Bigg Boss OTT: ಬಿಗ್ ಬಾಸ್ ಶೋ ಹಿಂದೆ ಸುದೀಪ್ಗೆ ಹಲವು ಚಾಲೆಂಜ್; ವೇದಿಕೆಯಲ್ಲಿ ಎಲ್ಲವನ್ನೂ ವಿವರಿಸಿದ ಕಿಚ್ಚ
Kichcha Sudeep | Bigg Boss Kannada: ಬಿಗ್ ಬಾಸ್ ನಿರೂಪಣೆ ಮಾಡುವಲ್ಲಿ ಸುದೀಪ್ ಅವರ ಪರಿಶ್ರಮ ಸಾಕಷ್ಟು ಇರುತ್ತದೆ. ಅದು ವೀಕ್ಷಕರಿಗೆ ಕಾಣುವಂಥದ್ದಲ್ಲ. ಆ ಬಗ್ಗೆ ಕಿಚ್ಚ ವಿವರಣೆ ನೀಡಿದ್ದಾರೆ.
ನಟ ಸುದೀಪ್ ಅವರು ಕಿರುತೆರೆ ಪ್ರೇಕ್ಷಕರಿಗೂ ಅಚ್ಚುಮೆಚ್ಚು. ಬಿಗ್ ಬಾಸ್ (Bigg Boss Kannada) ನಿರೂಪಣೆ ಮಾಡುವ ಮೂಲಕ ಟಿವಿ ವೀಕ್ಷಕರ ಜೊತೆ ಅವರೊಂದು ನಂಟು ಬೆಳೆಸಿಕೊಂಡಿದ್ದಾರೆ. ಕನ್ನಡದಲ್ಲಿ ಈವರೆಗೆ ಎಲ್ಲ ಸೀಸನ್ಗಳನ್ನು ನಿರೂಪಣೆ ಮಾಡಿದ ಖ್ಯಾತಿ ಕಿಚ್ಚ ಸುದೀಪ್ (Kichcha Sudeep) ಅವರಿಗೆ ಸಲ್ಲುತ್ತದೆ. ಈ ಕಾರ್ಯಕ್ರಮವನ್ನು ನಡೆಸಿಕೊಡುವಾಗ ಅವರು ಸಾಕಷ್ಟು ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಹಲವು ಸಿನಿಮಾ ಕೆಲಸಗಳ ನಡುವೆ ಡೇಟ್ಸ್ ಹೊಂದಿಸಿಕೊಳ್ಳುವುದೇ ದೊಡ್ಡ ಸವಾಲು. ಅದನ್ನು ತುಂಬ ಯಶಸ್ವಿಯಾಗಿ ನಿಭಾಯಿಸಿಕೊಂಡು ಬರುತ್ತಿದ್ದಾರೆ ಸುದೀಪ್. ಈಗ ‘ಬಿಗ್ ಬಾಸ್ ಒಟಿಟಿ’ (Bigg Boss OTT) ಮೊದಲ ಸೀಸನ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಎಂದಿನ ಉತ್ಸಾಹದಲ್ಲಿ ಅವರು ಈ ಹೊಸ ಸ್ವರೂಪದ ಬಿಗ್ ಬಾಸ್ ನಡೆಸಿಕೊಡಲು ಸಜ್ಜಾಗಿದ್ದಾರೆ. ಅದರ ಕುರಿತು ಮಾಹಿತಿ ನೀಡಲು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸುದೀಪ್ ಮಾತನಾಡಿದ್ದಾರೆ.
