ನಿರ್ದೇಶಕ ಗುರುಪ್ರಸಾದ್ ಸಾವಿನ ಹಿಂದಿದೆ 4 ಪ್ರಮುಖ ಅನುಮಾನಗಳು
‘ಮಠ’ ಸಿನಿಮಾ ಖ್ಯಾತಿಯ ಡೈರೆಕ್ಟರ್ ಗುರುಪ್ರಸಾದ್ ಅವರ ಮೃತದೇಹ ಕೊಳತೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರ ಸಾವಿನ ಕುರಿತು ನಾಲ್ಕು ಪ್ರಮುಖ ಅನುಮಾನಗಳು ಮೂಡಿವೆ. ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ಗುರುಪ್ರಸಾದ್ ಅವರ ಸಾವಿನ ಹಿಂದಿರುವ ರಹಸ್ಯ ತಿಳಿಯಲು ಪೊಲೀಸರು ತನಿಖೆ ಆರಂಭ ಮಾಡಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಶಾಕಿಂಗ್ ಇದು ಸುದ್ದಿ. ನಿರ್ದೇಶಕ ಗುರುಪ್ರಸಾದ್ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ ಆಗಿದೆ. ದೀಪಾವಳಿ ಹಬ್ಬದ ಖುಷಿಯಲ್ಲಿ ಇದ್ದ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳಿಗೆಲ್ಲ ಗುರು ಪ್ರಸಾದ್ ಅವರ ಸಾವಿನ ವಿಷಯ ತಿಳಿದ ಆಘಾತ ಆಗಿದೆ. ಜಗ್ಗೇಶ್, ಧನಂಜಯ್ ಮುಂತಾದ ಕಲಾವಿದರ ಜೊತೆ ಕೆಲಸ ಮಾಡಿದ್ದ ಗುರುಪ್ರಸಾದ್ ಅವರು ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದರು. ಈಗ ಅವರು ಅನುಮಾನಾಸ್ಪದ ರೀತಿಯಲ್ಲಿ ನಿಧನರಾಗಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆ ರೀತಿ ಕಾಣಿಸಿದರೂ ಸೂಕ್ತ ತನಿಖೆ ಬಳಿಕ ಅಸಲಿ ವಿಷಯ ತಿಳಿಯಲಿದೆ. ಅವರ ಸಾವಿನ ಬಗ್ಗೆ 4 ಪ್ರಮುಖ ಅನುಮಾನಗಳು ಮೂಡಿವೆ.
ಅನುಮಾನ 1- ಸಾಲ ಕೊಟ್ಟವರ ಕಾಟ: ನಿರ್ದೇಶಕ ಗುರುಪ್ರಸಾದ್ ಅವರು ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಇದರಿಂದಾಗಿ ಸಾಲ ಕೊಟ್ಟವರಿಂದ ಅವರಿಗೆ ಕಾಟ ಹೆಚ್ಚಿತ್ತು ಎಂಬ ಮಾಹಿತಿ ಇದೆ. ಅಂದಾಜು ಮೂರು ಕೋಟಿ ರೂಪಾಯಿ ಸಾಲದ ಸುಳಿಯಲ್ಲಿ ಗುರುಪ್ರಸಾದ್ ಸಿಲುಕಿದ್ದರು. ಈ ಕಾರಣದಿಂದ ಅವರು ಪದೇಪದೇ ಮನೆ ಬದಲಾವಣೆ ಮಾಡುತ್ತಿದ್ದರು.
ಅನುಮಾನ 2- ಸಿನಿಮಾ ರಿಲೀಸ್ಗೆ ತೊಂದರೆ: ಇತ್ತೀಚಿನ ವರ್ಷಗಳಲ್ಲಿ ಗುರು ಪ್ರಸಾದ್ ಅವರಿಗೆ ನಿರೀಕ್ಷಿತ ಪ್ರಮಾಣದ ಗೆಲುವು ಸಿಕ್ಕಿರಲಿಲ್ಲ. ಹಾಗಾಗಿ ಅವರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದರು. ‘ಎದ್ದೇಳು ಮಂಜುನಾಥ 2’ ಸಿನಿಮಾದ ಶೂಟಿಂಗ್ ಮುಗಿದು 2 ವರ್ಷ ಕಳೆದರೂ ಬಿಡುಗಡೆ ಆಗಿಲ್ಲ. ಈ ಸಿನಿಮಾದ ನಿರ್ಮಾಣದಿಂದ ಅವರು ನಷ್ಟ ಅನುಭವಿಸಿದ್ದರು.
ಅನುಮಾನ 3- ಬಂಧನದ ಭಯ: ನೀಡಬೇಕಿದ್ದ ಹಣವನ್ನು ವಾಪಸ್ ನೀಡಲಾಗದೇ ಗುರುಪ್ರಸಾದ್ ಹೈರಾಣಾಗಿದ್ದರು. ಅದರ ನಡುವೆ ಅವರಿಂದ ಚೆಕ್ ಬೌನ್ಸ್ ಕೂಡ ಆಗಿತ್ತು. ಹಲವು ಕೋರ್ಟ್ ಕೇಸ್ಗಳು ಅವರ ಮೇಲೆ ಇತ್ತು. ಚೆಕ್ ಬೌನ್ಸ್ ಕೇಸ್ನಿಂದ ಅವರು ಬಂಧನದ ಭೀತಿಯಲ್ಲಿ ಇದ್ದರು. ಸಾಲ ಮರುಪಾವತಿ ಮಾಡಲಾಗದೇ, ಬಂಧನದ ಭೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನವಿದೆ.
ಇದನ್ನೂ ಓದಿ: ಹೇಗಿದ್ದ ಗುರುಪ್ರಸಾದ್ ಹೇಗಾಗಿಬಿಟ್ಟ: ಜಗ್ಗೇಶ್ ಬಿಚ್ಚಿಟ್ಟ ಗುರು ಜೀವನ ಕತೆ
ಅನುಮಾನ 4- ಕೌಟುಂಬಿಕ ಕಲಹ: ಗುರುಪ್ರಸಾದ್ ಅವರ ನಿಧನದ ಹಿಂದೆ ಕೌಟುಂಬಿಕ ಕಲಹ ಕೂಡ ಇರಬಹುದು ಎಂಬ ಅನುಮಾನ ಇದೆ. ಇತ್ತೀಚೆಗೆ ಗುರುಪ್ರಸಾದ್ ಎರಡನೇ ಮದುವೆಯಾಗಿದ್ದರು. ಮೊದಲ ಪತ್ನಿಯಿಂದ ದೂರವಾಗಿದ್ದರು. 2ನೇ ಮದುವೆಯಾಗಿದ್ದರೂ ಕೂಡ ಗುರುಪ್ರಸಾದ್ ಒಬ್ಬರೇ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ಇದರಿಂದಾಗಿ ಹಲವು ಅನುಮಾನಗಳು ಹುಟ್ಟಿಕೊಂಡಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:58 pm, Sun, 3 November 24