ಚೊಚ್ಚಲ ಸಿನಿಮಾದಲ್ಲಿ ರಿಸ್ಕ್ ತೆಗೆದುಕೊಳ್ಳುವವರು ಕಡಿಮೆ. ಆದ್ರೆ ‘ಮಡ್ಡಿ’ (Muddy Movie) ಚಿತ್ರದ ನಿರ್ದೇಶಕ ಪ್ರಗ್ಬಲ್ ಅವರು ತಮ್ಮ ಮೊದಲ ಸಿನಿಮಾದಲ್ಲಿಯೇ ಒಂದು ಚಾಲೆಂಜಿಂಗ್ ಸ್ಕ್ರಿಪ್ಟ್ ಆಯ್ಕೆ ಮಾಡಿಕೊಂಡಿದ್ದಾರೆ. ಮಡ್ ರೇಸ್ (Mud Race) ಕುರಿತಾದ ಕಥೆಯನ್ನು ಅವರು ಈ ಸಿನಿಮಾ ಮೂಲಕ ಹೇಳುತ್ತಿದ್ದಾರೆ. ಅಂದಾಜು 25 ಕೋಟಿ ರೂ. ಬಜೆಟ್ನಲ್ಲಿ ತಯಾರಾಗಿರುವ ಈ ಸಿನಿಮಾ 6 ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಇದು ಚಿತ್ರೀಕರಣಗೊಂಡಿದೆ. ಹಿಂದಿ ಮತ್ತು ಇಂಗ್ಲಿಷ್ಗೆ ಡಬ್ ಆಗಿದೆ. ಒಟ್ಟು ಆರು ಭಾಷೆಗಳಲ್ಲಿ ಡಿ.10ರಂದು ‘ಮಡ್ಡಿ’ ಚಿತ್ರ ಬಿಡುಗಡೆ ಆಗುತ್ತಿದೆ. ‘ಕೆಜಿಎಫ್: ಚಾಪ್ಟರ್ 2’ ಸಂಗೀತ ನಿರ್ದೇಶಕ ರವಿ ಬಸ್ರೂರು (Ravi Basrur) ಅವರು ‘ಮಡ್ಡಿ’ ಸಿನಿಮಾಗೂ ಸಂಗೀತ ಸಂಯೋಜನೆ ಮಾಡಿದ್ದಾರೆ. ಯುವನ್ ಕೃಷ್ಣ (Yuvan Krishna) ಮತ್ತು ರಿಧಾನ್ ಕೃಷ್ಣ (Ridhaan Krishna) ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.
ಹಲವು ರಾಜ್ಯಗಳ ತಂತ್ರಜ್ಞರು ಈ ಸಿನಿಮಾಗಾಗಿ ಕೆಲಸ ಮಾಡಿದ್ದಾರೆ. ಬಾಹರ್ ಎಂಟರ್ಪ್ರೈಸಸ್ ಬಾಷಾ ಅವರು ಈ ಸಿನಿಮಾವನ್ನು ವಿತರಣೆ ಮಾಡುತ್ತಿದ್ದಾರೆ. ಈ ಚಿತ್ರದ ಟ್ರೇಲರ್ ನೋಡಿದರೆ ಕಥಾಹಂದರ ಮತ್ತು ಮೇಕಿಂಗ್ ಹೇಗಿದೆ ಎಂಬುದರ ಸುಳಿವು ಸಿಗುತ್ತಿದೆ. ಮೈ ಜುಂ ಎನಿಸುವ ಮಡ್ ರೇಸಿಂಗ್ ದೃಶ್ಯಗಳಿವೆ. ಇಂಥ ಸಿನಿಮಾದಲ್ಲಿ ಕೆಲಸ ಮಾಡಿದ್ದು ಒಂದೊಳ್ಳೆಯ ಅನುಭವ ಎಂದಿದ್ದಾರೆ ರವಿ ಬಸ್ರೂರು.
‘ಈ ಚಿತ್ರದಲ್ಲಿ ಹಿನ್ನೆಲೆ ಸಂಗೀತಕ್ಕೆ ತುಂಬ ಮಹತ್ವ ಇದೆ. ಚಿತ್ರತಂಡದವರು ತೋರಿಸಿದ ದೃಶ್ಯಗಳನ್ನು ನೋಡಿದ ಬಳಿಕ ಸಂಗೀತ ನಿರ್ದೇಶನ ಮಾಡಲು ಒಪ್ಪಿಕೊಂಡೆ. ಹಲವು ರಾಜ್ಯಗಳ ಪ್ರತಿಭಾನ್ವಿತ ತಂತ್ರಜ್ಞರ ಸಮಾಗಮ ಈ ಚಿತ್ರದಲ್ಲಿ ಆಗಿದೆ. ನನಗೆ ಹೇಳಿಮಾಡಿಸಿದ ಪ್ರಾಜೆಕ್ಟ್ ಇದು. ಮೊದಲ ಸಿನಿಮಾಗೆ ನಿರ್ದೇಶಕ ಪ್ರಗ್ಬಲ್ ಅವರು ತುಂಬ ಅಧ್ಯಯನ ಮಾಡಿದ್ದಾರೆ. ಇಡೀ ಚಿತ್ರ ಅತ್ಯದ್ಭುತವಾಗಿ ಮೂಡಿಬಂದಿದೆ’ ಎಂದು ರವಿ ಬಸ್ರೂರು ಹೇಳಿದ್ದಾರೆ.
