ಕಳೆದ ಕೆಲವು ದಿನಗಳಿಂದ ನಿರ್ಮಾಪಕ ಎಂ.ಎನ್. ಕುಮಾರ್ (MN Kumar) ಅವರು ಕಿಚ್ಚ ಸುದೀಪ್ ವಿರುದ್ಧ ಹಲವು ಆರೋಪಗಳನ್ನು ಹೊರಿಸುತ್ತಿದ್ದಾರೆ. ಈ ಕುರಿತಂತೆ ಸ್ಪಷ್ಟನೆ ನೀಡಲು ಸುದೀಪ್ (Kichcha Sudeep) ಅವರ ಆಪ್ತರಾದ ಜಾಕ್ ಮಂಜು ಇಂದು (ಜುಲೈ 9) ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಒಟ್ಟಾರೆಯಾಗಿ ಈ ಎಲ್ಲ ಸಮಸ್ಯೆ ಶುರುವಾಗಿದ್ದು ಹೇಗೆ ಎಂಬುದನ್ನು ಜಾಕ್ ಮಂಜು ವಿವರಿಸಿದ್ದಾರೆ. ‘ಎಂ.ಎನ್. ಕುಮಾರ್ ಅವರು ಸುದೀಪ್ ಬಳಿ ಬಂದು ‘ಮುಕುಂದ ಮುರಾರಿ’ ಚಿತ್ರಕ್ಕೆ ಡಿಮಾನಿಟೈಸೇಷನ್ನಿಂದ ತೊಂದರೆ ಆಗಿದೆ ಅಂದರು. ‘ರನ್ನ’ ಚಿತ್ರದ ನಿರ್ಮಾಪಕರಿಗೆ ತಾವು ಹಣ ಕೊಟ್ಟಿದ್ದು, ಅದು ವಾಪಸ್ ಬಂದಿಲ್ಲ ಅಂತ ಕೂಡ ಹೇಳಿದರು. ಹಾಗಾಗಿ ಜೊತೆಯಾಗಿ ಒಂದು ಸಿನಿಮಾ ಮಾಡುವ ಮೂಲಕ ಸಹಾಯ ಮಾಡಿ ಎಂದು ಅವರು ಕೇಳಿಕೊಂಡರು. ಅದಕ್ಕೆ ಸುದೀಪ್ ಒಪ್ಪಿಕೊಂಡಿದ್ದರು. ನಂತರ ನಿರ್ದೇಶಕರನ್ನು ಆಯ್ಕೆ ಮಾಡುವ ಕೆಲಸ ಶುರುವಾಯಿತು. ಆದರೆ ಯಾರೂ ಆಯ್ಕೆ ಆಗಲಿಲ್ಲ’ ಎಂದು ಜಾಕ್ ಮಂಜು (Jack Manju) ಹೇಳಿದ್ದಾರೆ.
‘ಆ ಸಿನಿಮಾ ಬೇಗ ಸೆಟ್ಟೇರಲಿಲ್ಲ. ಕುಮಾರ್ ಅವರು ಒತ್ತಡದಲ್ಲಿ ಇದ್ದಿದ್ದರಿಂದ ಅವರು ಮಾತನಾಡುವ ರೀತಿ ಬದಲಾಯಿತು. ನಂತರ ಒಬ್ಬ ನಿರ್ದೇಶಕನನ್ನು ಸುದೀಪ್ ಆಯ್ಕೆ ಮಾಡಿದರು. ಆದರೆ ಆ ನಿರ್ದೇಶಕರು ಕೇಳಿದಷ್ಟು ಸಂಭಾವನೆ ನೀಡಲು ಕುಮಾರ್ ಒಪ್ಪಲಿಲ್ಲ. 2020ರ ಜನವರಿಯಲ್ಲಿ ಸುದೀಪ್ ‘ವಿಕ್ರಾಂತ್ ರೋಣ’ ಶುರುಮಾಡಿದರು. ಅದಕ್ಕೆ ಮೂರು ವರ್ಷ ಹಿಡಿಯಿತು. ಅನಾರೋಗ್ಯ, ಕೆಲಸದ ಒತ್ತಡ ಮುಂತಾದ ಕಾರಣಗಳಿಂದ ಕುಮಾರ್ ಅವರನ್ನು ಭೇಟಿಯಾಗಲು ಸುದೀಪ್ ಅವರಿಗೆ ಸಾಧ್ಯವಾಗಲಿಲ್ಲ. ನಂತರ ಪ್ರಿಯಾ ಮೇಡಂ ಅವರ ಜೊತೆ ಕುಮಾರ್ ಮೀಟಿಂಗ್ ನಡೆಸಿದರು. ಕುಮಾರ್ ಅವರ ಕಷ್ಟ ಏನು ಎಂಬುದನ್ನು ಸುದೀಪ್ಗೆ ಹೇಳಲಾಯ್ತು. ನಂತರ ಅವರನ್ನು ಕರೆಸಿ ತಾತ್ಕಾಲಿಕವಾಗಿ 5 ಕೋಟಿ ರೂಪಾಯಿ ಸಹಾಯ ಮಾಡಲು ಸುದೀಪ್ ಮುಂದಾದರು. ಆದರೆ ಕುಮಾರ್ ಅವರು ಕೋಪದಲ್ಲಿ ಅದನ್ನು ಒಪ್ಪಿಕೊಳ್ಳಲಿಲ್ಲ. ಈ ರೀತಿ ಭಿಕ್ಷೆಯ ಹಣ ಬೇಡ, ಸಿನಿಮಾ ಮಾಡಿ ಅಂತ ಪಟ್ಟು ಹಿಡಿದರು’ ಎಂದು ಜಾಕ್ ಮಂಜು ಹೇಳಿದ್ದಾರೆ.
