‘ಗುರುಪ್ರಸಾದ್ ಬಿಜೆಪಿ ವಿರೋಧಿ’: ಡೈರೆಕ್ಟರ್ ಸಾವಿನ ಬಳಿಕ ಸಂಚು ವಿವರಿಸಿದ ಜಗ್ಗೇಶ್​

| Updated By: ಮದನ್​ ಕುಮಾರ್​

Updated on: Nov 03, 2024 | 4:21 PM

ನಟ ಜಗ್ಗೇಶ್ ಮತ್ತು ಗುರುಪ್ರಸಾದ್ ಅವರು ಮೂರು ಸಿನಿಮಾಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. ಈಗ ಗುರುಪ್ರಸಾದ್​ ಸಾವಿನ ಸುದ್ದಿ ಕೇಳಿ ಜಗ್ಗೇಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ವಿರುದ್ಧ ಗುರುಪ್ರಸಾದ್ ಮಾಡಿದ್ದ ಹುನ್ನಾರದ ಬಗ್ಗೆ ಜಗ್ಗೇಶ್ ಅವರು ವಿವರಿಸಿದ್ದಾರೆ. ‘ರಂಗನಾಯಕ’ ಸಿನಿಮಾದ ವೇಳೆ ಹೆಚ್ಚಿದ ಮನಸ್ತಾಪದ ಬಗ್ಗೆ ಜಗ್ಗೇಶ್ ಮಾತನಾಡಿದ್ದಾರೆ.

‘ಗುರುಪ್ರಸಾದ್ ಬಿಜೆಪಿ ವಿರೋಧಿ’: ಡೈರೆಕ್ಟರ್ ಸಾವಿನ ಬಳಿಕ ಸಂಚು ವಿವರಿಸಿದ ಜಗ್ಗೇಶ್​
ಜಗ್ಗೇಶ್, ಗುರುಪ್ರಸಾದ್​
Follow us on

‘ಮಠ’ ಮತ್ತು ‘ಎದ್ದೇಳು ಮಂಜುನಾಥ’ ಸಿನಿಮಾಗಳಿಂದ ಜಗ್ಗೇಶ್​ ಮತ್ತು ಗುರುಪ್ರಸಾದ್ ಅವರು ಕಾಂಬಿನೇಷನ್​ಗೆ ಜನಮೆಚ್ಚುಗೆ ಸಿಕ್ಕಿತ್ತು. ಆದರೆ ‘ರಂಗನಾಯಕ’ ಸಿನಿಮಾದಲ್ಲಿ ಸಮಸ್ಯೆ ಉಂಟಾಯಿತು. ಆ ಸಂದರ್ಭವನ್ನು ಜಗ್ಗೇಶ್ ಈಗ ವಿವರಿಸಿದ್ದಾರೆ. ‘ಆತನ ಬದುಕು ಗೊಂದಲಮಯವಾಗಿತ್ತು. ಆದರೂ ಕೂಡ ನಮ್ಮ ಜೊತೆಗೆ ಕೆಲಸ ಮಾಡಿದ್ದ. ‘ಮಠ’ ಮತ್ತು ‘ಎದ್ದೇಳು ಮಂಜುನಾಥ’ ಎಂಥ ಒಳ್ಳೆಯ ಸಿನಿಮಾಗಳು ಅದನ್ನು ನಾನು ಕೊನೇ ಉಸಿರು ಇರುವ ತನಕ ಮರೆಯೋಕೆ ಆಗಲ್ಲ. ಕಲಾವಿದನಾಗಿ ನಾನು ಆ ಸಿನಿಮಾಗಳನ್ನು ಬಹಳ ಪ್ರೀತಿಸಿದೆ. ಇತ್ತೀಚಿನ ದಿನಗಳಲ್ಲಿ ನನಗೆ ಆತನ ಬಗ್ಗೆ ಗೊತ್ತಾಗಿದ್ದು ಏನೆಂದರೆ, ಆತ ಬಿಜೆಪಿ ವಿರೋಧಿ’ ಎಂದಿದ್ದಾರೆ ಜಗ್ಗೇಶ್.

