2023ರಲ್ಲಿ ಈಗಾಗಲೇ ಏಳು ತಿಂಗಳು ಕಳೆದಿವೆ. ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ ಸ್ಯಾಂಡಲ್ವುಡ್ನಲ್ಲಿ ಗೆದ್ದ ಸಿನಿಮಾಗಳ ಸಂಖ್ಯೆ ತುಂಬಾನೇ ಕಡಿಮೆ. ಈಗ ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ರಿಲೀಸ್ ಆಗಿದ್ದು ಜನ ಮೆಚ್ಚುಗೆ ಪಡೆಯುತ್ತಿವೆ. ವೀಕೆಂಡ್ನಲ್ಲಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagiddare Movie), ‘ಆಚಾರ್ ಆ್ಯಂಡ್ ಕೋ..’ ಹಾಗೂ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಕೆಲ ಶೋಗಳು ಹೌಸ್ಫುಲ್ ಪ್ರದರ್ಶನ ಕಂಡಿವೆ. ಇದು ಕನ್ನಡ ಚಿತ್ರರಂಗದ ಪಾಲಿಗೆ ಮಹತ್ವದ ಬೆಳವಣಿಗೆ ಎನ್ನಬಹುದು.
ಡಾರ್ಲಿಂಗ್ ಕೃಷ್ಣ ಅಭಿಮಾನಿ ಬಳಗ ದೊಡ್ಡದಿದೆ. ಅವರ ನಟನೆಯ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರ ಮೆಚ್ಚುಗೆ ಪಡೆದಿದೆ. ಬೃಂದಾ ಆಚಾರ್ಯ ಹಾಗೂ ಮಿಲನಾ ನಾಗರಾಜ್ ಕೂಡ ಸಿನಿಮಾದಲ್ಲಿ ನಟಿಸಿದ್ದಾರೆ. ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಅವರ ಕಾಂಬಿನೇಷನ್ಗೆ ದೊಡ್ಡ ಅಭಿಮಾನಿ ಬಳಗ ಇದೆ. ಸಿನಿಮಾ ಮೆಚ್ಚುಗೆ ಪಡೆಯಲು ಇದೂ ಒಂದು ಕಾರಣ. ಎಲ್ಲಕ್ಕಿಂತ ಮುಖ್ಯವಾಗಿ ಸಮಾಜಕ್ಕೆ ಈ ಚಿತ್ರದ ಮೂಲಕ ಒಂದು ಸಂದೇಶ ಸಾರಲಾಗಿದೆ.
ಅಶ್ವಿನಿ ಪುನೀತ್ ರಾಜ್ಕುಮಾರ್ ಮುನ್ನಡೆಸಿಕೊಂಡು ಹೋಗುತ್ತಿರುವ ‘ಪಿಆರ್ಕೆ ಪ್ರೊಡಕ್ಷನ್ಸ್’ ಮೂಲಕ ‘ಆಚಾರ್ ಆ್ಯಂಡ್ ಕೋ’ ಸಿನಿಮಾ ರಿಲೀಸ್ ಆಗಿದೆ. ಸಿಂಧು ಶ್ರೀನಿವಾಸಮೂರ್ತಿ ಅವರು ಈ ಚಿತ್ರದಲ್ಲಿ ನಟಿಸುವುದರ ಜೊತೆ ನಿರ್ದೇಶನ ಕೂಡ ಮಾಡಿದ್ದಾರೆ. 60ರ ದಶಕದ ಕಥೆಯನ್ನು ಈ ಸಿನಿಮಾ ಹೊಂದಿದೆ. ಈ ಚಿತ್ರದಲ್ಲೂ ಸಮಾಜಕ್ಕೆ ಒಂದೊಳ್ಳೆಯ ಸಂದೇಶ ಸಾರುವ ಕೆಲಸ ಆಗಿದೆ. ಹೊಸಬರ ತಂಡಕ್ಕೆ ಪಿಆರ್ಕೆ ಬೆಂಬಲವಾಗಿ ನಿಂತಿದೆ.
ಹೊಸ ತಂಡ ಸೇರಿಕೊಂಡು ಮಾಡಿರುವ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಕೂಡ ಜನ ಮೆಚ್ಚುಗೆ ಪಡೆದಿದೆ. ಕಾಲೇಜು ಹುಡುಗರು, ಹಾಸ್ಟೆಲ್ನಲ್ಲಿ ದಿನಗಳನ್ನು ಕಳೆದವರಿಗೆ ಈ ಸಿನಿಮಾ ಇಷ್ಟವಾಗಿದೆ. ನಿತಿನ್ ಕೃಷ್ಣಮೂರ್ತಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ವಿವಾದದ ಮಧ್ಯೆಯೂ ಚಿತ್ರ ಗೆದ್ದಿದೆ.
ಇದನ್ನೂ ಓದಿ: ವಿದೇಶಕ್ಕೆ ಹೊರಟ ‘ಹಾಸ್ಟೆಲ್ ಹುಡುಗರು’: ಹೊಸಬರ ಸಿನಿಮಾಗೆ ಸಿಕ್ಕಿದೆ ಭರ್ಜರಿ ಸಕ್ಸಸ್
‘ಡೇರ್ ಡೆವಿಲ್ ಮುಸ್ತಫಾ’ ಸೇರಿ ಕೆಲವೇ ಕೆಲವು ಕನ್ನಡದ ಸಿನಿಮಾಗಳು ಜನರನ್ನು ಚಿತ್ರಮಂದಿರಕ್ಕೆ ಕರೆಸಿವೆ. ಈಗ ಮೂರು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗಿ ಕನ್ನಡ ಚಿತ್ರರಂಗಕ್ಕೆ ಹೊಸ ಚೈತನ್ಯ ತುಂಬಿವೆ. ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಅನುಕ್ರಮವಾಗಿ ರಾಜ್ ಬಿ. ಶೆಟ್ಟಿ ನಟನೆಯ ‘ಟೋಬಿ’ ಹಾಗೂ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ರಿಲೀಸ್ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