ತಮ್ಮದೇ ಹೆಸರಿನಲ್ಲಿ ಹೊಸ ಸ್ಟುಡಿಯೋ ಆರಂಭಿಸಿದ ಜಗ್ಗೇಶ್; 40 ವರ್ಷಗಳ ಡ್ರೀಮ್ ಇದು
ನಟ ಜಗ್ಗೇಶ್ ಅವರು ಬೆಂಗಳೂರಿನಲ್ಲಿ ಹೊಸ ಸ್ಟುಡಿಯೋ ಆರಂಭಿಸಿದ್ದಾರೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಬೇಕಾದ ಬಹುತೇಕ ಎಲ್ಲ ಸೌಲಭ್ಯ ಈ ಸ್ಟುಡಿಯೋದಲ್ಲಿ ಇದೆ. 40 ವರ್ಷಗಳ ಹಿಂದೆ ಜಗ್ಗೇಶ್ ಅವರು ಈ ಸ್ಟುಡಿಯೋದ ಕನಸು ಕಂಡಿದ್ದರು. ಅದು ಈಗ ನನಸಾಗಿದೆ. ‘ಜಗ್ಗೇಶ್ ಸ್ಟುಡಿಯೋ’ ಬಗ್ಗೆ ಅವರು ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ.
‘ನಾನು 1980ರಲ್ಲಿ ಚಿತ್ರರಂಗಕ್ಕೆ ಬಂದೆ. ಸ್ಟುಡಿಯೋ ಕಟ್ಟುವ ಕನಸು ಇಂದು-ನಿನ್ನೆಯದಲ್ಲ. ಸುಮಾರು 40 ವರ್ಷದ ಹಿಂದಿನ ಕನಸು ಅದು. ಸಹೋದರ ಕೋಮಲ್ ನಿರ್ಮಾಣದ ಯಲಾಕುನ್ನಿ ಸಿನಿಮಾದ ಎಲ್ಲ ಕೆಲಸ ‘ಜಗ್ಗೇಶ್ ಸ್ಟುಡಿಯೊಸ್’ ಒಳಗೆ ಆಗಿದೆ ಎಂಬುದು ವಿಶೇಷ. ನನ್ನ ಧರ್ಮಪತ್ನಿ ಕೊಟ್ಟ ಸಲಹೆಯಂತೆ ‘ಜಗ್ಗೇಶ್ ಸ್ಟುಡಿಯೊಸ್’ ಎಂದು ಹೆಸರು ಇಟ್ಟಿದ್ದೇವೆ. ನನ್ನ ಚಿಕ್ಕ ಮಗ ಯತಿರಾಜನ ಕನಸಿನ ಪ್ರಾಜೆಕ್ಟ್ ಈ ಸ್ಟುಡಿಯೋ’ ಎಂದು ಜಗ್ಗೇಶ್ ಅವರು ಹೇಳಿದ್ದಾರೆ.
‘ಗಾಂಧಿನಗರದಲ್ಲಿ ಒಂದು ಸ್ಟುಡಿಯೋದಲ್ಲಿ ಎನ್.ಎಸ್. ರಾವ್ ಅವರು ಡಬ್ಬಿಂಗ್ ಮಾಡುತ್ತಾ ಇದ್ದದ್ದು ನೋಡಿ ನಾನು ಇಂಪ್ರೆಸ್ ಆಗಿದ್ದೆ. ಆ ಸ್ಟುಡಿಯೋಗೆ ಆ ಸಮಯದಲ್ಲಿ 8.9 ಲಕ್ಷ ರೂಪಾಯಿ ಖರ್ಚು ಆಗಿತ್ತು ಎಂಬುದು ಗ್ರೇಟ್. ನನ್ನ ಸಿನಿಮಾ ಬದುಕಿನ ವರ್ಣ ರಂಜಿತ ಜರ್ನಿಗೆ ಚಾಮುಂಡೇಶ್ವರಿ ಸ್ಟುಡಿಯೋ ದೊಡ್ಡ ಪಾತ್ರ ವಹಿಸುತ್ತದೆ. ‘ಬಂಡ ನನ್ನ ಗಂಡ’ ಮೂಲಕ ನಾನು ಹೀರೋ ಆದೆ. ಆ ಸಮಯ ಶಂಕರನಾಗ್ ಅವರು ಸಂಕೇತ್ ಸ್ಟುಡಿಯೋಗೆ ಹೋದಾಗ ಆಗುತ್ತಿದ್ದ ಫೀಲ್ ಸಖತ್’ ಎಂದು ಆ ದಿನಗಳನ್ನು ಜಗ್ಗೇಶ್ ನೆನಪಿಸಿಕೊಂಡಿದ್ದಾರೆ.
