‘ಗಿಲ್ಕಿ’ ಚಿತ್ರದ ಚಾಲೆಂಜಿಂಗ್ ಪಾತ್ರದಲ್ಲಿ ಚೈತ್ರಾ ಆಚಾರ್, ತಾರಕ್ ಪೊನ್ನಪ್ಪ; ನಿರೀಕ್ಷೆ ಮೂಡಿಸಿದ ಸಿನಿಮಾ
ಒಂದು ನೈಜ ಘಟನೆಯಿಂದ ಪ್ರೇರಿತವಾಗಿ ‘ಗಿಲ್ಕಿ’ ಸಿನಿಮಾವನ್ನು ಮಾಡಲಾಗಿದೆ. ಚೈತ್ರಾ ಆಚಾರ್, ತಾರಕ್ ಪೊನ್ನಪ್ಪ ಅವರು ಚಾಲೆಂಜಿಂಗ್ ಪಾತ್ರಗಳನ್ನು ನಿಭಾಯಿಸಿದ್ದಾರೆ.
ಕೊರೊನಾದ ಆತಂಕ ಕಳೆದು ಈಗ ಗಾಂಧಿನಗರದಲ್ಲಿ ಹೊಸ ಕಳೆ ಬಂದಿದೆ. ಎಂದಿನಂತೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಆ ಪೈಕಿ ‘ಗಿಲ್ಕಿ’ ಚಿತ್ರ (Gilki Kannada Movie) ಒಂದಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈ ಸಿನಿಮಾದಲ್ಲಿ ತಾರಕ್ ಪೊನ್ನಪ್ಪ ಮತ್ತು ಚೈತ್ರಾ ಆಚಾರ್ (Chaitra Achar) ಅವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಈ ಸಿನಿಮಾದಲ್ಲಿ ಚೈತ್ರಾ ಆಚಾರ್ ಅವರಿಗೆ ತುಂಬ ಚಾಲೆಂಜಿಂಗ್ ಆದಂತಹ ಪಾತ್ರ ಇದೆ. ಸೆಲೆಬ್ರಲ್ ಪಾಲ್ಸಿ ಕಾಯಿಲೆ ಇರುವ ಹುಡುಗಿಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅದೇ ರೀತಿ ತಾರಕ್ ಪೊನ್ನಪ್ಪ (Tarak Ponnappa) ಸಹ ಒಂದು ಡಿಫರೆಂಟ್ ಆದಂತಹ ಪಾತ್ರ ಮಾಡಿದ್ದಾರೆ. ಇಂದು (ಫೆ.8) ‘ಗಿಲ್ಕಿ’ ಚಿತ್ರದ ಟ್ರೇಲರ್ ಬಿಡುಗಡೆ ಆಗುತ್ತಿದೆ. ಈ ಚಿತ್ರಕ್ಕೆ ವೈ.ಕೆ. ನಿರ್ದೇಶನ ಮಾಡಿದ್ದು, ನರಸಿಂಹ ಕುಲಕರ್ಣಿ ನಿರ್ಮಾಣ ಮಾಡಿದ್ದಾರೆ. ಫೆ.18ರಂದು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಸತ್ಯ ಸಿನಿ ಡಿಸ್ಟ್ರಿಬ್ಯೂಟರ್ಸ್ ಮೂಲಕ ರಿಲೀಸ್ ಮಾಡಲಾಗುತ್ತಿದೆ.
ಇದೊಂದು ಕಂಟೆಂಟ್ ಓರಿಯೆಂಟೆಡ್ ಸಿನಿಮಾ. ಹಾಗಿದ್ದರೂ ಕೂಡ ಕರ್ಮಷಿಯಲ್ ಮಾದರಿಯಲ್ಲಿ ಮೂಡಿಬಂದಿದೆ. ಮೊದಲ ಲಾಕ್ಡೌನ್ ಶುರುವಾಗುವುದಕ್ಕೂ ಮುನ್ನವೇ ಈ ಸಿನಿಮಾದ ಶೂಟಿಂಗ್ ಮುಗಿದಿತ್ತು. ನಂತರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಲಾಯಿತು. ಚಿತ್ರಮಂದಿರದಲ್ಲಿಯೇ ಸಿನಿಮಾವನ್ನು ರಿಲೀಸ್ ಮಾಡಬೇಕು ಎಂಬ ಉದ್ದೇಶದಿಂದ ನಿರ್ಮಾಪಕರು ತಾಳ್ಮೆಯಿಂದ ಕಾದಿದ್ದರು. ಅದಕ್ಕೀಗ ಸಮಯ ಕೂಡಿಬಂದಿದೆ.
