು ಟಿವಿಯಲ್ಲಿ ಪ್ರಸಾರವಾದರೆ ಇಂದಿಗೂ ಪ್ರೇಕ್ಷಕರು ಕಣ್ಣರಳಿಸಿ ನೋಡುತ್ತಾರೆ. ಅವರ ಸಿನಿಮಾಗಳನ್ನು ನೋಡುತ್ತಲೇ ನಟನೆಯ ಪಾಠಗಳನ್ನು ಕಲಿತವರು ಅನೇಕರಿದ್ದಾರೆ.
ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ: ಭಾರತೀಯ ಚಿತ್ರರಂಗದಲ್ಲಿ ಡಾ. ರಾಜ್ಕುಮಾರ್ ಅವರಂತಹ ಮತ್ತೋರ್ವ ನಟ ಇರಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ತಮ್ಮದೇ ಆದಂತಹ ಛಾಪು ಮೂಡಿಸಿದವರು ಅಣ್ಣಾವ್ರು. ಸಿನಿಮಾಗಳ ಆಯ್ಕೆ ಮತ್ತು ಪಾತ್ರ ಪೋಷಣೆಯಲ್ಲಿ ಅವರಿಗೆ ಸರಿಸಾಟಿ ಯಾರೂ ಇಲ್ಲ. ಸಿನಿಮಾ ಜರ್ನಿಯ ಆರಂಭದಿಂದ ಕೊನೆಯವರೆಗೂ ಬಹುಬೇಡಿಕೆ ನಟನಾಗಿಯೇ ಅವರು ತಮ್ಮ ಚಾರ್ಮ್ ಉಳಿಸಿಕೊಂಡಿದ್ದರು. 1954ರಲ್ಲಿ ಬಂದ ‘ಬೇಡರ ಕಣ್ಣಪ್ಪ’ ಸಿನಿಮಾದಿಂದ 2000ನೇ ಇಸವಿಯಲ್ಲಿ ತೆರೆಕಂಡ ‘ಶಬ್ದವೇಧಿ’ ಚಿತ್ರದವರೆಗೆ ನೂರಾರು ಬಗೆಯ ಪಾತ್ರಗಳಲ್ಲಿ ಅವರ ಅಭಿನಯವನ್ನು ನೋಡುವುದೇ ಚೆಂದ. ಕನ್ನಡ ಎಂದರೆ ಡಾ. ರಾಜ್ಕುಮಾರ್, ಡಾ. ರಾಜ್ಕುಮಾರ್ ಎಂದರೆ ಕನ್ನಡ ಎಂಬಷ್ಟರಮಟ್ಟಿಗೆ ಸ್ಪಷ್ಟವಾಗಿ ಮಾತೃಭಾಷೆ ಮಾತನಾಡುತ್ತಿದ್ದ ಅವರು ಎಲ್ಲರಿಗೂ ಮಾದರಿ.
ದಾಖಲೆಗಳಿಗೆ ಲೆಕ್ಕವಿಲ್ಲ, ಅಭಿಮಾನಕ್ಕೆ ಕೊನೆಯಿಲ್ಲ: 5 ದಶಕಗಳಿಗೂ ಹೆಚ್ಚು ಕಾಲ ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿದ ರಾಜ್ಕುಮಾರ್ ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ಸುದೀರ್ಘ ವೃತ್ತಿಜೀವನದಲ್ಲಿ ಅಣ್ಣಾವ್ರು ಮಾಡಿದ ಸಾಧನೆಗಳಿಗೆ ಲೆಕ್ಕವೇ ಇಲ್ಲ. ಕೇವಲ 3ನೇ ತರಗತಿವರೆಗೆ ಓದಿದ್ದ ಅವರು ನಂತರ ಇಂಗ್ಲಿಷ್ ಕಲಿತು ಡೈಲಾಗ್ ಹೊಡೆದು ಸೈ ಎನಿಸಿಕೊಂಡರು. ಸಿನಿಮಾ ಕ್ಷೇತ್ರದಲ್ಲಿನ ಅವರ ಸಾಧನೆಯನ್ನು ಗುರುತಿಸಿ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿತು. ಸಂಗೀತ ಕಲಿಯದೆಯೂ ಹಾಡುಗಳ ಮೂಲಕ ಕೇಳುಗರ ಹೃದಯ ಗೆದ್ದ ಮಹಾನ್ ಗಾಯಕ ಅವರು. ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ನಾಯಕ ನಟ ನಮ್ಮ ಹೆಮ್ಮೆಯ ಡಾ. ರಾಜ್. ಪದ್ಮ ಭೂಷಣ, ಕೆಂಟುಕಿ ಕರ್ನಲ್, ದಾದಾ ಸಾಹೇಬ್ ಫಾಲ್ಕೆ, ಕರ್ನಾಟಕ ರತ್ನ, ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಫಿಲ್ಮ್ಫೇರ್ ಸೇರಿದಂತೆ ಅವರಿಗೆ ಸಂದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಇಂಥ ಮಹಾನ್ ಸಾಧಕನ ಮೇಲೆ ಜನರು ಇಟ್ಟ ಅಭಿಮಾನಕ್ಕೆ ಕೊನೆಯೇ ಇಲ್ಲ.
ಇದನ್ನೂ ಓದಿ:
ರಾಜ್ಕುಮಾರ್ ಗೌರವ ಡಾಕ್ಟರೇಟ್ ಪಡೆದು 46 ವರ್ಷ ಪೂರ್ಣ; ಕೋಟ್ಯಂತರ ಜನರಿಗೆ ವರನಟ ಸ್ಫೂರ್ತಿ
ಯಾವ ಸ್ಥಿತಿಯಲ್ಲಿದೆ ನೋಡಿ ಡಾ. ರಾಜ್ ಬೆಳೆದ ಮನೆ; ಇದರ ಬಗ್ಗೆ ಪುನೀತ್ ಕಂಡಿದ್ದರು ಕನಸು