ಈ ಥಿಯೇಟರ್​ ಜೊತೆ ಅಣ್ಣಾವ್ರ ಕುಟುಂಬಕ್ಕೆ ಇದೆ ವಿಶೇಷ ನಂಟು; ಏನೆಂದು ತಿಳಿಸಿದ ರಾಘಣ್ಣ

| Updated By: ಮದನ್​ ಕುಮಾರ್​

Updated on: Mar 17, 2022 | 8:28 AM

Raghavendra Rajkumar: ‘ಅಪ್ಪು ಮತ್ತು ಅಪ್ಪಾಜಿ ಅವರು ಆ ಥಿಯೇಟರ್​ಗೆ ಬರುತ್ತಾರೆ ಎಂಬ ನಂಬಿಕೆ ನಮಗೆ ಇದೆ. ಹಾಗಾಗಿ ನಾವು ಅಲ್ಲಿಯೇ ಜೇಮ್ಸ್​ ಸಿನಿಮಾ ನೋಡುತ್ತೇವೆ’ ಎಂದು ರಾಘವೇಂದ್ರ ರಾಜ್​ಕುಮಾರ್​ ಹೇಳಿದ್ದಾರೆ.

ಈ ಥಿಯೇಟರ್​ ಜೊತೆ ಅಣ್ಣಾವ್ರ ಕುಟುಂಬಕ್ಕೆ ಇದೆ ವಿಶೇಷ ನಂಟು; ಏನೆಂದು ತಿಳಿಸಿದ ರಾಘಣ್ಣ
ರಾಘವೇಂದ್ರ ರಾಜ್​ಕುಮಾರ್
Follow us on

‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್ (Puneeth Rajkumar)​ ನಟನೆಯ ‘ಜೇಮ್ಸ್​’ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಿದೆ. ಇಂದು ಅಪ್ಪು ಜನ್ಮದಿನ ಕೂಡ. ಆ ಕಾರಣದಿಂದ ಅಭಿಮಾನಿಗಳಿಗೆ ಡಬಲ್ ಧಮಾಕಾ. ವಿಶ್ವಾದ್ಯಂತ ‘ಜೇಮ್ಸ್​’ ತೆರೆಕಂಡಿದೆ. ಕರುನಾಡಿನ ಮೂಲೆಮೂಲೆಯಲ್ಲೂ ಅಭಿಮಾನಿಗಳು ‘ಪವರ್​ ಸ್ಟಾರ್​’ಗೆ ಜೈಕಾರ ಕೂಗುತ್ತಿದ್ದಾರೆ. ಇನ್ನು, ಡಾ. ರಾಜ್​ಕುಮಾರ್​ ಕುಟುಂಬದವರು ಕೂಡ ಅಭಿಮಾನಿಗಳ ರೀತಿಯಲ್ಲೇ ಬೆಳ್ಳಂಬೆಳಗ್ಗೆ ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಿದ್ದಾರೆ. ಪುನೀತ್​ ಸಹೋದರ ರಾಘವೇಂದ್ರ ರಾಜ್​ಕುಮಾರ್ (Raghavendra Rajkumar)​ ಅವರು ಪತ್ನಿ ಮಂಗಳಾ ಜೊತೆಯಲ್ಲಿ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವೀರೇಶ್​ ಚಿತ್ರಮಂದಿರಕ್ಕೆ ಬಂದು ‘ಜೇಮ್ಸ್​’ ನೋಡಿದ್ದಾರೆ. ಬೆಳಗ್ಗೆ 6 ಗಂಟೆ ಶೋಗೆ ಅವರು ಬಂದಿದ್ದು ಕಂಡು ಅಭಿಮಾನಿಗಳ ಜೋಶ್​ ಹೆಚ್ಚಿತು. ಅಷ್ಟಕ್ಕೂ ಅವರು ‘ವೀರೇಶ್​’ (Veeresh Theatre) ಚಿತ್ರಮಂದಿರವನ್ನೇ ಆಯ್ಕೆ ಮಾಡಿಕೊಂಡಿದ್ದು ಯಾಕೆ? ಈ ಪ್ರಶ್ನೆಗೆ ರಾಘಣ್ಣ ಉತ್ತರ ನೀಡಿದ್ದಾರೆ. ಈ ಥಿಯೇಟರ್​ ಜೊತೆ ಅವರಿಗೆ ಒಂದು ವಿಶೇಷವಾದ ನಂಟು ಇದೆ. ಇಡೀ ರಾಜ್​ ಕುಟುಂಬಕ್ಕೆ ಈ ಚಿತ್ರಮಂದಿರದ ಜೊತೆ ಕೆಲವು ನೆನಪುಗಳಿವೆ. ಆ ಬಗ್ಗೆ ರಾಘವೆಂದ್ರ ರಾಜ್​ಕುಮಾರ್​ ಅವರು ಒಂದಷ್ಟು ಮಾತುಗಳನ್ನು ಹಂಚಿಕೊಂಡಿದ್ದಾರೆ.

