Kichcha Sudeep: ‘ಕನ್ನಡ್’ ಎಂದರೆ ಸಹಿಸಲ್ಲ ಸುದೀಪ್; ಹಿಂದಿ ಮಂದಿಗೆ ಕಿಚ್ಚ ಖಡಕ್ ತಿರುಗೇಟು ನೀಡಿದ ವಿಡಿಯೋ ವೈರಲ್
Kichcha Sudeep Viral Video: ಭಾಷಾಭಿಮಾನದ ವಿಷಯದಲ್ಲಿ ಕಿಚ್ಚ ಸುದೀಪ್ ಅವರು ಸದಾ ಮುಂದಿರುತ್ತಾರೆ. ಯಾವುದೇ ವೇದಿಕೆಯಲ್ಲೂ ಆ ಬಗ್ಗೆ ಧ್ವನಿ ಎತ್ತಲು ಅವರು ಹಿಂದೇಟು ಹಾಕುವುದಿಲ್ಲ.
ಪ್ಯಾನ್ ಇಂಡಿಯಾ ಹೀರೋ ಆಗಿ ಕಿಚ್ಚ ಸುದೀಪ್ (Kichcha Sudeep) ಅವರು ಮಿಂಚುತ್ತಿದ್ದಾರೆ. ದೇಶಾದ್ಯಂತ ಅವರ ಜನಪ್ರಿಯತೆ ಹೆಚ್ಚಿದೆ. ಜುಲೈ 28ರಂದು ರಿಲೀಸ್ ಆದ ‘ವಿಕ್ರಾಂತ್ ರೋಣ’ (Vikrant Rona) ಸಿನಿಮಾ ಎಲ್ಲೆಡೆ ಉತ್ತಮ ಪ್ರದರ್ಶನ ಕಂಡಿದೆ. ಕರ್ನಾಟಕ ಮಾತ್ರವಲ್ಲದೇ ಹೊರರಾಜ್ಯದ ಸಿನಿಪ್ರಿಯರು ಕೂಡ ಈ ಚಿತ್ರಕ್ಕೆ ಉತ್ತಮ ಸ್ಪಂದನೆ ನೀಡಿದ್ದಾರೆ. ಈ ಚಿತ್ರದ ಪ್ರಚಾರದ ವೇಳೆ ಸುದೀಪ್ ಅವರು ಅನೇಕ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ. ಉತ್ತರ ಭಾರತದ ಹಲವು ಮಾಧ್ಯಮಗಳು ಕಿಚ್ಚನ ಸಂದರ್ಶನ ನಡೆಸಿವೆ. ಈ ವೇಳೆ ‘ಕನ್ನಡ’ (Kannada) ಎನ್ನುವ ಬದಲು ‘ಕನ್ನಡ್’ ಎಂದ ನಿರೂಪಕಿಗೆ ಸುದೀಪ್ ಅವರು ಕೂಡಲೇ ಖಡಕ್ ಉತ್ತರ ನೀಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.
ಭಾಷಾಭಿಮಾನದ ವಿಷಯದಲ್ಲಿ ಕಿಚ್ಚ ಸುದೀಪ್ ಅವರು ಸದಾ ಮುಂದಿರುತ್ತಾರೆ. ಯಾವುದೇ ವೇದಿಕೆಯಲ್ಲೂ ಆ ಬಗ್ಗೆ ಧ್ವನಿ ಎತ್ತಲು ಅವರು ಹಿಂದೇಟು ಹಾಕುವುದಿಲ್ಲ. ಉತ್ತರ ಭಾರತದ ಮಂದಿ ಮೊದಲಿನಿಂದಲೂ ಕನ್ನಡವನ್ನು ‘ಕನ್ನಡ್’ ಎಂದು ಹೇಳುವ ಚಾಳಿ ಬೆಳೆಸಿಕೊಂಡಿದ್ದಾರೆ. ಇದು ಸುದೀಪ್ಗೆ ಕಿಂಚಿತ್ತೂ ಇಷ್ಟ ಆಗುವುದಿಲ್ಲ. ಈ ಹಿಂದೆ ಹಲವು ಬಾರಿ ಅವರು ಈ ಬಗ್ಗೆ ಮಾತನಾಡಿದ್ದುಂಟು. ಈಗ ಅವರ ಒಂದು ಹೊಸ ವಿಡಿಯೋ ವೈರಲ್ ಆಗಿದೆ. ‘ಕನ್ನಡ್’ ಎಂದು ಹೇಳಿದ ನಿರೂಪಕಿಗೆ ಸುದೀಪ್ ಅವರು ತಿರುಗೇಟು ನೀಡಿದ್ದಾರೆ.
