Sandalwood: ಸಹನಟರಾಗಿ ಬಂದು ನಾಯಕರಾದ ಕನ್ನಡದ ನಟರುಗಳು ಇವರು
ಲಕ್ಷಾಂತರ ಜನ ನಟರಾಗಲು ಬೆಂಗಳೂರಿಗೆ ಬಂದಿದ್ದಾರೆ. ಗಾಂಧಿ ನಗರದ ಬೀದಿಗಳನ್ನು ಸುತ್ತಿದ್ದಾರೆ. ಆದರೆ ಕಲಾ ಸರಸ್ವತಿ ಆರಿಸಿಕೊಂಡಿದ್ದು ಮಾತ್ರ ಕೆಲವರನ್ನೇ. ಹೀಗೆ ನಟಿಸಲು ಅವಕಾಶ ಅರಸಿ ಬಂದು ಬಳಿಕ ನಾಯಕ ನಟರಾದ ಪ್ರಮುಖ ನಟರ ಪಟ್ಟಿ ಇಲ್ಲಿದೆ.
ಕನ್ನಡ ಚಿತ್ರರಂಗ ಇತ್ತೀಚೆಗಷ್ಟೆ 75 ವರ್ಷಗಳನ್ನು ಪೂರೈಸಿದೆ. ಈ ಸುದೀರ್ಘ ಪಯಣದಲ್ಲಿ ಕನ್ನಡ ಚಿತ್ರರಂಗವು ಹಲವು ಅಪ್ರತಿಮ ನಟ-ನಟಿಯರನ್ನು ಕಂಡಿದೆ. ಚಿತ್ರರಂಗದ ಕೇಂದ್ರವಾಗಿರುವ ಗಾಂಧಿ ನಗರ ಒಂದು ರೀತಿ ಕನಸು ಮಾರುವ ನಗರ. ಲಕ್ಷಾಂತರ ಜನ ಸಿನಿಮಾ ನಟ-ನಟಿಯರಾಗಲು ಬೆಂಗಳೂರಿಗೆ ಬಂದಿದ್ದಾರೆ, ಗಾಂಧಿ ನಗರದ ಬೀದಿಗಳನ್ನು ಸುತ್ತಿದ್ದಾರೆ. ಆದರೆ ಕಲಾ ಸರಸ್ವತಿ ಆರಿಸಿಕೊಂಡಿದ್ದು ಮಾತ್ರ ಕೆಲವರನ್ನೇ. ಹೀಗೆ ನಟಿಸಲು ಅವಕಾಶ ಅರಸಿ ಬಂದು ನಟರಾಗಿ ಬಳಿಕ ನಾಯಕರಾದ ಪ್ರಮುಖ ನಟರ ಪಟ್ಟಿ ಇಲ್ಲಿದೆ.
ಡಾ ರಾಜ್ಕುಮಾರ್
ಕನ್ನಡ ಚಿತ್ರರಂಗವೆಂದರೆ ಮೊದಲು ಬರುವ ಹೆಸರು ಡಾ ರಾಜ್ಕುಮಾರ್ ಅವರದ್ದು. ರಾಜ್ಕುಮಾರ್ ಸಹ ಸಣ್ಣ ಪಾತ್ರದಲ್ಲಿ ನಟಿಸಿ ಬಳಿಕವೇ ನಾಯಕ ನಟರಾಗಿ ಮಿಂಚಿದವರು. ಅವರ ಮೊದಲ ಸಿನಿಮಾ ಬೇಡರ ಕಣ್ಣಪ್ಪ ಅಲ್ಲ. ರಾಜ್ಕುಮಾರ್ ಅವರು ಮೊದಲು ಬಾಲನಟನಾಗಿ ಭಕ್ತ ಕುಂಬಾರ ಸಿನಿಮಾದಲ್ಲಿ ನಟಿಸಿದರು. ಆ ಬಳಿಕ 1952 ರಲ್ಲಿ ಶ್ರೀನಿವಾಸ ಕಲ್ಯಾಣ ಸಿನಿಮಾದಲ್ಲಿ ಬಹಳ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರು. ಅದಾದ ಬಳಿಕ 1954 ರಲ್ಲಿ ಬಿಡುಗಡೆ ಆದ ಬೇಡರ ಕಣ್ಣಪ್ಪ ಸಿನಿಮಾ ಮೂಲಕ ನಾಯಕ ನಟರಾದರು.
