ಜಯತೀರ್ಥ, ಸತ್ಯ ಮೆಚ್ಚಿದ ‘ಗಿಲ್ಕಿ’ ಟ್ರೇಲರ್​; ಇದು ಅಪರೂಪದ ಪ್ರೇಮಕಥೆಯ ವಿಭಿನ್ನ ಪ್ರಯತ್ನ

| Updated By: ಮದನ್​ ಕುಮಾರ್​

Updated on: Feb 12, 2022 | 10:11 AM

‘ಗಿಲ್ಕಿ’ ಚಿತ್ರ ಫೆ.18ರಂದು ರಿಲೀಸ್​ ಆಗಲಿದೆ. ಈ ಸಿನಿಮಾದ ಟ್ರೇಲರ್​ ಮತ್ತು ಹಾಡುಗಳನ್ನು ನೋಡಿ ಜಯತೀರ್ಥ ಹಾಗೂ ಡಿ. ಸತ್ಯ ಪ್ರಕಾಶ್​ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಜಯತೀರ್ಥ, ಸತ್ಯ ಮೆಚ್ಚಿದ ‘ಗಿಲ್ಕಿ’ ಟ್ರೇಲರ್​; ಇದು ಅಪರೂಪದ ಪ್ರೇಮಕಥೆಯ ವಿಭಿನ್ನ ಪ್ರಯತ್ನ
ಗಿಲ್ಕಿ ಚಿತ್ರದ ಟ್ರೇಲರ್​ ಲಾಂಚ್​
Follow us on

ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಸಿನಿಮಾಗಳ ಮೂಲಕ ಗುರುತಿಸಿಕೊಂಡ ನಿರ್ದೇಶಕರ ಪೈಕಿ ಡಿ. ಸತ್ಯ ಪ್ರಕಾಶ್​ (D Satya Prakash) ಮತ್ತು ಜಯತೀರ್ಥ (Jayatheertha) ಕೂಡ ಪ್ರಮುಖರು. ಇವರಿಬ್ಬರೂ ‘ಗಿಲ್ಕಿ’ ಸಿನಿಮಾದ ಟ್ರೇಲರ್​ಗೆ ಮೆಚ್ಚುಗೆ ಸೂಚಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್​ ಮತ್ತು ಹಾಡುಗಳನ್ನು ಅನಾವರಣ ಮಾಡಲಾಯಿತು. ಆ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಜಯತೀರ್ಥ ಮತ್ತು ಸತ್ಯ ಪ್ರಕಾಶ್​ ಆಗಮಿಸಿದ್ದರು. ‘ಗಿಲ್ಕಿ’ (Gilky Kannada Movie) ಸಿನಿಮಾದಲ್ಲಿ ಚೈತ್ರಾ ಆಚಾರ್​ ಮತ್ತು ತಾರಕ್​ ಪೊನ್ನಪ್ಪ ಜೋಡಿಯಾಗಿ ನಟಿಸಿದ್ದಾರೆ. ಜೋಡಿ ಎಂದಮಾತ್ರಕ್ಕೆ ಮಾಮೂಲಿ ಸಿನಿಮಾಗಳಂತೆ ಮರಸುತ್ತುವ ಪ್ರೇಮಿಗಳ ಪಾತ್ರ ಇದಲ್ಲ. ಬುದ್ಧಿಮಾಂದ್ಯನಾಗಿ ತಾರಕ್​ ಪೊನ್ನಪ್ಪ ನಟಿಸಿದ್ದರೆ, ಸೆಲೆಬ್ರಲ್​ ಪಾಲ್ಸಿ ಕಾಯಿಲೆಯಿಂದ ಬಳಲುತ್ತಿರುವ ಅಂಗವಿಕಲ ಹುಡುಗಿಯಾಗಿ ಚೈತ್ರಾ ಆಚಾರ್​ ಅಭಿನಯಿಸಿದ್ದಾರೆ. ಇಂಥ ಎರಡು ಜೀವಗಳ ನಡುವೆ ಪ್ರೀತಿ ಚಿಗುರಿದರೆ ಯಾವ ರೀತಿ ಪರಿಸ್ಥಿತಿ ನಿರ್ಮಾಣ ಆಗುತ್ತದೆ ಎಂಬ ಕೌತುಕ ಮೂಡಿಸುವಲ್ಲಿ ‘ಗಿಲ್ಕಿ’ ಸಿನಿಮಾದ ಟ್ರೇಲರ್​ ಯಶಸ್ವಿ ಆಗಿದೆ.  ಈ ಚಿತ್ರಕ್ಕೆ ವೈ.ಕೆ. ನಿರ್ದೇಶನ ಮಾಡಿದ್ದಾರೆ. ನರಸಿಂಹ ಕುಲಕರ್ಣಿ ನಿರ್ಮಾಣ ಮಾಡಿದ್ದು, ಫೆ.18ರಂದು ಈ ಚಿತ್ರ ರಿಲೀಸ್​ ಆಗಲಿದೆ.

