ನಟ ದರ್ಶನ್ ಹಾಗೂ ಸಹಚರರು ಸೇರಿಕೊಂಡು ಮಾಡಿದ್ದಾರೆ ಎನ್ನಲಾದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿವರಗಳು ಒಂದೊಂದಾಗಿಯೇ ಹೊರಬರುತ್ತಿವೆ. ಈ ಕೇಸ್ನಲ್ಲಿ ಆರೋಪಿಗಳು ಸರೆಂಡರ್ ಆಗುವುದಕ್ಕೂ ಮುನ್ನವೇ ಪೊಲೀಸರಿಗೆ ಕೆಲವು ಪ್ರಮುಖ ಸುಳಿವುಗಳು ಸಿಕ್ಕಿದ್ದವು. ಅದೇ ಕ್ಲೂ ಇಟ್ಟುಕೊಂಡು ಜೂನ್ 9ರಂದು ಸಂಜೆ ವೇಳೆಗೆ ಶೆಡ್ ಬಳಿ ಕಾಮಾಕ್ಷಿಪಾಳ್ಯ ಪೊಲೀಸರು ಹೋಗಿದ್ದರು. ಹಾಗಾದ್ರೆ ಪೊಲೀಸರಿಗೆ ಸಿಕ್ಕಿದ್ದ ಆ ಕ್ಲೂ ಯಾವುದು? ಯಾರ ಮೇಲೆ ಮೊದಲಿಗೆ ಅನುಮಾನ ಬಂದಿತ್ತು? ಈ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ..
ಜೂನ್ 8ರಂದು ರೇಣುಕಾಸ್ವಾಮಿ ಕೊಲೆ ಆಗಿದ್ದು. ಜೂನ್ 9ರ ಮುಂಜಾನೆ ಮೃತದೇಹ ಸಿಕ್ಕಿತ್ತು. ಬಾಡಿ ಸಿಕ್ಕ ತಕ್ಷಣವೇ ಆರೋಪಿಗಳ ಪತ್ತೆಗೆ ಕಾಮಾಕ್ಷಿಪಾಳ್ಯ ಪೊಲೀಸರು ಮುಂದಾದರು. ರಾಜಕಾಲುವೆ ಸುತ್ತಮುತ್ತ ಇದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಮೊದಲು ಜಾಲಾಡಲಾಯಿತು. ಈ ವೇಳೆ ಪೊಲೀಸರಿಗೆ ಪತ್ತೆಯಾಗಿದ್ದೇ ರೆಡ್ ಕಲರ್ ಜೀಪ್ ಹಾಗೂ ಮೃತದೇಹವನ್ನು ಸಾಗಿಸಲು ಬಳಸಿದ ಸ್ಕಾರ್ಪಿಯೋ ವಾಹನ.
ಸಿಸಿಟಿವಿಯಲ್ಲಿ ಈ ವಾಹನಗಳು ಕಾಣಿಸಿದ ತಕ್ಷಣವೇ ಅವುಗಳ ನಂಬರ್ ಆಧರಿಸಿ ಮಾಲೀಕರ ಪತ್ತೆಗೆ ಪೊಲೀಸರು ಬಲೆ ಬೀಸಿದರು. ಜೀಪ್ ವಿನಯ್ ಹೆಸರಿನಲ್ಲಿ ಇದ್ರೆ, ಸ್ಕಾರ್ಪಿಯೋ ವಾಹನ ಪ್ರದೂಶ್ ಹೆಸರಿನಲ್ಲಿ ಇತ್ತು. ಹೀಗಾಗಿ ಎರಡು ಕಾರುಗಳನ್ನು ಫಾಲೋ ಮಾಡ್ಕೊಂಡು ಹೋಗಿದ್ದರು ಪೊಲೀಸರು. ರಾಜಕಾಲುವೆಯಿಂದ ಸಿಸಿಟಿವಿ ಕ್ಯಾಮೆರಾಗಳ ಜಾಡು ಹಿಡಿದು ಪೊಲೀಸರು ಕಾರ್ಯಾಚರಣೆ ಶುರು ಮಾಡಿದರು. ಕೊನೆಗೆ ಜೂನ್ 10ರಂದು ಸಂಜೆಗೆ ಶೆಡ್ ಬಳಿ ಪೊಲೀಸರು ತಲುಪಿದರು.
ಶೆಡ್ ಬಳಿ ಹೋಗಿ ನೋಡಿದಾಗ ಅಲ್ಲಿಯೇ ಕೊಲೆ ಆಗಿದೆ ಎಂಬ ಅನುಮಾನ ಪೊಲೀಸರಿಗೆ ಮೂಡಿತು. ತಕ್ಷಣವೇ ಆರ್ಟಿಒ ಮೂಲಕ ಕಾರು ನಂಬರ್ ಆಧರಿಸಿ ವಿನಯ್ ಮತ್ತು ಪ್ರದೂಶ್ನ ಮೊಬೈಲ್ ನಂಬರ್ಗಳನ್ನು ಪೊಲೀಸರು ಪಡೆದುಕೊಂಡರು. ಬಳಿಕ ಇಬ್ಬರ ನಂಬರ್ಗಳ ಲೊಕೇಷನ್ ಟ್ರೇಸ್ ಮಾಡಲಾಯಿತು. ಜೂನ್ 8ರಂದು ಎರಡೂ ನಂಬರ್ಗಳು ಇದೇ ಶೆಡ್ ಲೊಕೇಷನ್ನಲ್ಲಿ ಇದ್ದಿದ್ದು ಬಯಲಾಯಿತು. ಆಗಲೇ ಪೊಲೀಸರಿಗೆ ಇಬ್ಬರ ಮೇಲೆ ಅನುಮಾನ ಬಂದು ಹಿರಿಯ ಅಧಿಕಾರಿಗಳಿಗೆ ಮಾಹಿತಿ ರವಾನೆ ಮಾಡಿದರು.
ಇದನ್ನೂ ಓದಿ: ಜೈಲಿನೊಳಗೆ ದರ್ಶನ್ ಜೊತೆ ನಡೆದ ಮಾತುಕಥೆ ಬಗ್ಗೆ ವಿನೋದ್ ರಾಜ್ ಭಾವುಕ ಪ್ರತಿಕ್ರಿಯೆ
ಇತ್ತ, ಸಂಜೆ 7 ಗಂಟೆ ಸುಮಾರಿಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇ ಅತ್ತ, ಮೂವರು ಬಂದು ಸರೆಂಡರ್ ಆದರು. ರಾಘವೇಂದ್ರ, ನಿಖಿಲ್ ನಾಯ್ಕ್ ಮತ್ತು ಕಾರ್ತಿಕ್ ಸರೆಂಡರ್ ಆಗಲು ಠಾಣೆಗೆ ಬಂದರು. ಆಗ ಪೊಲೀಸರಿಗೆ ಇನ್ನಷ್ಟು ಅನುಮಾನ ಹೆಚ್ಚಿತು. ಮೂವರಿಗೂ ಫುಲ್ ಡ್ರಿಲ್ ಮಾಡಿದಾಗ ಪ್ರದೋಶ್ ಮತ್ತು ವಿನಯ್ ಹೆಸರಗಳನ್ನು ಅವರು ಬಾಯಿಬಿಟ್ಟರು. ತನಿಖೆ ಮುಂದುವರಿದಾಗ ನಟ ದರ್ಶನ್ ಮತ್ತು ಪವಿತ್ರಾ ಗೌಡ ಹೆಸರು ಹೊರಬಂತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 4:39 pm, Tue, 23 July 24