ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿಕೆ, ನಟ ಜಗ್ಗೇಶ್​ರಿಂದ ಪಾಠ

Jaggesh tweet: ನಟ ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ನೀಡಿರುವ ಹೇಳಿಕೆ ವಿವಾದ ಎಬ್ಬಿಸಿದೆ. ಹಲವಾರು ಕನ್ನಡಪರ ಸಂಘಟನೆಗಳು ಕಮಲ್ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಇದೀಗ ನಟ ಜಗ್ಗೇಶ್ ಸಹ ಕಮಲ್ ಅವರ ಹೇಳಿಕೆ ಬಗ್ಗೆ ಟ್ವೀಟ್ ಮಾಡಿದ್ದು, ಕಮಲ್ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.

ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿಕೆ, ನಟ ಜಗ್ಗೇಶ್​ರಿಂದ ಪಾಠ
Kamal Haasan Jaggesh

Updated on: May 28, 2025 | 4:59 PM

ಕಮಲ್ ಹಾಸನ್ (Kamal Haasan) ಅದ್ಭುತ ನಟ, ಆದರೆ ತಮ್ಮ ವಾಚಾಳಿತನದಿಂದ ಆಗಾಗ್ಗೆ ವಿವಾದಗಳಲ್ಲಿ ಸಿಕ್ಕಿಕೊಳ್ಳುವುದುಂಟು. ಇತ್ತೀಚೆಗೆ ‘ಥಗ್ ಲೈಫ್’ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ನಟ ಕಮಲ್ ಹಾಸನ್, ತಮಿಳಿನಿಂದಲೇ ಕನ್ನಡ ಜನಿಸಿದೆ ಎಂದಿದ್ದರು. ಕಮಲ್​ರ ಈ ಮಾತು ತೀವ್ರ ವಿವಾದಕ್ಕೆ ಕಾರಣವಾಗಿದೆ. ಕನ್ನಡ ಪರ ಸಂಘಟನೆಗಳು, ಕೆಲ ರಾಜಕೀಯ ಮುಖಂಡರುಗಳು ಕಮಲ್ ಹಾಸನ್ ಅವರ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಆದರೆ ಹೆಚ್ಚಿನ ಕನ್ನಡದ ನಟ-ನಟಿಯರು ಕಮಲ್​ರ ಹೇಳಿಕೆಯನ್ನು ಖಂಡಿಸಿಲ್ಲ. ಇದೀಗ ನಟ, ಬಿಜೆಪಿ ಮುಖಂಡ ಜಗ್ಗೇಶ್, ಕಮಲ್ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.

ಕಮಲ್ ಹಾಸನ್ ಅವರ ಹೇಳಿಕೆ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್, ‘ಕಲೆಗೆ ಜಾತಿ ಇಲ್ಲಾ.ಎಲ್ಲಾಭಾಷೆಯ ಕಲಾವಿದರು ಶಾರದಾಸುತರು ಒಪ್ಪುತ್ತೇವೆ,ಆ ನಿಟ್ಟಿನಲ್ಲಿ ಕಮಲ್ ಹಾಸನ್ ರವರ ಮೆಚ್ಚಿದ್ದೇವೆ. ಅಂದ ಮಾತ್ರಕ್ಕೆ ಕನ್ನಡ ತಮಿಳಿಂದ ಹುಟ್ಟಿದೆ ಎಂದ ಅವರ ಮಾತು ಒಪ್ಪೋಲ್ಲಾ. ಕನ್ನಡಕ್ಕೆ 2.5ಸಾವಿರ ವರ್ಷದ ಇತಿಹಾಸವಿದೆ,ಅಷ್ಟೇಕೆ ಹನುಮದೇವರು ಕನ್ನಡ ಕಲಿಪುಂಗವ ಅವನ ಕಾಲ ರಾಮಾಯಣ ಇಷ್ಟು ಅರ್ಥವಾದರೆ ಸಾಕಲ್ಲವೆ ಸಾರ್’ ಎಂದು ಪ್ರಶ್ನೆ ಮಾಡಿದ್ದಾರೆ. ಆ ಮೂಲಕ ಕನ್ನಡ ಭಾಷೆಗೆ ಅದರದ್ದೇ ಆದ ಸುದೀರ್ಘ ಇತಿಹಾಸ ಇದೆ ಎಂದು ನೆನಪು ಮಾಡಿಸಿದ್ದಾರೆ.

