‘ಗೌರಿ’ ಸಿನಿಮಾ ಮುಹೂರ್ತ: ನಟನಾಗಲು ಇಂದ್ರಜಿತ್ ಲಂಕೇಶ್ ಪುತ್ರ ರೆಡಿ, ಅಪ್ಪನದ್ದೇ ಆಕ್ಷನ್ ಕಟ್
Samarjit Lankesh: ಪಿ ಲಂಕೇಶ್ ಮೊಮ್ಮಗ, ಇಂದ್ರಜಿತ್ ಲಂಕೇಶ್ ಮಗ ಸಮರ್ಜಿತ್ ಲಂಕೇಶ್ ಚಿತ್ರರಂಗಕ್ಕೆ ಬರಲು ರೆಡಿಯಾಗಿದ್ದು, ಅವರ ನಟನೆಯ ಮೊದಲ ಸಿನಿಮಾ 'ಗೌರಿ'ಯ ಮುಹೂರ್ತ ಇಂದು (ಆಗಸ್ಟ್ 31) ನಡೆದಿದೆ.
ನಿರ್ದೇಶಕ ಇಂದ್ರಜಿತ್ ಲಂಕೇಶ್ (Indrajit Lankesh) ಪುತ್ರ ಸಮರ್ಜಿತ್ ಲಂಕೇಶ್, ನಾಯನ ನಟನಾಗಿ ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ನಟನಾಗಲು ಅವಶ್ಯಕವಿರುವ ಕೆಲವು ಕಲೆಗಳನ್ನು ಕಲಿತು ಬಂದಿರುವ ಸಮರ್ಜಿತ್ ಇದೀಗ ಚಿತ್ರರಂಗಕ್ಕೆ ಎಂಟ್ರಿ ಕೊಡಲು ರೆಡಿಯಾಗಿದ್ದು, ಮಗನ ಮೊದಲ ಸಿನಿಮಾಕ್ಕೆ ಅಪ್ಪನೇ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾಕ್ಕೆ ‘ಗೌರಿ’ ಎಂದು ಹೆಸರಿಟ್ಟಿದ್ದು, ಸಿನಿಮಾದ ಮುಹೂರ್ತ ಇಂದು (ಆಗಸ್ಟ್ 31) ಬೆಂಗಳೂರಿನಲ್ಲಿ ನಡೆದಿದೆ.
ಖ್ಯಾತ ಬರಹಗಾರ ಪಿ ಲಂಕೇಶ್ ಕುಟುಂಬದ ಮೂರನೇ ಕುಡಿ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ರ ಮೊದಲ ಸಿನಿಮಾದ ಮುಹೂರ್ತ ಬೆಂಗಳೂರಿನ ಬುಲ್ ಟೆಂಪಲ್ ರಸ್ತೆಯಲ್ಲಿರುವ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನಡೆದಿದೆ. ಪೂಜೆ ಮಾಡುವ ಮೂಲಕ ಗೌರಿ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಸಿನಿಮಾದ ಮುಹೂರ್ತ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮಿಜಿ ಭೇಟಿ ನೀಡಿ ಸಮರ್ಜಿತ್‌ಗೆ ಆಶೀರ್ವಾದ ಮಾಡಿದ್ದಾರೆ.
‘ಗೌರಿ’ ಸಿನಿಮಾಕ್ಕೆ ಇಂದ್ರಜಿತ್ ಲಂಕೇಶ್ ನಿರ್ದೇಶನ ಮಾಡುತ್ತಿದ್ದಾರೆ. ಮಗನನ್ನು ಭಿನ್ನ-ಭಿನ್ನ ಲುಕ್ಗಳಲ್ಲಿ ತೋರಿಸಲು ಕತೆಯನ್ನು ಹೆಣೆದುಕೊಂಡಿದ್ದಾರೆ. ಸ್ಟೈಲಿಷ್ ನಿರ್ದೇಶಕ ಎಂದೇ ಹೆಸರಾಗಿರುವ ಇಂದ್ರಜಿತ್ ಲಂಕೇಶ್, ಈಗಾಗಲೇ ಸ್ಟೈಲಿಷ್ ಆಗಿರುವ ಮಗನನ್ನು ಯಾವ ರೀತಿ ತೆರೆಯ ಮೇಲೆ ತೋರಿಸಲಿದ್ದಾರೆ ಎಂಬ ಕುತೂಹಲ ಪ್ರೆಕ್ಷಕರಿಗೆ. ‘ಗೌರಿ’ ಸಿನಿಮಾಕ್ಕೆ ಇಂದ್ರಜಿತ್ ಲಂಕೇಶ್ ಪತ್ನಿ ಅರ್ಪಿತಾ ನಿರ್ಮಾಪಕಿಯಾಗಿದ್ದು, ನಿರ್ಮಾಪಕಿಯಾಗಿ ಇದು ಅವರಿಗೆ ಮೊದಲ ಸಿನಿಮಾ. ಮಗನ ಜೊತೆಗೆ ತಾಯಿಯೂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಂತಾಗಿದೆ ಈ ಸಿನಿಮಾ ಮೂಲಕ.
