ಧನ್ವೀರ್ (Dhanveer) ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಕೆಲವು ಖಡಕ್ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ಇನ್ನು, ಮೇಘಾ ಶೆಟ್ಟಿ ಅವರು ಧಾರಾವಾಹಿ ಮೂಲಕ ನಟನೆಗೆ ಕಾಲಿಟ್ಟರು. ಅವರು ಈಗ ಹಿರಿತೆರೆಯಲ್ಲಿ ಬ್ಯುಸಿ ಆಗಿದ್ದಾರೆ. ಧನ್ವೀರ್ ಹಾಗೂ ಮೇಘಾ ಶೆಟ್ಟಿ ‘ಕೈವ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ‘ಬೆಲ್ ಬಾಟಂ’ ರೀತಿಯ ಸಿನಿಮಾ ನೀಡಿರುವ ಜಯತೀರ್ಥ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ‘ಕೈವ’ ಸಿನಿಮಾದ ಟೀಸರ್ ಎಲ್ಲರ ಗಮನ ಸೆಳೆಯುತ್ತಿದೆ. ರೌಡಿಸಂ ಜೊತೆ ಒಂದು ಪ್ರೇಮ ಕಥೆ ಇರಲಿದೆ.
‘ಕೈವ’ ಸಿನಿಮಾದ ಟೀಸರ್ನ ಅಭಿಷೇಕ್ ಅಂಬರೀಷ್ ಹಾಗೂ ದಿನಕರ್ ತೂಗುದೀಪ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ರವೀಂದ್ರಕುಮಾರ್ ನಿರ್ಮಾಣದ ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ. ‘ಕೈವ’ ಓರ್ವ ವ್ಯಕ್ತಿಯ ಹೆಸರು. ನೈಜ ಘಟನೆಯನ್ನು ಆಧರಿಸಿ ಸಿನಿಮಾ ಸಿದ್ಧಗೊಂಡಿದೆ. 1983ರಲ್ಲಿ ಬೆಂಗಳೂರಿನ ತಿಗಳರಪೇಟೆಯಲ್ಲಿ ನಡೆದ ಘಟನೆಯೇ ಕಥೆ ಹುಟ್ಟಿಕೊಳ್ಳಲು ಕಾರಣ. ಬೆಂಗಳೂರು ಕರಗದಲ್ಲಿ ಹುಟ್ಟಿದ ಪ್ರೇಮಕಥೆ ಈ ಚಿತ್ರದ ಕಥಾವಸ್ತು.
ಜಯತೀರ್ಥ ಅವರು ಈ ಕಥೆಯ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದಾರೆ. ‘ಮಾರ್ಚುರಿಯಲ್ಲಿ ಕೆಲಸ ಮಾಡುವವರಿಂದ ನನಗೆ ಈ ಕಥೆ ಸಿಕ್ಕಿತು. ತಿಗಳರಪೇಟೆಗೆ ಹೋಗಿ ಘಟನೆ ಬಗ್ಗೆ ವಿಸ್ತಾರವಾಗಿ ತಿಳಿದುಕೊಂಡೆ. ಘಟನೆಯನ್ನು ನೋಡಿದ ಅನೇಕರು ಈಗಲೂ ಇದ್ದಾರೆ. ಗಂಗಾರಾಮ್ ಕಟ್ಟಡ ದುರಂತಕ್ಕೂ, ಈ ಚಿತ್ರದ ಕಥೆಗೆ ಸಂಬಂಧವಿದೆ’ ಎನ್ನುತ್ತಾರೆ ಜಯತೀರ್ಥ.
ಸಾಮಾನ್ಯವಾಗಿ ನಿರ್ದೇಶಕರು ತೆರೆಮೇಲೆ ಕಾಣಿಸಿಕೊಳ್ಳೋಕೆ ಇಷ್ಟಪಡುವುದಿಲ್ಲ. ಆದರೆ, ‘ಕೈವ’ ಸಿನಿಮಾದಲ್ಲಿ ದಿನಕರ್ ತೂಗುದೀಪ, ರಾಘು ಶಿವಮೊಗ್ಗ ಸೇರಿದಂತೆ ಐದು ಜನ ನಿರ್ದೇಶಕರು ಬಣ್ಣ ಹಚ್ಚಿದ್ದಾರೆ. ಶ್ವೇತಪ್ರಿಯ ಕ್ಯಾಮೆರಾ ಕೆಲಸ ಮಾಡಿದ್ದಾರೆ. ತಿಗಳರಪೇಟೆ ಮೊದಲಾದ ಕಡೆಗಳಲ್ಲಿ ಶೂಟ್ ಮಾಡಲಾಗಿದೆ. ಡಿಸೆಂಬರ್ ವೇಳೆಗೆ ಸಿನಿಮಾ ಬಿಡುಗಡೆ ಮಾಡುವ ಆಲೋಚಯೆಲ್ಲಿ ಅವರಿದ್ದಾರೆ.
ಇದನ್ನೂ ಓದಿ:
ಧನ್ವೀರ್ ಅವರು ನಿರ್ದೇಶಕ ಜಯತೀರ್ಥ ಅವರ ಕೆಲಸವನ್ನು ಹೊಗಳಿದರು. ದಿನಕರ್ ತೂಗುದೀಪ್ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ‘ಸಂಭಾಷಣೆಕಾರ ರಘು ನಿಡವಳ್ಳಿ ಅವರು ಜಯತೀರ್ಥ ಅವರನ್ನು ಭೇಟಿ ಮಾಡುವಂತೆ ನನಗೆ ಕೋರಿದರು. ಜಯತೀರ್ಥ ಅವರನ್ನು ಭೇಟಿ ಮಾಡಿದಾಗ ಪಾತ್ರದ ಬಗ್ಗೆ ವಿವರಿಸಿದರು. ಇಷ್ಟವಾಯಿತು, ಒಪ್ಪಿ ನಟಿಸಿದೆ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