‘ಥಿಯೇಟರ್ನಲ್ಲೇ ನಮ್ಮ ಸಿನಿಮಾ ರಿಲೀಸ್ ಆಗುತ್ತಿರುವುದು ಖುಷಿಯ ವಿಷಯ. ಈ ಚಿತ್ರದಲ್ಲಿ ಛಾಯಾಗ್ರಹಣ ಕೂಡ ತುಂಬ ಮುಖ್ಯ ಪಾತ್ರ ವಹಿಸಿದೆ. ಹಾಗಾಗಿ ಚಿತ್ರಮಂದಿರಲ್ಲಿಯೇ ಇದನ್ನು ನೋಡಬೇಕು. ವೃತ್ತಿಜೀವನದ ಆರಂಭದ ದಿನಗಳಲ್ಲೇ ಇಂಥ ಚಾಲೆಂಜಿಂಗ್ ಪಾತ್ರ ಸಿಕ್ಕಿರುವುದು ನನಗೆ ಖುಷಿ ನೀಡಿದೆ. ನಿರ್ದೇಶಕರು ನನಗೆ ಕಥೆ ಹೇಳಲು ಆರಂಭಿಸಿದಾಗಲೇ ನನಗೆ ಈ ಪಾತ್ರ ಸಖತ್ ಇಷ್ಟವಾಯ್ತು. ನಾನೇ ಆ ಪಾತ್ರ ಎಂಬಂತೆ ಫೀಲ್ ಮಾಡಲು ಶುರುಮಾಡಿದೆ’ ಎಂದಿದ್ದಾರೆ ಚೈತ್ರಾ ಆಚಾರ್.
ಒಂದು ನೈಜ ಘಟನೆಯಿಂದ ಪ್ರೇರಿತವಾಗಿ ಈ ಸಿನಿಮಾವನ್ನು ಮಾಡಲಾಗಿದೆ. ಮಂಗಳೂರಿನಲ್ಲಿ ಬಹುತೇಕ ಶೂಟಿಂಗ್ ಮಾಡಲಾಗಿದೆ. ‘ದೊಡ್ಡ ಸ್ಟಾರ್ ಯಾರೂ ಇಲ್ಲದಿದ್ದರೂ ಕೂಡ ಕಥೆಯ ಮೇಲೆ ನಂಬಿಕೆ ಇಟ್ಟು ನಮ್ಮ ನಿರ್ಮಾಪಕರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕೊರೊನಾದಿಂದ ತಡವಾದರೂ, ಬಜೆಟ್ನಿಂದ ಸ್ವಲ್ಪ ಸಮಸ್ಯೆ ಆದರೂ ಕೂಡ ಚಿತ್ರಮಂದಿರಲ್ಲಿಯೇ ರಿಲೀಸ್ ಮಾಡುತ್ತಿರುವುದಕ್ಕೆ ನಾನು ಅವರಿಗೆ ಧನ್ಯವಾದ ಹೇಳಲೇಬೇಕು’ ಎಂದು ಚೈತ್ರಾ ಹೇಳಿದ್ದಾರೆ.
ಕೆಜಿಎಫ್, ಅಮೃತ್ ಅಪಾರ್ಟ್ಮೆಂಟ್ ಮುಂತಾದ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿರುವ ತಾರಕ್ ಪೊನ್ನಪ್ಪ ಅವರ ಜೊತೆ ನಟಿಸಿದ ಅನುಭವದ ಬಗ್ಗೆ ಕೂಡ ಚೈತ್ರಾ ಮಾತನಾಡಿದ್ದಾರೆ. ‘ತಾರಕ್ ಪೊನ್ನಪ್ಪ ಅವರು ಉತ್ತಮ ನಟ. ಅವರಿಂದಾಗಿ ನನಗೆ ಇನ್ನಷ್ಟು ಸ್ಫೂರ್ತಿ ಬಂತು. ಮಗುವಿನ ಮನಸ್ಸಿನ ವ್ಯಕ್ತಿಯ ಪಾತ್ರವನ್ನು ಅವರು ಮಾಡಿದ್ದಾರೆ. ಸಿನಿಮಾದ ಕೆಲವು ದೃಶ್ಯಗಳು ತುಂಬ ಎಮೋಷನಲ್ ಆಗಿದೆ’ ಎಂದಿದ್ದಾರೆ ಚೈತ್ರಾ ಆಚಾರ್.
ಇದನ್ನೂ ಓದಿ:
ಈ ಶಾಲೆಯಲ್ಲಿ ಪುನೀತ್ ಫೋಟೋಗೆ ದಿನವೂ ಪೂಜೆ! ಪ್ರತಿ ವರ್ಷ 15 ಮಕ್ಕಳ ದತ್ತು ಸ್ವೀಕಾರ
‘ಅವೆಂಜರ್ಸ್’ ಗೊತ್ತು, ಆದ್ರೆ ಇದೇನು ರಿವೆಂಜರ್ಸ್? ಹೊಸ ಪ್ರಯತ್ನದಿಂದ ಗಮನ ಸೆಳೆದ ‘ಓಲ್ಡ್ ಮಾಂಕ್’ ಶ್ರೀನಿ