ಆಕ್ಸಿಜನ್ ಸಹಿತ ಆ್ಯಂಬುಲೆನ್ಸ್​ ನೀಡಿ ಕೊವಿಡ್​ ಸೋಂಕಿತರಿಗೆ ನೆರವಾದ ಜೆಕೆ ನಟನೆಯ ಐರಾವನ್​ ಚಿತ್ರತಂಡ

|

Updated on: May 17, 2021 | 8:44 AM

ಐರಾವನ್​ ಚಿತ್ರತಂಡದವರು ಆಕ್ಸಿಜನ್ ಸಹಿತ ಆ್ಯಂಬುಲೆನ್ಸ್​​​​ ವಾಹನವನ್ನು ಬ್ಯಾಟರಾಯನಪುರ ವ್ಯಾಪ್ತಿಗೆ ನೀಡಿದ್ದಾರೆ. 10 ಸಾವಿರ ಕೊವಿಡ್​ ಮೆಡಿಕಲ್​ ಕಿಟ್​ ಹಾಗೂ ಔಷಧಿಗಳನ್ನು ನೀಡುವ ಮೂಲಕ ಇತರರಿಗೂ ಮಾದರಿ ಆಗಿದ್ದಾರೆ.

ಆಕ್ಸಿಜನ್ ಸಹಿತ ಆ್ಯಂಬುಲೆನ್ಸ್​ ನೀಡಿ ಕೊವಿಡ್​ ಸೋಂಕಿತರಿಗೆ ನೆರವಾದ ಜೆಕೆ ನಟನೆಯ ಐರಾವನ್​ ಚಿತ್ರತಂಡ
ಐರಾವನ್ ಚಿತ್ರತಂಡ
Follow us on

ದೇಶದೆಲ್ಲೆಡೆ ಕೊರೊನಾ ವೈರಸ್​ ತಾಂಡವ ಆಡುತ್ತಿದೆ. ಕೊವಿಡ್​ ಎರಡನೇ ಅಲೆಗೆ ಜನರು ತತ್ತರಿಸಿದ್ದಾರೆ. ಸರಿಯಾದ ಸಮಯಕ್ಕೆ ಬೆಡ್​ ಮತ್ತು ಆಕ್ಸಿಜನ್​ ಸಿಗದೇ ಹಲವರು ಅಸುನೀಗುವಂತಾಗಿದೆ. ಈ ವೇಳೆ ಆ್ಯಂಬುಲೆನ್ಸ್​ಗಾಗಿಯೂ ರೋಗಿಗಳು ಪರಿದಾಡುತ್ತಿದ್ದಾರೆ. ಅಂಥವರಿಗೆ ನೆರವಾಗಲೆಂದು ಕನ್ನಡದ ಐರಾವನ್​ ಚಿತ್ರತಂಡ ಮುಂದೆ ಬಂದಿದೆ. ಈ ಸಿನಿಮಾದಲ್ಲಿ ಖ್ಯಾತ ನಟ ಜೆಕೆ, ವಿವೇಕ್​, ಅದ್ವಿತಿ ಶೆಟ್ಟಿ ಮುಂತಾದವರು ಅಭಿನಯಿಸುತ್ತಿದ್ದಾರೆ. ಚಿತ್ರತಂಡದಿಂದ ಈಗ ಸಮಾಜಮುಖಿ ಕಾರ್ಯ ಮಾಡಲಾಗುತ್ತಿದೆ.

ಆರೋಗ್ಯ ಭಾರತಿ ಮತ್ತು ಸೇವಾ ಭಾರತಿ ಸಹಯೋಗದಲ್ಲಿ ಐರಾವನ್​ ಚಿತ್ರತಂಡವು ಕೊವಿಡ್​ ಸೋಂಕಿತರ ಸೇವೆಗೆ ಇಳಿದಿದೆ. ಚಿತ್ರತಂಡದ ಜೊತೆ ಸೇರಿ ನಿರ್ಮಾಪಕ ನಿರಂತರ ಗಣೇಶ್​ ಅವರು ಆಕ್ಸಿಜನ್ ಸಹಿತ ಆ್ಯಂಬುಲೆನ್ಸ್​ ವಾಹನವನ್ನು ಬ್ಯಾಟರಾಯನಪುರ ವ್ಯಾಪ್ತಿಗೆ ನೀಡಿದ್ದಾರೆ. 10 ಸಾವಿರ ಕೊವಿಡ್​ ಮೆಡಿಕಲ್​ ಕಿಟ್​ ಹಾಗೂ ಔಷಧಿಗಳನ್ನು ನೀಡುವ ಮೂಲಕ ಇತರರಿಗೂ ಮಾದರಿ ಆಗಿದೆ ಐರಾವನ್​ ಸಿನಿಮಾ ತಂಡ.