ಅಂಬರೀಶ್
ಖ್ಯಾತ ನಟ ಅಂಬರೀಶ್ ಸಹ ಮೊದಲು ಕಾಣಿಸಿಕೊಂಡಿದ್ದು ವಿಲನ್ ಆಗಿ. ಅದೂ ನಾಗರಹಾವು ಸಿನಿಮಾದಲ್ಲಿ ಅದಾದ ಬಳಿಕವೂ ಕೆಲ ಸಿನಿಮಾಗಳಲ್ಲಿ ವಿಲನ್ ಆಗಿ ಅಥವಾ ತುಸು ನೆಗೆಟಿವ್ ಶೇಡ್ ಇದ್ದ ಪಾತ್ರಗಳಲ್ಲಿ ಕಾಣಿಸಿಕೊಂಡು ಆ ಬಳಿಕ ದೊಡ್ಡ ನಾಯಕ ನಟನಾಗಿ ಮೆರೆದರು.
ಪ್ರಭಾಕರ್
ನಟ ಪ್ರಭಾಕರ್ ಅವರದ್ದು ಸಹ ಅದ್ಭುತವಾದ ಸಿನಿಮಾ ಜರ್ನಿ. ವಿಲನ್ ಪಾತ್ರದಲ್ಲಿ, ಹಾಸ್ಯ ಪಾತ್ರದಲ್ಲಿ ಎರಡನೇ ನಾಯಕನ ಪಾತ್ರಗಳಲ್ಲಿ ನಟಿಸಿ ಬಳಿಕ ತಮ್ಮದೇ ಆದ ಇಮೇಜೊಂದನ್ನು ಸೃಷ್ಟಿಸಿಕೊಂಡು ನಾಯಕ ನಟನಾಗಿ ದೊಡ್ಡ ಅಭಿಮಾನಿ ವರ್ಗ ಸೃಷ್ಟಿಸಿಕೊಂಡವರು ಅವರು.
ಜಗ್ಗೇಶ್
ನಟ, ರಾಜಕಾರಣಿ ಜಗ್ಗೇಶ್ ಸಿನಿಮಾ ಜರ್ನಿಯೇ ಒಂದು ಸಿನಿಮಾ ಆಗುವಂಥಹದ್ದು. ಮಾಯಸಂದ್ರದಂಥಹಾ ಹಳ್ಳಿಯಿಂದ ಸಿನಿಮಾ ನಟನಾಗುವ ಕನಸು ಹೊತ್ತು ಬಂದು, ಹಲವು ವರ್ಷಗಳ ಶ್ರಮದ ಬಳಿಕ ನಾಯಕ ನಟರಾದರು ಜಗ್ಗೇಶ್. ಹಲವು ದಶಕಗಳಿಂದಲೂ ಚಿತ್ರರಂಗದಲ್ಲಿ ನೆಲೆ ನಿಂತಿರುವ ಜಗ್ಗೇಶ್ಗೆ ತಮ್ಮದೇ ಆದ ಅಭಿಮಾನಿ ವರ್ಗವಿದೆ. ಈಗ ಅವರು ಯಶಸ್ವಿ ರಾಜಕಾರಣಿಯೂ ಹೌದು.
ಶಶಿಕುಮಾರ್
ಕನ್ನಡದ ಜನಪ್ರಿಯ ನಟರಲ್ಲಿ ಒಬ್ಬರಾದ ಶಶಿಕುಮಾರ್ ಸಹ ಹಲವು ಸಿನಿಮಾಗಳಲ್ಲಿ ನಾಯಕ ನಟರಾಗಿ ನಟಿಸಿದ್ದಾರೆ. ಆದರೆ ನಾಯಕರಾಗುವ ಮುನ್ನ ಹಲವು ಸಿನಿಮಾಗಳಲ್ಲಿ ಪೋಷಕ ನಟರಾಗಿ, ವಿಲನ್ ಆಗಿಯೂ ಕಾಣಿಸಿಕೊಂಡಿದ್ದರು ಶಶಿಕುಮಾರ್. ರಾಜಕೀಯಕ್ಕೆ ಪ್ರವೇಶಿಸಿ ಶಾಸಕರೂ ಆದರು. ಈಗ ಅವರ ಪುತ್ರ ನಾಯಕ ನಟರಾಗಿದ್ದಾರೆ.
