‘ಹೊಂಬಾಳೆ ಫಿಲ್ಮ್ಸ್’ ನಿರ್ಮಾಣದ ‘ಮಹಾವತಾರ ನರಸಿಂಹ’ (Mahavatar Narsimha) ಸಿನಿಮಾ 2025ರಲ್ಲಿ ಸೂಪರ್ ಹಿಟ್ ಆಗಿದೆ. 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ ಭಾರತದ ಮೊದಲ ಆನಿಮೇಟೆಡ್ ಸಿನಿಮಾ ಎಂಬ ಖ್ಯಾತಿ ಈ ಚಿತ್ರಕ್ಕಿದೆ. 2026ರ ಆಸ್ಕರ್ ಪ್ರಶಸ್ತಿ ಸ್ಪರ್ಧೆಯಲ್ಲಿ ಪೈಪೋಟಿ ನೀಡಲು ಈ ಸಿನಿಮಾ ಅರ್ಹತೆ ಪಡೆದಿರುವ ಸುದ್ದಿ ಇತ್ತೀಚೆಗಷ್ಟೇ ಕೇಳಿಬಂದಿತ್ತು. ಈಗ ಇನ್ನೊಂದು ಅಚ್ಚರಿಯ ವಿಷಯ ತಿಳಿದುಕೊಂಡಿದೆ. ಪಾಕಿಸ್ತಾನದಲ್ಲಿ ಕೂಡ ‘ಮಹಾವತಾರ ನರಸಿಂಹ’ ಸಿನಿಮಾ ಪ್ರದರ್ಶನ ಕಂಡಿದೆ. ಪಾಕಿಸ್ತಾನದಲ್ಲಿ (Pakistan) ಇರುವ ಹಿಂದೂಗಳು ಈ ಸಿನಿಮಾವನ್ನು ನೋಡಿ ಖುಷಿಪಟ್ಟಿದ್ದಾರೆ.
ಭಕ್ತ ಪ್ರಹ್ಲಾದನ ಕಥೆಯನ್ನು ಇಟ್ಟುಕೊಂಡು ‘ಮಹಾವತಾರ ನರಸಿಂಹ’ ಸಿನಿಮಾ ಮಾಡಲಾಗಿದೆ. ಭಾರತದಲ್ಲಿ ವಿವಿಧ ಭಾಷೆಗಳಲ್ಲಿ ಬಿಡುಗಡೆ ಆದ ಈ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡರು. ಬಳಿಕ ಒಟಿಟಿಯಲ್ಲಿ ಕೂಡ ಬಿಡುಗಡೆ ಆಗಿ ಧೂಳೆಬ್ಬಿಸಿತು. ಈಗ ಪಾಕಿಸ್ತಾನದಲ್ಲಿ ಸಹ ಈ ಸಿನಿಮಾವನ್ನು ಪ್ರದರ್ಶನ ಮಾಡಲಾಗಿದೆ. ಅದು ಕೂಡ ದೇವಸ್ಥಾನದಲ್ಲಿ ಎಂಬುದು ವಿಶೇಷ!
ಹೌದು, ಪಾಕಿಸ್ತಾನದಲ್ಲಿ ‘ಮಹಾವತಾರ ನರಸಿಂಹ’ ಸಿನಿಮಾ ಪ್ರದರ್ಶನ ಆಗಿರುವುದು ಚಿತ್ರಮಂದಿರಗಳಲ್ಲಿ ಅಲ್ಲ. ಬದಲಿಗೆ, ಕರಾಚಿಯಲ್ಲಿ ಇರುವ ಸ್ವಾಮಿ ನಾರಾಯಣ ಮಂದಿರದಲ್ಲಿ ಭಕ್ತರಿಗಾಗಿ ಈ ಸಿನಿಮಾದ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಸಾವಿರಾರು ಭಕ್ತರು ದೇವಸ್ಥಾನದ ಆವರಣದಲ್ಲಿ ಸೇರಿಕೊಂಡು ದೊಡ್ಡ ಎಲ್ಇಡಿ ಪರದೆಯಲ್ಲಿ ‘ಮಹಾವತಾರ ನರಸಿಂಹ’ ಸಿನಿಮಾವನ್ನು ವೀಕ್ಷಿಸಿದ್ದಾರೆ.
ಕರಾಚಿಯ ಸ್ವಾಮಿ ನಾರಾಯಣ ಮಂದಿರದಲ್ಲಿ ‘ಮಹಾವತಾರ ನರಸಿಂಹ’ ಸಿನಿಮಾ ಪ್ರದರ್ಶನ ಆಗುತ್ತಿರುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ‘ಪಾಕಿಸ್ತಾನದಲ್ಲಿ ಮೊಟ್ಟ ಮೊದಲ ಬಾರಿಗೆ! ಸ್ವಾಮಿ ನಾರಾಯಣ ಮಂದಿರದಲ್ಲಿ ಮಹಾವತಾರ ನರಸಿಂಹ ಸಿನಿಮಾ ಪ್ರದರ್ಶನ’ ಎಂಬ ಕ್ಯಾಪ್ಷನ್ನೊಂದಿಗೆ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ಇದನ್ನೂ ಓದಿ: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ರೇಸ್ನಲ್ಲಿ ‘ಮಹಾವತಾರ ನರಸಿಂಹ’ ಆನಿಮೇಟೆಡ್ ಸಿನಿಮಾ
‘ಮಹಾವತಾರ ನರಸಿಂಹ’ ಸಿನಿಮಾವನ್ನು ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆ ನಿರ್ಮಾಣ ಮಾಡಿದೆ. ಪುರಾಣದ ಕಥೆಯನ್ನು ಹೊಂದಿರುವ ಈ ಚಿತ್ರ ಭಾರತದಲ್ಲಿ ಜುಲೈ 25ರಂದು ಬಿಡುಗಡೆ ಆಯಿತು. ಅಶ್ವಿನ್ ಕುಮಾರ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ವಿಷ್ಣು ಪುರಾಣ, ನರಸಿಂಹ ಪುರಾಣ, ಶ್ರೀಮದ್ ಭಗವತ ಪುರಾಣವನ್ನು ಆಧಾರವಾಗಿ ಇಟ್ಟುಕೊಂಡು ಈ ಸಿನಿಮಾವನ್ನು ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.