Kiccha Sudeep: ತೆರೆಮೇಲೆ ಸುದೀಪ್ ರಾಜಕಾರಣಿ ಪಾತ್ರ ಮಾಡಿದ್ದು ಒಮ್ಮೆ ಮಾತ್ರ; ‘ಕಿಚ್ಚ’ ಚಿತ್ರದಲ್ಲಿತ್ತು ಪಕ್ಕಾ ಪೊಲಿಟಿಕಲ್ ಕಥೆ
ಎರಡೂವರೆ ದಶಕಗಳ ವೃತ್ತಿಜೀವನದಲ್ಲಿ ಸುದೀಪ್ ಅವರು ರಾಜಕೀಯದ ಕಥೆಗಳ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿಲ್ಲ. ಆದರೆ ‘ಕಿಚ್ಚ’ ಚಿತ್ರದಲ್ಲಿ ಮಾತ್ರ ಸಂಪೂರ್ಣ ಪೊಲಿಟಿಕಲ್ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದರು.
ನಟ ಕಿಚ್ಚ ಸುದೀಪ್ (Kichcha Sudeep) ಅವರು ಈವರೆಗೂ ರಾಜಕೀಯದಿಂದ ದೂರ ಉಳಿದುಕೊಂಡಿದ್ದರು. ಇತ್ತೀಚೆಗೆ ಕೆಲವು ದಿನಗಳಿಂದ ಅವರ ಹೆಸರು ರಾಜಕೀಯದ ಅಂಗಳದಲ್ಲಿ ಹೆಚ್ಚಾಗಿ ಕೇಳಿಬರಲು ಆರಂಭಿಸಿದೆ. ರಿಯಲ್ ಲೈಫ್ನಲ್ಲಿ ಮಾತ್ರವಲ್ಲ ಸಿನಿಮಾದಲ್ಲಿಯೂ ಅವರು ಪೊಲಿಟಿಕಲ್ ಕಥಾವಸ್ತುವನ್ನು ಟಚ್ ಮಾಡಿದ್ದು ಕಡಿಮೆ. ಸುದೀಪ್ (Sudeep) ಅವರು ಚಿತ್ರರಂಗಕ್ಕೆ ಕಾಲಿಟ್ಟು ಎರಡೂವರೆ ದಶಕ ಕಳೆದಿದೆ. ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಆದರೆ ಅವರು ರಾಜಕಾರಣಿಯ ವೇಷ ಧರಿಸಿದ್ದು ಒಂದೇ ಒಂದು ಸಿನಿಮಾದಲ್ಲಿ ಮಾತ್ರ! ಹೌದು, ಸುದೀಪ್ ಅಭಿನಯದ ‘ಕಿಚ್ಚ’ ಸಿನಿಮಾದಲ್ಲಿ (Kiccha Kannada Movie) ಅವರು ರಾಜಕಾರಣಿಯ ಪಾತ್ರ ಮಾಡಿದ್ದರು. ಆ ಚಿತ್ರ 2003ರಲ್ಲಿ ತೆರೆಕಂಡಿತ್ತು.
1997ರಲ್ಲಿ ಬಂದ ‘ತಾಯವ್ವ’ ಸಿನಿಮಾದಿಂದ 2022ರಲ್ಲಿ ತೆರೆಕಂಡ ‘ವಿಕ್ರಾಂತ್ ರೋಣ’ ಚಿತ್ರದ ತನಕ ಸುದೀಪ್ ಅವರು ರಾಜಕೀಯದ ಕಥೆಗಳ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿಲ್ಲ. ಆದರೆ ‘ಕಿಚ್ಚ’ ಚಿತ್ರದಲ್ಲಿ ಅವರು ಸಂಪೂರ್ಣ ಪೊಲಿಟಿಕಲ್ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಸಾಮಾನ್ಯ ಯುವಕನೊಬ್ಬ ರಾಜಕೀಯಕ್ಕೆ ಎಂಟ್ರಿಯಾಗಿ ಮಿನಿಸ್ಟರ್ ಪಟ್ಟ ಪಡೆಯುವ ಕಥೆಯನ್ನು ಈ ಸಿನಿಮಾ ಒಳಗೊಂಡಿತ್ತು.