ಉಪೇಂದ್ರ
ನಟ ಉಪೇಂದ್ರ ಸಿನಿ ಜರ್ನಿ ಸಹ ಸ್ಪೂರ್ತಿದಾಯಕ. ಸಹಾಯಕ ನಿರ್ದೇಶಕರಾಗಿ ಸೇರಿ, ಕಾಶಿನಾಥ್ರ ಕೆಲವು ಸಿನಿಮಾಗಳಿಗೆ ಬಣ್ಣ ಹಚ್ಚಿ. ಆ ಬಳಿಕ ತಮ್ಮದೇ ನಿರ್ದೇಶನದ ಸಿನಿಮಾದ ಮೂಲಕ ನಾಯಕ ನಟನಾಗಿ ಹೊಸ ಟ್ರೆಂಡ್ ಹುಟ್ಟುಹಾಕಿ. ಆ ಬಳಿಕ ತಮ್ಮ ಇಮೇಜು ಬದಲಾಯಿಸಿಕೊಂಡು ಮಾಸ್ ಹೀರೋ ಆಗಿ. ಈಗ ಪ್ಯಾನ್ ಇಂಡಿಯಾ ಸ್ಟಾರ್ ಸಹ ಆಗಿದ್ದಾರೆ.
ಸುದೀಪ್
ಚರಣ್ ರಾಜ್, ಉಮಾಶ್ರೀ ಮುಖ್ಯ ಪಾತ್ರದಲ್ಲಿ ತಾಯವ್ವ ಸಿನಿಮಾದಲ್ಲಿ ಎರಡನೇ ನಾಯಕನ ಪಾತ್ರ ಮಾಡಿದ್ದ ಸುದೀಪ್, ಆ ಬಳಿಕ ರಮೇಶ್ ಅರವಿಂದ್ ನಾಯಕರಾಗಿದ್ದ ಪ್ರತ್ಯರ್ಥ ಸಿನಿಮಾದಲ್ಲಿಯೂ ಎರಡನೇ ಹೀರೋ ಆಗಿ ಕಾಣಿಸಿಕೊಂಡರು. ಬಳಿಕ ಸ್ಪರ್ಷ ಮೂಲಕ ಹೀರೋ ಆದ ಸುದೀಪ್ ಎತ್ತರೆತ್ತರ ಬೆಳೆಯುತ್ತಲೇ ಸಾಗಿ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ.
ದುನಿಯಾ ವಿಜಯ್
ನಟ ದುನಿಯಾ ವಿಜಯ್ ಸಿನಿಮಾ ಜರ್ನಿ ಬಹು ಸ್ಪೂರ್ತಿದಾಯಕ. ಕಡು ಬಡತನದ ಕುಟುಂಬದಿಂದ ಬಂದು, ಲೆಕ್ಕಕ್ಕೇ ಇರದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ವಿಜಯ್, ಆ ಬಳಿಕ ಫೈಟರ್ ಆಗಿ, ಸೈಡ್ ವಿಲನ್ ಆಗಿ, ಮುಖ್ಯ ವಿಲನ್ ಆಗಿ ಬಳಿಕ ದುನಿಯಾ ಸಿನಿಮಾ ಮೂಲಕ ಹೀರೋ ಆದವರು. ಈಗ ಅವರದ್ದೇ ಆದ ಅಭಿಮಾನಿ ಬಳಗ ಹೊಂದಿರುವ ವಿಜಿ, ನಿರ್ದೇಶಕರೂ ಆಗಿದ್ದಾರೆ.