‘ಇಷ್ಟು ಸೀಸನ್ನಲ್ಲಿ ನಾನು ಯಾವುದೇ ದೇಶದಲ್ಲಿ ಇದ್ದರೂ ಬಿಗ್ ಬಾಸ್ ಎಪಿಸೋಡ್ ಶೂಟಿಂಗ್ ಮಿಸ್ ಮಾಡಿಲ್ಲ. ಆನಾರೋಗ್ಯ ಇದ್ದಾಗಲೂ ಬರಲೇಬೇಕು. ಒಂದು ವೇಳೆ ಬರಲಿಲ್ಲ ಎಂದರೆ ಆ ವಾರದಲ್ಲಿ ಸ್ಪರ್ಧಿಗಳಿಗೆ ನ್ಯಾಯ ಸಲ್ಲಿಸೋಕೆ ಆಗಲ್ಲ. ಯಾವ ಯಾವ ಸಮಯದಲ್ಲಿ ಎಷ್ಟು ಜ್ವರ ಇಟ್ಟುಕೊಂಡು ನಾನು ಶೋ ನಡೆಸಿಕೊಟ್ಟಿದ್ದೇನೆ ಎಂಬುದು ಪರಮ್ ಅವರಿಗೆ ಗೊತ್ತು. ಸೂಟ್ ಒಳಗೆ ಐಸ್ ಕ್ಯೂಬ್ ಇಟ್ಟುಕೊಂಡು ಶೂಟಿಂಗ್ ಮಾಡಿದ್ದುಂಟು’ ಎಂದು ಸುದೀಪ್ ಹೇಳಿದ್ದಾರೆ.
‘ನನಗೆ ಕಳೆದ ಬಾರಿ ಕೊವಿಡ್ ಪಾಸಿಟಿವ್ ಆದಾಗ ಮಾತ್ರ ನಾನು ಶೂಟಿಂಗ್ ಮಿಸ್ ಮಾಡಿದ್ದು. ಶೋ ನಡೆಯುವಾಗಲೇ ನನ್ನ ಜ್ವರ ಜಾಸ್ತಿ ಆಗಲು ಶುರುವಾಯ್ತು. ಮಧ್ಯದಲ್ಲಿ ಬಂದು ಪರಮ್ ನನ್ನನ್ನು ಮುಟ್ಟಿದಾಗ ಮೈ ಸುಡುತ್ತಿತ್ತು. ಆದರೂ ಮುಂದುವರಿಸಿದ್ದೆ. ಇಡೀ ವಾರದಲ್ಲಿ ನಾನು ಕೆಲವು ರಿಸ್ಕ್ ತೆಗೆದುಕೊಳ್ಳೋಕೆ ಹೋಗಲ್ಲ. ಮಳೆ ಫೈಟ್ ಇದ್ದಾಗ ಆದಷ್ಟು ಬಿಸಿನೀರು ತನ್ನಿ ಅಂತ ಹೇಳುತ್ತೇನೆ. ಜ್ವರ ಬಂದರೆ ಕಷ್ಟ ಆಗುತ್ತದೆ’ ಎಂದಿದ್ದಾರೆ ಸುದೀಪ್.
‘ಸಿನಿಮಾ ಶೂಟಿಂಗ್ ಸಲುವಾಗಿ ಬೇರೆ ಊರಿಗೆ ಹೋದರೆ ವಾಪಸ್ ಬರಲು ಎರಡು-ಮೂರು ವಿಮಾನದ ಟಿಕೆಟ್ ಬುಕ್ ಮಾಡಿರುತ್ತೇವೆ. ಒಂದು ಮಿಸ್ ಆದರೆ ಇನ್ನೊಂದು ಇರಬೇಕು. ನಾನು ವಾಪಸ್ ಬರಲೇಬೇಕು. ಎಲ್ಲ ಎಪಿಸೋಡ್ ನೋಡಿಕೊಂಡು ನಾನು ಶೋ ನಡೆಸಬೇಕು. ಇದು ತುಂಬ ಒತ್ತಡದ ಕೆಲಸ. ಆದರೆ ಅದು ನನ್ನನ್ನು ಉತ್ತಮ ಪ್ಲಾನರ್ ಆಗಿಸುತ್ತದೆ’ ಎಂದು ಕಿಚ್ಚ ಹೇಳಿದ್ದಾರೆ.
Published On - 11:11 am, Tue, 2 August 22