‘ಈ ಕೊವಿಡ್​ ಕಷ್ಟದಲ್ಲಿ ಇಂಥ ಸಹಾಯ ಮಾಡುವುದು ನಮ್ಮ ಜವಾಬ್ದಾರಿ. ಎಲ್ಲೆಡೆ ಆ್ಯಂಬುಲೆನ್ಸ್​ ಕೊರತೆ ಎದುರಾಗಿದೆ. ಅದನ್ನು ಗಮನಿಸಿ ನಾವು ಬ್ಯಾಟರಾಯನಪುರ ವ್ಯಾಪ್ತಿಗೆ ಆಕ್ಸಿಜನ್​ ಸಹಿತ ಆ್ಯಂಬುಲೆನ್ಸ್​ ನೀಡಿದ್ದೇನೆ. ಇದರ ಜೊತೆಗೆ ಕೊವಿಡ್​ ಮೆಡಿಕಲ್ ಕಿಟ್​ ಕೂಡ ನೀಡಿದ್ದೇನೆ. ರೋಗ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಈ ಔಷಧಿಗಳನ್ನು ತೆಗೆದುಕೊಳ್ಳಬಹುದು. ಹೇಗೆ ತೆಗೆದುಕೊಳ್ಳಬೇಕು ಎಂಬ ಮಾಹಿತಿಯನ್ನೂ ಅದರೊಂದಿಗೆ ನೀಡಿದ್ದೇವೆ’ ಎಂದು ನಿರ್ಮಾಪಕ ನಿರಂತರ ಗಣೇಶ್​ ಹೇಳಿದ್ದಾರೆ.

ಇದೇ ರೀತಿ ಚಿತ್ರರಂಗದ ಅನೇಕರು ಜನರಿಗೆ ಸಹಾಯ ಮಾಡುತ್ತಿದ್ದಾರೆ. ನಟ ಉಪೇಂದ್ರ ಅವರ ನೇತೃತ್ವದಲ್ಲಿ ಸಾವಿರಾರು ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತಿದೆ. ನಟ ಅರ್ಜುನ್​ ಗೌಡ ಅವರು ಆ್ಯಂಬುಲೆನ್ಸ್​ ಚಾಲಕನಾಗಿ ಹಗಲು-ಇರುಳು ಕೆಲಸ ಮಾಡುತ್ತಿದ್ದಾರೆ. ಅವರ ಕಾರ್ಯಕ್ಕೆ ಎಲ್ಲರಿಂದ ಶ್ಲಾಘನೆ ವ್ಯಕ್ತವಾಗಿದೆ. ಹರ್ಷಿಕಾ ಪೂಣಚ್ಚ ಮತ್ತು ಭುವನ್​ ಪೊನ್ನಣ್ಣ ಜೊತೆಯಾಗಿ ಕಷ್ಟದಲ್ಲಿರುವ ಅನೇಕರಿಗೆ ನೆರವಾಗುತ್ತಿದ್ದಾರೆ. ಹಿರಿಯ ಕಲಾವಿದರಿಗೆ ಸಹಾಯ ಮಾಡುತ್ತಿದ್ದಾರೆ. ನಟ ಶ್ರೀಮುರಳಿ ಅವರು 5 ಸರ್ಕಾರಿ ಆಸ್ಪತ್ರೆಯ ವೈದ್ಯರು, ನರ್ಸ್​ಗಳು ಹಾಗೂ ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಬಿಗ್​ ಬಾಸ್​ನಿಂದ ಹೊರಬಂದ ನಟಿ ಶುಭಾ ಪೂಂಜಾ ಅವರು ಫುಡ್​ಕಿಟ್​ ವಿತರಿಸಿದ್ದಾರೆ.

ಇದನ್ನೂ ಓದಿ:

ಭುವನ್​ ಪೊನ್ನಣ್ಣ​ ನಿಜವಾದ ಬಿಗ್​ ಬಾಸ್​; ಕೊವಿಡ್​ ಸಂಕಷ್ಟದಲ್ಲಿ ಮಾಡಿದ ಸಹಾಯ ನೆನೆದು ಭಾವುಕರಾದ ಹಿರಿಯ ನಟ

ಉಪೇಂದ್ರ ಮಾಡುತ್ತಿರುವ ಪುಣ್ಯದ ಕೆಲಸಕ್ಕೆ ಕೈ ಜೋಡಿಸಿದ ಸಾಧುಕೋಕಿಲ, ಸರೋಜಾದೇವಿ ಮುಂತಾದ ಸೆಲೆಬ್ರಿಟಿಗಳು