ಸ್ಟಾರ್​ ನಟರು ತಮ್ಮದೇ ಅಭಿಮಾನಿಗಳ ಜೊತೆ ಕುಳಿತು ಸಿನಿಮಾ ನೋಡುವ ಅನುಭವ ಭಿನ್ನವಾಗಿರುತ್ತದೆ. ಡಾ. ರಾಜ್​ಕುಮಾರ್​ ಅವರು ಕೂಡ ಅನೇಕ ಬಾರಿ ಇದೇ ‘ವೀರೇಶ್​’ ಚಿತ್ರಮಂದಿರಕ್ಕೆ ಬಂದು ಫ್ಯಾನ್ಸ್​ ಜೊತೆ ಸಿನಿಮಾ ವೀಕ್ಷಿಸಿದ್ದರು. ಆ ಘಟನೆಗಳನ್ನು ರಾಘವೇಂದ್ರ ರಾಜ್​ಕುಮಾರ್​ ಮೆಲುಕು ಹಾಕಿದ್ದಾರೆ. ಬುಧವಾರ (ಮಾ.16) ರಾತ್ರಿಯೇ ಪುನೀತ್​ ರಾಜ್​ಕುಮಾರ್​ ಸಮಾಧಿ ಬಳಿ ಕೇಕ್​ ಕತ್ತರಿಸುವ ಮೂಲಕ ಅಪ್ಪು ಜನ್ಮದಿನವನ್ನು ರಾಜ್​ ಕುಟುಂಬದವರು ಆಚರಿಸಿದ್ದಾರೆ. ಈ ವೇಳೆ ರಾಘಣ್ಣ ಕೂಡ ಇದ್ದರು. ತಾವು ವೀರೇಶ್​ ಥಿಯೇಟರ್​​ನಲ್ಲೇ ‘ಜೇಮ್ಸ್​’ ನೋಡುವುದಾಗಿ ತಿಳಿಸಿದರು. ಆ ಚಿತ್ರಮಂದಿರವೇ ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅಪರೂಪದ ಮಾಹಿತಿ ಹಂಚಿಕೊಂಡರು.