ರಿಯಲ್ ಮಡ್ ರೇಸರ್ಗಳು ಇದರಲ್ಲಿ ನಟಿಸಿದ್ದಾರೆ. ಇನ್ನುಳಿದ ಕಲಾವಿದರಿಗೆ 2 ವರ್ಷಗಳ ಕಾಲ ಮಡ್ ರೇಸ್ ತರಬೇತಿ ಕೊಡಿಸಿ, ನಂತರ ಚಿತ್ರೀಕರಣ ಮಾಡಲಾಗಿದೆ. ಎಲ್ಲರೂ ಡೂಪ್ ಬಳಸದೇ ಮಡ್ ರೇಸ್ ದೃಶ್ಯಗಳಲ್ಲಿ ನಟಿಸಿದ್ದಾರೆ. ಒಂದು ಶಾಟ್ ಕೂಡ ಗ್ರಾಫಿಕ್ಸ್ ಇಲ್ಲ. ಎಲ್ಲವನ್ನೂ ನೈಜವಾಗಿ ಚಿತ್ರೀಕರಿಸಲಾಗಿದೆ ಎಂಬುದು ಈ ಸಿನಿಮಾದ ಹೆಚ್ಚುಗಾರಿಕೆ. ರತೀಶ್ ಛಾಯಾಗ್ರಹಣ, ಸ್ಯಾನ್ ಲೋಕೇಶ್ ಸಂಕಲನ ಹಾಗೂ ರನ್ ರವಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಪ್ರೇಮಕೃಷ್ಣ ದಾಸ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ನಿರ್ದೇಶಕ ಪ್ರಗ್ಬಲ್ ಅವರಿಗೆ ಈ ಸಿನಿಮಾ ಮೇಲೆ ಸಖತ್ ಭರವಸೆ ಇದೆ. ಈ ಚಿತ್ರಕ್ಕಾಗಿ ಅವರು 5 ವರ್ಷ ಶ್ರಮಿಸಿದ್ದಾರೆ. ದಟ್ಟ ಕಾಡಿನ ಒಳಗೆ ಶೂಟಿಂಗ್ ನಡೆದಿದೆ. ಅದಕ್ಕಾಗಿ ಸಂಬಂಧಿಸಿದ ಇಲಾಖೆಯಿಂದ ಅನುಮತಿ ಪಡೆಯುವುದು ಕಷ್ಟ ಆಗಿತ್ತು. ಪ್ರತಿ ದಿನ ಕೆಲವೇ ಗಂಟೆಗಳು ಮಾತ್ರ ಶೂಟಿಂಗ್ ಮಾಡಬೇಕಿತ್ತು. ಈ ಎಲ್ಲ ಅಡೆತಡೆಗಳ ನಡುವೆಯೂ ಅವರು ಒಂದು ಉತ್ತಮ ಸಿನಿಮಾ ನಿರ್ದೇಶನ ಮಾಡಿದ ಹೆಮ್ಮೆಯ ಭಾವ ಹೊಂದಿದ್ದಾರೆ.
ಕರ್ನಾಟಕದಲ್ಲಿ 75 ಹಾಗೂ ದೇಶಾದ್ಯಂತ ಅಂದಾಜು 400 ಚಿತ್ರಮಂದಿರಗಳಲ್ಲಿ ಡಿ.10ರಂದು ‘ಮಡ್ಡಿ’ ಸಿನಿಮಾ ಬಿಡುಗಡೆ ಆಗುತ್ತಿದೆ.
ಇದನ್ನೂ ಓದಿ:
ಡಿಸೆಂಬರ್ ಪೂರ್ತಿ ಮನರಂಜನೆಯ ಸುಗ್ಗಿ; ಪ್ರತಿ ವಾರವೂ ಬಿಗ್ ರಿಲೀಸ್: ಇಲ್ಲಿದೆ ಪೂರ್ತಿ ಲಿಸ್ಟ್
ಓಟಿಟಿಯಲ್ಲಿ ಡಿಸೆಂಬರ್ ಧಮಾಕಾ; ಮನರಂಜನೆ ನೀಡಲು ಬರುತ್ತಿವೆ ಬಹುನಿರೀಕ್ಷಿತ ಸಿನಿಮಾ, ವೆಬ್ ಸಿರೀಸ್