ನಿರೂಪಕಿ ‘ಕನ್ನಡ್’ ಎಂದಾಗ ‘ಅದು ಕನ್ನಡ್ ಅಲ್ಲ.. ಕನ್ನಡ’ ಎಂದು ಸುದೀಪ್ ತಿದ್ದಿ ಹೇಳಿದ್ದಾರೆ. ಆ ನಿರೂಪಕಿ ‘ಕ್ಷಮಿಸಿ ಸರ್..’ ಎಂದು ಕ್ಷಮೆ ಕೇಳಿದರಾದರೂ ತಮ್ಮ ಮಾತನ್ನು ಕೊಂಚ ಸಮರ್ಥಿಸಿಕೊಳ್ಳಲು ಮುಂದಾದರು. ‘ನಾವು ಈಗ ತಾನೇ ಕಲಿಯುತ್ತಿದ್ದೇವೆ ಸರ್’ ಎಂದು ನಿರೂಪಕಿ ಹೇಳಿದರು. ‘ಹಿಂದಿ ಎಂದಿಗೂ ಹಿಂದ್ ಆಗುವುದಿಲ್ಲ. ಅದೇ ರೀತಿ ಕನ್ನಡ ಕೂಡ ಕನ್ನಡ್ ಆಗುವುದಿಲ್ಲ. ನೀವು ತಮಿಳು, ತೆಲುಗು ಎಲ್ಲವನ್ನೂ ಸರಿಯಾಗಿ ಹೇಳಿತ್ತೀರಿ. ಕನ್ನಡದ ವಿಚಾರ ಬಂದಾಗ ಕನ್ನಡ್ ಎನ್ನುತ್ತೀರಿ. ಭಾಷೆ ಬಿಟ್ಟುಬಿಡಿ, ಕೊನೇ ಪಕ್ಷ ಭಾಷೆಯ ಹೆಸರನ್ನಾದರೂ ಸರಿಯಾಗಿ ಹೇಳಿ’ ಎಂದಿ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ.
View this post on Instagram
ಯಾವುದೇ ಮುಲಾಜಿಲ್ಲದೇ ಆ ನಿರೂಪಕಿಗೆ ಸ್ಥಳದಲ್ಲೇ ಖಡಕ್ ಉತ್ತರ ನೀಡಿದ ಕಿಚ್ಚ ಸುದೀಪ್ ಅವರಿಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ಯ ಅವರು ‘ವಿಕ್ರಾಂತ್ ರೋಣ’ ಸಿನಿಮಾದ ಗೆಲುವಿನ ಖುಷಿಯಲ್ಲಿದ್ದಾರೆ. ಕೆಲವೇ ದಿನಗಳ ಹಿಂದೆ ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ಪರಭಾಷೆ ವ್ಯಕ್ತಿಯೊಬ್ಬರು ‘ಕನ್ನಡ್’ ಎಂದಾಗಲೂ ಸುದೀಪ್ ಅವರು ಕೂಡಲೇ ಎಚ್ಚರಿಸಿದ್ದರು.
Published On - 7:21 am, Wed, 3 August 22