ಇಂದು ಗಾಂಧಿ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕಿಚ್ಚ ಸುದೀಪ್ ಅಭಿಮಾನಿಗಳು ‘ಕೋಟಿಗೊಬ್ಬ 3’ ಸಿನಿಮಾ ರಿಲೀಸ್ಗಾಗಿ ಕಾದು ಕೂತಿದ್ದರು. ದೊಡ್ಡದೊಡ್ಡ ಕಟೌಟ್ ರೆಡಿ ಮಾಡಿಟ್ಟುಕೊಂಡಿದ್ದರು. ಹಾಲಿನ ಅಭಿಷೇಕಕ್ಕೂ ಸಿದ್ಧತೆ ನಡೆದಿತ್ತು. ಆದರೆ, ಒಂದೊಂದೇ ಶೋಗಳು ಕ್ಯಾನ್ಸಲ್ ಆಗುತ್ತಾ ಬಂದವು. ಇದು ಸುದೀಪ್ ಅಭಿಮಾನಿಗಳಿಗೆ ಕೋಪ ತರಿಸಿದೆ. ನಾಳೆಯಿಂದ ಶೋ ಆರಂಭವಾಗುತ್ತದೆ ಎನ್ನುವ ಸ್ಪಷ್ಟನೆ ಸಿಕ್ಕಿದೆಯಾದರೂ ಅದು ಖಾತ್ರಿ ಇಲ್ಲ. ಹಾಗಾದರೆ, ‘ಕೋಟಿಗೊಬ್ಬ 3’ ಶೋ ಕ್ಯಾನ್ಸಲ್ ಆಗೋಕೆ ಕಾರಣವೇನು? ಇದಕ್ಕೆ ನಿರ್ಮಾಪಕರು ಕೊಡುತ್ತಿರುವ ಕಾರಣ ಏನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಫ್ಯಾನ್ಸ್ ಶೋ ಇಲ್ಲ ಅಂದ್ರು
ಮುಂಜಾನೆ 7ಗಂಟೆಗೆ ಫ್ಯಾನ್ಸ್ ಶೋ ಇತ್ತು. ಅಭಿಮಾನಿಗಳೆಲ್ಲರೂ ಸಿನಿಮಾಗಾಗಿ ಕಾದು ಕೂತಿದ್ದರು. ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ಚಿತ್ರಮಂದಿರದತ್ತ ತೆರಳಿದರು. ಆದರೆ, ಶೋ ನಡೆಯುತ್ತಿಲ್ಲ ಎನ್ನುವ ಉತ್ತರ ಚಿತ್ರಮಂದಿರದವರ ಕಡೆಯಿಂದ ಬಂತು. ಇದಕ್ಕೆ ಕಾರಣವೇನು ಎಂದು ಕೇಳಿದರೆ, ಸಿನಿಮಾಗೆ ಲೈಸೆನ್ಸ್ ಸಮಸ್ಯೆ ಎಂಬಿತ್ಯಾದಿ ಉತ್ತರ ಬಂತು. ಆದರೆ, ಯಾವುದೇ ಸ್ಪಷ್ಟನೆ ಚಿತ್ರತಂಡದಿಂದ ಸರಿಯಾಗಿ ಸಿಗಲಿಲ್ಲ.
10ಗಂಟೆಯಿಂದ ಸಿನಿಮಾ ಪ್ರಸಾರ ಅಂದ್ರು
9 ಗಂಟೆ ಸುಮಾರಿಗೆ ನಿರ್ಮಾಪಕ ಸೂರಪ್ಪ ಬಾಬು ಕಡೆಯಿಂದ ಈ ಬಗ್ಗೆ ಪ್ರತಿಕ್ರಿಯೆ ಬಂತು. ‘ನಾವು ಯಾವುದೇ ಫ್ಯಾನ್ಸ್ ಶೋ ಇಟ್ಟಿಲ್ಲ. ಸಿನಿಮಾ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಇದನ್ನು ನಿಲ್ಲಿಸಿ. ಎಂದಿನಂತೆ 10 ಗಂಟೆಗೆ ಶೋ ಆರಂಭವಾಗಲಿದೆ’ ಎಂದು ಸೂರಪ್ಪ ಬಾಬು ತಿಳಿಸಿದರು. ಅಭಿಮಾನಿಗಳು 11 ಗಂಟೆಗೆ ಚಿತ್ರಮಂದಿರಕ್ಕೆ ತೆರಳಿದರೂ ಸಿನಿಮಾ ರಿಲೀಸ್ ಆಗಲೇ ಇಲ್ಲ. ಇದು ಅವರಿಗೆ ಮತ್ತೂ ನಿರಾಸೆ ತರಿಸಿತು.
ಈಗ ಹೇಳ್ತಿರೋದೆ ಬೇರೆ
‘ಕನ್ನಡ ಕಲಾಭಿಮಾನಿಗಳಲ್ಲಿ ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳಲ್ಲಿ ಮನವಿ. ವಿತರಕರು ಮಾಡಿದ ಮೋಸದಿಂದ ‘ಕೋಟಿಗೊಬ್ಬ 3’ ರಿಲೀಸ್ ಮಾಡೋಕೆ ಆಗ್ತಿಲ್ಲ. ಎಂದಿನಂತೆ ಶುಕ್ರವಾರದಿಂದ (ಅಕ್ಟೋಬರ್ 15) ಬೆಳಗ್ಗೆ 6 ಗಂಟೆಯಿಂದ ಶೋ ಪ್ರಸಾರವಾಗಲಿದೆ. ತಾವು ಸಹಕರಿಸಿ. ಸುದೀಪ್ ಅವರೇ ನಿಮ್ಮ ಬಳಿಯೂ ಕ್ಷಮೆ ಕೇಳುತ್ತೇನೆ. ಈ ಬಗ್ಗೆ ಟ್ವೀಟ್ ಮಾಡಿ’ ಎಂದಿದ್ದಾರೆ ಸೂರಪ್ಪ ಬಾಬು.
ಇದನ್ನೂ ಓದಿ: Salaga Movie: ‘ಸಲಗ’ ಚಿತ್ರದ ಫಸ್ಟ್ ಹಾಫ್ ರಿಪೋರ್ಟ್; ದುನಿಯಾ ವಿಜಯ್ ಸಿನಿಮಾದಲ್ಲಿ ಇಂಟರ್ವಲ್ ತನಕ ಏನುಂಟು ಏನಿಲ್ಲ?
Kotigobba 3: ಇಂದು ಬಿಡುಗಡೆಯಾಗುತ್ತಿಲ್ಲ ‘ಕೋಟಿಗೊಬ್ಬ 3’; ಇನ್ಯಾವಾಗ ಬಿಡುಗಡೆ? ಇಲ್ಲಿದೆ ಮಾಹಿತಿ
Published On - 12:33 pm, Thu, 14 October 21