ಕಿಚ್ಚ ಸುದೀಪ್ (Kichcha Sudep) ಅವರು ರಾಜಕೀಯ ಸೇರುತ್ತಾರೆ, ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಇಂದು (ಏಪ್ರಿಲ್ 5) ಅವರು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಕರೆದ ಸುದ್ದಿಗೋಷ್ಠಿಯಲ್ಲಿ ಭಾಗಿ ಆಗಿ ಈ ಬಗ್ಗೆ ಘೋಷಣೆ ಮಾಡಲಿದ್ದಾರೆ ಎನ್ನಲಾಗಿತ್ತು. ಈ ವಿಚಾರವಾಗಿ ಸುದೀಪ್ ಅವರು ಸ್ಪಷ್ಟನೆ ನೀಡಿದ್ದಾರೆ. ‘ನಾನು ಸಿಎಂ ಕರೆದ ಸುದ್ದಿಗೋಷ್ಠಿಯಲ್ಲಿ ಭಾಗಿ ಆಗುತ್ತಿರುವುದು ನಿಜ’ ಎಂದಿದ್ದಾರೆ. ಆದರೆ, ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂಬುದನ್ನು ಅವರು ಸ್ಪಷ್ಟವಾಗಿ ಹೇಳಿದ್ದಾರೆ.
‘ಸಿಎಂ ಸುದ್ದಿಗೋಷ್ಠಿಗೆ ಹೋಗ್ತಿರೋದು ಸತ್ಯ. ನಾನು ಯಾವುದೇ ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ. ಸುದ್ದಿಗೋಷ್ಠಿಯಲ್ಲೇ ಎಲ್ಲದಕ್ಕೂ ಉತ್ತರ ಕೊಡುತ್ತೇನೆ’ ಎಂದಿದ್ದಾರೆ ಸುದೀಪ್. ಸುದೀಪ್ ಅವರು ತಮ್ಮ ಗೆಳೆಯ ಹಾಗೂ ಮ್ಯಾನೇಜರ್ ಜಾಕ್ ಮಂಜು ಪರವಾಗಿ ಟಿಕೆಟ್ ಕೇಳಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆಯೂ ಅವರು ಮಾತನಾಡಿದ್ದಾರೆ. ‘ಯಾರ ಪರ ಕೂಡ ನಾನು ಟಿಕೆಟ್ ಕೇಳಿಲ್ಲ. ಪಕ್ಷದಿಂದ ಟಿಕೆಟ್ ಕೊಡಿಸುವಷ್ಟು ನಾನು ದೊಡ್ಡವನಲ್ಲ. ನಮ್ಮವರಿಗೋಸ್ಕರ ಕೆಲವು ನಿಲುವು ತೆಗೆದುಕೊಳ್ಳಬೇಕಾಗುತ್ತದೆ’ ಎಂದಿದ್ದಾರೆ ಸುದೀಪ್.
ಇದನ್ನೂ ಓದಿ: ‘ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ’; ಸುದೀಪ್ ಬಿಜೆಪಿ ಸೇರ್ತಾರೆ ಎನ್ನುವ ವಿಚಾರದಲ್ಲಿ ಪ್ರಕಾಶ್ ರಾಜ್ ಪ್ರತಿಕ್ರಿಯೆ
ಕಿಚ್ಚ ಸುದೀಪ್ ಅವರು ಇತ್ತೀಚೆಗೆ ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಅವರು ಹೀರೋ ಆಗಿ ನಟಿಸಿದ ‘ವಿಕ್ರಾಂತ್ ರೋಣ’ ಸಿನಿಮಾ ಕಳೆದ ವರ್ಷ ರಿಲೀಸ್ ಆಯಿತು. ಇದಾದ ಬಳಿಕ ಅವರು ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಇದು ಕೂಡ ಹಲವು ಅನುಮಾನಕ್ಕೆ ಕಾರಣವಾಗಿತ್ತು. ರಾಜಕೀಯಕ್ಕೆ ಎಂಟ್ರಿ ಕೊಡುತ್ತಿರುವುದರಿಂದಲೇ ಸುದೀಪ್ ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು.
ಆದರೆ, ಇತ್ತೀಚೆಗೆ ಸುದೀಪ್ ಅವರು ಸರ್ಪ್ರೈಸ್ ನೀಡಿದ್ದರು. ವೃತ್ತಿ ಜೀವನದಲ್ಲಿ ಅವರು ತೆಗೆದುಕೊಂಡು ಮೊದಲ ಬ್ರೇಕ್ ಇದು. ರಿಲ್ಯಾಕ್ಸ್ಗೋಸ್ಕರ ಇದನ್ನು ತೆಗೆದುಕೊಂಡಿದ್ದಾಗಿ ಅವರು ಹೇಳಿದ್ದರು. ಇದರ ಜೊತೆಗೆ ಮೂರು ಚಿತ್ರಗಳನ್ನು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದರು. ಮೂರೂ ಸಿನಿಮಾಗಳ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿದ್ದು, ಶೀಘ್ರವೇ ಘೋಷಣೆ ಮಾಡುವುದಾಗಿ ಹೇಳಿದ್ದರು. ಮೂರು ಸಿನಿಮಾ ಒಪ್ಪಿಕೊಂಡಿರುವುದರಿಂದ ಅವರು ರಾಜಕೀಯಕ್ಕೆ ಬರೋದು ಅನುಮಾನ ಎಂದೇ ಹೇಳಲಾಗಿತ್ತು. ಈಗ ಈ ವಿಚಾರದಲ್ಲಿ ಅವರ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:49 pm, Wed, 5 April 23