Dhoomam: ‘ಹೊಂಬಾಳೆ ಫಿಲ್ಮ್ಸ್​’ ಹೊಸ ಚಿತ್ರ ‘ಧೂಮಂ’; ಫಹಾದ್​ ಫಾಸಿಲ್​-ಪವನ್​ ಕುಮಾರ್​ ಚಿತ್ರದ ಶೀರ್ಷಿಕೆ ಬಹಿರಂಗ

| Updated By: ಮದನ್​ ಕುಮಾರ್​

Updated on: Sep 30, 2022 | 10:46 AM

Fahadh Faasil | Pawan Kumar: ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಯ ಪ್ರತಿ ಪ್ರಾಜೆಕ್ಟ್​ ಮೇಲೆ ಸಿನಿಪ್ರಿಯರಿಗೆ ಸಖತ್​ ನಿರೀಕ್ಷೆ ಇದೆ. ಸೂಪರ್​ ಹಿಟ್​ ಸಿನಿಮಾಗಳನ್ನು ನಿರ್ಮಿಸಿ ಈ ಸಂಸ್ಥೆ ಗುರುತಿಸಿಕೊಂಡಿದೆ.

Dhoomam: ‘ಹೊಂಬಾಳೆ ಫಿಲ್ಮ್ಸ್​’ ಹೊಸ ಚಿತ್ರ ‘ಧೂಮಂ’; ಫಹಾದ್​ ಫಾಸಿಲ್​-ಪವನ್​ ಕುಮಾರ್​ ಚಿತ್ರದ ಶೀರ್ಷಿಕೆ ಬಹಿರಂಗ
ಫಹಾದ್ ಫಾಸಿಲ್, ಪವನ್ ಕುಮಾರ್
Follow us on

ನಿರ್ಮಾಪಕ ವಿಜಯ್​ ಕಿರಗಂದೂರು ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಅವರ ‘ಹೊಂಬಾಳೆ ಫಿಲ್ಮ್ಸ್​’ ಬ್ಯಾನರ್​ ಮೂಲಕ ಒಂದಕ್ಕಿಂತ ಮತ್ತೊಂದು ಡಿಫರೆಂಟ್​ ಚಿತ್ರಗಳ ತಯಾರಾಗುತ್ತಿವೆ. ಈಗ ಈ ಪ್ರೊಡಕ್ಷನ್​ ಹೌಸ್​ನಿಂದ ಹೊಸ ಘೋಷಣೆ ಮಾಡಲಾಗಿದೆ. ನಿರ್ದೇಶಕ ಪವನ್​ ಕುಮಾರ್​ (Pawan Kumar) ಮತ್ತು ಮಲಯಾಳಂ ನಟ ಫಹಾದ್​ ಫಾಸಿಲ್​ (Fahadh Faasil) ಕಾಂಬಿನೇಷನ್​ನ ಹೊಸ ಚಿತ್ರಕ್ಕೆ ‘ಹೊಂಬಾಳೆ ಫಿಲ್ಮ್ಸ್​’ ಬಂಡವಾಳ ಹೂಡುತ್ತಿದ್ದು, ಸಿನಿಮಾದ ಟೈಟಲ್​ ಬಹಿರಂಗ ಆಗಿದೆ. ಈ ಚಿತ್ರಕ್ಕೆ ‘ಧೂಮಂ’ (Dhoomam) ಎಂದು ಹೆಸರು ಇಡಲಾಗಿದೆ. ಇಂದು (ಸೆ.30) ಶೀರ್ಷಿಕೆ ವಿನ್ಯಾಸದ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ಸಿನಿಪ್ರಿಯರಲ್ಲಿ ಕೌತುಕ ಮೂಡಿಸಲಾಗಿದೆ.

ಪವನ್​ ಕುಮಾರ್​ ಅವರ ನಿರ್ದೇಶನದ ಬಗ್ಗೆ ಪ್ರೇಕ್ಷಕರಿಗೆ ಒಂದು ಭರವಸೆ ಇದೆ. ‘ಲೂಸಿಯಾ’, ‘ಯು-ಟರ್ನ್​’ ರೀತಿಯ ಸಿನಿಮಾಗಳ ಮೂಲಕ ಅವರು ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಪಡಿಸಿದ್ದಾರೆ. ಇನ್ನು, ಫಹಾದ್​​ ಫಾಸಿಲ್​ ಅವರು ಬಹುಭಾಷೆಯಲ್ಲಿ ಫೇಮಸ್​. ಗಟ್ಟಿ ಕಥಾವಸ್ತು ಇರುವಂತಹ ಸಿನಿಮಾಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಈ ಪ್ರತಿಭಾವಂತರಿಬ್ಬರು ಕೈ ಜೋಡಿಸಿರುವುದು ಸಖತ್​ ನಿರೀಕ್ಷೆ ಹುಟ್ಟುಹಾಕಿದೆ.

ಅಕ್ಟೋಬರ್​ 9ರಿಂದ ‘ಧೂಮಂ’ ಚಿತ್ರದ ಶೂಟಿಂಗ್​ ಶುರುವಾಗಲಿದೆ. ಫಹಾದ್​ ಫಾಸಿಲ್​ ಜೊತೆಗೆ ನಾಯಕಿಯಾಗಿ ಅಪರ್ಣಾ ಬಾಲಮುರಳಿ ನಟಿಸಲಿದ್ದಾರೆ. ‘ಸೂರರೈ ಪೋಟ್ರು’ ಸಿನಿಮಾದಲ್ಲಿ ಅಭಿನಯಿಸಿ ಜನಮನ ಗೆದ್ದಿರುವ ಅವರಿಗೆ ಈಗ ಫಹಾದ್​ ಜತೆ ನಟಿಸುವ ಚಾನ್ಸ್​ ಸಿಕ್ಕಿದೆ. ಮಲಯಾಳಂ, ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ‘ಧೂಮಂ’ ಚಿತ್ರ ಮೂಡಿಬರಲಿದೆ.

‘ಕೆಜಿಎಫ್​’, ‘ಕೆಜಿಎಫ್​ 2’, ‘ರಾಜಕುಮಾರ’, ‘ಕಾಂತಾರ’ ಮುಂತಾದ ಸಿನಿಮಾಗಳನ್ನು ನಿರ್ಮಿಸಿದ ಖ್ಯಾತಿ ಈ ಸಂಸ್ಥೆಗೆ ಸಲ್ಲುತ್ತದೆ. ಇಂದು (ಸೆ.30) ‘ಕಾಂತಾರ’ ಚಿತ್ರ ಬಿಡುಗಡೆಯಾಗಿ ಭರ್ಜರಿ ಮೆಚ್ಚುಗೆ ಗಳಿಸಿಕೊಂಡಿದೆ. ಇದೇ ಬ್ಯಾನರ್​ನಿಂದ ‘ಸಲಾರ್​’, ‘ಬಘೀರ’, ‘ರಾಘವೇಂದ್ರ ಸ್ಟೋರ್ಸ್​’ ಮುಂತಾದ ಸಿನಿಮಾಗಳು ಮೂಡಿಬರುತ್ತಿವೆ. ಅದರ ಜೊತೆಗೆ ಈಗ ಹೊಸ ಸಿನಿಮಾ ‘ಧೂಮಂ’ ಸೇಪರ್ಡೆ ಆಗಿದೆ.​

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:33 am, Fri, 30 September 22