ಪುನೀತ್​ ರಾಜ್​ಕುಮಾರ್​, ಶಿವರಾಜ್​ಕುಮಾರ್​ ಮತ್ತು ರಾಘವೇಂದ್ರ ರಾಜ್​ಕುಮಾರ್​ ನಟಿಸಿದ ಮೊದಲ ಸಿನಿಮಾಗಳನ್ನು ಡಾ. ರಾಜ್​ಕುಮಾರ್​ ಅವರು ‘ವೀರೇಶ್​’ ಚಿತ್ರಮಂದಿರದಲ್ಲಿ ನೋಡಿದ್ದರು. ಆ ನೆನಪುಗಳು ರಾಘಣ್ಣನ ಮನದಲ್ಲಿ ಹಸಿರಾಗಿವೆ. ಹಾಗಾಗಿ ಈ ಚಿತ್ರಮಂದಿರ ಎಂದರೆ ಅವರಿಗೆ ವಿಶೇಷ ಪ್ರೀತಿ. ‘ನಾನು ವೀರೇಶ್​ ಥಿಯೇಟರ್​ನಲ್ಲೇ ಸಿನಿಮಾ ನೋಡುತ್ತೇವೆ. ಯಾಕೆಂದರೆ, ನಮ್ಮೆಲ್ಲರ ಮೊದಲ ಸಿನಿಮಾವನ್ನು ಅಪ್ಪಾಜಿ ಅವರು ಅಲ್ಲಿಗೇ ಹೋಗಿ ಅಭಿಮಾನಿಗಳ ಜೊತೆ ಶಿಳ್ಳೆ ಹೊಡೆಯುತ್ತಾ ವೀಕ್ಷಣೆ ಮಾಡಿದ್ದರು. ‘ಜೀವನ ಚೈತ್ರ’ ಸಿನಿಮಾವನ್ನೂ ಸಹ ಅಲ್ಲಿಯೇ ನೋಡಿದ್ದರು. ಹಾಗಾಗಿ ನಾವು ಕೂಡ ‘ಜೇಮ್ಸ್​’ ಸಿನಿಮಾವನ್ನು ವೀರೇಶ್​ ಚಿತ್ರಮಂದಿರದಲ್ಲಿ ನೋಡುತ್ತೇವೆ. ಅಪ್ಪು ಮತ್ತು ಅಪ್ಪಾಜಿ ಅವರು ಆ ಥಿಯೇಟರ್​ಗೆ ಬರುತ್ತಾರೆ ಎಂಬ ನಂಬಿಕೆ ನಮಗೆ ಇದೆ’ ಎಂದು ರಾಘವೆಂದ್ರ ರಾಜ್​ಕುಮಾರ್​ ಹೇಳಿದ್ದಾರೆ.

ಮೊದಲ ದಿನ ‘ಜೇಮ್ಸ್​’ ಸಿನಿಮಾಗೆ ಅಭಿಮಾನಿಗಳಿಂದ ಸಿಗುತ್ತಿರುವ ರೆಸ್ಪಾನ್ಸ್​ ಕಂಡು ರಾಘಣ್ಣ ಖುಷಿ ಆಗಿದ್ದಾರೆ. ‘ಇಂದು ಇಷ್ಟೊಂದು ಜನರು ಅಪ್ಪುನನ್ನು ಎದೆಯಲ್ಲಿ ಇಟ್ಟುಕೊಂಡು ಬಂದಿದ್ದಾರೆ. ಹೀಗಿರುವಾಗ ಅಪ್ಪು ಇಲ್ಲ ಅಂತ ನಾನು ಹೇಗೆ ಹೇಳಲಿ?’ ಪುನೀತ್​ ನಮ್ಮೆಲ್ಲರ ಜೊತೆ ಇದ್ದಾರೆ’ ಎಂದು ರಾಘವೇಂದ್ರ ರಾಜ್​ಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ:

ನಾಗತ್ತೆ ಮನೆಯಲ್ಲಿ ಭಾವುಕರಾದ ರಾಘವೇಂದ್ರ ರಾಜ್​ಕುಮಾರ್​-ಮಂಗಳಾ ದಂಪತಿ; ಇಲ್ಲಿದೆ ವಿಡಿಯೋ

ರಾಜ್​ಕುಮಾರ್ ಹುಟ್ಟಿದ ಗಾಜನೂರಿನಲ್ಲೇ ಸಿನಿಮಾ ಮುಹೂರ್ತ; ಪ್ರಮುಖ ಪಾತ್ರದಲ್ಲಿ ರಾಘಣ್ಣ