
ತೀರ್ಥೆಶ್ ಕೊರಮೇರು ಅವರು ನಿರ್ದೇಶನ ಮಾಡಿರುವ ‘ವರ್ಣತರಂಗ’ (Varana Tharanga) ಸಿನಿಮಾದ ಮೂರು ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಹಾಡುಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು. ‘ಶ್ರೀ ಪಾಷಣಮೂರ್ತಿ ಸಿನಿ ಕ್ರಿಯೇಶನ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಬೆಳ್ತಂಗಡಿ ಉದ್ಯಮಿ ಬಿ. ಶಿವಕುಮಾರ್ ಅವರು ‘ವರ್ಣತರಂಗ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಇದು ಅವರು ನಿರ್ಮಿಸಿರುವ 3ನೇ ಸಿನಿಮಾ. ಸೆಲ್ವರಾಜ್ ಅವರು ಈ ಚಿತ್ರಕ್ಕೆ ಸಹ-ನಿರ್ಮಾಪಕರಾಗಿದ್ದಾರೆ. ನಿರ್ದೇಶಕ ತೀರ್ಥೆಶ್ ಕೊರಮೇರು ಅವರೇ ಕಥೆ ಬರೆದ್ದಾರೆ. ಈ ಸಿನಿಮಾದ ಒಂದು ಗೀತೆಗೆ ಚಂದನ್ ಶೆಟ್ಟಿ (Chandan Shetty) ಧ್ವನಿ ನೀಡಿದ್ದಾರೆ.
‘ವರ್ಣತರಂಗ’ ಸಿನಿಮಾದಲ್ಲಿ ನಟ ತಿಲಕ್ ಅವರು ಎಸಿಪಿ ಪಾತ್ರ ಮಾಡಿದ್ದಾರೆ. ‘ನಾನು ಈಗಾಗಲೇ ಎಸಿಪಿಯಾಗಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದೇನೆ. ಈಗ ಈ ಸಿನಿಮಾದಲ್ಲೂ ಅದೇ ಪಾತ್ರವಿದ್ದರೂ ಕೂಡ ಕೇಸ್ ಬೇರೆಯದೇ ಆಗಿರುತ್ತದೆ. ಹಾಗಾಗಿ ನೋಡುಗರಿಗೆ ಬೋರ್ ಎನಿಸುವುದಿಲ್ಲ’ ಎಂದು ತಿಲಕ್ ಅವರು ಹೇಳಿದರು. ಜೀವಿತಾ ಅವರು ಈ ಸಿನಿಮಾಗೆ ನಾಯಕಿ ಆಗಿದ್ದಾರೆ.
ನಟಿ ಮೇಘನಾ ಅವರ ‘ವರ್ಣತರಂಗ’ ಸಿನಿಮಾದಲ್ಲಿ ಪತ್ರಕರ್ತೆಯ ಪಾತ್ರವನ್ನು ಮಾಡಿದ್ದಾರೆ. ಹ್ಯಾಕರ್ ಪಾತ್ರದಲ್ಲಿ ವರ್ಧನ್ ಕಾಣಿಸಿಕೊಂಡಿದ್ದಾರೆ. ಹೇಮಂತ್, ರಮೇಶ್ ಪಂಡಿತ್, ಟೆನ್ನಿಸ್ ಕೃಷ್ಣ, ಬಲರಾಜವಾಡಿ, ಜಯರಾಮ್, ಭಗತ್, ಬಿರಾದಾರ್ ಮುಂತಾದವರು ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಶೀಘ್ರದಲ್ಲೇ ಈ ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಮುಗಿಯಲಿದೆ. ಬಳಿಕ ರಿಲೀಸ್ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ.
Varana Tharanga Movie Team
ಆಕಾಶ್ ರೆಡ್ಡಿ ಹಾಗೂ ಯಶವಂತ್ ಭೂಪತಿ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಮನುಗೌಡ ಅವರು ಛಾಯಾಗ್ರಹಣ ಮಾಡಿದ್ದಾರೆ. ವೆಂಕಿ ಯುಡಿವಿ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ, ವಿ.ಎನ್. ಸ್ವಾಮಿ, ಆಕಾಶ್ ರೆಡ್ಡಿ, ಮಿಥುನ್ ಸುವರ್ಣ ಅವರು ಸಾಹಿತ್ಯ ಬರೆದಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಕೆ. ಬಾಲಸುಬ್ರಮಣ್ಯನ್ ಕೆಲಸ ಮಾಡಿದ್ದಾರೆ. ಥ್ರಿಲ್ಲರ್ ಮಂಜು, ಕುಂಗುಫೂ ಚಂದ್ರು ಹಾಗೂ ನರಸಿಂಹ ಅವರ ಸಾಹಸ ಈ ಚಿತ್ರಕ್ಕಿದೆ. ನಾಗಿ ಮತ್ತು ಆನಂದ್ ಕೊರಿಯೋಗ್ರಫಿ ಮಾಡಿದ್ದಾರೆ.
ಇದನ್ನೂ ಓದಿ: ‘ಅವತಾರ್: ಫೈರ್ ಆಂಡ್ ಆಶ್’ ಎರಡನೇ ಟ್ರೈಲರ್ ಬಿಡುಗಡೆ
ಸುದ್ದಿಗೋಷ್ಠಿಯಲ್ಲಿ ಸಿನಿಮಾದ ಕಥೆ ಬಗ್ಗೆ ನಿರ್ದೇಶಕರು ಮಾತನಾಡಿದರು. ‘ನಾನು ಮೂಲತಃ ವಿಎಫ್‌ಎಕ್ಸ್ ಟೆಕ್ನಿಷಿಯನ್. ಕಿರುಚಿತ್ರಗಳನ್ನು ಮಾಡಿದ ಅನುಭವ ಇದೆ. ವರ್ಣತರಂಗ ಅಂದರೆ ಬಣ್ಣಗಳ ಅಲೆಗಳು ಎಂದರ್ಥ. ಒಬ್ಬ ವ್ಯಕ್ತಿ ಕಲರ್ಫುಲ್ ಆಗಿ ನಿಜ ಜೀವನದಲ್ಲಿ ಹೇಗಿರುತ್ತಾನೆ? ಆತ ನಕರಾತ್ಮಕ ಚಿಂತನೆ ಮಾಡಿ ಯಾವ ರೀತಿಯಲ್ಲಿ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದು ಕಥೆ. ಸಿನಿಮಾದಲ್ಲಿ ಸಾಕಷ್ಟು ಕುತೂಹಲಕಾರಿ ಅಂಶಗಳು ಇವೆ. ಬೆಂಗಳೂರು, ಮಂಗಳೂರು ಮುಂತಾದಡೆ ಚಿತ್ರೀಕರಣ ಮಾಡಿದ್ದೇವೆ. ಶೇಕಡ 25 ಭಾಗ ವಿಎಫ್‌ಎಕ್ಸ್ ಇರುತ್ತದೆ’ ಎಂದು ಅವರು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.