ಗಣೇಶ್
ನಟ ಗಣೇಶ್ ಸಿನಿಮಾ ಜರ್ನಿ ಸಹ ಅಪರೂಪವಾದುದು. ಮೊದಲಿಗೆ ಟಿವಿ ಆ ಬಳಿಕ ಹೆಸರೇ ಇಲ್ಲದ ಪಾತ್ರಗಳು ಬಳಿಕ ಹಾಸ್ಯ ಪಾತ್ರಗಳು, ಒಂದೆರಡು ಸಿನಿಮಾನಲ್ಲಿ ವಿಲನ್ ಆಗಿಯೂ ನಟಿಸಿದ್ದರು. ಬಳಿಕ ಚೆಲ್ಲಾಟ ಸಿನಿಮಾ ಮೂಲಕ ನಾಯಕ ನಟರಾದ ಗಣೇಶ್, ಮುಂಗಾರು ಮಳೆ ಸಿನಿಮಾ ಮೂಲಕ ಸ್ಟಾರ್ ಆದರು.
ರಿಷಬ್ ಶೆಟ್ಟಿ
ನಟ ರಿಷಬ್ ಶೆಟ್ಟಿ ಸಹ ಯಾವುದೇ ಸಿನಿಮಾ ಇಲ್ಲದೆ ನಿರ್ದೇಶಕರಾಗಲು ಬಂದವರು. ಆರಂಭದಲ್ಲಿ ಹಲವು ನಿರ್ದೇಶಕರೊಟ್ಟಿಗೆ ಕೆಲಸ ಮಾಡುತ್ತಾ ಕೆಲವು ಸಿನಿಮಾಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿಯೂ ನಟಿಸಿದ್ದಾರೆ. 2019 ರಲ್ಲಿ ಬಂದ ಬೆಲ್ ಬಾಟಮ್ ಸಿನಿಮಾದಲ್ಲಿ ಮೊದಲ ಬಾರಿಗೆ ಹೀರೋ ಆದರು ರಿಷಬ್ ಶೆಟ್ಟಿ.
ಯಶ್
ನಟ ಯಶ್ ಇಂದು ಸ್ಯಾಂಡಲ್ವುಡ್ನ ಬಹುದೊಡ್ಡ ಸ್ಟಾರ್. ಆದರೆ ಯಶ್ ಸಹ ನಾಯಕ ನಟನಾಗುವ ಮುನ್ನ ಬಹಳಷ್ಟು ಶ್ರಮಪಟ್ಟಿದ್ದಾರೆ. ಮೊದಲಿಗೆ ನಾಟಕಗಳಲ್ಲಿ ನಟಿಸಿ ಆ ಬಳಿಕ ಧಾರಾವಾಹಿಗಳಲ್ಲಿ ನಟಿಸಿ ಬಳಿಕ ಧಾರಾವಾಹಿಯಲ್ಲಿ ನಾಯಕನಾಗಿ ಬಳಿಕವಷ್ಟೆ ಸಿನಿಮಾಗಳಿಗೆ ಎಂಟ್ರಿ ಕೊಟ್ಟವರು ಯಶ್.
ನಾಯಕ ನಟರಾಗುವ ಮುನ್ನ ಸಹನಟರಾಗಿ ನಟಿಸಿದ್ದ ಇತರೆ ಕೆಲವು ನಟರ ಪಟ್ಟಿ ಇಲ್ಲಿದೆ
ಲೋಕೇಶ್, ರಾಮಕೃಷ್ಣ, ಶ್ರೀಧರ್, ದೇವರಾಜ್, ಸಾಯಿಕುಮಾರ್, ಜೈ ಜಗದೀಶ್, ರಮೇಶ್ ಅರವಿಂದ್, ಶ್ರೀನಗರ ಕಿಟ್ಟಿ, ಅನಿರುದ್ಧ್, ಲೂಸ್ ಮಾದ ಯೋಗಿ, ಚಿಕ್ಕಣ್ಣ, ಕೋಮಲ್, ಶರಣ್ ಇನ್ನೂ ಕೆಲವು ನಟರಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:18 pm, Sat, 1 April 23