ಕಮಲ್ ಹಾಸನ್ ಅವರ ಹೇಳಿಕೆಯನ್ನು ಕನ್ನಡ ಚಿತ್ರರಂಗದ ಮಂದಿ ಖಂಡಿಸಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಇದೇ ಸಮಯದಲ್ಲಿ ನಟ ಜಗ್ಗೇಶ್ ಅವರು ಕಮಲ್ ಅವರ ಹೇಳಿಕೆ ಖಂಡಿಸಿದ್ದಾರೆ. ಅವರು ಮಾತ್ರವೇ ಅಲ್ಲದೆ ನಟ ಚೇತನ್ ಅಹಿಂಸ ಸಹ ಕಮಲ್ ಅವರ ಹೇಳಿಕೆಯನ್ನು ಕಟುವಾಗಿ ಖಂಡಿಸಿದ್ದಾರೆ. ಆದರೆ ಹಲವು ನಟ-ನಟಿಯರು ಈ ವಿವಾದದಿಂದ ತಮ್ಮನ್ನು ತಾವು ದೂರವೇ ಇರಿಸಿಕೊಂಡಿದ್ದಾರೆ.

ಇದನ್ನೂ ಓದಿ:ಕರ್ನಾಟಕದಲ್ಲಿ ಬ್ಯಾನ್ ಆಗಲಿದೆಯೇ ಕಮಲ್ ಹಾಸನ್​ರ ‘ಥಗ್ ಲೈಫ್’ ಸಿನಿಮಾ?

ಕಮಲ್ ಹಾಸನ್ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ನಟ ಜಗ್ಗೇಶ್, ಕೆಲವೇ ದಿನಗಳ ಹಿಂದೆ ಸೋನು ನಿಗಂ ವಿವಾದ ಆದಾಗ ಯಾವುದೇ ಟ್ವೀಟ್ ಮಾಡಿರಲಿಲ್ಲ. ಆದರೆ ಈಗ ಕಮಲ್ ಹಾಸನ್ ಅವರ ಹೇಳಿಕೆ ಸಂದರ್ಭದಲ್ಲಿ ಖಂಡಿಸಿ ಟ್ವೀಟ್ ಮಾಡಿದ್ದಾರೆ.  ಜಗ್ಗೇಶ್ ಅವರ ಇಂದಿನ ಟ್ವೀಟ್​ಗೆ ಹಲವಾರು ಮಂದಿ ಕಮೆಂಟ್ ಮಾಡಿದ್ದು, ಜಗ್ಗೇಶ್ ಅವರ ಟ್ವೀಟ್ ಅನ್ನು ಬೆಂಬಲಿಸಿದ್ದಾರೆ. ಬಿಜೆಪಿ ಕಡೆಯಿಂದ ಪ್ರತಿಭಟನೆ ಮಾಡುವಂತೆಯೂ ಒತ್ತಾಯಿಸಿದ್ದಾರೆ.

ಕೆಲವೇ ದಿನದ ಹಿಂದೆ ಮಡೆನೂರು ಮನು ಶಿವರಾಜ್ ಕುಮಾರ್ ಬಗ್ಗೆ ತುಚ್ಛವಾಗಿ ಮಾತನಾಡಿದ್ದ ಆಡಿಯೋ ವೈರಲ್ ಆದಾಗ ಟ್ವೀಟ್ ಮಾಡಿದ್ದ ನಟ ಜಗ್ಗೇಶ್, ‘ಶಿವರಾಜಕುಮಾರ ಚಿತ್ರರಂಗದ ಕಿರೀಟ ಇದ್ದಂತೆ. ಎಲ್ಲರನ್ನು ಪ್ರೀತಿಸುವ ಜೀವ ಅಂಥವರ ಸಾವು ಬಯಸಿದವರಿಗೆ ಕೇಡುಗಾಲ ಕಾದಿದೆ. ನೊಂದುಕೊಳ್ಳದಿರಿ ಶಿವಣ್ಣ ನೀವು ಹಿಮಾಲಯ, ನಿಮಗೆ ಧೀರ್ಘಾಯುಷ್ಯ ಪ್ರಾಪ್ತಿ ಇದೆ, ನಿಮ್ಮ ಹೆತ್ತವರು ಕನ್ನಡಿಗರ ಆಶೀರ್ವಾದ ಇದೆ’ ಎಂದಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:52 pm, Wed, 28 May 25