ಇದನ್ನೂ ಓದಿ: Kichcha Sudeep: ನಟ ಕಿಚ್ಚ ಸುದೀಪ್ಗೆ ಬೆದರಿಕೆ ಪತ್ರ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ
‘ಕಿಚ್ಚ’ ಚಿತ್ರಕ್ಕೆ ಪಿ.ಎ. ಅರುಣ್ ಪ್ರಸಾದ್ ಅವರು ನಿರ್ದೇಶನ ಮಾಡಿದ್ದರು. ರಾಮು ನಿರ್ಮಾಣ ಮಾಡಿದ್ದ ಈ ಸಿನಿಮಾಗೆ ಹಂಸಲೇಖ ಸಂಗೀತ ನೀಡಿದ್ದರು. ನಿರುದ್ಯೋಗ ಸಮಸ್ಯೆ, ಅದರ ಹಿಂದೆ ಇರುವ ಶಿಕ್ಷಣ ಮಾಫಿಯಾ, ರಾಜಕೀಯದ ಕುತಂತ್ರ, ರಾಜಕಾರಣಿಗಳ ಹಣದ ಹಪಾಹಪಿ ಮುಂತಾದ ವಿಷಯಗಳೇ ‘ಕಿಚ್ಚ’ ಚಿತ್ರದಲ್ಲಿ ಹೈಲೈಟ್ ಆಗಿದ್ದವು. ಜನಪರವಾಗಿ ಕೆಲಸ ಮಾಡುವ ಹಂಬಲ ಇಟ್ಟುಕೊಂಡು ರಾಜಕೀಯಕ್ಕೆ ಪ್ರವೇಶ ಪಡೆಯುವ ಕಥಾನಾಯಕ, ನಂತರ ತಾನೇ ಹಣ ಮಾಡಲು ಶುರುಮಾಡುತ್ತಾನೆ. ಕ್ಲೈಮ್ಯಾಕ್ಸ್ನಲ್ಲಿ ಎಲ್ಲರ ಮುಖವಾಡ ಬಯಲು ಮಾಡುವ ಮೂಲಕ ದೊಡ್ಡ ಟ್ವಿಸ್ಟ್ ನೀಡುತ್ತಾನೆ.
ಇದನ್ನೂ ಓದಿ: Kichcha Sudeep: ಸಿಎಂ ಬೊಮ್ಮಾಯಿ ಸುದ್ದಿಗೋಷ್ಠಿಯಲ್ಲಿ ಸುದೀಪ್? ರಾಜಕೀಯದಲ್ಲಿ ಧೂಳೆಬ್ಬಿಸ್ತಾರಾ ಕಿಚ್ಚ?
ಸುದೀಪ್ ಅವರು ‘ಕಿಚ್ಚ’ ಸಿನಿಮಾದಲ್ಲಿ ರಾಜಕಾರಣಿಯ ಪಾತ್ರಕ್ಕೆ ಸೂಕ್ತ ನ್ಯಾಯ ಒದಗಿಸಿದ್ದರು. ಅವರ ನಟನೆ ಅಭಿಮಾನಿಗಳಿಗೆ ಇಷ್ಟ ಆಯಿತು. ಹಾಗಿದ್ದರೂ ಕೂಡ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ನಿರೀಕ್ಷೆಯಂತೆ ಮೋಡಿ ಮಾಡಲಿಲ್ಲ. ಆ ಕಾರಣಕ್ಕೋ ಏನೋ ಸುದೀಪ್ ಅವರು ಮುಂದಿನ ದಿನಗಳಲ್ಲಿ ಪೊಲಿಟಿಕಲ್ ಕಥಾಹಂದರ ಇರುವ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳಲಿಲ್ಲ. ಈಗ ರಿಯಲ್ ಲೈಫ್ನಲ್ಲಿ ಅವರ ಹೆಸರು ರಾಜಕೀಯ ಕ್ಷೇತ್ರದಲ್ಲಿ ಚಾಲ್ತಿಗೆ ಬಂದಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.