ಈ ಸಿನಿಮಾದ ಟ್ರೇಲರ್​ ಮತ್ತು ಹಾಡುಗಳನ್ನು ನೋಡಿ ಜಯತೀರ್ಥ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ‘ಒಂದು ಒಳ್ಳೆಯ ಕಂಟೆಂಟ್​ ಇರುವ ಸಿನಿಮಾ ಹೇಗೆ ಜನರನ್ನು ಸೆಳೆಯುತ್ತದೆ ಎಂಬುದಕ್ಕೆ ಒಂದು ಘಟನೆ ಸಾಕ್ಷಿಯಾಗಿದೆ. ಕೆಲವು ದಿನಗಳ ಮೊದಲೇ ನಾನು ಈ ಹಾಡನ್ನು ​ನೋಡಿದ್ದೆ. ಇದರಲ್ಲಿ ನಟಿಸಿದ ಚೈತ್ರಾ ಆಚಾರ್​ ಅವರ ಹೆಸರನ್ನು ಬೇರೊಂದು ಸಿನಿಮಾಗೆ ಶಿಫಾರಸ್ಸು ಮಾಡಿದೆ. ಇಂಥ ಸಿನಿಮಾದ ಕಾರ್ಯಕ್ರಮಗಳಿಗೆ ಬಂದಾಗ ನಮಗೂ ಒಂದಷ್ಟು ಕಲಿಯೋಕೆ ಸಿಗುತ್ತದೆ. ಯಾಕೆಂದರೆ ಹೊಸಬರ ಚಿಂತನೆ ಯಾವಾಗಲೂ ಫ್ರೆಷ್​ ಆಗಿರುತ್ತದೆ’ ಎಂದು ಜಯತೀರ್ಥ ಹೇಳಿದ್ದಾರೆ.

ಡಿ. ಸತ್ಯ ಪ್ರಕಾಶ್​ ಅವರ ‘ಸತ್ಯ ಸಿನಿ ಡಿಸ್ಟ್ರಿಬ್ಯೂಟರ್ಸ್’ ಮೂಲಕ ‘ಗಿಲ್ಕಿ’ ಸಿನಿಮಾವನ್ನು ರಿಲೀಸ್​ ಮಾಡಲಾಗುತ್ತಿದೆ. ಪೂರ್ತಿ ಸಿನಿಮಾ ನೋಡಿದ ಬಳಿಕವೇ ಅವರು ಇದನ್ನು ವಿತರಣೆ ಮಾಡಲು ಒಪ್ಪಿಕೊಂಡಿರುವುದು. ‘ಗಿಲ್ಕಿ’ ತಂಡದ ಈ ಹೊಸ ಬಗೆಯ ಪ್ರಯತ್ನಕ್ಕೆ ಸತ್ಯ ಪ್ರಕಾಶ್​ ಅವರಿಂದಲೂ ಕೂಡ ಪ್ರಶಂಸೆ ವ್ಯಕ್ತವಾಗಿದೆ.