‘ಶಂಕರನಾಗ್ ಹಾಗೆಯೇ ಇದ್ದದ್ದು. ಅವರೊಬ್ಬ ವಿಷನರಿ ಮ್ಯಾನ್. ಸ್ಕ್ರೀನ್ ಮೇಲೆ ನಮ್ಮ ಪಾತ್ರ ನೋಡಿ ಡಬ್ ಮಾಡ್ತಾ ಇದ್ದ ದಿನಗಳು, ನಿಧಾನವಾಗಿ ಕಮ್ಮಿ ಆಗ್ತಾ ಆಗ್ತಾ ಚಿಕ್ಕ ಚಿಕ್ಕ ಸ್ಕ್ರೀನ್ ನೋಡಿ ಡಬ್ ಮಾಡುವ ಕಾಲ ಬಂತು. ಇದರಿಂದ ನನಗೆ ಬೇಜಾರು ಆಗುತ್ತಿತ್ತು. ಬಹುತೇಕ ಸಂಗೀತ ನಿರ್ದೇಶಕರು ತಮ್ಮ ತಮ್ಮ ಮನೆಗಳಲ್ಲೇ ಸ್ಟುಡಿಯೋ ಮಾಡ್ಕೊಂಡು ಕೆಲಸಗಳನ್ನ ಮಾಡ್ತಾ ಇರುತ್ತಾರೆ. ವಿಶಾಲವಾದ ಜಾಗ ಇರುವುದು ಕಡಿಮೆ. ನನ್ನ ಕನಸು ಬೇರೆ ಇತ್ತು. ಸ್ಟುಡಿಯೋ ವಿಶಾಲವಾಗಿ ಇರಬೇಕು ಎಂಬುದು ನನ್ನ ಆಸೆಯಾಗಿತ್ತು. ಕಲಾವಿದರಿಗೆ ಸ್ವಲ್ಪ ಫೀಲ್ ಗುಡ್ ಅನುಭವ ಇದ್ದರೆ ಒಳ್ಳೆದು ಎನಿಸುತ್ತದೆ’ ಎಂದಿದ್ದಾರೆ ಜಗ್ಗೇಶ್.
ಇದನ್ನೂ ಓದಿ: ನನ್ನ ಖಾಸಗಿ ಸಂತೋಷವನ್ನು ಮೊಬೈಲ್ನಲ್ಲಿ: ಸೆಲೆಬ್ರಿಟಿಗಳ ಕಷ್ಟ ವಿವರಿಸಿದ ಜಗ್ಗೇಶ್
‘ಚಿತ್ರೀಕರಣ ಮುಗಿದ ನಂತರ ಫೂಟೇಜ್ ತಂದು ಇಲ್ಲಿ ಕೊಟ್ಟರೆ ಸಿಜಿ ಒಂದು ಬಿಟ್ಟು ಮಿಕ್ಕ ಎಲ್ಲಾ ಕೆಲಸಗಳನ್ನು ಇಲ್ಲಿ ಮಾಡಲಾಗುತ್ತದೆ. ಈಗಾಗಲೇ ಒಂದು ಮಲಯಾಳಂ ಹಾಗೂ ಒಂದು ಹಿಂದಿ ಸಿನಿಮಾದ ಕೆಲಸ ಇಲ್ಲಿ ಆಗಿದೆ. ಅವರೆಲ್ಲ ತುಂಬ ಖುಷಿ ಆಗಿದ್ದಾರೆ. ಚಿಕ್ಕ ಬಜೆಟ್, ದೊಡ್ಡ ಬಜೆಟ್ ಸಿನಿಮಾ ಅಂತ ಭೇದ ಮಾಡದೇ ಎಲ್ಲವೂ ಒಂದೇ ಎಂದು ಫೀಲ್ ಮಾಡಬೇಕು. ನನ್ನ ಸ್ಟುಡಿಯೋದಲ್ಲಿ ಇರುವ ಎಲ್ಲ ಸಾಧನಗಳು ಲೇಟೆಸ್ಟ್. ಎಲ್ಲವನ್ನೂ ಅಮೆರಿಕದಿಂದ ತರಿಸಿದ್ದೇವೆ’ ಎಂದು ಜಗ್ಗೇಶ್ ಅವರು ಹೇಳಿದ್ದಾರೆ.
‘ಬೇರೆ ಸ್ಟುಡಿಯೋದವರು ಕೊಡುವ ಕ್ವಾಲಿಟಿಗಿಂತ ಒಳ್ಳೆಯ ಔಟ್ ಪುಟ್ ಕೊಟ್ಟು, ಬೆಲೆ ಸಹ ಸ್ವಲ್ಪ ಕಡಿಮೆ ಇರುತ್ತದೆ. ಈಗಾಗಲೇ ನಮ್ಮಲ್ಲಿ ನಾಲ್ಕೈದು ಸಿನಿಮಾಗಳು ಇವೆ. ಅವುಗಳ ಕೆಲಸ ನಡೆಯುತ್ತಿದೆ. ನನ್ನ ಉದ್ಯಮದ ಜನಕ್ಕೆ ನನ್ನ ಸೇವೆ ತಲುಪಬೇಕು. ನನಗೆ ಹಾಡು ಹೇಳೋ ಆಸಕ್ತಿ. ರಾಘವೇಂದ್ರ ಸ್ವಾಮಿಗಳ ಹಾಡುಗಳನ್ನು, ಲಾವಣಿ ಶೈಲಿಯ, ಆಡು ಭಾಷೆಯ ಹಾಡುಗಳ ಬಗ್ಗೆ ಆಸಕ್ತಿ ಇದೆ. ರಾಯರು ನನ್ನಿಂದ ಶುರು ಮಾಡಿಸುತ್ತಾರೆ. ಅಣ್ಣಾವ್ರ ಬಾನಿಗೊಂದು ಎಲ್ಲೆ ಎಲ್ಲಿದೆ, ವೇದಾಂತಿ ಹೇಳಿದನು, ಎಂದೆಂದೂ ನಿನ್ನನು ಮರೆತು, ಹಾಡುಗಳನ್ನು ನಾನೇ ಹಾಡಿ ಸಂಭ್ರಮ ಪಟ್ಟಿದ್ದೇನೆ’ ಎಂಬುದು ಜಗ್ಗೇಶ್ ಮಾತುಗಳು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.