‘ಗುರುಪ್ರಸಾದ್ ಎಡಪಂಥೀಯ ಚಿಂತಕ. ‘ಇವನ ಮಾನ ಮರ್ಯಾದೆಯೆಲ್ಲ ಹೆಂಗೆ ಹರಾಜು ಹಾಕ್ತೀನಿ ನೋಡುತ್ತಾ ಇರಿ’ ಎಂದು ಅವನು ನನ್ನ ಬಗ್ಗೆ ಹೇಳಿಕೊಂಡಿದ್ದನಂತೆ. ಅದು ನನಗೆ ಗೊತ್ತಾಗಿಹೋಯ್ತು. ನಾನು ತುಂಬಾ ಭಯಭೀತನಾದೆ. ಹಾಗಾಗಿ ನನಗೆ ಸಿನಿಮಾ ತೋರಿಸು ಎಂದೆ. ಆದರೆ ಅವನು ತೋರಿಸಲಿಲ್ಲ. ನನ್ನ ಬಳಿ ಪಿಕ್ಚರ್​ ಕೇಳೋದೆಲ್ಲ ಇಟ್ಕೋಬೇಡಿ. ನಾನು ಪಿಕ್ಚರ್ ತೋರಿಸಿಕೊಂಡು ಕೂರುವವನಲ್ಲ ಅಂತ ಹೇಳಿದ್ದ. ಸಿನಿಮಾ ರಿಲೀಸ್​ ಆದ ಬಳಿಕ ನನ್ನ ಜೀವನದಲ್ಲೇ ಆಗದೇ ಇರುವಷ್ಟು ಅವಮಾನ ಆ ಒಂದು ಸಿನಿಮಾದಿಂದ ಆಯಿತು’ ಎಂದು ಜಗ್ಗೇಶ್ ಅವರು ಹೇಳಿದ್ದಾರೆ.

‘ಎಲ್ಲ ಯಶಸ್ವಿ ವ್ಯಕ್ತಿಗಳಿಗೆ ಶಿಸ್ತು ಪ್ರಧಾನವಾಗಿರುತ್ತದೆ. ನಾನು ಕೂಡ ಹಲವು ಕೆಲಸಗಳನ್ನು ಶ್ರದ್ಧಾ ಭಕ್ತಿಯಿಂದ ಮಾಡಿದೆ. ತಾಳ್ಮೆಯಿಂದ ಕಾದು ನಿಮ್ಮಲ್ಲರ ಕಣ್ಣ ಮುಂದೆ ನವರಸ ನಾಯಕ ಆದೆ. ಎಂಎಲ್​ಎ, ಎಂಎಲ್​ಸಿ, ಸಂಸದ ಆದೆ. ತಾಳ್ಮೆ ಇದ್ದರೆ ಪ್ರತಿಯೊಬ್ಬರಿಗೂ ಯಶಸ್ಸು ಬರುತ್ತದೆ’ ಎಂದಿದ್ದಾರೆ ಜಗ್ಗೇಶ್.

ಇದನ್ನೂ ಓದಿ: ನಿರ್ದೇಶಕ ಗುರುಪ್ರಸಾದ್ ಸಾವಿನ ಹಿಂದಿದೆ 4 ಪ್ರಮುಖ ಅನುಮಾನಗಳು

ಕೊಳೆತ ಸ್ಥಿತಿಯಲ್ಲಿ ಗುರುಪ್ರಸಾದ್ ಅವರ ಶವ ಪತ್ತೆ ಆಗಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ತನಿಖೆ ನಡೆಯುತ್ತಿದೆ. ಗುರುಪ್ರಸಾದ್ ನಿಧನಕ್ಕೆ ಅಭಿಮಾನಿಗಳು ಮತ್ತು ಹಲವು ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.