ಸೂಕ್ಷ್ಮ ಕಥಾಹಂದರದ ಚಿತ್ರವನ್ನು ಜನರಿಗೆ ನೀಡಬೇಕು ಎಂಬ ಆಶಯ ಇಟ್ಟುಕೊಟ್ಟು ನಿರ್ದೇಶನ ವೈ.ಕೆ. ಅವರು ಈ ಅಪರೂಪದ ಕಥೆಯನ್ನು ಸಿನಿಮಾ ಮಾಡಿದ್ದಾರೆ. ‘ಒಬ್ಬಳು ಅಂಗವಿಕಲೆ, ಒಬ್ಬ ಬುದ್ಧಿಮಾಂದ್ಯ, ಇನ್ನೊಬ ಕುರುಡ- ಈ ಮೂರು ಪಾತ್ರಗಳು ಈ ಸಿನಿಮಾದಲ್ಲಿ ಮುಖ್ಯವಾಗಿರಲಿವೆ. ಸಿನಿಮಾ ನೋಡಿದ ಬಳಿಕ ಒಂದು ವಾರದವರೆಗೂ ಈ ಪಾತ್ರಗಳು ಜನರನ್ನು ಕಾಡುತ್ತವೆ’ ಎಂದು ತಮ್ಮ ಸಿನಿಮಾ ಬಗ್ಗೆ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ ನಿರ್ದೇಶಕರು. ಕುರುಡನ ಪಾತ್ರದಲ್ಲಿ ಗೌತಮ್​ ರಾಜ್​ ನಟಿಸಿದ್ದಾರೆ.

‘ಅಮೃತ್​ ಅಪಾರ್ಟ್​ಮೆಂಟ್ಸ್​’ ಸಿನಿಮಾದ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದ ನರಸಿಂಹ ಕುಲಕರ್ಣಿ ಅವರು ವೈ.ಕೆ. ಅವರ ಮೇಲೆ ಭರವಸೆ ಇಟ್ಟು ‘ಗಿಲ್ಕಿ’ ಚಿತ್ರವನ್ನು ನಿರ್ಮಿಸಿದ್ದಾರೆ. ‘ಇಂಥ ಕಥೆಗೆ ಬಂಡವಾಳ ಹೂಡಿದ್ದರೂ ಕೂಡ ಒಂದು ರೂಪಾಯಿಯನ್ನೂ ರಿಸ್ಕ್​ ಮಾಡಿಕೊಂಡೆ ಅಂತ ನನಗೆ ಅನಿಸಿಲ್ಲ. ನಡುವೆ ಸ್ವಲ್ಪ ಕಷ್ಟ ಬಂತು. ಆದರೆ ಇಡೀ ತಂಡದ ಬೆಂಬಲದಿಂದ ಈ ಸಿನಿಮಾ ಈಗ ರಿಲೀಸ್​ ಹಂತಕ್ಕೆ ಬಂದಿದೆ’ ಎಂದಿದ್ದಾರೆ ನರಸಿಂಹ ಕುಲಕರ್ಣಿ.

ಯೂಟ್ಯೂಬ್​ನಲ್ಲಿ ‘ಗಿಲ್ಕಿ’ ಸಿನಿಮಾದ ಟ್ರೇಲರ್​ ನೋಡಿರುವ ಜನರು ಕೂಡ ಪಾಸಿಟಿವ್​ ಆಗಿ ಕಮೆಂಟ್​ ಮಾಡಿದ್ದಾರೆ. ಕೆಂಪರಾಜು ಬಿ.ಎಸ್​. ಸಂಕಲನ, ಆದಿಲ್​ ನದಾಫ್​ ಸಂಗೀತ ನಿರ್ದೇಶನ, ಕಾರ್ತಿಕ್​ ಎಸ್​. ಛಾಯಾಗ್ರಹಣ ಈ ಚಿತ್ರಕ್ಕಿದೆ.

ಇದನ್ನೂ ಓದಿ:

‘ಗಿಲ್ಕಿ’ ಚಿತ್ರದ ಚಾಲೆಂಜಿಂಗ್​ ಪಾತ್ರದಲ್ಲಿ ಚೈತ್ರಾ ಆಚಾರ್​, ತಾರಕ್​ ಪೊನ್ನಪ್ಪ; ನಿರೀಕ್ಷೆ ಮೂಡಿಸಿದ ಸಿನಿಮಾ​

ಪರಭಾಷೆಯಲ್ಲೂ ‘ಜೇಮ್ಸ್​’ ಟೀಸರ್​ ಮಿಲಿಯನ್​ ವೀಕ್ಷಣೆ; ತಮಿಳು, ಹಿಂದಿ, ತೆಲುಗು ಪ್ರೇಕ್ಷಕರು ಏನಂದ್ರು?

Published On - 9:58 am, Sat, 12 February 22