ಇದನ್ನೂ ಓದಿ:ಮಗನ ಚಿತ್ರಕ್ಕೆ ‘ಗೌರಿ’ ಎಂದು ಶೀರ್ಷಿಕೆ ಇಟ್ಟಿದ್ದೇಕೆ? ಕಾರಣ ತಿಳಿಸಿದ ಇಂದ್ರಜಿತ್ ಲಂಕೇಶ್
‘ಗೌರಿ’ ಸಿನಿಮಾಗಾಗಿ ಸಮರ್ಜಿತ್ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿದ್ದಾರೆ. ವಿದೇಶದಲ್ಲಿ ನಟನೆಯ ಕೋರ್ಸ್ ಮಾಡಿ ಬಂದಿದ್ದಾರೆ. ಸಮರ ಕಲೆಗಳ ಅಭ್ಯಾಸ ಮಾಡಿದ್ದಾರೆ. ಹಾರ್ಸ್ ರೈಡಿಂಗು, ನೃತ್ಯ ತರಬೇತಿಗಳನ್ನು ಸಹ ಮುಗಿಸಿಕೊಂಡಿದ್ದು ಎಲ್ಲಾ ರೀತಿಯಲ್ಲಿಯೂ ತಾಲೀಮು ಮಡಿಕೊಂಡೆ ಕ್ಯಾಮೆರಾ ಎದುರಿಸಲು ಸಮರ್ಜಿತ್ ಮುಂದಾಗಿದ್ದಾರೆ. ‘ಗೌರಿ’ ಸಿನಿಮಾದಲ್ಲಿ ನಾಯಕಿಯಾಗಿ ಬಿಗ್ಬಾಸ್ ಖ್ಯಾತಿಯ ನಾಸ್ಯಾ ಐಯ್ಯರ್ ಕಾಣಿಸಿಕೊಳ್ಳುತ್ತಿದ್ದಾರೆ. ‘ಪುಟ್ಟಗೌರಿ ಮದುವೆ’ ಧಾರಾವಾಹಿಯಲ್ಲಿ ಪುಟ್ಟಗೌರಿಯಾಗಿ ಕಾಣಿಸಿಕೊಂಡಿದ್ದ ಸಾನ್ಯಾಗೆ ನಾಯಕಿಯಾಗಿ ಇದು ಮೊದಲ ಸಿನಿಮಾ. ಸಾನ್ಯಾ ಹಾಗೂ ಸಮರ್ಜಿತ್ ಅವರ ಫೊಟೊಶೂಟ್ ಅನ್ನು ಈಗಾಗಲೇ ಮಾಡಿಸಿದ್ದು, ಜೋಡಿ ಚೆನ್ನಾಗಿ ಕಾಣುತ್ತಿದೆ.
‘ಗೌರಿ’ ಚಿತ್ರದ ಶೂಟಿಂಗ್ ಶೀಘ್ರವೇ ಪ್ರಾರಂಭವಾಗಲಿದೆ. ಸಿನಿಮಾದ ಫಸ್ಟ್ ಶೆಡ್ಯೂಲ್ ಶೂಟಿಂಗ್ ಚಿಕ್ಕಮಗಳೂರಿನಲ್ಲಿ ನಡೆಯಲಿದೆ. ‘ಕಾಂತಾರ’ ಸಿನಿಮಾ ಖ್ಯಾತಿಯ ನಟಿ ಮಾನಸಿ ಸುಧೀರ್ ‘ಗೌರಿ’ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್ ಈ ಸಿನಿಮಾಕ್ಕೆ ಸಂಗೀತ ನೀಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