‘ನನಗೆ ಬರಬೇಕಾದ ಹಣ ಕೊಡಿ’ ಎಂದು ಕುಮಾರ್ ಅವರು ಪಟ್ಟು ಹಿಡಿದಿದ್ದರು. ಅದು ಸುದೀಪ್ಗೆ ಬೇಸರ ಮೂಡಿಸಿತ್ತು. ‘ನಾನು ಕುಮಾರ್ ಬಳಿ ಹಣ ತೆಗೆದುಕೊಂಡಿಲ್ಲ. ಸಹಾಯ ಕೇಳಿಕೊಂಡು ಬಂದವರು ಈಗ ಈ ರೀತಿ ಮಾತಾಡಿದ್ದು ಸರಿಯಲ್ಲ’ ಅಂತ ಸುದೀಪ್ ಕೊಂಚ ಗರಂ ಆಗಿದ್ದರು. ‘ಸುದೀಪ್ ಅವರಿಂದ ತಮಗೆ ಹಣ ಬರಬೇಕು. ಆ ಬಳಿಕ ನಿಮ್ಮ ಸಾಲ ತೀರಿಸುತ್ತೇನೆ’ ಅಂತ ಎನ್. ಕುಮಾರ್ ಅವರು ಕಂಡಕಂಡಲ್ಲಿ ಹೇಳಿಕೊಂಡು ತಿರುಗಾಡಿದ್ದಾರೆ ಎಂಬುದು ಜಾಕ್ ಮಂಜು ಆರೋಪ.
ಇದನ್ನೂ ಓದಿ: MN Kumar: ‘ಸುದೀಪ್ ಮಾಡಿದ 45 ಸಿನಿಮಾಗಳಿಗೆ ಅಗ್ರಿಮೆಂಟ್ ಇದೆಯಾ?’; ದಾಖಲೆ ಕೇಳಿದ್ದಕ್ಕೆ ಎಂ.ಎನ್. ಕುಮಾರ್ ಮರುಪ್ರಶ್ನೆ
‘ಬೇರೆ ಸಿನಿಮಾಗಳಿಂದ ಆಗಿರುವ ನಷ್ಟಕ್ಕೆಲ್ಲ ಸುದೀಪ್ ಅವರೇ ಕಾರಣ ಎಂಬ ರೀತಿಯಲ್ಲಿ ಎಂ.ಎನ್. ಕುಮಾರ್ ಮಾತನಾಡಿದ್ದಾರೆ. ಅದರಿಂದ ಸುದೀಪ್ ಅವರಿಗೆ ಬಹಳ ನೋವಾಗಿದೆ. ಕುಮಾರ್ ಅವರಿಗೆ ಸಹಾಯ ಆಗಲಿ ಎಂಬ ಉದ್ದೇಶದಿಂದ ಒಂದು ಕಂಪನಿಯ ಜೊತೆ ಕೈ ಜೋಡಿಸಿ ಒಂದು ಸಿನಿಮಾ ಮಾಡಿಕೊಡುವ ನಿರ್ಧಾರಕ್ಕೆ ಬರಲಾಯಿತು. ಅದರ ಬಜೆಟ್ ಜಾಸ್ತಿ ಇತ್ತು. ಮೊದಲು ಒಪ್ಪಿಕೊಂಡ ಕುಮಾರ್ ಅವರು ಮತ್ತೆ ಮಾತು ಬದಲಾಯಿಸಿದರು. ಅದೇ ಕೊನೆಯ ಭೇಟಿ’ ಎಂದು ಜಾಕ್ ಮಂಜು ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:25 pm, Sun, 9 July 23