ನಟ ದರ್ಶನ್ಗೆ ಹೊಸ ಸಂಕಷ್ಟ ಶುರುವಾಗಿದೆ. ಇಷ್ಟು ದಿನಗಳ ಕಾಲ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ತೀವ್ರ ವಿಚಾರಣೆ ಎದುರಿಸಿದ್ದಾರೆ. ಅದೆಲ್ಲ ಒಂದು ಹಂತಕ್ಕೆ ಬಂದು ನಿಂತಿದೆ ಎನ್ನುವಾಗಲೇ ಹೊಸದೊಂದು ತಲೆಬಿಸಿ ಎದುರಾಗುತ್ತಿದೆ. ಈಗ ಐಟಿ ಅಧಿಕಾರಿಗಳು ದರ್ಶನ್ ಮನೆ ಮೇಲೆ ದಾಳಿ ಮಾಡಲು ತಯಾರಿ ನಡೆಸಿದ್ದಾರೆ. ಇದು ಕೂಡ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮುಂದುವರಿದ ಭಾಗ. ಅಂದರೆ, ಈ ಪ್ರಕರಣದಲ್ಲಿ 85 ಲಕ್ಷ ರೂಪಾಯಿ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದರು. ಆ ಹಣದ ಮೂಲ ಏನು ಎಂಬುದನ್ನು ತಿಳಿಯುವ ಉದ್ದೇಶದಿಂದ ಐಟಿ ಅಧಿಕಾರಿಗಳು ತನಿಖೆ ಮಾಡಲು ಮುಂದಾಗಿದ್ದಾರೆ.
ದರ್ಶನ್ ಮನೆ ಮೇಲೆ ಐಟಿ ದಾಳಿ ಮಾಡಲು ಅನುಮತಿ ಕೇಳಿ ನ್ಯಾಯಾಲಯಕ್ಕೆ ಅಧಿಕಾರಿಗಳು ಮನವಿ ಸಲ್ಲಿಸಿದ್ದರು. 24ನೇ ಎಸಿಎಂಎಂ ಕೋರ್ಟ್ ಅನುಮತಿ ನೀಡಿದೆ. ಆ ಬಳಿಕ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ಗೆ ನೋಟಿಸ್ ಜಾರಿ ಮಾಡಲಾಗಿದೆ. ಇಂದು (ಸೆ.23) ಮಧ್ಯಾಹ್ನ 2.45ಕ್ಕೆ ಬಳ್ಳಾರಿ ಜೈಲಿನಲ್ಲಿ ದರ್ಶನ್ ಅವರನ್ನು ಅಧಿಕಾರಿಗಳು ಭೇಟಿ ಮಾಡಿ ನೋಟಿಸ್ ನೀಡಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ನಡೆದ ಬಳಿಕ ಶವ ಸಾಗಿಸಲು ಲಕ್ಷಾಂತರ ರೂಪಾಯಿ ಹಣ ವ್ಯಯಿಸಲಾಗಿತ್ತು. ಅಲ್ಲದೇ ಇಡೀ ಕೃತ್ಯದ ಹಲವು ಹಂತಗಳಲ್ಲಿ ಹಣ ಹರಿದಾಡಿದೆ ಎಂಬುದು ತನಿಖೆ ವೇಳೆ ತಿಳಿದುಬಂತು. ಕೃತ್ಯಕ್ಕೆ ಬಳಸಿದ್ದ ಹಣದ ಮೂಲದ ಬಗ್ಗೆ ಬಳ್ಳಾರಿ ಜೈಲಿನಲ್ಲಿ ನಟನ ಹೇಳಿಕೆಯನ್ನು ಐಟಿ ಅಧಿಕಾರಿಗಳು ದಾಖಲು ಮಾಡಿಕೊಂಡಿದ್ದಾರೆ. ಕೋರ್ಟ್ ಆದೇಶದ ಮೇಲೆ ದಾಳಿ ಮಾಡಲು ಐಟಿ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಜೈಲಿನಲ್ಲಿ ದರ್ಶನ್ಗೆ ರಾಜಾತಿಥ್ಯ ಕೇಸ್: ಮೊಬೈಲ್ ರವಾನೆ ಮಾಡ್ತಿದ್ದ ಕಿಂಗ್ ಪಿನ್ ಲಾಕ್
ಒಂದೆಡೆ ದರ್ಶನ್ ಅವರು ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇನ್ನೊಂದೆಡೆ ಅವರಿಗೆ ಮತ್ತೆ ಕಾನೂನಿನ ಸಂಕಷ್ಟ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಅಕ್ರಮ ಹಣ ವರ್ಗಾವಣೆ ಆಗಿದ್ದು ಕಂಡುಬಂದರೆ ಐಟಿ ಅಧಿಕಾರಿಗಳು ಹೆಚ್ಚಿನ ತನಿಖೆ ಮಾಡಬೇಕಾಗುತ್ತದೆ. ಅದಕ್ಕಾಗಿ ದರ್ಶನ್ ಅವರನ್ನು ವಶಕ್ಕೆ ಪಡೆಯಲೂಬಹುದು. ಒಂದು ವೇಳೆ ರೇಣುಕಾಸ್ವಾಮಿ ಕೇಸ್ನಲ್ಲಿ ದರ್ಶನ್ಗೆ ಜಾಮೀನು ಸಿಕ್ಕರೂ ಹಣಕ್ಕೆ ಸಂಬಂಧಿಸಿದ ಕೇಸ್ನಲ್ಲಿ ಜೈಲು ವಾಸ ಮುಂದುವರಿಯಬಹುದು.
ಇಂದು (ಸೆ.23) ರೇಣುಕಾಸ್ವಾಮಿ ಕೊಲೆ ಕೇಸ್ನ ಮೂರು ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಕಾರ್ತಿಕ್ (ಎ15), ಕೇಶವಮೂರ್ತಿ (ಎ16), ನಿಖಿಲ್ ನಾಯಕ್ (ಎ17) ಜಾಮೀನು ಪಡೆದು ಸದ್ಯಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ. ಪವಿತ್ರಾ ಗೌಡ, ಪ್ರದೋಶ್, ಪವನ್ ಮುಂತಾದವರು ಜಾಮೀನು ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.